ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ತಂದೆ ಮುದ್ದುಮೋಹನ ದಾಸರೆನಿಸಿದ ತಂದೆ ಶ್ರೀ ಗುರುವರ್ಯರೆ ಪ. ತಂದಿರಿ ಜ್ಞಾನಾಂಬುಧಿ ಮಧ್ಯದೊಳಗೀಗ ತಂದಿಹ ಎನ್ನ ದುಷ್ಕರ್ಮವ ತರಿಯುತ ಅ.ಪ. ಬಂದೆನು ಭವದೊಳು ನಿಂದೆನು ತಾಪದಿ ಮಂದಮತಿಯಿಂದ ಜಗದೊಳಗೆ ಕುಂದುಗಳೆಣಿಸದೆ ಬಂದು ದರ್ಶನವಿತ್ತು ಕಂದನಂದದಿ ದಯದಿಂದ ಪಾಲಿಸಿದಿರಿ 1 ಯೋಗಿಗಳೆನಿಸಿದ ಭೋಗಿವರರೆ ಶಿರ ಬಾಗಿ ನಮಿಸುವೆ ಈಗ ನಾನು ನಾಗಶಯನನ ತೋರಿ ಬೇಗ ಪಾಲಿಸಿರಿ ಪೋಗುತಿದೆ ದಿನ ಜಾಗು ಮಾಡದೆ ಮುನ್ನ 2 ನರಸಿಂಹನನು ಹೃತ್ಸರಸಿಜದಲಿ ಕಾಂಬ ಗುರುವರ ನಿಮ್ಮಂಘ್ರಿಗೆರಗುವೆನು ಪರಿಪರಿ ತಾಪವ ಹರಿಸಿ ಎನ್ನ ಮನ ಹರಿಗುರು ಚರಣದೊಳಿರುವಂತೆ ಕೃಪೆಗೈದೆ 3 ಪರಮ ಗುರುಗಳಿಗೆ ಪ್ರಿಯರಾಗಿ ಇಳೆಯೊಳು ಚರಿಸಿ ಸುಜನರ ಪಾವನಗೈದು ಪರಮ ಗುಪ್ತದಿಂದ ಹರಿಯ ಧ್ಯಾನಿಸುತ್ತ ಧರೆಯೊಳಗಿರುವ ಪಾಮರರ ಮೋಹಿಸುವಂಥ 4 ಕಷ್ಟವ ಬಿಡಿಸಿರಿ ತುಷ್ಟರಾಗಿ ನೀವೆ ಇಷ್ಟು ಪರಿಯಿಂದ ಬೇಡಿಕೊಂಬೆ ಇಷ್ಟದೈವರು ನೀವೆ ಶ್ರೇಷ್ಠ ಶ್ರೀ ಗೋಪಾಲ ಕೃಷ್ಣವಿಠ್ಠಲನ ಉತ್ಕøಷ್ಟದಿ ತೋರಿರಿ5
--------------
ಅಂಬಾಬಾಯಿ
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ಮುದ್ದು ಮೋಹನದಾಸರೆ | ಎನ್ನನು ಬೇಗ ಉದ್ಧರಿಸಿರಿ ಪ್ರೀತರೆ ಪ. ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ. ಪರಮಯತಿಚರ್ಯರೆ | ಈ ಜಗದೊಳು ವರ ಭಕ್ತಿವೆಗ್ಗಳರೆ ತರಳತನದಲಿ ಪಾದಚಾರಿಗಳಾಗಿ ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು ಹರಿಯ ಮೆಚ್ಚಿಸಿ ದಾಸಭಾವದಿ ಪರಿಪರಿಯ ಅಂಕಿತದಿ ಶಿಷ್ಯರ ಪರಮ ಸಂಭ್ರಮಗೊಳಿಸಿ ಮೆರೆಯುತ ಸಿರಿವರನ ಪದಸಾರಿದಂಥ 1 ಶೀಲವಂತರೆ ನಿಮ್ಮನು | ಕೊಂಡಾಡೆ ಈ ಸ್ಥೂಲಮತಿಗೆ ಸಾಧ್ಯವೆ ಕಾಲಕಾಲದಿ ಹರಿಲೀಲೆಯ ಪಾಡುತ ನೀಲವರ್ಣನ ಹೃದಯಾಲಯದಿ ಕಂಡು ಮೂಲರೂಪಿಯ ಪಾದಕಮಲದಿ ಲೋಲುಪಡುತಲಿ ಓಲ್ಯಾಡಿದ ಬಹು ಶೀಲಗುಣಗಣಪಾಲರೆ ಎನ್ನ ಪಾಲಿಸಿರಿ ಸಿರಿಲೋಲನ ತೋರಿ 2 ಸಂದೇಹವಿನ್ಯಾತಕೆ | ಮಂತ್ರದ ಮನೆ ಮಂದಿರದೊಳಗಿರೆ ಬಂದಿರಿ ದಾಸತ್ವದಿಂದ ಧರೆಯೊಳು ನಂದಕಂದನ ಲೀಲೆ ಅಂದ ಪಾಡುತಲಿ ಅಂದು ಗ್ರಂಥಗಳನೋದಿ ಪದವನು ಒಂದು ರಚಿಸಿ ಸಾಲದೆ ಮು- ಕುಂದನಾ ಗುಣವೃಂದ ಪೊಗಳಲು ಚಂದದಿಂದ ವಸುಂಧರೆಯೊಳು 3 ವರತತ್ವ ಅಂಶದಲಿ | ಶ್ರೀ ಗುರುವಿಗೆ ತಾರಕರೆನಿಸಿದಿರಿ ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ ತೀರುಥವನೆ ಕೊಟ್ಟು ಸುಮ್ಮನಿರಲು ಗುರು ಸಾರಿ ಬಂದು ಬದಿಯಲಿ ನಿಂದು ಭೂರಿ ಕರುಣವ ಮಾಡಬೇಕೆಂದು ತೋರಿ ಪೇಳಲು ಹರಿ ನಿರ್ಮಾಲ್ಯ ಅಪಾರ ಕರುಣದಿ ಕೊಟ್ಟು ಪೊರೆದಿರಿ 4 ಸ್ತುತಿಸಲಳವೆ ನಿಮ್ಮನು | ಈ ಜಡಮತಿ ಕೃತಕವಲ್ಲವು ಇದಿನ್ನು ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು ಚ್ಯುತದೂರ ಗೋಪಾಲಕೃಷ್ಣವಿಠ್ಠಲನ ಸತತ ಸ್ತುತಿಸುವ ಮತಿಯ ಪಾಲಿಸಿ ಪಥವ ತೋರಿರಿ ಕರ್ಮಜರೆ ಬೇಗ ಸತತ ಶ್ರೀ ಗುರು ವ್ರತವ ಪಾಲಿಪ ಮತಿಯ ದೃಢದಲಿ ಹಿತದಿ ಕರುಣಿಸಿ 5
--------------
ಅಂಬಾಬಾಯಿ