ಒಟ್ಟು 53 ಕಡೆಗಳಲ್ಲಿ , 26 ದಾಸರು , 48 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(38ನೇ ವರ್ಷದ ವರ್ಧಂತಿ) ದಯಾನಿಧೆ ಪರಿಪಾಲಯ ಮಾಂ ಪ. ಮಾನುಷತ್ವವು ಬಂದ ಸಮಯದಿ ಹೀನ ಭೋಗವೆ ಬಯಸಿದೆ ನಾನು ನನ್ನದು ಎಂಬ ಕೀಳಭಿ- ಮಾನವೇ ನಾ ವಹಿಸಿದೆ ಏನನೆಂಬೆನು ಎನ್ನ ಬುದ್ಧಿವಿ- ಹೀನತೆಯ ಬಯಲಾಸೆ ಬಿಡಿಸು 1 ಇಳೆಯೊಳಿರುತಿಹ ನಿನ್ನ ಮಹಿಮೆಯ ತಿಳಿಯದಾದೆನು ಮೋಹದಿ ಕಳೆದೆ ಮೂವತ್ತೆಂಟು ವತ್ಸರ ಹಲವು ವಿಷಯದಿ ಚೋಹದಿ ಕಲಿಮಲಾಪಹ ಕೃಪಾಳು ನಿನ್ನಯ ನೆಲೆಯನರಿಯದೆ ನೊಂದೆನಲ್ಲೊ 2 ಆಸ್ಯದಲಿತ್ವನ್ನಾಮ ನುಡಿಸುತ ದಾಸ್ಯವನು ದಯ ಮಾಡುತ ಹಾಸ್ಯ ಮಾಳ್ಪರ ಹಲ್ಲ ಮುರಿದು ವಿಲಾಸ್ಯ ಮತಿ ಕಾಪಾಡುತ ಪೋಷ್ಯ ಪದವನು ನೀಡು ಲಕ್ಷ್ಮೀ- ವಾಸ್ಯ ವಕ್ಷನ ವೆಂಕಟೇಶ3
--------------
ತುಪಾಕಿ ವೆಂಕಟರಮಣಾಚಾರ್ಯ
(ಈ) ಲೋಕನೀತಿಯನ್ನು ಕುರಿತ ಕೃತಿಗಳು ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ ಮಾನಿತ ಜನರವಮಾನವ ನೋಡದೆ ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ ನೀತಿಯನರಿಯದ ಕೋತಿಗಳಂದದ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಗಿಎ ಕುಲ ಕಜ್ಜಳರವಮತಿಗುಜ್ಜುಗಿಸುತ್ತಿಹ 2 ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು ಭಂಡತನದಿ ಪರಗಂಡಸರೊಳು ಸಮ- ದಂಡೆಯೆನಿಸಿ ಬಲು ಚಂಡಿಸುತಿರ್ಪರೋ 3 ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಕಾಳಮೂಳಿಯರ ಮೇಳದಿ ಹಿಗ್ಗುವ ಬಾಳುಗೇಡಿ ಜನರೊಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ ಶರಣಾಭರಣ ನಿಜಕರುಣವ ತೋರಿಸು ವರದವಿಠಲ ದೊರೆ ವರದದಯಾನಿಧೆ 5
--------------
ವೆಂಕಟವರದಾರ್ಯರು
(ಕಾರ್ಕಳದ ವೆಂಕಟೇಶನನ್ನು ನೆನೆದು) ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ. ವಿಪಿನ ನ- ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ. ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ ದಾಸಜನರಭಿಲಾಷೆಯನು ಸಂತೋಷದಿ ಕೊಡಲು- ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ ರಾಸಿಗಳಿಸಿ ಜಗದೀಶ ಪರೇಶ ಮ- ಹೇಶವಿನುತ ನಿರ್ದೋಷ ಜಗನ್ಮಯ 1 ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ- ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ- ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ- ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ- ಮೂರ್ತಿಧರಿಸಿ ಜನರರ್ತಿಯ ಸಲಿಸುವ ಚಿತ್ತಜಜನಕ ಸರ್ವೋತ್ತಮ ನಿರುಪಮ 2 ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ- ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ- ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ- ದಾಂಕಿತ ದನುಜಭಯಂಕರ ವರ ನಿರ- ಹಂಕರ ನಿಜದ ನಿಷ್ಕಳಂಕಚರಿತ್ರ 3 ಮಂದರಾಧರ ಮಾಪತೇ ಮುಖಚಂದಿರ ಮೌನಿ ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ- ಕಂಬುಕಂಧರ ಶೋಭಿಪ ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ ಮಂದಹಾಸ ಮುಚುಕುಂದವರದ ಗೋ- ವಿಂದ ಸಚ್ಚಿದಾನಂದ ಉಪೇಂದ್ರ 4 ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ- ಭೂರಿವೇದಪುರಾಣಘೋಷಾದಿಹಾರನೆ ಸಂತತ ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ ದಾರುಣೀಸುರರಿಂದನವರತ ಮಂಗ- ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಆತ್ಮಶೋಧನೆ ಅನಂತಾನಂತ ಪಾಪ ಮಾಡುವೆ ನಾನು ಪ ಅನಂತದಯಾನಿಧೆ ನೀನೊ ಹಯವದನ ಅ.ಪ ದಾರು ಎನ್ನ ಪಾತಕಕ್ಕೆ ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಿಮಾಣುಗಳಿಗೆ 1 ಪೇಳು ಪಾಪವೆಂದಲೆನಲು ಪೇಳಲಿಕ್ಕೆ ಬಲುಲಜ್ಜೆ ಗಳು ಅಂಡಲಿವುತಿದೆ ತಿಳಿದಾತ ನೀನಲ್ಲವೆ 2 ಎನಗೊಂದು ಉಪಾಯವ ಅನಾಯಾಸ ಮಾಡುವಂಥ ನಿನ್ನ ನಾಮಸುಧೆಯನ್ನು ಎನಗೀಯೊ ಮುದದಿಂದ3 ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು ವಾಸುದೇವವಿಠಲನೆ ನೀ ಸಡಲ ಬಿಡುವರೇನೊ4
--------------
ವ್ಯಾಸತತ್ವಜ್ಞದಾಸರು
ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಇಷ್ಟುದಿನ ಭೂವೈಕುಂಠ ಎಷ್ಟುದೂರವೆನುತಿದ್ದೆದೃಷ್ಟಿಯಿಂದಲಿ ನಿಮ್ಮ ಕಂಡೆ ಸೃಷ್ಟಿಪತಿ ಶ್ರೀರಂಗೇಶ ಪ. ಚಿತ್ರಬೀದಿ ವಿರಾಜಿತ ಚಾರುನೂಪುರ ಶೋಭಿತಸಪ್ತ ಪ್ರಕಾರ ಸಂಪೃಷ್ಠ ಉತ್ತಮ ಶ್ರೀರಂಗಶಾಯಿ1 ಹೇಮ ಸೋಪಾನಗಳಲ್ಲಿಹೇಮಕಟಾಂಜನದಿಂದ ಗುಣಶೋಭಿತ ಶ್ರೀರಂಗೇಶ2 ಚತುರ ವೇದಗಳಲ್ಲಿ ಚತುರಮೂರ್ತಿವೀರ್ಯದಲ್ಲಿಚತುರ ದಿಕ್ಕುಗಳಲ್ಲಿ ಚದುರ ಶ್ರೀರಾಮ ರಂಗಶಾಯಿ 3 ಪಂಕಜನಾಭನೆ ಏಸು ಪಾವನವೊ ನಿಮ್ಮ ದಿವ್ಯಕುಂಕುಮಾಂಕಿತ ಚರಣ ಪಂಕಜಾಕ್ಷ ಶ್ರೀರಂಗೇಶ 4 ಪುಣ್ಯ ವಿದ್ಯಾ ದಯಾನಿಧೆ ಪನ್ನಗಶಾಯಿ ಶೋಭಿತ ಧನ್ಯ ಚಂದ್ರಪುಷ್ಕರಣ ಉನ್ನಂತ ಶ್ರೀ ಹಯವದನ 5
--------------
ವಾದಿರಾಜ
ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ ನುಡಿನೀನೊಲಿದಾಲಿಪುದುಅ.ಪ. ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ ನೀತಿಯನರಿಯದ-ಕೋತಿಗಳಂದವ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು-ದೋಷವಿ ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ 2 ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು ಚಂಡಿಸುತಿರ್ಪರೋ 3 ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಜನರೂಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ ಶರಣಾಭರಣ ನಿಜ ಕರುಣವ ತೋರಿಸು ವರದ ವಿಠಲಧೊರೆ ವರದದಯಾನಿಧೆ 5
--------------
ಸರಗೂರು ವೆಂಕಟವರದಾರ್ಯರು
ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮದಯಾನಿಧೆ ಧ್ರುವ ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ ದೃಢಗೊಳಿಸುವ ಙÁ್ಞನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ 1 ಬಟ್ಟೆ ಕೊಟ್ಟು ಕಾಯೊ ಸತ್ಸಂಗವ ಮುಟ್ಟಿಮುದ್ರಿಸೊದೃಷ್ಟಾಂತವ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ 2 ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಸುಖಸಾರ ಮಾಯಾವಿದೂರ ಭಾವಜನಯ್ಯ ಭಕುತರ ಪ್ರಿಯಕರ ಪ ಕಾಯಕಾಂತಾರದೊಳು ನೋಯುತ ವಿಧ ವಿಧ ಬಾಯ ಬಿಡುವೆನಯ್ಯ ತೋಯಜಾಕ್ಷನೆ ನೋಡೊ 1 ಸಂಸಾರತೆರೆಯೊಳು ಹಿಂಸೆ ಪಡುತ ಮತಿ ಕಂಸಾರಿ ಕರುಣಿಸೊ 2 ಜಡಭವತೊಡರನು ಕಡೆಹಾಯ್ಸಿ ಕೊಡುಮುಕ್ತಿ ಕಡುದಯಾನಿಧೆ ಎನ್ನೊಡೆಯ ಶ್ರೀರಾಮನೆ 3
--------------
ರಾಮದಾಸರು
ಚರಣಯುಗವ ತೋರೋ ಪ ಶರಣರ ಪೊರೆಯುವ ಕರುಣಿಗಳರಸನೆ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು ತಕ್ಕುದೇನು ಘನ ರಕ್ಕಸವೈರಿಯೆ 1 ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು2 ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ ಕಾಣೆನಿನಗೆ ಸರಿ ಜಾಣತನದಿ ಹರಿ 3 ವಾರಿಧಿಕೃತಶಯನ ವಿಕಸಿತ ವಾರಿಜದಳನಯನ ಕ್ಷೀರದೊಳದ್ದುನೀ ನೀರೊಳಗದ್ದು ಕಂ ಸಾರಿ ನಿನ್ನನೆ ಸಾರಿದೆ ನರಹರಿ 4 ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲ ದೊರೆ ದಯಾನಿಧೆ 5
--------------
ವೆಂಕಟವರದಾರ್ಯರು
ಜೋಜೋ ಜೋಜೋ ಜೋ ವೆಂಕಟೇಶ ಜೋಜೋ ಜೋಜೋ ಜೋ ಶ್ರೀನಿವಾಸ ಜೋಜೋ ಜೋಜೋ ಭಕ್ತರಘನಾಶ ಜೋಜೋ ಜೋಜೋ ಜೋ ಸ್ವಪ್ರಕಾಶ ಜೋಜೋ ಪ ನಂಬಿದೆ ತಂದೆ ಮುದ್ದು ಮೋಹನ್ನ ವಿಠ್ಠಲ ಸುಂದರ ಶ್ರೀ ಉರಗಾದ್ರಿವಾಸ ವಿಠ್ಠಲ ಸಿರಿ ಉರಗಾದ್ರಿವಾಸ ವಿಠ್ಠಲ ಇಂದಿರಾಪತಿ ತಂದೆ ವೆಂಕಟೇಶ ವಿಠ್ಠಲ 1 ಆನಂದಮಯ ಅಂತರಾತ್ಮವಿಠಲ ನವನೀತ ಧರ ತಾಂಡವ ಕೃಷ್ಣ ವಿಠ್ಠಲ ಜಯವೆಂದು ಪಾಡುವೆ ಜಯಾಪತಿ ವಿಠ್ಠಲ ಸರಿಯುಂಟೆ ನಿನಗಿನ್ನು ಶಾಂತೀಶ ವಿಠ್ಠಲ2 ಗಂಗಾಜನಕ ಶ್ರೀ ಗಜವರದ ವಿಠ್ಠಲ ಸಂಗರಹಿತ ಶೇಷಶಯನ ವಿಠ್ಠಲ ಹಯವನೇರುತ ಪೊರೆದೆ ಶ್ರೀಹರಿ ವಿಠ್ಠಲ ದಾನವೈರಿಯೆ ಧ್ರುವವರದ ವಿಠ್ಠಲ 3 ಗರುಡಗಮನ ಗುರುವಾಸುದೇವ ವಿಠ್ಠಲ ವರವ ಪಾಲಿಸು ವರದ ಲಕ್ಷ್ಮೀಶ ವಿಠ್ಠಲ ಪದ್ಮನಾಭನೆ ಕಾಯೊ ಪ್ರದ್ಯುಮ್ನ ವಿಠ್ಠಲ ವರಲಕ್ಷ್ಮೀರಮಣ ವರದ ವೆಂಕಟೇಶ ವಿಠ್ಠಲ4 ಸಜ್ಜನಪಾಲ ಶ್ರೀ ಸುಜ್ಞಾನ ವಿಠ್ಠಲ ಶಾಮಲಾಂಗನೆÀ ಕೃಷ್ಣ ಶ್ರೀನಾಥ ವಿಠ್ಠಲ ಭಾರತೀಶ ಪ್ರಿಯ ವಿಠ್ಠಲ ಪರಿಸರನೊಡೆಯ ಶ್ರೀವರಹ ವಿಠ್ಠಲ 5 ಜ್ಞಾನದಾಯಕ ಆನಂದಮಯ ವಿಠ್ಠಲ ಸಜ್ಜನ ಪರಿಪಾಲ ಶ್ರೀ ಪ್ರಾಜ್ಞ ವಿಠ್ಠಲ ಜಗವ ಮೋಹಿಪ ದೇವ ಜಗದ್ಭರಿತ ವಿಠ್ಠಲ ವಿಶ್ವ ವ್ಯಾಪಕ ವಿಜ್ಞಾನಮಯ ವಿಠ್ಠಲ6 ವಿಷ್ಣುಮೂರುತಿ ಕೃಷ್ಣದ್ವೈಪಾಯನ ವಿಠ್ಠಲ ಅಕ್ಷರೇಡ್ಯನೆ ಕಾಯೋ ಲಕ್ಷ್ಮೀಶ ವಿಠ್ಠಲ ಕಂಟಕ ಹರಿಸು ಶ್ರೀವೆಂಕಟೇಶ ವಿಠ್ಠಲ ಸಾರಿದೆ ಸಲಹೆನ್ನ ಶ್ರೀರಮಣ ವಿಠ್ಠಲ7 ದುರುಳರ ಮಡುಹಿದ ವರದ ವಿಠ್ಠಲ ಅಂಬುಧಿ ಶಯನಪನ್ನಂಗ ಶಯನ ವಿಠ್ಠಲ ದಾರಿ ತೋರಿಸೊ ದಾಮೋದರ ವಿಠ್ಠಲ ಕರುಣಿಸಿ ಪೊರೆ ಎನ್ನ ಕಮಲನಾಭ ವಿಠ್ಠಲ8 ಕಂಜದಳಾಕ್ಷ ಕಮಲನಾಥ ವಿಠ್ಠಲ ಮುರಮರ್ದನನೆ ಕಾಯೋ ಮುರಳೀಧರ ವಿಠ್ಠಲ ದಯದಿಂದ ಪಾಲಿಸು ದಯಾನಿಧೆ ವಿಠ್ಠಲ ಅಚ್ಚುತ ಹರಿ ಕೃಷ್ಣಕ್ಷೇತ್ರಜ್ಞವಿಠ್ಠಲ9 ಜ್ಞಾನಿಗಳರಸನೆ ಆನಂದ ವಿಠ್ಠಲ ಮೂಜಗದೊಡೆಯ ಭಾರ್ಗವೀಶ ವಿಠ್ಠಲ ಸರ್ವಕರ್ತೃ ಪುರುಷೋತ್ತಮ ವಿಠ್ಠಲ ಮಧುವೈರಿ ಪೊರೆಮಧುರನಾಥ ವಿಠ್ಠಲ10 ರಾಕ್ಷಸವೈರಿ ರಮಾಧವ ವಿಠ್ಠಲ ಕರುಣಿಗಳರಸನೆ ಕಾರುಣ್ಯ ವಿಠ್ಠಲ ಎದುರ್ಯಾರೋ ನಿನಗಿನ್ನು ಯದುಪತಿ ವಿಠ್ಠಲ ಉದ್ಧರಿಸೆನ್ನ ಉದ್ಧವವರದ ವಿಠ್ಠಲ11 ನಾಗಶಯನ ಕೃಷ್ಣಯೋಗೀಶ ವಿಠ್ಠಲ ಕುಂಭಿಣಿಪತಿ ಶ್ರೀಶ ಸಿಂಧುಶಯನ ವಿಠ್ಠಲ ಸುಜ್ಞಾನವೀವ ಪ್ರಾಜ್ಞಾನಿಧಿ ವಿಠ್ಠಲ ಸಂಕಟಹರಿಸು ಸಂಕರ್ಷಣ ವಿಠ್ಠಲ12 ಗೋಪಿಕಾಲೋಲ ಗೋಪೀನಾಥ ವಿಠ್ಠಲ ಪಾದ್ಯ ವೈಕುಂಠಪತಿ ವಿಠ್ಠಲ ಮಾತರಿಶೃಪ್ರಿಯ ಶ್ರೀಕಾಂತ ವಿಠ್ಠಲ ಧನ್ಯನಾದೆನೋ ದೇವ ಧನ್ವಂತ್ರಿ ವಿಠ್ಠಲ13 ಶ್ರೀಧರ ಪೊರೆ ವೇದವತೀಶ ವಿಠ್ಠಲ ಸಾಧುಗಳರಸನೆ ಭಕ್ತವತ್ಸಲ ಮೇದಿನಿಯೊಳು ನಿನ್ನ ಪೋಲುವರಿಲ್ಲ ಆದರದಿಂ ಕೇಳೊ ನೀ ಎನ್ನ ಸೊಲ್ಲ14 ರನ್ನ ಮಂಟಪದೊಳು ಚಿನ್ನದ ತೊಟ್ಟಿಲು ಕನ್ನೇರುತೂಗಿ ಪಾಡುವರೊ ಗೋವಿಂದ ಕರುಣಸಾಗರ ಕೃಷ್ಣ ಮಲಗಿ ನಿದ್ರೆಯ ಮಾಡೊ ಕಮಲನಾಭ ವಿಠ್ಠಲ ಪರಮದಯಾಳು 15
--------------
ನಿಡಗುರುಕಿ ಜೀವೂಬಾಯಿ
ದಯಾನಿಧೆ ದಯ ಮಾಡಬೇಕು |ದಯ ಮಾಡಬೇಕು ಎನ್ನಯ ದೋಷಾವೆಣಿಸದೆ |ಹಯಮುಖ ಲೋಕಾತ್ರಯ ವ್ಯಾಪ್ತ ಪರಮಾಪ್ತ ಪ ನಿನ್ನ ನಂಬಿದ ಭುಕುತರನ್ನ ಚೆನ್ನಾಗಿ ಕಾಯ್ದಾ |ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ ಬನ್ನಾ ಬಡಿಸದೆ ಸಂಪನ್ನ ಗುಣಾರ್ಣವ 1 ಮುಖ್ಯಪ್ರಾಣ ವಂದಿತಾಂಘ್ರಿ |ನೀನೊಲಿಯದಿರೆ ಸುಜ್ಞಾನ ಮಾರ್ಗವ ಕಾಣೆ 2 ಹರಿಕೋಟಿ ತೇಜಾ ಕಾಮಿತ ಕಲ್ಪಿತರು ಮಹರಾಜಾ |ಸುರ ನದಿ ಜನಕ ಅಸುರ ಶೀಕ್ಷಾ ಕಮಲಾಕ್ಷ |ಕರುಣಿ ಕಪಿಲ ವ್ಯಾಸಾ ಗುರು ಪ್ರಾಣೇಶ ವಿಠಲಾ 3
--------------
ಗುರುಪ್ರಾಣೇಶವಿಠಲರು
ದಯಾನಿಧೆ ಶ್ರೀ ರಾಘವೇಂದ್ರ ಗುರುವೆ ಕಾಮಿತ ಸುರತರುವೆ ಪ ಧರಾತಳದಿ ಸುರತರೂವರೋಪಮ ತ್ವರಾದಿ ಎನ್ನನು ಪೊರೇಯೊ ಗುರುವರ 1 ಗಡಾನೆ ತವ ಪದ ಜಡಾಜ ಯುಗಲದಿ ಧಢಾ ಮನವ ಕೊಡೊ ಒಡೇಯ ಗುರುವರ 2 ಎಷ್ಟೊ ಪೇಳಲೆನ್ನ ಕಷ್ಟಾ ರಾಸಿಗಳನ್ನು ಸುಟ್ಟುಬಿಡೊ ಸರ್ವೋತ್ಕøಷ್ಟಾ - ಮಹಿಮ ಗುರು 3 ಮೋಕ್ಷಾದಾಯಕ ಎನ್ನ ವೀಕ್ಷೀಸಿ ಮನೋಗತಾ - ಪೇಕ್ಷಾವ ಪೂರೈಸೆÀೂ ತ್ರ್ಯಕ್ಷಾದಿಸುರ ಪ್ರೀತ 4 ದಾತಾನೆ ನೀ ಎನ್ನ ಮಾತೂ ಲಾಲಿಸೊ ನಿತ್ಯ ನೀತಾ - ಗುರು ಜಗನ್ನಾಥ ವಿಠಲ ಪ್ರಿಯ 5
--------------
ಗುರುಜಗನ್ನಾಥದಾಸರು
ದೀನ ದಯಾಳು ನೀನೆವೆ ನಮ್ಮ ಅನಾಥನಾಥಾ ನಂದೊ ಬ್ರಹ್ಮನಂತುಗಾಣನುಪಮ ಧ್ರುವ ಪರಮಾನಂದ ಪರಮ ಪಾವನ ಶರಣ ಜನರಾಭರಣಾಗಿ ಹ್ಯ ಕರುಣ ಸಾಗರ ಪೂರ್ಣನೆ 1 ಅವ್ಯಕ್ತನಹುದೊ ವಿರಕ್ತ ಶಕ್ತನಹುದೊ ಭಕ್ತವತ್ಸಲ ಭೋಕ್ತರ ಮುಕ್ತಿದಾಯಕ 2 ಭೇದಾತೀತ ಸದೋದಿತ ಪೂರ್ಣ ಸಾಧುಹೃದಯನಿವೇದ ಪೂಜಿತ ಅದಿದೇವ ಸದಾತ್ಮನೆ 3 ವರ ಮುನಿಗಳ ಹರುಷವುದಯ ತರಳ ಮಹಿಪತಿಯ ಹೊರೆವ ಅನುದಿನ ಹರಿಯು ಪರಮ ದಯಾನಿಧೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಲ್ಲು ಬಾರೊ ದಯಾನಿಧೆ ಪ ನಿಲ್ಲು ಬಾರೋ ಸರಿಯಲ್ಲ ನಿನಗೆ ಲಕ್ಷ್ಮೀ ವಲ್ಲಭ ಮನ್ಮನದಲಿ ಬಿಡದೆ ಬಂದು ಅ ಅತಿ ಮೃದುವಾದ ಹೃತ್ಯತ ಪತ್ರಸದನದಿ ಶಾ ಶ್ವತವಾಗಿ ಭವ್ಯ ಮೂರುತಿ ಭಕ್ತವತ್ಸಲ 1 ತನುಮನಧನದ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ 2 ಆಶೆಪುಟ್ಟಿತು ನಿನ್ನಲ್ಲೀ ಸಮಯದಲಿ ಪಾ ರಾಶರವರದ ಪೂರೈಸು ಬಯಕೆಯ 3 ನಾನಾವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ4 ಯಾತರ್ಯೋಚನೆ ಮನಸೋತ ಬಳಿಕ ಪುರು ಹೂತವಂದಿತ ಜಗನ್ನಾಧವಿಠ್ಠಲರೇಯ 5
--------------
ಜಗನ್ನಾಥದಾಸರು