ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು