ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ ಪ. ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ ಮೋದಗುರುಗಳು ಬೋಧಿಸೆ | ದಯದಿ ಅ.ಪ. ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ ಐದು ಇಂದ್ರಿಯವು ಕಲೆತು ಕಾಯ ಐದಲಾರದು ಜೊತೆಗೆ ಕರ್ಮ ಒಂದು ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು ಮೋದವಾಗುತ ಮನದೊಳು ಆದಿದೈವನ ಕರುಣವಾದ ಬಳಿಕಿನ್ನೇನು ಪಾದಪದ್ಮವ ತೋರೆಲೊ | ಸ್ವಾಮಿ 1 ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ ಐದಿಸಿ ಮೂಲಸ್ಥಳಕೆ ಐದು ರೂಪಾತ್ಮಕನ ಆದರದಿ ಪೂಜಿಸುತ ಐದೊಂದು ದೂರ ತ್ಯಜಿಸಿ ಐದು ನಾಲ್ಕು ತತ್ವದಧಿಪತಿಗಳನು ಆದರದಿ ಧ್ಯಾನಮಾಡಿ ಐದು ಮೂರು ದಳದಿ ಆದಿತ್ಯನಂತಿರುವ ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2 ಐದು ಭೇದಗಳ ಮತ ಸ್ಥಾಪಕರ ಕರುಣದಲಿ ಐದು ಮೂರನೆ ಖಂಡಿಸಿ ಐದೆರಡು ರೂಪಕನ ಆದರದಿ ಸ್ತುತಿಸುತ್ತ ಭೇದಿಸಿ ಹೃದಯಗ್ರಂಥಿ ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ ಆದರದಿ ನಂಬಿ ಸ್ತುತಿಸಿ ಈ ದಾರಿ ಕಾಣಲು ಇದಕೆ ಕಾರಣದಿವ್ಯ ಮೋದ ಶ್ರೀಗುರು ಕರುಣವೋ | ದಯವೋ 3
--------------
ಅಂಬಾಬಾಯಿ
ಯಾಕೆ ನಿರ್ದಯವೋ ದೇವ ದೇವ ಸ್ವಭಾವ ಯಾಕೆ ಮರೆತೆ ದೇವಾ [ಎನ್ನನು] ಪ ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ ಕಾಕುಮನುಜನೆಂದು ನೀಕರಿಸಿದೆಯೋ ಅ.ಪ ಉದರ ಪೋಷಣೆಗಾಗಿ ವಿಧ ವಿಧ ದೇಶದಿ ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು1 ಪರರ ನಿಂದನೆ ಗೈದೆ ನೆರೆಯವರನು ಕೊಂದೆ ಪರರ ಸ್ವತ್ತನು ತಂದೆ ಪರರನ್ನವನು ತಿಂದೆ ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ 2 ಸಾವು ಜನ್ಮಂಗಳಿಂದ ನೋವು ಬಂಧನವಡೆದು ಬೇವಿನಂದದೆ ದುರ್ಗುಣಭಾವವ ತಳೆದೆನೋ ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ ಸಾವುನೋವನು ಬಿಡಿಸೊ ಮಾವಿನಕೆರೆರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್