ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ವಂದಿಪೆ ಹರಿಹರನೇ | ನಿನಗೆ ನಾ ವೃಂದಾರಕನುತನೇ ಪ. ಬಂದು ಈ ಕ್ಷೇತ್ರದಿ ನಿಂದು ಸದ್ಭಕ್ತರ ಮೂರ್ತಿ ಅ.ಪ. ಚತುರ ಹಸ್ತದಿಂದಾ | ಶೋಭಿಸೆ ಅತಿ ಕೌತುಕದಿಂದಾ ಪಾದ ಕಮಲಜನ ತತಿಗೆ ತೋರದಂತೆ ಕ್ಷಿತಿಯಲಡಗಿದೇ 1 ಸೋಮಶೇಖರವಂದ್ಯಾ | ಆರ್ಧದ ಲಾಮಹ ಹರನಿಂದಾ ಪ್ರೇಮದಿ ಕೂಡಿಕೊಂಡೀ ಮಹಿ ಜನರಿಗೆ ನೀಮೋಹಕ ತೋರುವ ಜಗದ್ವಂದ್ಯಾ 2 ಪಾಪಿಗುಹನವರವಾ| ಕೆಡಿಸಲು ರೂಪಧರಿಸಿ ತಾಮಸರಿಗಂಧಮತಮ ಕೂಪದಿ ಕೆಡಹುವೆ ಶ್ರೀ ಮೋಹಿತ 3 ಅರ್ಧಹರನ ರೂಪಾ| ಕೃತಿಯಲಿ ಶುದ್ಧ ವಿಷ್ಣು ರೂಪಾ ಮುದ್ದು ಸುರಿವ ಭವ್ಯಾಂಗ ಸ್ವರೂಪ ಉದ್ಧರಿಸೆನ್ನನು ಶುದ್ಧ ಬುದ್ಧಿಮತಿಯನಿತ್ತು 4 ಶಂಖಚಕ್ರ ಅಭಯಾ| ತ್ರಿಶೂಲವ ಬಿಂಕದಿ ಧರಿಸಿದೆಯಾ ಪಂಕಹೋದ್ಭವೆ ಪಾರ್ವತಿಯ ಉಭ ಯಾಂಕದಲ್ಲಿ ಪೊಂದಿಹೆ ಶುಭಕಾಯಾ 5 ಅರ್ಧಶಿರದಿ ಮಕುಟಾ| ಆರ್ಧದಿ ಶುದ್ಧಗಂಗೆ ತ್ರಿಜಟಾ ಅರ್ಧಚಂದ್ರ ಶೋಭಿಸುತಿದೆ ಜಗತ್ತಿಗೆ ಅದ್ಭುತ ಅಚ್ಚರಿ ರೂಪಧಾರಕ 6 ಪಣೆಯ ತಿಲಕ ಢಾಳಾ | ಕಂಠಾಭ ರಣಗಳು ಪೂಮಾಲಾ ಮಿನುಗುವವಲ್ಲಿ ಪೀತಾಂಬರನುಟ್ಟಿಹ ಗುಣಗಣ ಪೂರ್ಣನೆ ಹನುಮನಯ್ಯ ಹರಿ7 ಮಾಯಾ | ಕವಿಸದೆ ಇನ್ನು ಕಾಯೊ ಜೀಯಾ ಘನ್ನ ಭಕ್ತಿ ಸುಜ್ಞಾನ ವೈರಾಗ್ಯವ ಮನ್ನಿಸಿ ಕರುಣಿಸಿ ನಿನ್ನ ಪದವಿ ಕೊಡು 8 ಹರನೊಳು ಹರ ಶಬ್ದಾ | ವಾಚ್ಯನೆ ಸಿರಿವರ ನಿರವದ್ಯಾ ಸರ್ವ ಶಬ್ದ ಸುರವಾಚ್ಯ ಈ ಪರಿಯೊಳು ಹರಿಹರ ಕ್ಷೇತ್ರದಿ ವರಗೃಹ ಮಾಡಿದಿ 9 ತುಂಗಭದ್ರ ತೀರಾ | ವಾಸನೆ ರಂಗ ಪಾಪ ದೂರಾ ಮಂಗಳ ಗೋಪಾಲಕೃಷ್ಣವಿಠಲ ಭವಹಿಂಗಿಸಿ ಪೊರೆ ದುಸ್ಸಂಗ ಬಿಡಿಸಿ ಹರಿ 10
--------------
ಅಂಬಾಬಾಯಿ