ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು | ಪ್ರಭುಗುರು ಆತ್ಮಾ ಶ್ರೀರಾಮಗ ಪ ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ | ತಾಮಸದವರಾ ಮದಮುರಿದು | ತಾಮಸದವರ ಮದಮುರಿದು ಹೃದಯಕ | ಪ್ರೇಮ ಜಯೋತ್ಸವದಿಂದೈ ತಂದಾ 1 ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ | ದೃಢವಿಭೀಷಣನ ಸ್ಥಾಪಿಸಿದನಾ | ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ | ಕಡಲ ಮಧ್ಯ ಪೂರದೊಳು ಈಗ 2 ವಿವೇಕ ಹರಿವಾನದಿ ಭಾವದಾರತಿಯೋಳು | ತೀವಿದ ಸಮ್ಯಜ್ಞಾನ ಜ್ಯೋತಿ | ತೀವಿದ ಸಮ್ಯಜ್ಞಾನಜ್ಯೋತಿಯಿಂದ | ದೇವದೇವೇಶಗ ತಿಂದೀಗ 3 ಅರಿಗಳ ಶಿಕ್ಷಿಸು ಶರಣರ ರಕ್ಷಿಸು | ಧರೆಯೊಳುಯೆಂದು ಹರಸುತ | ಧರೆಯೊಳು ಎಂದು ಹರಸುತ ಮುತ್ತಿನ | ಪರಮಶಾಶಯ ನೊಸಲೊಳಿಟ್ಟು 4 ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ ಮಹಿಪತಿಸುತ ಪ್ರಭು ರಘುನಾಥ | ಮಹಿಪತಿಸುತ ಪ್ರಭು ರಘುನಾಥ ನೆನೆವರ ಸಹಕಾರಿ ನಮ್ಮ ಸದೋದಿತ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು