ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಎನ್ನ ಜನುಮ ಸಾಫಲ್ಯವಾಯಿತು | ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ಧ್ರುವ ಭಾನುಕೋಟಿ ತೇಜವಾಗಿ ರೂಪದೋರಿತು ತಾನೆ ತನ್ನಿಂದೊಲಿದು ದಯವು ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬ ಅಹಂಭಾವ ಹರಿಯಿತು 1 ಎಂದು ಇಂದಿರೇಶನ ಕಾಣದ ಕಣ್ಣದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯು ಗರೆಯಿತು ಹೊಂದಿ ಹರುಷ ಪಡುವಾನಂದ ಪಥವು ದೋರಿತು 2 ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯಸಾಧನೆ ಧನ್ಯಗೈಸಿತು ಮಹಿಪತಿ ಪ್ರಾಣಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಸತ್ಯಜ್ಞಾನರ ಚರಣ ದರುಶನದಿ ನೂರಾರು ಜನ್ಮ ಪಾವನವಾಯಿತು ಮುದದಿ ಪ ಗುರುಗಳುಪದೇಶದಿಂ ಪರಮ ಪಾವನನಾದೆ ನರಹರಿಯ ಭಜಿಸುವ ಅಧಿಕಾರಿಯಾದೆ ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ ನಿರುತದಲಿ ಮಾಡುವುದಕರ್ಹನಾದೆ 1 ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ ಗುರುಗಳುಪದೇಶವಿಲ್ಲದ ಜ್ಞಾನವು ಗುರುಗಳುಪದೇಶವಿಲ್ಲದ ಕರ್ಮಕವನಗಳು ಉರಗವಾಸದಂತೆ ಕಾಣಯ್ಯ 2 ಅಂಕಿತವಿಲ್ಲದಾ ಪದ್ಯಗಳು ಶೋಭಿಸವು ಅಂಕಿತವು ಇಲ್ಲದಿರಬಾರದೆನುತಾ ಪಂಕಜನಾಭ ಹನುಮೇಶ ವಿಠಲನೆಂಬೊ ಅಂಕಿತವನಿತ್ತಾ ಗುರುವು ಮಾಡಿ ಮಮತಾ 3
--------------
ಹನುಮೇಶವಿಠಲ
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು