ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು 1 ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ 2 ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ3 ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ ಖಳ ಕಂಸನೆಂಬುವನು ಪುಟ್ಟಿ ತನ್ನ ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ 4 ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು 5 ಇಂತು ಪೇಳಲಿ ಅಜನು ಸಂತೋಷದಿರಲಿತ್ತ ದಂತಿ ಗಮನಳು ಉದುಭವಿಸಿ ಬಂದು ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ ಅಂತಕರಾಗಿದ್ದ ಖೂಳರ ಸದೆ ಬಡಿದು 6 ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು ಪರಮ ಮುನಿ ಅಗಸ್ತ್ಯ ಪೂಜಿಸಿದನು ಶರರಾಜ ಬಂದು ಮದುವೆನೈದಲು ಪರಮೇಷ್ಠಿ ಹರನ ಸಹಿತಲಿ ನಡೆತಂದಾ 7 ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ ಮರಳೆನಿಂದರು ವರ ಸುಧೇಂದ್ರವೆಂಬೊ ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ8 ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ ಬಂದು ನವತೀರ್ಥದಲಿ ಯಾತ್ರೆ ಜನರು ಮಿಂದಾಗಲೆ ಮನದಂತೆ ಭಕುತಿಯನಿತ್ತು ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ9
--------------
ವಿಜಯದಾಸ
ಯಂತ್ರೋದ್ಧಾರಕ ರಾಯರ ಸ್ಮರಣೆಯ ಮಾಡಿ ಅಂತರಾತ್ಮನ ದಾಸರ ಪ ಸಂತತ ಮನದಿ ನಿಶ್ಚಿಂತೆಯೊಳ್ ಸ್ಮರಿಸಲು ಸಂತಾಪಗಳ ಕಳೆದು ಚಿಂತಿತಾರ್ಥವನೀವ ಅ.ಪ ಶರಧಿಯ ನೆರೆದಾಟಿದ ಕಾಲುವೆಯಂತೆ ನಲಿದು ಲಂಕೆಯ ಸಾರಿದ ಬಲಶಾಲಿ ಲಂಕಿಣಿಯು ಪುರವ ಕಾಯುವ ಶ್ರಮ ಹರಿಸಿ ಸೂಕ್ಷ್ಮದ ರೂಪ ಧರಿಸಿ ಪುರವ ಪೊಕ್ಕು ಪರಿಪರಿ ಕೋಟೆಗಳಿರವನೆ ಕಾಣುತ ಕರಿ ಹಯ ರಥ ಶಾಲೆಗಳ ಪರಿಕಿಸುತ ಖಳನರಮನೆ ಪೊಕ್ಕರು ಫಲವಿಲ್ಲದೆ ಕಡೆಗೆ ಅಶೋಕ ವನದೊಳು ಚರಿಸಿದ1 ವನದ ಮಧ್ಯದೊಳಿರಲು ರಕ್ಕಸ ಬಹು ಘನತೆಯಿಂದಲಿ ಬರಲು ಬಣಗು ದೈತ್ಯನ ತೃಣಕೆಣೆಮಾಡಿ ನುಡಿಯಲು ಪವನ ತನಯ ನೋಡಿ ಮನದಿ ಸ್ತೋತ್ರವ ಮಾಡಿ ಮನದೊಳು ಶ್ರೀ ರಘುವರನನು ಧ್ಯಾನಿಸಿ ಘನ ಮುದ್ರಿಕೆ ಮುಂದಿಡಲಾ ಜಾನಕಿ ನಯನಂಗಳ ಕಂಬನಿಗರೆಯುತ ಮುಂದಿಹ ಹನುಮನೊಳಿಂತೆನೆ ಲಾಲಿಸಿದ 2 ಯಾವ ರಾಯರ ದೂತನೋ ಪೇಳಯ್ಯ ಬಲು ಸಾವಧಾನದಿ ಮಾತನು ಶ್ರೀರಾಮಚಂದ್ರ ನಿನ್ನ ಸೇರಿ ಮಿತ್ರತ್ವಮಾಡೆ ಕಾರಣವೇನುಂಟು ಸಾವಧಾನದಿ ಪೇಳು ಯಾರನುಮತಿಯಿಂದೀ ಪುರ ಪೊಕ್ಕೆಯೊ ಯಾರಿಗಾಗಿ ಈ ವಾನರ ರೂಪವು ಪೋರನಂತೆ ಕಾಣುವಿ ನಿನ್ನ ವಚನವು ಬಾರದು ಮನಕೆಂದೆನಲು ಮಾತಾಡಿದ 3 ಜನಕ ಜಾತೆಯೆ ಲಾಲಿಸು ದೈತ್ಯರ ಸದೆ ಬಡಿಯುವನೆಂದು ಭಾವಿಸು ಇನಕುಲ ತಿಲಕನ ಚರಣಸೇವೆಯು ಮಾಡೆ ಜಲಜಾಕ್ಷನಾಜ್ಞದಿಂದ ಭುವಿಯೊಳು ವಾನರ- ಕುಲದೊಳಗವತರಿಸುವ ಶತ ಸಂಖ್ಯೆಯೊಳಿರುತಿರೆ ಗಿರಿವನಚರಿಸುವ ಸಮಯದಿ ಜಲಜಾಕ್ಷಿಯನರಸುತ ರಾಘವಬರೆ ಚರಣಾಂಬುಜಗಳಿಗೆರಗಿದೆವೆಂದೆನಲು 4 ಜಲಜಾಕ್ಷಿ ನಿಮ್ಮ ಕಾಣದೆ ಮನದೊಳಗೊಂದು ಘನವಾದ ಚಿಂತೆ ತಾಳಿದೆ ಜನಕ ಜಾತೆಯ ಪಾದಾಂಬುಜವ ಕಾಣದೆ ಮರಳಿ ಪುರವ ಸಾರುವದೆಂತು ರವಿಸುತನಾಜ್ಞೆ ಮೀರ- ಲರಿಯದೆ ಈ ಉಪವನದೊಳಗರಸುವ ಸಮಯದಿ ಶ್ರೀವರನಿಯಮಿಸಿ ಪೇಳಿದ ಪರಿಯನು ತಿಳಿಯುತ ಪರಮಾನಂದದಿ ರಘುವರನ್ವಾರ್ತೆಯ ಲಗುಬಗೆ ಪೇಳಿದ 5 ಕುರುಹು ಕೊಡಮ್ಮ ಜಾನಕಿ ಮನಸಿನ ಚಿಂತೆ ಬಿಡುಬೇಗ ಭದ್ರದಾಯಕಿ ಕ್ಷಣದೊಳ್ ಶ್ರೀರಾಮನೊಳು ಇನಿತೆಲ್ಲವನು ಪೇಳಿ ಕ್ಷಣದಿ ರಕ್ಕಸರನೆಲ್ಲ ನೆಲಸಮ ಮಾಳ್ಪೆನೆಂಬೀ ಅಣುಗನಿಗಪ್ಪಣೆಯನು ಪಾಲಿಸೆನಲು ಅನುಮತಿನೀಡಿದ ಅವನಿಜೆಗೊಂದಿಸಿ ಕ್ಷಣದೊಳು ವನಭಂಗವ ಮಾಡಿದ ನುಡಿ ಕೇ- ಳಿದ ರಾವಣನ ಪುರವ ಅನಲನಿಗಾಹುತಿ ಇತ್ತ 6 ಜಯ ಜಯ ಜಯ ಹನುಮಂತ ಜಯ ಜಯ ಬಲವಂತ ಜಯ ಶ್ರೀರಾಮರ ಪ್ರಿಯದೂತ ಜಯ ಜಯ ಜಯವೆಂದು ಸನಕಾದಿಗಳು ಪೊಗಳೆ ಅನಲ ಸಖನ ಸೂನುವನು ಸ್ತೋತ್ರದಿಂದ ಪಾಡೆ ಕಮಲಜಾದಿ ಸುರಗಣ ತಲೆದೂಗೆ ಶ್ರೀ ಕಮಲನಾಭ ವಿಠ್ಠಲನನು ಪಾಡುತ ಅಮಿತ ಪರಾಕ್ರಮವಂತನ ಪೊಗಳುತ ನಮಿಸಿ ಶ್ರೀರಾಮರ ಗುಣಗಳ ಪೊಗಳುವ 7
--------------
ನಿಡಗುರುಕಿ ಜೀವೂಬಾಯಿ