ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡುವರೆ ಬನ್ನಿ ಶೇಷಾಧರ ಕೂರ್ಮನಿಗೆ ಪ. ಇಂದ್ರಾದಿ ಶರದಿಂದ ನೊಂದ ಕಪಿಗಳನ್ನು ತಂದ ಸಂಜೀವನ ಗಿರಿಯಿಂದಲೀ ಮಂದ ಭಾವವ ಕಳದಂದು ಪರ್ವತವನ್ನು ನಿಂದಲ್ಲಿಂದಲೆ ಹಿಂದಕ್ಕೆ ಬಿಸುಟಂಥ1 ವೈಷ್ಣವರಿಗಳೊಳು ಶ್ರೇಷ್ಠನೆನಿಸಿದಂಥ ದುಷ್ಟ ಜರಾಸಂಧ ಕಷ್ಟ ವೃತ್ತಿ ಬಡಿಸಿದಂಥ ಪರಮೇಷ್ಠಿ ಯಾಗವ ಮಾಡಿ ಕೃಷ್ಣಗೆ ಪರಮ ಸಂತುಷ್ಟಿ ಬಡಿಸಿದಂಥ 2 ಮೂರೇಳು ದುರ್ಭಾಷ್ಯ ಖಂಡಿಸಿ ಕೃಷ್ಣನ ದ್ವಾರಕಪುರದಿಂದಿಲ್ಲಿಗೆ ಕರಿಸಿ ಧಾರುಣೀಶ ವೆಂಕಟಾಚಲಪತಿಯೆಂದು ತೋರಿದ ಸಜ್ಜನಾಧಾರ ಯತೀಂದ್ರಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭವ ಸಂಕಟ ಪರಿಹರಿಸೊ ಕಿಂಕರನೆಂದೆನಿಸೊ ಪ ಶಂಕೆಯಿಲ್ಲದೆ ಪಾದಪಂಕಜ ಪೂಜಿಸಲೂಮಂಕುಮತಿಯ ಕಳೆವಾ ಅಕಳಂಕನೆಂದೆನಿಸುವಾ ಅ.ಪ. ಕಲಿಯುಗದೊಳು ಕಲಿ ಬಾಧೆಗೆ ಒಳಗಾಗಿ ಬಹುವಿಧವಾಗಿಒಲಿಸದೆ ವರಗುರು ಹಿರಿಯರ ನಿಂದಿಸುತಾ ವೇಳೆಗಳೆಯುತಾಗಳಿಸಿದೆ ಪಾಪವ ಚರಿಸುತ ಧರೆಯೊಳಗೆ ತೊಳಲುವೆ ತಮದೊಳಗೇಘಳಿಲನೆ ರಕ್ಷಿಸೊ ಬಾಲಕರನು ದೇವಾ ಎನ್ನಯ ಕುಲದೈವಾ 1 ಸಾಧನೆಗೋಸುಗ ಮೇದಿನಿಗೆ ಬಂದು ಸಾಧಿಸದೆ ಬಂದುಶೋಧಿಸುವೆನು ಪುರುಷಾರ್ಥದ ಮಾರ್ಗವನು ಮೋದವ ಪೊಂದುವೆನುಭೇದವ ತಿಳಿಯದೆ ಹಾದಿಯ ತಪ್ಪಿರುವೆ ಖೇದವ ಪುಡುತಿರುವೆಸಾದರದಲಿ ತವ ಪಾದದಿ ಧ್ಯಾನವನು ಒದಗಿಸಬೇಕಿನ್ನು 2 ಮಂದ ತಾಪ ಬಿಡಿಸೊ ಕರುಣವ ತೋರಿಸೊಆರು ಮೂರು ವಿಧ ಭಕ್ತಿಯನೆ ಈಯೋ ಕರಪಿಡಿದು ಕಾಯೋಸಾರುವ ಭಕುತರ ಧೀರ ವೃಂದದೊಳಗೆ ಸೇರಿಸೊ ಜವದೊಳಗೆಧಾರುಣೀಶ ತಂದೆವರದವಿಠಲನೆ ಶರಣೆಂಬೆನು ನಾನೇ 3
--------------
ಸಿರಿಗುರುತಂದೆವರದವಿಠಲರು