ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀ ವೆಂಕಟೇಶ್ವರ ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ | ಶುಭವೀವ ನಿರುತ ಮಂದಹಾಸನೊ ಪ ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ | ನೀನೆ ಗತಿಯೆಂಬರಿಗೆ ಹೊಣೆಯೋ ಜ್ಞಾನಮಯ ಸಂದಣಿಯೊ ಪುಣ್ಯ ಕಾನನ ನಿವಾಸ ಸುರಖಣಿಯೊ 1 ವಜ್ರ ಪಂಜರನೋ ದುಷ್ಟ ದುರುಳ ದೈತ್ಯರಿಗೆ ಝರ್ಝರನೊ ದುರಿತ ಕದಳಿಗೆ ಕುಂಜರನೊ ಸ್ವಾಮಿ ಉರಗತಲ್ಪನಾದ ಸಿರಿವರನೊ 2 ಪರಮೇಷ್ಟಿ ಶಿವರೊಳಗಿಪ್ಪನೋ ಇಂದು ಮರುತನ ಪೆಗಲೇರಿ ಬಪ್ಪನೊ ಶರಣರಿಗೊರವೀಯೆ ತಪ್ಪನೋ ನಮ್ಮ ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ 3
--------------
ವಿಜಯದಾಸ
ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ ಆಲಸ್ಯವೇತಕೋ ಆಯಿತು ವೆಂಕಟೇಶ ಪ ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ ನಳಿನಲೋಚನೆಯರುಗಳಿಂದ ಅಭಿಘರಿಸಿ ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1 ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2 ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3 ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4 ಕೇಸಕ್ಕಿಯೋಗರವು ದೋಸೆ ಪಾಯಸವನ್ನು ಬೀಸು ಹಾರಿಗೆಯತಿರಸವು ಮಂಡಿಗೆಯು ಏಸು ಹೋಳಿಗೆ ಬೇಕೈಸನೀ ಉಣಲೇಳು 5 ಚಕ್ಕುಲಿ ಕರಜಿಯಕಾಯಿ ಮನೋಹರವು ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು ಕದಳಿ ರಸಾಯನವು ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6 ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7 ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ ಬಾಯೊಳು ಪ್ರಣವವನು ಜಪಿಸಲಾಕ್ಷಣದಿ ರಾಯವೆಂಕಟಪತಿಯು ಆಪ್ಯಾಯನವ ಮಾಡಿ ದಾಯವಾಗಿತ್ತನು ಭಕ್ತಜನರಿಗೆಲ್ಲ 8 ಈ ರೀತಿಯಿಂದಲೆ ಆರೋಗಿಸುವುದೆಂದು ವಾರಿಜನಾಭನ ಸಾರಿ ವರ್ಣಿಸಲು ಮೋರೆಯ ಪ್ರಸಾದ ಕರೆದು ಇವನು ನಮ್ಮ ವರಾಹತಿಮ್ಮಪ್ಪನೊಂದುಗೂಡಿರುವನು 9
--------------
ವರಹತಿಮ್ಮಪ್ಪ
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ