ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರು ಇದ್ದರೇನು ನಿನ್ನ ಪಥಕೆ ಬಾರರೋ ಶ್ರೀಹರಿ ಮುರಾರಿ ಎಂದು ಗತಿಯ ನೋಡಿ ಕೊಂಡಿರೋ ಪ ಹೊನ್ನು ಹಣವು ಚಿನ್ನ ಚಿಗುರು ಬಣ್ಣ ಬಂಗಾರವಿರಲು ಎನ್ನವರು ತನ್ನವರು ಎಂದು ಬರುವರೋ ಅನ್ನಕಿಲ್ಲದಿರಲು ಕೆಟ್ಟು ಅಲ್ಲಿ ಪರಿಕಾಲದಲ್ಲಿ ನಿನ್ನ ಕುಶಲವಾರ್ತೆಗಳನು ಮುನ್ನ ಕೇಳರೋ 1 ಇಂದು ಹಬ್ಬ ಹುಣ್ಣಿಮೆಂದು ಬಂಧು ಬಳಗವೆಲ್ಲನೆರೆದು ತಿಂದು ನಿನ್ನ ಹಿಂದೆ ಮುಂದೆ ತಿರುಗು ತಿಪ್ಪರೋ ಬಂಟ ಬಹಳ ಭಾಗ್ಯವೆಲ್ಲ ಕುಂದಿ ಹೋದ ಕಾಲದಲ್ಲಿ ಮುಂದೆ ಸುಳಿಯರೋ 2 ತುಂಬಿ ಇರಲು ಎಡದೆ ಬಿಡದೆ ನೆಂಟರಿಷ್ಟರೆಂದು ತಿಂಬರೋ ವಡವೆ ವಸ್ತು ನಷ್ಟವಾಗಿ ಬಡತನವು ಬಂದ ಬಳಿಕ ಬಿಡುವ ಕೈಯ ನಿನ್ನ ನೊಂದ ನುಡಿಯ ನುಡಿಸರೋ 3 ಮಡದಿ ಮಕ್ಕಳೆಲ್ಲ ನಿನ್ನ ಒಡನೆ ಹುಟ್ಟಿದವರು ಸಹಿತ ಕಡು ಮಮತೆಯಿಂದಲವರು ನೋಡಿ ನಡೆವರೋ ಉಡಲು ತೊಡಲು ಒಡಲಿಗಿಷ್ಟು ಕಡಿಮೆಯಾಗಿ ಎಂದು ಹೊಡೆದು ಕೊಂಬರೋ 4 ಮೃತ್ಯುನಿನ್ನ ಹತ್ತಿರಿದ್ದು ಹೊತ್ತು ವೇಳೆ ನೋಡುತಿಹುದು ವ್ಯರ್ಥವಾಗಿ ಇವರ ನಂಬಿ ಕತ್ತೆ ಕೆಡದಿರೋ ಸತ್ತು ಹುಟ್ಟಿ ಸಾಯ ಬೇಡಿ ಚಿತ್ತದಲ್ಲಿ ಭೀಮನಕೋಣೆ ಗೊತ್ತಿಲಿದ್ದ ಲಕ್ಷ್ಮೀಪತಿಯ ಒತ್ತಿ ಭಜಿಸಿರೋ 5
--------------
ಕವಿ ಪರಮದೇವದಾಸರು
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು