ನುಡಿ ಜ್ಞಾನದ ಮಾತು ಒಡನೆ ನಂಬುದ್ಹೇತು
ನಡಿ ಜ್ಞಾನದ ಮಾತು ಕಡೆಗಾಣಿಸಿತು ಧ್ರುವ
ನುಡಿಯ ಒಡಲೊಳಗಿಟ್ಟು ನಡಿಯೊಳಗ ನುಡಿದೋರಿ
ಕೊಡುವರಿಗ್ಯದೆ ಘನಮಹಿಮೆ ನೋಡಿ
ನುಡಿದಂತೆ ನಡೆದರೆ ನಡೆನುಡಿ ಆಗುವದು
ನುಡಿ ಅಡಿ ತೋರುವರಿಗೆಲ್ಲಿ ನಡೆನುಡಿ 1
ನಡೆಯೊಳಗ ನುಡಿಯದೆ ಪಡೆದುಕೊಂಬವ ಬಲ್ಲ
ಒಡನೆ ಸದ್ಗುರು ದಯದೊಲವಿಲಿದ್ದು
ನಡೆನುಡಿ ನಿಜವಾಗಲರಿಯದೆ ನಾಡೊಳಗೆ
ಅಡಿಗಡಿಗೆ ಹೇಳ್ಯಾಡು ಮಾತೆ ಬರದು2
ನುಡಿವುದೆ ವೇದಾಂತ ನಡೆವುದೆ ಸಿದ್ಧಾಂತ
ನಡೆನುಡಿಗೆ ಸಾಕ್ಷ ಶ್ರೀದೇವದತ್ತ
ನುಡಿಗೆ ನಿಜ ನೆಲೆದೋರಿ ನಡಿಗೆ ನಿಲುಕಡೆ ಮಾಡಿ
ಕೊಡುವನೊಬ್ಬನೆ ಮಹಿಪತಿ ಗುರು ಸಮರ್ಥ 3