ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರತ್ನ ಪರಮ ಪ್ರಿಯ ಕರುಣಾನಿಧೆ ನಿಮ್ಮ ಶರಣು ಹೊಕ್ಕೆನು ಪೊರೆಯಬೇಕೆನ್ನ ದೊರೆಯೆ ಪ. ವರ ತಂದೆ ಮುದ್ದುಮೋಹನ ದಾಸಾರ್ಯರೆ ಪರಿಪರಿಯಿಂದ ಭಕ್ತರನು ಪೊರೆಯುವರೆ ಪರಮಾರ್ಥ ಚಂದ್ರೋದಯದ ಪ್ರಕಾಶಕರೆ ಪರಿಮಳ ಸುನಾಮದಲಿ ಸರ್ವತ್ರವ್ಯಾಪಕರೆ 1 ತರತರದ ಸುಗುಣ ಮಣಿಮಾಲೆಯಿಂ ಶೋಭಿಪರೆ ವರಶಿಷ್ಯ ರತ್ನಪದಕಗಳಿಂದಲೊಪ್ಪಿಹರೆ ಸುರರಗಣ ಮಧ್ಯದಲಿ ಪರಿಶೋಭಿಸುತಲಿಹರೆ ಮೊರೆಹೊಕ್ಕವರ ಕಾಯ್ವ ಪರಮ ಕರುಣಾಕರರೆ 2 ಕನಸಿನಲಿ ಮನಸಿನಲಿ ಕಳವಳವ ಹರಿಸುವರೆ ಮನಸಿಜಪಿತನನ್ನು ಮನದಿ ನೆನೆಯುವರೆ ಇನಕೋಟಿತೇಜ ಶ್ರೀ ಶ್ರೀನಿವಾಸನ ಕೃಪೆಗೆ ಅನುಮಾನವಿಲ್ಲದೆಲೆ ಅರ್ಹತೆಯ ಕೊಡಿಸುವರೆ 3 ಭಕ್ತರನು ಪೊರೆಯುವ ಕಾರುಣ್ಯನಿಧಿ ಎಂದು ಪಾದ ನಂಬಿರುವೆ ಭಕ್ತವತ್ಸಲ ಶೇಷಶಯನನಾ ಸೇವೆಯನು ನಿತ್ಯ ಮಾಳ್ಪಂಥ ಸೌಭಾಗ್ಯ ನೀಡುವುದು 4 ಕವಿದಿರುವ ಅಜ್ಞಾನಪರೆಯನ್ನು ಛೇದಿಸುತ ಸವಿಯಾದ ಹರಿಯ ನಾಮಾಮೃತ ಉಣಿಸಿ ಪವನನಂತರ್ಯಮಿ ಗೋಪಾಲಕೃಷ್ಣವಿಠ್ಠಲ ತವಕದಿಂದಲಿ ಪೊಳೆವ ಸುಜ್ಞಾನ ನೀಡುವುದು 5
--------------
ಅಂಬಾಬಾಯಿ
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿರಯ್ಯ ಶ್ರೀರಾಮನ ಮೂರ್ತಿಯ ಪಾಡಿರೊ ಮಹಿಮೆಯನು ಪ ಅಗಣಿತ ಮಹಿಮನು ತ್ರಿಗುಣ ವರ್ಜಿತನು ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ 1 ಸಂಜೀವವನು ತಂದ ಅಂಜನಸುತನಯ್ಯ ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ 2 ವಾರಿಜ ಭವಪಿತ ಮಾರುತ ಗತಿಪ್ರಿಯ ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು 3 ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ ಅರವಿದೂರನನ್ನು 4
--------------
ಸಿರಿವತ್ಸಾಂಕಿತರು
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ. ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು 1 ಮಿತಮಾತು ಇರಬೇಕು ಸುತರ ಪಾಲಿಸಬೇಕು ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು 2 ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು ಹರಿಯ ಪಾಡಲಿಬೇಕು 3 ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು 4 ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು 5 ಪಾಪವ ತೊರಿಬೇಕು ಲೇಪನವ ಬಿಡಬೇಕು ಕೋಪವ ಬಿಡಬೇಕು ಕಪಟತ್ವ ಬಿಡಬೇಕು ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು 6 ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು ನಗೆಮೊಗವಿರಬೆಕು ಸವಿಮಾತು ಗುಣಬೇಕು ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು 7
--------------
ಕೃಷ್ಣವಿಠಲದಾಸರು