ಒಟ್ಟು 31 ಕಡೆಗಳಲ್ಲಿ , 18 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ಅನುದಿನ ಮರೆಯದೆ ಮರೆಯದೆ ಪ ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು 1 ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ2 ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ3 ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು ನುಡಿವ ಹರಿ ನಾಮಾಮೃತವೇ ತೀರ್ಥಎನ್ನ ಮನವೆಂಬುದೆ ದಿವ್ಯ ಸಿಂಹಾಸನ 4 ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆಅನ್ಯವಾದ ಮಂತ್ರ ತಂತ್ರವ್ಯಾಕೆಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ 5
--------------
ವ್ಯಾಸರಾಯರು
ಅಮ್ಮಬಾರೆ ನಮ್ಮಮ್ಮನೆ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ ಧ್ರುವ ಅಮ್ಮಬಾರೆ ನಮ್ಮಮ್ಮನೆ ನೀ ನಮ್ಮ ಬೊಮ್ಮನ ಪಡೆದಮ್ಮ ನೀ ಪರ ಬ್ರಹ್ಮ ನೀನಹುದಮ್ಮ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ 1 ಉಮ್ಮ ಸವಿದೊಮ್ಮೆ ಅಮ್ಮೆ ನಾ ನಿನ್ನ ಸುಮ್ಮನಿರುವೆ ನಾ ಒಮ್ಮನದಲೆಮ್ಮೆ ಇಮ್ಮನಡಿಬೇಡೆ ಅಮ್ಮೆ ನಾನ ನಿಮ್ಮ ಒಮ್ಮೆ ಅಮ್ಮಿಯಾಲಮೃತ್ಯೆರಿ ಅಮ್ಮಾ 2 ಒಮ್ಮೆ ದಯವೆಂಬ ಅಮ್ಮನುಣಿಸಮ್ಮಾ ನಮ್ಮ ಕರುಣದಾ ಅಮ್ಮನುಣಿಸಮ್ಮಾ ಒಮ್ಮೊಮ್ಮುಣಿಸ ನಮ್ಮಮ್ಮ ನೀನಮ್ಮಾ ರಮ್ಮಿಸಿ ಮಹಿಪತಿ ಬಾಲಕಗ ನಿಮ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಆಸೆ ಎಂಬೋ ನದಿ ಆಸೆ ಎಂಬೋ ನದಿಆಸೆ ಎಂಬೋ ನದಿಯಿರೆ ಮಹಾ-ತೃಷೆಯ ಆರು ದಾಟಲಳವಲ್ಲ ಪ ಮನೋರಥ ನೀರು ಮನೋರಥ ನೀರುಮನೋರಥ ನೀರು ಇರೆ ಮಹಾತೃಷೆ ಅಲೆಗಳಯ್ಯ 1 ಸುಳಿ ಮೋಹವೆಂಬೋ ಸುಳಿಮೋಹವೆಂಬಾ ಸುಳಿಯಿರೆ ಮಹಾತೊರೆ ಹರಿಯಯ್ಯಾ 2 ಸತಿ ಎಂಬಾ ಮೊಸಳೆಸತಿ ಎಂಬ ಮೊಸಳೆಯಿರೆ ಸುತರೆಂಬರು ಏಡಿಗಳಯ್ಯ 3 ಬಂಧಗಳು ಗ್ರಹ ಬಂಧುಗಳು ಗ್ರಹಬಂಧಗಳು ಗ್ರಹ ಇರೆ ಬಡಿದಾಟ ನೀರು ಗುಳ್ಳೆಯಯ್ಯ4 ಗುರು ದಯವೇ ನಾವೆ ಗುರುದಯವೇ ನಾವೆಗುರುದಯವೆ ನಾವೆಯಿರೆ ಗುರು ಚಿದಾನಂದನ ಸೇರಬೇಕಯ್ಯ 5
--------------
ಚಿದಾನಂದ ಅವಧೂತರು
ಇದೇ ರಾಮನಿಧಿ ನೋಡು ಎದುರಿಗಿರುತಿರೆ ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ ಪ ಭೂರಿ ಭೋಜನ ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ ಸೂರ್ಯ ಕಿರಣ ತೋರುವಾ ಪ್ರಭೆ ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ 1 ಅಷ್ಟದಳದ ಮಂಟಪದ ಪೆಟ್ಟಿಗೆಯಲೀ ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ 2 ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ- ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ ಶಂಖ ತಾಳ ಮದ್ದಳೆಯು ಝೇಂಕೃತಿಯಿಂದಾ ವೆಂಕಟಾಚಲ ನಿಲಯಕಾಯೊ ವಿಜಯವಿಠ್ಠಲ 3
--------------
ವಿಜಯದಾಸ
ಊಟ ಮಾಡಿದೆನು ಬ್ರಹ್ಮಾನಂದದ ಊಟವಆರು ಅರಿಯದ ಯೋಗ್ಯರು ಎಂಬ ಊಟ ಪ ಸದ್ಗುರು ಎಂದೆಂಬ ಅನ್ನಪೂರ್ಣ ತಾನುಶುದ್ಧ ಹೃದಯವೆಂಬ ಹರಿವಾಣದೊಳಗೆಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವಸಿದ್ಧ ಗುರುವೇ ತಂದು ಎನ್ನ ಮುಂದಿಡಲು1 ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದುಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿಎತ್ತಿ ಸವಿದೆನು ನಾನು ಅನುಭವದ ತುತ್ತ 2 ಸಾರಾಮೃತವೆಂಬ ಸಾರನೇ ಸುರಿಯುತತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿಮೀರಿದಾನಂದಗುಳ್ಹೂರಿಗೆಯ ಮಂಡಿಗೆಯತೋರುವೆಚ್ಚರು ಮರೆತು ಹಾಯೆನುತಲುಂಡು 3 ಹೇಳಬಾರದ ಪರಮಾತ್ಮ ಪರಮಾನ್ನ ಸುರಿದುಮೇಲೆ ಗುರುದಯದ ಉದಕವನೆ ಕುಡಿದುಮೂಲನಾದವ ಘೋಷ ಸುತ್ತೆಲ್ಲ ಪಸರಿಸಲುಗೋಲ ನಾನಾ ತೇಜ ದೀಪ ಬೆಳಕಿನಲ್ಲಿ 4 ಇಂತೂಟವನೆ ಉಂಡು ನಿಜ ತೃಪ್ತಿಯದಾಗೆಅಂತು ಕಳೆದೆನು ಅವಿದ್ಯದ ಕಡು ಹಸಿವನುಚಿಂತಯಕ ಚಿದಾನಂದ ಅನ್ನ ಪೂರ್ಣನು ಎಣಿಸೆಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ5
--------------
ಚಿದಾನಂದ ಅವಧೂತರು
ಎಂಥಾ ಸ್ಥಿತಿಯೆ ಶ್ರೀರಾಮಗೆ ಪ ಚಿಂತಿತ ಫಲದಗೆ ಚಿಂತಾಪ್ರಾಪ್ತಿಯೆ ಅ.ಪ. ಲೋಕೈಕನಾಥಗೆ ಈ ಕಪಿನಾಥನು ಸು- ಗ್ರೀವನು ನಾಥನೆಂದೆನಿಸುವ ಪರಿಯೆ 1 ಸಕಲ ಲೋಕ ಶರಣ್ಯಗೆ ಕಕುಲತೆಯಿಂದನ್ಯರಲಿ ದೈನ್ಯವೆ 2 ಯಾವನನುಗ್ರಹ ಬೇಡುವರು ಈ ವಿಭುವಿಗೆ ಸುಗ್ರೀವನ ದಯವೆ 3 ಎಲ್ಲರ ದುಃಖವ ಪರಿಹರಿಸುವನಿಗೆ ಇಲ್ಲಿ ಸುಗ್ರೀವನೊಳ್ ದೈನ್ಯದ ಮೊರೆಯೆ 4 ಕರಿಗಿರೀಶನ ಕಾರ್ಯಕೆ ಕಪಿವರ ಪರಿ ಮಾಡಿಸುವುದೆ 5
--------------
ವರಾವಾಣಿರಾಮರಾಯದಾಸರು
ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ವರ್ಣಿಸಿ ದೂತೆ ಪ. ಗೆಜ್ಜೆ ಘಿಲ ಘಿಲಕೆಂದು ಬಂದಳು ದೂತೆಗುಜ್ಜಿ ದ್ರೌಪತಿಗೆರಗಿ ನಿಂತಳುನಮ್ಮ ಅರ್ಜುನಗೆ ಅತಿ ದಯವೆಂದಳು ನಿರ್ಜರೇಶನ ಕಂಡೆನೆಂದಳು1 ಕಳಕಳಿಯ ಸೂಸುತ ತನ್ನ ಥಳ ಥಳ ಮುಖಕಮಲ ಹೊಳೆವುತದೂತೆನಳಿನ ತೋಳಿನ ವಸ್ತ ಝಳ ಝಳಿಸುತಬಂದು ಕುಳಿತಳೆ ಮಾತಿನ ಚಪಲೆ 2 ನಡೆದು ಅಚ್ಯುತನಲ್ಲೆ ಹೋದೆಯಾ ಕೃಷ್ಣನ ಅಡಿಗೆರಗಿ ಮುಖ ನೋಡಿದೆಯನಯ ನುಡಿಯ ಮಾತುಗಳನೆ ಆಡಿದೆಯ ನಿಮ್ಮ ಒಡೆಯರ ಭಕುತಿ ಕೊಂಡಾಡಿದೆಯ ದೂತೆ 3 ಶಾಂತ ಮೂರುತಿ ನಿನ್ನ ನೋಡಿದನೇನಐವರಿಗೆ ಅಂತಃಕರುಣ ಭಾಳ ಮಾಡಿದನೇನಎನ್ನ ಅಂತರಂಗದ ಮಾತು ನುಡಿದೆಯೇನಲಕ್ಷ್ಮಿಕಾಂತನ ಗುಣ ಕೊಂಡಾಡಿದೆಯ ದೂತೆ4 ಎನ್ನ ದ್ರೌಪತಿ ಕಳುಹ್ಯಾಳೆಂದೇನೆ ಸ್ವಾಮಿನಿನ್ನ ಮಾತುಗಳ ಮನಕೆ ತಂದಾನೇನ ಕೃಷ್ಣ ಎನ್ನ ಪ್ರಾಣವು ಐವರದೆಂದನೇನಇನ್ನುದಯದ ಸುಗ್ಗಿ ಸುದ್ದಿ ತಂದೇನ ದೂತೆ 5 ಭಾವೆ ರುಕ್ಮಿಣಿಪಾದ ನೋಡಿದೆಯ ನೀನುಭಾವ ಭಕುತಿಯಲಿ ವಂದನೆ ಮಾಡಿದೆಯ ನಿಮ್ಮ ಮೋಹ ದ್ರೌಪತಿಗಿರಲಂದೆಯ ಮುಯ್ಯಾ ತಾಹೊ ವಿಸ್ತಾರವ ಕೊಂಡಾಡಿದೆಯ 6 ಪಾದ ಕಂಡೆಯಘೃತ ಹಾಲು ಸಕ್ಕರೆ ಸವಿದುಂಡೆಯ ವಸ್ತ್ರ ವೀಳ್ಯ ರಾಮೇಶನಿಂದ ಕೊಂಡೆಯನಿನ್ನ ಕಣ್ಣು ಹಬ್ಬವ ಮಾಡಿಕೊಂಡೇನ ದೂತೆ 7
--------------
ಗಲಗಲಿಅವ್ವನವರು
ಏಕಾಂತದಲಿ ಬಂದು ಮಾತು ನುಡಿದೆ ಶ್ರೀ | ಕಾಂತ ನಿನಗಿದು ಸುಲಭವಾಗಿದೆ ನೋಡು ಪ ಪರಧನವನಪಹರಿಸಿಕೊಂಡು ಬೆಳೆದು ಇದ್ದ | ವರ ಮನೆಯೊಳಗಡಲೇತÀಕೆ | ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ | ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು 1 ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ | ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ | ಸಾವಧಾನದಿ ಬೇಟೆ ಆಡÀಬಾರದೆ ಬಂದು 2 ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ | ಬೇಕಾದದೀಯಾಬೇಕು ಕಡಿಮೆ ಇಲ್ಲಾ | ನೀ ಕೇಳು ಎನ್ನಲ್ಲಿ ಸರಿ ಬಂದಂತೆಯಲ್ಲದೆ | ವಾಕು ಪೇಳುವೆ ನಿಲ್ಲು ವಿಜಯವಿಠ್ಠಲ ಬಂದು3
--------------
ವಿಜಯದಾಸ
ಕರುಣಿಸೋ ಕೃಷ್ಣ ಕರುಣಿಸೊ | ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ ಭೂತಳದೊಳು ನಾನು ಈ ತನುವುತೆತ್ತು | ಪಾತಕದಲಿ ಯಮಯಾತನೆ ಪಟ್ಟೆ 1 ಇಂದೆನ್ನ ಹೃದಯವೆಂಬೊ ಮಂದಿರದೊಳು | ಇಂದಿರೆ ರಮಣ 2 ಹಿಂದಿನ ಅವಗುಣ ಒಂದೂ ಎಣಿಸದೆ | ಮುಂದೆ ದೋಷಕ್ಕೆ ಮನವೆರಗಿಸದೆ 3 ಪಾಪ ಪುರುಷನೆಂಬೊ ಪಾಪಿಯ ಕೈಗೆ | ಪೋಪಗೊಡದೆ ಎನ್ನ ಕಾಪಾಡೊ ರನ್ನ 4 ಅಂತ್ಯಕಾಲದಲಿ ಅಂತಕರು ಬಂದು | ನಿಂತಾಗಲಿ ನಿನ್ನ ಚಿಂತೆ ಒದಗಲಿ 5 ಕನಸಿನೊಳಗೆ ನಿನ್ನ ನೆನಸಿಕೊಂಬಂತೆ | ಮನಸು ಸುಸ್ಥಿರವಾಗಲಿ ಅನುಗಾಲವಿರಲಿ 6 ಇದ್ದಾಗ ದಾಸರದಾಸನೆನಿಸೊ ಬೇಗ | ಸಿರಿ ವಿಜಯವಿಠ್ಠಲ ಕರುಣಿಸೊ 7
--------------
ವಿಜಯದಾಸ
ಗುರು ನಿಮ್ಮ ದಯವೆನಗಾನಂದೋದಯ ಸರಿಸೌಖ್ಯಕರನೀವÀ ಮಹದಾಶ್ರಯ ಧ್ರುವ ಗುರುನಿಮ್ಮ ಕೃಪೆನೋಟ ಎನಗನುಭವದೂಟ ಸುರಸಯೋಗದ ಆಟ ಪರಮನೀಟ ಗುರು ಸುಬೋಧದ ಕೂಡಿ ಎನಗೆ ನಿಜ ಘನ ಪ್ರಗಟ ಕರಕಮಲ ಭಯದಮಾಟ ವರಮುಗುಟ 1 ಗುರುನಿಮ್ಮ ದಯಕರುಣ ಎನಗೆ ಸಕಲಾಭರಣ ವರ ಪ್ರತಾಪದೆ ವಿಜಯಾನಂದಘನ ಗುರು ನಿಮ್ಮ ಶ್ರೀ ಚರಣ ಎನಗೆ ಬಳಗವು ಪೂರ್ಣ ಹರುಷಗತಿ ಸಾಧನ ಪರಮಘನ 2 ಗುರು ನಿಮ್ಮ ಬಲವೆ ಬಲ ಎನಗನುದಿನ ದೆಲ್ಯಚಲ ಹೊರುಹುತಿಹ ನಾಮನಿಜ ಸರ್ವಕಾಲ ತರಳ ಮಹಿಪತಿಗೆ ನೀಮಾಡುತಿಹ್ಯ ಪ್ರತಿಪಾಲ ಗುರು ಭಾನುಕೋಟಿತೇಜನೆ ಕೃಪಾಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತತ್ವನಿರೂಪಣೆ ಆಟವಾಡುವ ಕೂಸು ನಾನು | ಕೃಷ್ಣ ಕಾಟಬಡಿಸುವೆ ನಿನ್ನ ಸಾಧನವ ನೀಡೊ ಪ. ಗುರುಗಳು ತಂದು ನಿನಗೊಪ್ಪಿಸಿದರೆಲೊ ದೇವ ಸರಿಯ ಸಖನೆಂದು ಅನುಗಾಲವೂ ಸಿರಿಯರಸ ಕೇಳಿನ್ನು ಹಿರಿಯನೆ ನೀನಹುದೊ ಕಿರಿಯತನದಿಂದ ನಾ ಆಟವಾಡುವೆನೊ 1 ಹೃದಯವೆಂಬೋ ಪುಟ್ಟ ಮನೆಯ ಕಟ್ಟಿ ಅಲ್ಲಿ ಮುದದಿಂದ ಅಷ್ಟದಳ ಪದುಮ ರಚಿಸಿ ಒದಗಿ ಬರುತಿಹ ದುಷ್ಟ ಅರಿಗಳನೆ ನುಗ್ಗೊತ್ತಿ ಪದುಮನಾಭನೆ ನಿನ್ನ ಜೊತೆಯವರೊಡನೆ2 ಅಂಬರ ಮಧ್ಯದಲಿ ಬಿಂಬವೆನ್ನುವ ದಿವ್ಯ ಬೊಂಬೆಯನೆ ಇಟ್ಟು ಸಂಭ್ರಮದಿ ಶೃಂಗರಿಸಿ ಹಾಡಿ ಪಾಡಿ ಕುಣಿದು ಆಂಬ್ರಣಿನುತ ನಿನ್ನ ನೋಡಿ ದಣಿಯುವೆನೊ 3 ಪುಂಡರೀಕಾಕ್ಷ ನಿನ್ನ ಕೊಂಡಾÀಡುವೊ ಬಹಳ ತಿಂಡಿಯನೆ ನೀಡೆನಗೆ ಅನುಗಾಲವೂ ಭಂಡು ಮಾಡುವರೊ ಬರಿಕೈಲಿದ್ದರೆ ಸಖರು ಕಂಡು ಕಂಡೂ ನೀನು ಸಮ್ಮನಿರಬೇಡೊ 4 ಎಷ್ಟು ಜನ ಸ್ನೇಹಿತರೊ ಈ ಮನೆಯೊಳೆಲೆ ದೇವ ಪುಟ್ಟನಾಗಿರುವೆ ನಾನೆಲ್ಲರಿಗೆ ಇನ್ನು ಕೊಟ್ಟರೆ ಸಲಕರಣೆ ಆಟವಾಡುವೆ ಅಳದೆ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ ಹೃದಯವೆಂಬೊ ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ ಸಾರಿ ಮುರಾರಿ ಪ ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ ಅಂಬುಜಾಕ್ಷ ನೀ ನೆಂಬದು ಸುರನಿಕರಂಬ ಹಂಬಲಿಸಲು ದಿಂಬಾಗಿ ಕರ್ಣಾವಲಂಬನವಾಯಿತು ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ1 ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾಜ್ಞಾನಾ ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ ದಾನ ಕೊಂಡಡಲಾಮೇಲೆ ನೆನೆವೆನನುದಿನ ಮಾನವನ ಹೀನವ ನಾಡದೆ ನೀನೆನಿಸದೆ ಸುಮ್ಮನದಿಂದಲಿ ನೋಡೊ ದಾನವನ ವಡಲನು ಬಗದು ಕರುಳನು ವನಮಾಲೆ ಹಾಕಿದ ಶ್ರೀನಿಕೇತನ 2 ಇಂದು ಮಾಡುವದೇನು ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ ವಂದಿತ ಮರ ವೃಂದಾ ಕರುಣದಿಂದಾ ಎಂದಿಗೆಂದಿಗೆ ಎನ್ನಿಂದಗಲದೆ ಗೋ ವಿಂದ ಇಂದಿರಾಪತಿ ಸುಂದರ ವಿಗ್ರಹ ಮಂದಿರದೊಳು ಸುಮದಾಸನದಲ್ಲಿ ಬಂದು ವಿಜಯವಿಠ್ಠಲೆಂದು ನೀನಿಂದು3
--------------
ವಿಜಯದಾಸ
ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ ನಿನ್ನ ಯೌವನಭಂಗದ ಭೀತಿಯ ಕಂಡು ವಿಘ್ನೇಶನನು ಪುಟ್ಟಿಸಿ ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ ಕೃತಕೃತ್ಯನಾದ ನಿನ್ನರಸ ಕಾಣಮ್ಮ 1 ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು ನೀನು ಅಂಜಲಿಕಾಸ್ತ್ರವನು ಪ್ರೇಮದಿ ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್ ಪಾರ್ಥಸೂತನ ದಯವೆಷ್ಟೆಂಬೆ 2 ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ ವಿಷವ ಜೀರ್ಣಿಸಿಕೊಂಡನು ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3
--------------
ವಿಶ್ವೇಂದ್ರತೀರ್ಥ
ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ