ಒಟ್ಟು 9 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಅಲ್ಲಲ್ಲಲ್ಲಲ್ಲಾ | ಸುಖವಿ | ನ್ನಿ ಲ್ಲಿ ಲ್ಲಿ ಲ್ಲಿ ಲ್ಲಾ ಪ ಮಾಯಾ ಭ್ರಾಂತಿಯ ಮನ | ಪೊಳ್ಳು ಇದೆಂದು ಬಲ್ಲವರಿಗೆ ನಿಜ ಅ.ಪ ರೊಕ್ಕವು ತೀರಿದ ಕಾಲಕೆ ತನ್ನನು ಮಕ್ಕಳು ಮರಿಗಳು ಲೆಕ್ಕಕ್ಕೆ ತರುವರು 1 ಅಂಗನೆ ಮಕ್ಕಳು ಆಪ್ತರು ಬಂಧುಜ- ನಂಗಳು ಒಬ್ಬರು ಸಂಗಡ ಬರುವವರ್ 2 ವಲ್ಲಭ ಶ್ರೀಗುರು ಲಕ್ಷ್ಮೀವೆಂಕಟ- ನಲ್ಲದೆ ಬೇರೊಬ್ಬರು ಬಂಧುಗಳಾರ್ 3
--------------
ಅನ್ಯದಾಸರು
ಆರಮ್ಮ ಮುರಲಿಯನೂದುವನುಮಾರ ಸುಂದರ ಸುಖ ಸಾರುವ ಜಗಕೆ ಪ ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದುಕಂಡ ಕಂಡವರನ್ನು ಕರೆಯುತಾನೆಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿತಂಡ ತಂಡವಾಗಿ ಪೋದನಮ್ಮ 1 ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟುತೂಗುತ ಯಮುನೆಯ ತೀರದಲ್ಲೇತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದುತೀರಿದವರಿಗೆಲ್ಲಾ ತಾ ಕೊಡುವಾ 2 ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿಆನಂದಬಟ್ಟರು ಗೋಪನಂದನರುಹಿಂದಿನ ಪುಣ್ಯವು ಬಂದೊದಗಿತು ಎಂದುತಿಂದ ಎಂಜಲನಿಟ್ಟ ಇಂದಿರೇಶ3
--------------
ಇಂದಿರೇಶರು
ಕೊಳಲನೂದಿದ ಕೃಷ್ಣ ನಳಿನನಾಭಾಎಳೆಯ ಗೋಗಳ ಕೂಡ ನಲಿದಾಡುವಾ ಪ ಹಿಂಡು ಗೋಗಳ ಕೂಡೆಕಂಡಕಂಡವರನ್ನು ಕರೆಯುತಲಿಗುಂಡು ಗೋಲಿ ಬುಗುರಿ ಚಂಗುಳನೆ ಕಟ್ಟಿಕೊಂಡು ಪೋದರು ತಂಡ ತಂಡವಾಗಿ 1 ತಾಯಿ ಕಟ್ಟಿರುವಂಥಾ ಥೋರ ಬುತ್ತಿಯ ಗಂಟು ತೂಗುತ ಯಮುನೆಯ ತೀರದಲ್ಲಿತಂದ ಉಪ್ಪಿನಕಾಯಿ ತಿಂದ ಎಂಜಲವನ್ನುತೀರಿದವರಿಗೆಲ್ಲ ತಾ ಕೊಡುತಾ ಇಂದಿರೇಶನು 2 ಕೊಟ್ಟ ತಿಂದ ಉಪ್ಪಿನಕಾಯಿಆನಂದ ಬಟ್ಟರು ಗೋಪನಂದನರುಹಿಂದಿಯ ಪುಣ್ಯವು ಬಂದೊದಗಿತುಹರಿ ತಿಂದ ಎಂಜಲನಿತ್ತಾ ನಂದಬಾಲಾ 3
--------------
ಇಂದಿರೇಶರು
ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ
ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತೌರಾಸೆಯೆ ಪ ಕಣ್ಣು ಕೆಟ್ಟ ಮೇಲೆ ಕಡುರೂಪು ಚೆಲ್ವಿಕೆಯೆಬಣ್ಣಗುಂದಿದ ಮೇಲೆ ಬಹುಮಾನವೆಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ 1 ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆಚಳಿಜ್ವರಕೆ ಚಂದನದ ಲೇಪ ಹಿತವೆಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆಬೆಲೆಬಿದ್ದ ಸರಕಿನೊಳು ಲಾಭ ಉಂಟೆ 2 ನಿತ್ಯ ಸುಖವೆನಬಹುದೆಸತ್ತ್ವ ತಗ್ಗಿದ ಮೇಲೆ ಸಾಮಥ್ರ್ಯವೆಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ 3
--------------
ಕನಕದಾಸ
ಬಾರೋ ಬರೋ ರಂಗಯ್ಯಾ ನೀ ಬಾರೋ | ನಿನ್ನ | ಮೂರುತಿ ಹೃದಯಕ ತಾರೋ ಪ ಬೀರೋ ಬೀರೋ ಕರುಣಾರಸ ಬೀರೋ | ಪದ | ವಾರಿಜ ಶರಣರ ತೋರೋ 1 ಪಥ ಸಾರೋ | ಹಗೆ| ತೀರಿದೆ ಭವಭಯ ಬಾರೋ 2 ಗುರುವರ ಮಹಿಪತಿ ಪ್ರಭು ಬಾರೋ | ಮರಹು | ಹಾರಿಸಿ ಸಲಹುವರಾರೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಥಿರವೆಂದು ನಂಬಿ ಕೆಡಬೇಡ ಮನುಜಾ ಧರಣಿ [ಬಾಳು] ಕರುಣೆಯಿಹುದು ಮಾ[ಂಗಿರೀಶನ] [ನಂಬಿದರೆ] ಪ ಕ್ಷೀರಾಬ್ಧಿಗೈದು ಮುದದಿ ಪೊರೆವನು ಸ್ತನ್ಯದಿಂ ಹೀರಿ ತೇಲುತ ಬೆಳೆದು ತೋರಮುತ್ತುಗಳಾ ಹಾರ ಪದಕಗಳಿಂದ ಚಾರುಭೂಷಣದಿಂದ ಮಾರಸುಂದರನೆನಿಪ | ಮೂರು ದಿನದ ಬಾಲ 1 ಬಾಲತನ ಪೋಗಲು ಮೇಲೆ ಯೌವನವೊದಗಿ ಬಾಲೆಯೋರ್ವಳಕರವ ಘಳಿಲದೊಳು ಹಿಡಿದು ಮೇಲಾದ ಸೌಭಾಗ್ಯವಲ್ಪಕಾಲವಿರುವಾಗ ಕಾಲದೂತರು ಪಿಡಿಯಲೊಡನೆ ಬ[ರುವ]ವರಿಲ್ಲ 2 ಉಕ್ಕುವ ಯೌವನದ ಸೊಕ್ಕಿಲ್ಲ ಮರುದಿನ ಉಕ್ಕುಕ್ಕಿ ಬಸವಳಿದು ಶಕ್ತಿಗುಂದಿ ಸುಕ್ಕು ಸುಕ್ಕಿನ ದೇಹ[ಭಾ]ವವಿಲ್ಲದ ಬಾಳ ಭಕ್ತಿಗೆ ಮನಮರೆಯೆ ಭಕ್ತಗತಿಯದರಿಂದ 3 ಧನವ ದಾಯಾದಿಗಳು ಮನವ ಕಾಮಾದಿಗಳು ಸನುಮತ ಜ್ಞಾನವನ್ನು ದುರಿತಕಾರ್ಯ ತನುಜ ತನುಜೆಯರೆಲ್ಲರವರವರ ಸೌಖ್ಯವನು ಸನಿಹದಿಂ ಸೂರೆಗೈವರಿನ್ನೇತರಾಸೆ 4 ಕುಂಟು ಜೀವವಿರುವನಕ ನೆಂಟರಿಷ್ಟರು ಹಣವ ಗಂಟನುಂಗಲು ಬರುತಲೆಂಟೆಂಟುದಿನವಿಹರು ಗಂಟು ತೀರಿದ ಬಳಿಕ ಪಾಪಪುಣ್ಯಗಳ ಹೊರತು [ಏ ನುಂಟು ಈಭವದ ನಂಟಿನಲಿ ಯದರಿಂದ 5 ಜೀವ ತಾ ಜನಿಪಂದು ರವೆಯಷ್ಟು ತರಲಿಲ್ಲ ಅವನಿಯಾ ಬಿಡುವಂದು ಜವೆಯಷ್ಟ ಹೊರಲಿಲ್ಲ ಭಾವಶುದ್ಧಿ ಬೇಕನಿಶ ಮಾವಿನಾಕೆರೆರಂಗನ ಸೇವಿಸಿದೊಡಾ ರಂಗ ಭವವೆಲ್ಲ ಕಳೆವಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್