ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಒಂದೆ ಮಾತನು ಕೇಳು ಒಂದೆ ನುಡಿಯ ಕೇಳು ಒಂದಿಪೆ ನಿನ್ನ ನಾನಿಂದು ಮಂದರಧರ ಚಂದದಿ ನೀತೆನಗಿಷ್ಟವರಾ ಪ ದುರಿತ ತನ್ಮಯವಾಗಿ ಇರುತಿರ್ಪ ಭವದೊಳು ಕಂಟಕ ಹೋರಿ ಹೋರಿಯು ಹರಿನಾಮ ಮಂತ್ರವ ಮರೆಯದೆ ಜಪಿಸಲು ಉರಿದರ ತಕ್ಷಣದೊಳು ಗಮಿಸುವವು 1 ಭವ ಬಾಧೆಗೆ ಶಿಲ್ಕಿ ತಾ ಶೋಧಿಸುತಿರೆ ನರ ಬಾದ್ಯವನು ಆದಿಮುನಿಯು ರಾಮ ಬೋಧನೆ ಪೇಳಲು ಬೂದಿಗೈದವಘರಾಶಿಗಳು 2 ಸುರಗಣನಾಯಕ ನರಸಿಂಹವಿಠಲ ಪೊಗಲಳವೆ ನಿನ್ನ ವರಲೀಲೆಯು ಮರೆಯದೆ ಪಿಡಿದಿಹೆ ನಿನ್ನಂಘ್ರಿಕಮಲವ ನಿರುತದಿ ನೀಡೋ ನೀ ಸೇವೆಯನು3
--------------
ನರಸಿಂಹವಿಠಲರು
ಕೆಟ್ಟೆ ಕೆಟ್ಟೆ ಕೆಟ್ಟೆ ಕೃಷ್ಣ ದೃಷ್ಟಿಕೊಟ್ಟು ಕೈಯ ಪಿಡಿಯೋ ಪ ಮೂರ್ತಿ ಬಿಟ್ಟರೆನ್ನ ಕಷ್ಟಬಿಡಿಸೆಯಾರ ಬೇಡಲೋ ಅ.ಪ ಕಟ್ಟಿತಾಳಿ ತೊರೆಯೆ ಗಂಡ ಕಷ್ಟವಲ್ಲೆ ಸತಿಗೆ ಪೇಳು ಶಿಷ್ಠ ದೊರೆಯೆ ದಾಸನೆಂಬಿ ಶ್ರೇಷ್ಠತಾಳಿ ಕಂಠದಲ್ಲಿದೆ ಬಿಟ್ಟಿ ಏನೋ ಬಿರದು ಎಲ್ಲ ಕಟ್ಟಿಕೊಂಡು ಮೆರೆಯುತಿಹುದು ಕೆಟ್ಟದೂರು ತಟ್ಟದಿರದು ಭ್ರಷ್ಠನೆನಿಸಬೇಡೊ ಎನ್ನ 1 ಎಡವಿ ಬೀಳೆ ಮಗುವು ತಾಯಿ ಕಡಿವಳೇನು ಪೊಡವಿಗೊಡೆಯ ಅಡಿಯ ಪಿಡಿದ ದಾಸನಾನು ಬಡವನಾದರೇನೂ ನುಡಿಯೋ ಭಾರ ನಿನಗೆ ತಡವು ಯಾಕೋ ಬರಿದೆ ಬಿಂಕ ಸಡಲಿ ಸುತ್ತ ಮಾಯಪಾಶ ದೃಢವ ಮಾಡು ಭಕ್ತಿ ವಿರಕ್ತಿ 2 ದೋಷಿಯಾದರೇನು ನಾನು ದೋಷದೂರನಲ್ಲೆ ನೀನು ನಾಶಮಾಡು ಬೀಸಿದೃಷ್ಠಿ ಮೀಸಲಲ್ಲೆ ನಿನಗೆ ಸ್ವಾಮಿ ಈಶ ಕರುಣಕುಂಟೆ ಮೇರೆ ಓಸು ಜಗದ ಭಾಸವೆಲ್ಲ ಶ್ರೀಶ ನೀನು ಕೊಟ್ಟರುಂಟು ದಾಸಪೋಷ ಶ್ವಾಸನಾಣೆ 3 ಗಂಟು ಕಳ್ಳ ನೀನೆ ಸತ್ಯ ಭಂಟನೆನ್ನ ಸ್ವತ್ತು ನೀನೆ ನೆಂಟ ಬೇರೆ ಇಲ್ಲದಿರಲು ಅಂಟಿಸಿರುವೆ ವಿಷಯ ಕಂಟಕ ತಂಟಿ ಬಿಟ್ಟು ಈಗಲೇನೆ ಅಂಟಿಕೊಳ್ಳೊ ಮನದಿ ಗಟ್ಟಿ ಕುಂಟು ಕಲೆಯ ಸುಟ್ಟುಬಿಟ್ಟು ಉಂಟು ಮಾಡು ಎಲ್ಲ ನನಗೆ 4 ಬೆಟ್ಟದೊಡೆಯ ಶ್ರೀನಿವಾಸ ಎಷ್ಟರವನೊ ನಾನು ಭೃತ್ಯ ಪಾದ ಪಿಡಿದಿಹೆ ಸುಟ್ಟು ಸುಟ್ಟು ಭವದಿ ಬೆಂದು ಇಷ್ಟು ನುಡಿದೆ ಜಯಮುನೀಂದ್ರ ಶ್ರೇಷ್ಟಹೃಸ್ಥಮಧ್ವ ಶ್ರೀ ಪ್ರೇಷ್ಟದೈವ ಕೃಷ್ಣವಿಠಲ5
--------------
ಕೃಷ್ಣವಿಠಲದಾಸರು
ಗುರು ನಿಮ್ಮ ಬಾಲಕ ನಾನು ನಮ್ಮ ಪಾಲಕ ನೀನು ಧ್ರುವ ತಂದಿ ತಾಯಿ ಬಂಧು ಬಳಗವೆ ನೀನು ಕಂದನಹುದೋ ನಿಮ್ಮ ನಾನು ಎಂದೆಂದಿಗೆ ಒಂದಾಗಿಹÀ ನೀನು ಸಂದಿಸ್ಯಾಡುವ ಮಗ ನಾನು 1 ಬೇಡಿದ್ದು ಕೊಡುವೆ ಎನ್ನೊಡೆಯ ನೀನು ಕಡೆಹುಟ್ಟಿದವ ನಾನು ಬಿಡದೆ ಸಲಹುತಿಹ ಎನ್ನೊಡೆಯನೆ ನೀನು ಪಿಡಿದಿಹೆ ಪಾದವ ನಾನು 2 ಖರೆ ನೀನು ಅತಿ ದೀನನು ನಿಮ್ಮ ನಾನು ಸಥೆಯ ನಡಿಸುವೆ ಮಹಿಪತಿಯ ನೀನು ಹಿತ ಪಾತ್ರನು ನಿಮ್ಮ ನಾನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬಿ ಬಂದಿಹೆನಯ್ಯಾ ಪ ನಿನ್ನನಾ ಸ್ತುತಿಸಿ ಕೊಂಡಾಡುವೆ 1 ಕುಂದಿದ ಮನದಲಿ ನಿನ್ನನಾ ನೆನೆಯುದೆ ಮುಂದೇನುಗತಿ ಎನಗೆಂದು ತಿಳಿಯದೆ ಇನ್ನಾದರೆನ್ನ ಮನನಿನ್ನಲ್ಲಿ ನಿಲಿಸು 2 ಭೂಮಂಡಲವೆಲ್ಲಾ ತಿರುಗಿದೆ ಪ್ರಭುವೇ ನಿಮ್ಮ ಶರಣು ಬಂದಿಹೆ ನಯ್ಯ ಹೇಗುರುವೇ3 ಇಂದೆನ್ನ ಮೊರೆಕೇಳಿ ಕೇಳಿಸದಂತಿರುವೆಯಾ ಪ್ರಭುವೆ 4 ಪರದೇಶಿಯೆನುತೆನ್ನ ಕೈಬಿಡಬೇಡವೋ ಬಿಡದೆ ನಿನ್ನಡಿಗಳ ಪಿಡಿದಿಹೆನಯ್ಯಾ 5 ದೃಷ್ಟಿಯಿಂಲಿ ನೋಡಿ ರಕ್ಷಿಸು ನಮ್ಮನು | ಘಟ್ಯಾಗಿ ನಿಮ್ಮಪಾದ ಮುಟ್ಟಿ ನಾ ಭಜಿಸುವೆ6 ಸರ್ವಾಪರಾಧವ ಕ್ಷಮಿಸಿ ನೀ ಕಾಯೋ ಕಾಲಮೀರದೆಮ್ಮನು ಪಾಲಿಸಬೇಕಯ್ಯ 7
--------------
ರಾಧಾಬಾಯಿ
ವಾದಿರಾಜಗುರು ನಿಮ್ಮಡಿಗೆರಗುವೆ ಸಾದರದಿಂದಲಿ ಮಂದನ ಕೈಪಿಡಿಯೋ ಪ ಸಾಧುಜನಾಶ್ರಯ ಮೇದಿನೀಸುರತರು ಪಾದವಪಿಡಿದಿಹೆ ಬೋಧಿಸು ವಿಜ್ಞಾನ ಅ.ಪ. ಕಾದಿಡೆ ಸುಜನಕೆ ಮಧ್ವಾಗಮನಿಧಿ ಸಾದರದುದಿಸಿದಿ ಬುಧಜನಕುಲಮೌಳಿ ಬೂದಿಯ ಮಾಡುತ ದುರ್ಮತಜಾಲವ ಮಾಧವ ಮಧ್ವರ ಸೇವೆಯ ಸಲ್ಲಿಸಿದೇ 1 ಕವಿತಾವನಿತೆಯ ಕುಣಿಸುತ ಶಾಸ್ತ್ರವ ನವವಿಧ ರಸದಿಂ ಪೇಳಿದೆ ಶಿಷ್ಯರಿಗೆ ಭುವಿಯಲಿ ಮೆರೆದೆಯೋ ಮಧ್ವಾನುಜ ತೆರ ಪವನ ಮತಾಬ್ಧಿಯ ಸೋಮನೆ ಶರಣೆಂಬೆ2 ರಿಕ್ತಬ್ರಹ್ಮನ ಭಕ್ತರ ನೊಲ್ಲನು ಯುಕ್ತಿಗಳೆಂಬುವ ಮಲ್ಲಿಗೆ ಪಟ್ಟಲಿ ಶಕ್ತಯತೀಂದ್ರನೆ ಅಡಗಿಸಿ ಸರ್ವೋ- ದ್ರಿಕ್ತನ ಗುಣಗಣ ಸಾಧಿಸಿ ನೀ ಮರೆದೇ3 ತೀರ್ಥಕ್ಷೇತ್ರವ ಪಾವನಗೈಯ್ಯಲು ಸುತ್ತುತನೀಡಿದೆ ತೀರ್ಥಪ್ರಬಂಧವನೂ ಪಾರ್ಥಿವ ಮೊರೆಯಿಡೆ ಅಕ್ಷತೆನೀಡುತ ಶತ್ರುಗಳಳಿಸುತ ಪೊರೆದೆಯೊ ಕರುಣಾಳು4 ಅರವತ್ನಾಲ್ಕು ಕಲಾಜ್ಞನೆ ಗುಣನಿಧಿ ಸುರಗಣಗಚ್ಚಿರಿಯೇ ಸರಿ ತವ ಮಹಿಮ ಹರಿಸಿದೆ ಮೃತ್ಯುವ ರಾಜನ ಅಳಿಯಗೆ ಸಿರಿಪತಿ ವ್ಯಾಸರ ಕಂಡೆಯೊ ಪ್ರತ್ಯಕ್ಷ5 ಗುಂಡಕ್ರಿಯೆ ವೈಕುಂಠ ವರ್ಣನೆ ಕಂಡಕಂಡಪದ ಪುಂಜವ ಪಾಡುತಲೀ ಕೂಡದು ಭಾಷಾ ಸಡಗರ ವೆಂಬುದ ಪಂಡಿತನಿಕರಕೆ ತೋರಿದೆ ಯತಿತಿಲಕಾ6 ಜಂಗಮಗರುವನ ಭಂಗಿಸೆ ತವಕದಿ ಇಂಗಿಸಿ ಸಲಹಿದೆ ವಿಪ್ರರ ಕಷ್ಟಗಳ ಗಂಗಾಪಿತ ತ್ರಿವಿಕ್ರಮ ದೇವನ ಮಂಗಳ ಸುರಿಸಲು ಸ್ವಾದಿಲಿ ಸ್ಥಾಪಿಸಿದೆ7 ಗೋಧರ ಹಯಮುಖ ಸಾಕ್ಷಾತ್ತಿ ಎಂಬುವ ಛಂದದಿ ನೀಡಿದ ಓದನವೆಂತೆನೆ ಸಾಧ್ಯವೆ ಶೇಷನು ಪೊಗಳಲು ನಿಮ್ಮನು ಮಂದಿರನವನಿವ ನೆನ್ನುತ ಕೈ ಪಿಡಿಯೋ8 ಇಂದ್ರನ ದೂತರ ತಡೆಯುತ ದಿನತ್ರಯ ಚಂದದಿ ಕುಳಿತೆಯಾ ಬೃಂದಾವನದೊಳಗೆ ಇಂದಿಗು ನೋಳ್ಪರು ಬುಧಜನ ನಿಮ್ಮನು ವೃಂದಾರಕಗಣ ವಂದಿತ ಚರಣಯುಗ9 ಸುಂದರ ಹಯಮುಖ ರಾಮನು ಕೃಷ್ಣನು ವೇದವ್ಯಾಸರು ಹನುಮಾದಿ ತ್ರಯರು ಮಧ್ಯದಿ ಕುಳಿತಿಹ ನಿನ್ನ ಸುನಾಲ್ಕೆಡೆ ನಿಂದಿಹರೆಂಬುದು ಸಿದ್ಧವು ಮಹಮಹಿಮಾ 10 ಬೃಂದಾವನ ಪಂಚದಿ ಹರಿ ತಾನಿಹ ಚಂದದಿ ಸೇವೆಯ ಕೊಳ್ಳುತ ನಿನ್ನಿಂದ ಸುಂದರ ದಶಗಳ ಪಂಚನುರೂಪವ ವಂದಿಸಿ ನೋಡುತ ನೆನೆಯುವೆ ಏನೆಂಬೆ11 ಗಂಗಾಪಿತ ತ್ರಿವಿಕ್ರಮದೇವನ ಹಿಂಗದೆ ನೆನೆಯುವೆ ಲಕ್ಷಾಭರಣವನು ರಂಗಗೆ ನೀಡಿದೆ ನಮ್ಮಯ ಭವವನು ಇಂಗಿಸೆ ಕಷ್ಟವೇ ಗುರುವರ ದಯಮಾಡೋ12 ಜಯಮುನಿ ಹೃದಯದಿ ವಾಯುವಿನಂತರ ಜಯದಿಂ ನಲಿಯುವ ಶ್ರೀಕೃಷ್ಣವಿಠಲನ ದಯದಿಂ ತೊರಿಸು ಭಾವೀಜಯಾಸುತ ಹಯಮುಖ ಕಿಂಕರ ನಮಿಸುವೆ ಭೂಯಿಷ್ಠಾ13
--------------
ಕೃಷ್ಣವಿಠಲದಾಸರು
ಶ್ರೀ ವಾದಿರಾಜರು ಗುರುವರ ದಯಮಾಡೈ ಹಯಮುಖ ಪದಯುಗ ನಿಜ ಭಕ್ತಾಗ್ರಣೀ ಪ ಚರಣವ ನಂಬಿದೆ ಮುಂದಿನ ಪರಿಸರ ಸರಸರ ಸುರಿಸುತ ವರಗಳ ಕರುಣದಿ ಅ.ಪ ನಿನ್ನನೆ ನಂಬಿದ ಅನ್ಯರವಲ್ಲದ ಚಿಣ್ಣರ ಬಿಡುವರೆ ಘನ್ನಗುಣಾರ್ಣವ ಸಣ್ಣವರೆನ್ನೆದೆ ಮನ್ನಿಸಿ ಕೈಪಿಡಿ ಚಿನ್ಮಯ ನಂದನ ಅನ್ಯರ ಪೋಷಕನೆ 1 ದಾಸರ ದೋಷವಿನಾಶಗೈವುದು ಕ್ಲೇಶವ ಭಾವೀಶ್ವಾಸ ನಿಯಾಮಕಗೆ ವಾಸವ ಗುರುಶಿವ ಶೇಷಸುವಂದಿತ ವಾಸಿಸಿ ಹೃದಯದಿ ಭಾಸಿಸು ಹರಿದಾರಿ 2 ಆರ್ರ್ತಿವಿದೂರ ಪರಾರ್ಥಕೆ ನೆಲಸಿಹ ಖ್ಯಾತ ಕವೀಂದ್ರನೆ ಪ್ರೀತಿಯ ಬೇಡುವೆನು ಮಾತೆಯ ತೆರಮುರವ್ರಾತವ ನೋಡದೆ ನಾಥನೆ ನೀಡಿಸು ಆತ್ಮವಿಕಾಸವನು 3 ವಿಜ್ಞಾನಾಸಿಯ ದಾನವ ಗೈಯುತ ದೀನನ ಮೌಢ್ಯದಿ ಶೂನ್ಯವಗೈಯುತ ಪ್ರಾಜ್ಜನ ಮಾಡೈ ಪ್ರಾಜ್ಞಲಲಾಮನೆ ಆಜ್ಞಾಧಾರಕ ನಿನ್ನ ಜನುಮ ಜನುಮದಲಿ4 ವೇದವ್ಯಾಸರ ಪಾದಾರಾಧಕ ಮೋದಮುನೀಂದ್ರರ ಪ್ರೇಮವ ಪಡೆದಿಹನೆ ವೇದವ್ಯಾಸರ ಸೇವಿಪ ಭಾಗ್ಯವ ಸಾದರದಿಂ ಕೊಡು ಕಾಮಿತ ಕೊಡುವವನೆ5 ಹಿರಿಯರ ಕರುಣದಿ ಕಿರಿಯರ ಸಾಧನೆ ಶರಣನ ಭಾರವು ಸೇರಿದೆ ನಿಮ್ಮಡಿ ಹರಣವ ವಪ್ಪಿಸಿ ಚರಣವ ಪಿಡಿದಿಹೆ ಪೊರೆಯೈ ಮನತರ ಕುರುಡನು ನಾನಿಹೆ 6 ಮಿಥ್ಯಾಮತ ವಿಧ್ವಂಸನೆ ಗೈಯುವ ಸದ್ಗ್ರಂಥಂಗಳದಾತನೆ ಬಾಗುವೆನು ಪಾರ್ಥನಸಖ “ಶ್ರೀಕೃಷ್ಣವಿಠಲ”ನ ಭಕ್ತಿತರಂಗವ ನೀಡುತ ಕಾಯುತ 7
--------------
ಕೃಷ್ಣವಿಠಲದಾಸರು