ಒಟ್ಟು 38 ಕಡೆಗಳಲ್ಲಿ , 21 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಚಂದಿರನೇ ದಾಸನನೇಕಿಂತು ಮರೆವೇ ಪ ದೀನ ದಯಾಪರ ನೀನು ಮನುಜಾಧಮ ನರ ನಾನು ಅ.ಪ ತ್ರಿಜಗಾಧಿಪ ಸುಪೂಜ್ಯನೇ | ಗಜರಾಜ ನತ ಪಾದನೇ ಅಜಸನ್ನುತ ವೈಭವನೇ | ಸುಜನಾವಳಿ ಸನ್ನುತನೇ 1 ಕರುಣಾಮಯ ಸಾಗರನೇ | ಪುರುಷೋತ್ತಮ ಮಾಧವನೇ ಉರಗಾಧಿಪ ಭೂಷಿತನೇ | ಗರುಡಧ್ವಜ ಕೇಶವನೇ2 ಕಡಲವಾಸ ದುರಿತನಾಶ | ಒಡಲ ಬೇಗೆ ಮನದ ಕ್ಲೇಶ ದಡಕೆಸೆಳೆದ ಬಂಧುನಾಶ | ಬಿಡಿಸಿ ಕಾವವ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಯೆ | ಕರುಣ ವಾರಿಧಿಯೆ | ಧೊರೆಯೇ |ವರ ಚರಣ ಸೇವೆಯನು ಕೊಡು ಹರಿಯೇ ಪ ಗಾಂಗೇಯ | ಶರದಿ ಸೆಣೆಸಲು ಅಂದುಸರಸದಲಿ ನೀ ಅವನ | ಪೊರೆಯಲಿಲ್ಲವೆ ಎಂದು 1 ದುರುಳ ದುಶ್ಯಾಸನ | ಸೀರೆ ಸಭೆಯಲಿ ಸೆಳೆಯೇತರಳೆ ಪಾಂಚಾಲೆ | ಓಲೆ ಕಳುಹಿದಳೆ ಹರಿಯೆತರುಳೆ ಕೈಗಾಯ ಬೇಕೆಂದು | ನಿನ್ನ ಧೊರೆಯೇಎರಳಾಕ್ಷಿಗಕ್ಷಯ್ಯ | ವಸನಿತ್ತೆ ಹರಿಯೇ 2 ಅಂದು ಬಲತಾಯಿ ಬಾಲಕನ | ತೊಡೆಯಿಂದ ನೂಕೇ |ಬಂದು ಕಾನನಕೆ ತಪಗೈದ | ತರಳನನು ಕಾಯ್ದೇ |ಇಂದು ನಾ ಮಾಡಿದಪರಾಧ | ವೇನಯ್ಯ ಹರಿಯೇ |ಕಂದನಪರಾಧ ಎಣಿಸುವಳೆ | ತಾಯಿ ಧೊರೆಯೇ3 ಗೌತಮರ ಮಡದಿಯನು | ಕಾಯಲಿಲ್ಲವೆ ಹರಿಯೆಔತಣವ ಕೊಟ್ಟು ಬರ | ಹೇಳಿದಳೆ ಧೊರೆಯೇ ||ವೀತಶೋಕನೆ ಎನ್ನ | ಮೊರೆ ಕೇಳಿಸದೆ ಹರಿಯೇಔತಪ್ರೋತ ನೀನೆಲ್ಲವನು | ತಿಳಿದಿರುವೆ ಧೊರೆಯೇ 4 ಬಲಿಯ ಯಾಚಿಸುತ | ನೀ ಅವನ ವಂಚಿಸಿದಿ ಹರಿಯೆತಲೆ ಬಾಗಲಲಿ ನಿಂದು | ನೀ ಅವನ ಪೊರೆದೆ ಧೊರೆಯೆಸಲೆ ಬೀದಿ ಬೀದಿಯಲಿ | ನಾ ಕೀರ್ತಿಸುವೆ ಹರಿಯೇಬಲು ದಯಾಪರ ಗುರು | ಗೋವಿಂದ ವಿಠಲೆಂದು ಧೊರೆಯೆ 5
--------------
ಗುರುಗೋವಿಂದವಿಠಲರು
(ಕಾರ್ತೀಕ ದಾಮೋದರನನ್ನು ನೆನೆದು) ಗೋವಿಂದ ಪಾಲಯ ಗೋಪಾಲ ಬಾಲ ಗೋಪಗಣೇಡಿತಗುಣ ವರುಣಾಲಯ ಪ. ದೀನ ದಯಾಪರ ದಿತಿಜವಿದಾರ ನಾನಾವತಾರ ನಂಬುವರಿಗಾಧಾರ ಏನು ತಪ್ಪಿದ್ದರು ಕ್ಷಮಿಸು ರಮಾವರ 1 ಭೂಧರ ಬಲಭದ್ರ ಸೋದರವೇಷ ಆದರದಲಿ ನಿನ್ನ ಪೊಗಳುವೆ ಶ್ರೀಶ ಶ್ರೀದ ಕಾರ್ತೀಕ ದಾಮೋದರ ಹಾಸ 2 ಪರಮ ಪಾವನ ಶೇಷಗಿರಿವರ ಮೂರ್ತೆ ನೀನರಿಯೆಯಾ ದಾಸರ ಮನದಿರವಾರ್ತೆ ಪರಿಹರಿಸಾರ್ತಿಯ ಪದ್ಮಜನುತಕೀರ್ತೆ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಣಿಯ ಗೋಪಾಲಕೃಷ್ಣನನ್ನು ನೆನೆದು) ತಾಪವ ಬಿಡಿಸು ದಯಾಪರ ಶ್ರೀ ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ. ಲೋಕನಾಯಕ ನಿನ್ನ ಕರುಣವಂದಿದ್ದರೆ ಸಾಕೆಂಬೆ ಜ್ಞಾನಾನಂದಕರ ಪಾಕಶಾಸನ ಸುತಗೊಲಿದಾತನ ಭಂಡಿ ನೂಕಿ ನಡೆಸಿದ ಕೃಪಾಕರ ಮೂರುತಿ 1 ನಡೆವುದು ನುಡಿವುದು ಕೊಡುವುದು ಕೊಂಬುದು ಮಡದಿ ಮಂದಿರ ಮಮತಾಸ್ಪದದ ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ- ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2 ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ- ಸನ್ನ ಮುಖಾಂಬುಜ ಪಾಲಿಸೆಂದು ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ ಪನ್ನಗಾಚಲವಾಸ ಪರಮ ದಯಾಳೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಕ್ಷಯಾತ್ಮ ಹರಿ ಜೈ ಜೈ ರಂಗ ಪಕ್ಷಿವಾಹನಾ ಮಾಂಗಿರಿರಂಗ ಪ ಅಕ್ಷಯ ಸುಖಕರ ಜೈ ಜೈ ರಂಗ ಸಿರಿ ಮಾಂಗಿರಿರಂಗ ಅ.ಪ ಉರಗಶಯನ ಹರಿ ಜೈ ಜೈ ರಂಗ ಸರಸಿಜಲೋಚನ ಮಾಂಗಿರಿರಂಗ ಉರುತರ ಮಹಿಮಾ ಜೈ ಜೈ ರಂಗ ಸನ್ನುತ ಮಾಂಗಿರಿರಂಗ 1 ಮಧುಮೃದು ವಚನಾ ಜೈ ಜೈ ರಂಗ ಬುಧಜನರಂಜನ ಮಾಂಗಿರಿರಂಗ ಮಧುರನಾಯಕ ಜೈ ಜೈ ರಂಗ ಮಧುದೈತ್ಯಾಂತಕ ಮಾಂಗಿರಿರಂಗ 2 ಓಂ ನಮೋ ಕೇಶವ ಜೈ ಜೈ ರಂಗ ದೀನದಯಾಪರ ಮಾಂಗಿರರಂಗ ಶ್ರೀನಾರಾಯಣ ಜೈ ಜೈ ರಂಗ ಸಿರಿ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆನಂದ ಗಿರಿ ವಿಠಲ | ಕಾಪಾಡೊ ಇವಳಾ ಪ ನೀನೊಲಿಯದಿನ್ನಿಲ್ಲ | ಕಾರುಣ್ಯ ಮೂರ್ತೆ ಅ.ಪ. ಮೋದ ಪಡಿಸುವ ಭಾರಾಶ್ರೀಧರನೆ ನೀನದಲ್ಲೆ | ಹೇ ದಯಾಪರನೇ |ಮಾಧವನೆ ತವದಾಸ್ಯ | ಸಾದರದಿ ಬಯಸುವಳುಹೇ ದಯಾಂಬುಧೆ ಚೆನ್ನ | ಉಪದೇಶಿಮನ್ನಿಸೋ 1 ಕಾಮಾದಿ ಅರಿಗಳನ | ನೇಮದಿಂದಲಿ ಸವರಿಭೂಮಗುಣಿತವ ಸ್ತವನ | ಕಾಮದಲಿ ಇರಿಸೀನೇಮ ಸಾಧನೆಗೈಸೀ | ಕಾಮಿತಾರ್ಥವನೀಗೋಶ್ರೀ ಮಹೀಸೇವಿತನೆ | ರಾಮಗುಣಧಾಮಾ 2 ಮೋದ ಮುನಿ ವಂದ್ಯಾ |ಬೇಧ ಸುಖದ್ವಂದಾದಿ | ಸಾದರದಿ ಅನುಭವಿಪಹಾದಿಯಲ್ಲಿರಿಸೊ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಇದು ರಕ್ಷಿಸುವಂಥ ಕಾಲ ಚಿಕ್ಕ ಮುದನೂರ ಗೋಪಾಲ ಮುನಿಜನಲೋಲ ಪ ನಿತ್ಯಾನಂದ ಭಕ್ತಮಂದಾರ ಮೊರೆಹೊಕ್ಕೆ ಸಲಹೆನ್ನ ಮುದದಿಂದ ನೀ ಕರುಣಾತೋರಿ ತ್ವರ ಕಾಯೋ ಗೋವಿಂದ 1 ಸರ್ವೋತ್ತಮ ವೆಂಕಟರಮಣ | ಭವ ನಿಃಶ್ಯಂಕ ನಿರಾಮಯ 2 ವಿಠಲ ಹರ್ಷದಿ ಬಂದು ಶರಣೆಂಬೆ ದೀನ ದಯಾಪರ ಮುರಹರ ಮುರಲೀಧರ ಅಗಣಿತಾವತಾರ 3
--------------
ಹೆನ್ನೆರಂಗದಾಸರು
ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ಓಡಿಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ ಪ. ನೋಡಿ ಮುದ್ದಾಡಿ ಕೊಂಡಾಡಿ ನಾ ಬೇಡುವೆಈಡಿಲ್ಲದ ನಿನ್ನೊಡನಾಡುವ ಸುಖ ಅ.ಪ. ಕಾಡಿನ ಸುಖಕೆ ಮತ್ತೀಡಿಲ್ಲ ಧರೆಯೊಳುಮಾಡುವೆ ಶಪಥವನುಹಾಡಿಪಾಡಿ ಕೈಜೋಡಿಸಿ ಕುಣಿಯುತಮಾಡಿದೆವೊ ನಾವ್ ರಾಸಕ್ರೀಡೆಯ 1 ನಿರಂಜನ ಮೂರ್ತೆ 2 ನೀರಜನಾಭನೆ ತೋರೋಕರಪಲ್ಲವಮೀರಿವೆ ಹೃದಯ ಸಂತಾಪಗಳುಮಾರ ಮೋಹನ ಸಾರುವೆ ನಿನ್ನಯಜಾರ ಬುದ್ಧಿಯ ತಾಪವ ನೀಗಿಸು 3 ಕಮಲ ವಿಹಂಗಮರಾಜ 4 ನೀನೇ ದಯಾಪರ ನೀನೇ ಭಕ್ತೋದ್ಧಾರನೀನೇ ಗತಿ ಪರನಾರೆರಿಗೆಪಾಣಿಮುಗೆವೆಯಮ್ಮ ವಾಣಿಯ ಲಾಲಿಸಿ ವೇಣುನಾದ ತೋರೊ ತಂದೆ ಶ್ರೀನೃಹರೇ 5
--------------
ತಂದೆ ಶ್ರೀನರಹರಿ
ಕಂಡೆನೋ ಕಂಡೆ ಗುರುಚಿದಂಬರನಾ ತನು ಗೊಂಡು ಭೂಮಂಡಲದೊಳು ಚರಿಸುವನಾ ಪ ಪರಮಾತ್ಮ ಪರತತ್ವವನು ತಿಳಿದವನ ಧರೆಯ ಜನರನÀು ಪಾವನವ ಮಾಡುವನಾ ಕರುಣ ಸಮುದ್ರ ದೀನರ ದಯಾಪರನಾ ನೆರೆನಂಬಿದವರಿಗೆ ವರವ ಕೊಡುವನಾ 1 ಮಳೆ ಛಳಿ ಬಿಸಿಲು ಹಸಿವಿಗಂಜದವನ ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ ನೆಲೆಗಾಣದಂತಹ ಅಪಾರ ಮಹಿಮನು ಕಲಿಮನದೊಡ್ಡದಾನಂದ ನಿರ್ಗುಣನ 2 ಸ್ಮರಹರನಂತೆ ಭಸಿತ ದಿಗಂಬರನಾ ಕೆರೆಬಾವಿ ದೇವಾಲಯವನು ಕಟ್ಟಿಸುವನ ಪುರಹರನಂತೆ ಢಿಕ್ಕನೆ ಧರಿಸಿಹನ ನರ ಗುರಿಗಳು ಬಲ್ಲರೇನೋ ಇಂಥವನಾ 3 ಯಮನಿಯಮ ಅಷ್ಟಾಂಗ ನಿರತನ ಕಮಲಾರಿ ಪಿತನಂತೆ ಗಂಭೀರದವನ ಹಿಮವಂತನಂತೆ ಧೈರ್ಯದೊಳಿರುತಿಹನ ಕಮಲ ಬಾಂಧವನಂತೆ ತೇಜದಿಂದಿರುತಿಹನ 4 ಅರಿಗಳನರುವರ ನುಗ್ಗೊತ್ತಿದವನ ಕರಣೇಂದ್ರಿಯಂಗಳ ನಿಗ್ರಹಿಸಿದವನ ಪರಮ ದಾಸಗೆ ಆಲಿಂಗನವನಿತ್ತನಾ ಸ್ಥಿರ ಚಿದಾನಂದ ಪುರದ ದಿಗಂಬರನ 5
--------------
ಕವಿ ಪರಮದೇವದಾಸರು
ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ. ಗಜ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ 1 ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ 2 ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ 3
--------------
ಗುರುಗೋವಿಂದವಿಠಲರು
ಕಾಪಾಡೋ ಸುಬ್ರಹ್ಮಣ್ಯ ಮಹಸ್ವಾಮೀ ಪ ಅನುದಿನ ದಯಾಪರ ದೇವ ನೀನೂ ಮಮತೆಯಿಂದ ಕಾಪಾಡು ಎಂಬೆ ನಾನು ಸುಬ್ರಹ್ಮಣ್ಯ 1 ಉರಗ ಬೇಡ್ವೆ ನಿನ್ನ ಸುಬ್ರಹ್ಮಣ್ಯ2 ಚಿತ್ತಜ ಕುಮಾರಾ ಸುಬ್ರಹ್ಮಣ್ಯ3
--------------
ಬೆಳ್ಳೆ ದಾಸಪ್ಪಯ್ಯ
ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಪ ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು1 ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು 2 ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು3 ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು ಜಪ ನಿಜಾಸನ ಧ್ಯಾನ ಜ್ಞಾನದಿಂದ ಸಪುತೆರಡು ಲೋಕದ ಒಡೆಯನ್ನ ಪಾದವ ಸಫಲವಾಗುವಂತೆ ಸಾಧನವ ಪೇಳಿದರು 4 ದಾರಿದ್ರ ದೋಷವ ಸೇರಿದ ಮಾನವನಿಗೆ ಆರು ಕೊಡದಲೆ ಧೇನು ದೊರಕಿದಂತೆ ಕಾರುಣ್ಯದಲಿ ಗುರು ಪುರಂದರದಾಸರು ಮೂರುತಿ ವಿಜಯವಿಠ್ಠಲನ್ನ ತೋರಿಸಿದರು 5
--------------
ವಿಜಯದಾಸ
ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು