ಒಟ್ಟು 84 ಕಡೆಗಳಲ್ಲಿ , 22 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೂಢನಾದ ಯೋಗಿಯ ಬಗೆಯಿದು | ಈ | ರೂಢಿಯೊಳು ಜನಕಿನ್ನು ಕಾಣಿಸದು ಪ ಮಾತುಗಳ ಆಡನು | ಮೌನಗಳ ಮಾಡನು | ನೀತಿ ಅನೀತಿಗಳೆಂಬುದ ನೋಡನು | ಯಾತರೊಳು ತನಗೆ ಸಂಪ್ರೀತಿಯೆಂಬುವದಿಲ್ಲ | ದಾತನಾಗಿನ್ನಾತ ಚರಿಸುತಿಹನು 1 ವೇದಗಳ ನೋಡನು ಶಾಸ್ತ್ರಗಳ ಕೇಳನು | ನಾದ ಬಿಂದು ಕಳಾತೀತ ತಾನು | ಸಾಧು ಸಂತರ ಸಂಗದೊಳು ಬೋಧದಲಿ ನಲಿವುತಲಿ | ಆದ್ಯನಾದಿ ತಾನೆಂದು ತಿಳಿದಿಹನು 2 ವಂದಿಸಲು ಹಿಗ್ಗನು | ನಿಂದಿಸಲು ತಗ್ಗನು | ಬಂದದಕೆ ತಾ ಹಿಂದು ಮುಂದಾಗನು | ತಂದೆ ಭವತಾರಕನ ಚರಣಾರವಿಂದವನು | ಹೊಂದಿ ಪೂರ್ಣಾನಂದದೊಳಗಿಹನು 3
--------------
ಭಾವತರಕರು
ಗುರುಭಜಕರಿಗೆ ದುರಿತ ಕರ್ಮ ಉಂಟೆ || ಆಗಮದಿ ನಡೆವವಗೆ ಅನ್ಯ ಮಾರ್ಗವುಂಟೆ | ರೋಗವಿಲ್ಲದವನಿಗೆ ಪಥ್ಯ ಉಂಟೆ 1 ವೇದಾಂತ ತಿಳಿದವಗೆ ಭೇದಬುದ್ಧಿಗಳುಂಟೆ | ಸಾಧು ಸಂಗದಲಿ ದುರ್ವಾದವುಂಟೆ | ಬೋಧ ನೆಲೆಗೊಂಡವಗೆ ಕ್ರೋಧ ಜನಿಸುವದುಂಟೆ | ನಾದ ಬಿಂದು ಕಳಾತೀತಗೆಣೆಯುಂಟೆ 2 ತಂದೆ ಭವತಾರಕನ ಹೊಂದಿರಲು ಭಯವುಂಟೆ | ಇಂದುಧರನಲ್ಲಿ ಸಂದೇಹವುಂಟೆ | ಕುಂದು ಹೆಚ್ಚೆಂಬೋದು ಅಲ್ಲಿ ಜನಿಸುವದುಂಟೆ | ಒಂದೆ ಬ್ರಹ್ಮವ ಕಂಡ ಮಹಿಮಗೆರಡುಂಟೆ ? 3
--------------
ಭಾವತರಕರು
ನಾದವನಾಲಿಪ ಯೋಗಿಯ ನೋಡಿ | ಕಕುಲ ಮಾಡಬ್ಯಾಡಿ ಪ ಪಂಚಭೂತದ ಸಂಚಿತ ಬಿಟ್ಟು | ಪಂಚಾದಶಿಯಲಿ ಮನವಿಟ್ಟು 1 ಪರಮ ವೈರಾಗ್ಯದ ಭೋಗಿ | ಪರಶಿವ ರೂಪನೆ ತಾನಾಗಿ 2 ಇಹಪರವೆರಡೆಂಬುದ ಕಡಿದು | ಹಂಸೋಹಂ ಎಂಬನ ಪಿಡಿದು 3 ಭವ ಭಯ ಸಂಶಯಗಳನೆ ಜರಿದು |ಭವತಾರಕನಂಘ್ರಿಯ ಬೆರೆದು 4 ತಾರಕ ಮಂತ್ರವ ಜಪಿಸುತಲಿರಲು | ಅರಿತು ಜ್ಞಾನಿಯಾಗುವನೆನಲು 5
--------------
ಭಾವತರಕರು
ಹರ ಹರ ಹರ ಹರ ಶ್ರೀ ಗುರುನಾಥಾ | ಪರಿಹರಿಸುವ ಈ ಭವ ಭವಹರ ಪ ಕಾಮಿತ ಜನರನು ಕಂಡರೆ ಕರೆವ | ಕಾಮಿತ ಫಲ ಕಲ್ಪನೆಗಳ ಜರೆವ 1 ಶಿರದೊಳು ತನ್ನಯ ಕರಕಮಲಿಡುವ | ಮರಳಿ ಜನಿಸದ ಪದವಿಯ ಕೊಡುವ 2 ಭವ ಭಯ ಸಂಶಯ ಬೀಜವ ಹುರಿವ | ಭವತಾರಕನಾಗಿಳೆಯೊಳು ಬರುವ 3
--------------
ಭಾವತರಕರು
ಬಂದಿಯಾತಕೋ ಈ ಭವದೊಳು | ನೊಂದಿಯಾತಕೋ ನೀನೊಂದನರಿಯೆ || ಬಂದಿಯಾತನು ನೀ ಮತಿಮಂದನಾಗದೆ | ಗತಿ ಮುಂದೇನೆಂದು ತಿಳಿಯದಲೆ ಪ ನಾ ನಾ ಎನುತಲಿ ನಾನಾ ಯೋನಿಯೊಳು | ಜನಿಸಿ ಬಂದು ನೀ ಹೀನನೆನಿಸಿಕೊಂಡು || ಅಜ್ಞಾನದೊಳಗೆ ಬೆರೆತು ನೀ - | ನಾರೆಂಬದನರಿಯಲಿಲ್ಲವು ಗುರುತು | ಜ್ಞಾನಿ ಪುರುಷರ ಕೇಳುವದನೆ ಮರೆತು | ಇನ್ನು ಸದ್ಗತಿಗೆ ಆದಿಯೊ ಹೊರತು | ನೀ ಇದನರಿತು 1 ಆರರೊಳಗೆ ಬಿದ್ದು ಆರನು ನೋಡದೆ | ಆರು ಚಕ್ರದ ಮೇಲೆ ಏರಿ ಮ್ಯಾಲಕಿನ್ನು | ತೋರುತಿಹುದು ನೋಡು ರೂಪವಲ್ಲೀ | ಧಾರುಣಿಯೊಳಗೆಲ್ಲ ಅದರ ವ್ಯಾಪವು | ತೋರಿದಾಕ್ಷಣ ಅಳಿದ್ಹೋಯ್ತು ಪಾಪ | ಇದನು ಬಿಟ್ಟು ಮೂರ ನೆನಿಸಿ ಕೆಟ್ಟೀ | ಬಯಸಿ ನೊಂದೀ 2 ನರ ತನು ದೊರೆಕೋದು ಬರಿದೇನೊ | ಎರಡಿನ್ನು ಸರಿಯಾಗೊ ತನಕ | ಬರುವದೇನೊ ಸುಮ್ಮನೆ ಮರುಳಾಗ ಬ್ಯಾಡ || ಸರಿಸು ಅಸ್ಥಿರವೆಂದು ನೀ ಬೇಗದಲಿ | ಸಂಚಿತವೆಲ್ಲ ಕೂಡಿ ಬಂದಿತಿನ್ನೇನು | ಗುರು ಭವತಾರಕನ ಭಜಿಸು ನಿನ್ನ | ಮನಸಿನಿಂದಲಿ 3
--------------
ಭಾವತರಕರು
(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
ಅಪ್ಪಾ ಕೇಳೊ ನಿನ್ನ ಗುರುತ ನೀನೆ ತಪ್ಪಿದೆಪ್ಪ | ತುಪ್ಪ ಹಾಲು ಬಿಟ್ಟು ನೀ ಅಡವಿಯ ಸೊಪ್ಪು ಮೆಲಬ್ಯಾಡಪ್ಪ ಪ ಅನುದಿನ ನೆನೆದು ಮಾಡುವ ಕರ್ಮವು ನಿನಗಿಲ್ಲಪ್ಪ | ಚಿನುಮಯಾತ್ಮಕ ಬ್ರಹ್ಮನು ನೀನು ಅನುಮಾನ ಇದಕಿಲ್ಲಪ್ಪ 1 ನಿತ್ಯ ಬೋಧಾಮೃತವ ಕುಡಿಯಪ್ಪ | ನಾದ ಬಿಂದು ಕಲಾತೀತರು ಹಾಡುವ ಪದವ್ಯಾಕಪ್ಪ | ಸಾಧು ಪುರುಷರು ಹೋದ ಹಾದಿಯ ಹಿಡಿದು ಮುಕ್ತಿ ಪಡೆಯಪ್ಪ 2 ಇಂದು ನಾಳೆ ಎಂಬುವದೊಂದು ಸಂಶಯ ನಿನಗೆ ಬ್ಯಾಡಪ್ಪ | ಕುಂದು ಕೊರತೆಯು ಇಲ್ಲಾತನಿಗೆ ಆನಂದವೆ ಸ್ವಾದವಪ್ಪ | ಬಂದು ಹೋಗಿ ನೀ ಭವಸಾಗರದೊಳು ಬಹು ಪರಿಯಿಂದಲಿ ನೊಂದೆಪ್ಪ | ತಂದೆಯಾದ ಭವತಾರಕನ ಹೊಂದಿ ದಿನವ ಕಳೆಯಪ್ಪ 3
--------------
ಭಾವತರಕರು
ಅಂಬಿಕಾ ಕುಮಾರನೆ ಪ ಅಂಬುಜಾಕ್ಷ ಶಂಭುಪುತ್ರ ಸ್ಕಂದನೇ ಅ.ಪ ದುರುಳ ತಾರಕನಾಶನೆ ಶರಜ ವಲ್ಲಿಯರಸ ಗುಹ ಕರುಣಾ ಸಾಗರ ಸ್ಕಂದನೆ 1 ಮೂರ್ತಿ ಸುಬ್ರಹ್ಮಣ್ಯನೆ ಸ್ತೋತ್ರ ಮಾಳ್ವ ಜನರ ಮನದಿ-ಷ್ಟಾರ್ಥವೀವ ಸ್ಕಂದನೆ 2 ವಾಸವಾದಿ ದಿವಿಜನುತ ಪಾವಂ-ಜೇಶ ಪರಮ ಪೂಜ್ಯನೆ | ದಾಸ ಜನರ ಮನಕೆ ಸಂತತ ತೋಷವೀವ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ
ಆವ ಕರ್ಮವಿಲ್ಲ ಆವ ಧರ್ಮವಿಲ್ಲವೋ |ಕೇವಲಾನಂದಭಾವ ಬೋಧದಲ್ಲಿ ಬೆರೆಯಲು ಪ ತನುವು ಬೇರೆ ಮನವು ಬೇರೆ | ಮನದ ಒಳಗೆ ನೆನಹು ಬೇರೆ | ತನುವು ಮನವು ನೆನವಿಗಿನ್ನು | ಸಾಕ್ಷಿಯಾಗಿಹ | ಚಿನುಮಯಾತ್ಮ ತಾನೆ ತನಗೆ | ಜನನ ಮರಣ ಎಂಬುದೆಲ್ಲ | ಮನದ ಆಟವೆಂದು ತಿಳಿದು | ಉನ್ಮನದಿ ಘನದಿ ನಲಿವಗೆ 1 ಸತ್ಯ ಶರಣರಡಿಯ ಪಿಡಿದು | ತತ್ತ್ವ ಶಾಸ್ತ್ರವನ್ನು ತಿಳಿದು |ನಿತ್ಯಾನಿತ್ಯವನು ವಿವರಿಸುತಲಿ | ಭಕ್ತಿಯಿಂದಲಿ ||ನಿತ್ಯ ಪೂರ್ಣ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು |ಚಿತ್ತದಲ್ಲಿ ತಿಳಿದುಕೊಂಡು | ಮಿಥ್ಯವೆಲ್ಲ ಕಳೆದಗೆ 2 ಹಿಂದಾದುದ ನೆನಿಸಲಿಲ್ಲ | ಮುಂದೆ ಒಂದು ಬಯಸಲಿಲ್ಲ |ಬಂದುದೆಲ್ಲ ಸುಖವು ಎಂದು ಶಾಂತದಿಂದಲಿ ||ತಂದೆ ಭವತಾರಕನ | ಹೊಂದಿ ಪೂರ್ಣ ವಸ್ತುವಾಗಿ |ಬಂಧನವನು ಕಡಿದು ಕೊಂಡು | ಆನಂದದಲಿರುವವಗೆ 3
--------------
ಭಾವತರಕರು
ಇದು ಎಲ್ಲಾ ಇದು ಎಲ್ಲಾ ಏನಾರೆಂಬುದ ಬಲ್ಲ್ಯಾ ಪ ತನುವಿದು ಮೊದಲಿಗೆ ನಿನ್ನದಲ್ಲಾ || ತನು ಸಂಬಂಧದ ಗುರುತು ಬಿಡಲಿಲ್ಲಾ 1 ನಿಜವೆನುತಲಿ ಆಶೆಯ ಕಚ್ಚಿ ಅಜಹರಿಹರರಾದರು ಕೇಳೇ ಹುಚ್ಚಿ 2 ಗುರುಭವತಾರಕನ ನಿಜವಾದ ಭಕ್ತಾ | ಅರಿತು ಆದನು ಜೀವನ್ಮುಕ್ತಾ 3
--------------
ಭಾವತರಕರು
ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ 1 ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ 2 ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ 3
--------------
ಭಾವತರಕರು
ಇಂದು ಶಿವಯೋಗಾ ಶಿವಯೋಗಾ | ಮುಂದಿಲ್ಲವು ತನು ಭೋಗಾ ಪ ಕೋಟಿ ತೀರ್ಥದಲಿ ಮುಣುಗಿ ಬಂದು | ಕೀಟಕ ಜನರರಿಯರು ಎಂದೆಂದೂ 1 ಎಲ್ಲಿಹುದರಿದರೆ ಗೋಕರ್ಣ | ಇಲ್ಲದಾಯ್ತು ದೇಹದ ವರ್ಣ 2 ಭವತಾರಕನ ಭಜಕನು ಬಲ್ಲಾ | ಭವದೊಳು ಇದ್ದರೂ ಭಯ ಅವಗಿಲ್ಲಾ 3
--------------
ಭಾವತರಕರು
ಇಲ್ಲವಾಯಿತು ಸಾಧು ಜನಕೆ ಎಲ್ಲಾ | ಇಲ್ಲವೆಂಬುದವರ ಚಿತ್ತದೊಳಗಿಲ್ಲಾ ಪ ತನುವಿಲ್ಲ ಮನವಿಲ್ಲ, ಮನದೊಳಗೆ ನೆನವಿಲ್ಲ | ಬಿನುಗಿನ ಸುಖವ ಬಯಸಲಿಲ್ಲ |ಅನುಮಾನ ಎಂಬುವದಲ್ಲಿ ಜನಿಸುವದಿಲ್ಲ |ಚಿನುಮಯಾತ್ಮಕರಾಗಿ ಚರಿಸುತಿಹರೆಲ್ಲ 1 ಸತಿ ಸುತರೆಲ್ಲ ಹಿತವರೆಂದೆನಿಸಲಿಲ್ಲ | ಪತಿತಪಾವನ ರಘುನಾಥ ನೀನನ್ನದಲೆ |ಮಿತಿಯ ಆಯುಷ್ಯ ಕಳೆದರಲ್ಲ 2 ಮೂರ್ತಿ ಭವತಾರಕನ | ವ್ಯಾಪ ಕಾಣದೆ ಅನ್ಯ ಕಾಣಲಿಲ್ಲ 3
--------------
ಭಾವತರಕರು
ಇಷ್ಟು ಸುಳ್ಳೆಂಬೋದು ತಿಳಿಯಲಿಲ್ಲ | ಕಷ್ಟವಿದರೊಳಗು ಎಳ್ಳಷ್ಟು ಸುಖವಿಲ್ಲ ಪ ಮಡದಿ ಮಕ್ಕಳು ಮನೆಮಾರೆಲ್ಲ ಸುಳ್ಳು | ಹಡೆದ ತಾಯಿ ತಂದೆ ಮೊದಲೇ ಸುಳ್ಳು | ಒಡ ಹುಟ್ಟಿದ ಅಣ್ಣ-ತಮ್ಮಂದಿರು ಸುಳ್ಳು |ಒಡವೆ ವಸ್ತುಗಳೆಲ್ಲ ಕಡೆ ತನಕ ಸುಳ್ಳು 1 ಆನೆ ಕುದುರೆ ಸೇನೆ ದೌಲತು ಸುಳ್ಳು | ನಾನು ನೀನೆಂಬ ಅಜ್ಞಾನವೇ ಸುಳ್ಳು | ಮೌನ ಹಿಡಿವುದು ಸುಳ್ಳು | ಸ್ವಾನುಭವಕೆಲ್ಲ ಸುಳ್ಳು 2 ಕೊಟ್ಟು ಕೊಂಡೋದು ಸುಳ್ಳು | ಕೆಟ್ಟದೊಳ್ಳೇದೆಂಬುವದು ಸುಳ್ಳು | ಧಿಟ್ಟ ಭವತಾರಕನ ಮುಟ್ಟಿ ಪೂಜಿಸಿನ್ನು | ಬಟ್ಟ ಬಯಲಾಗಿ ತಾ ಘಟ್ಟ್ಯಾದನು 3
--------------
ಭಾವತರಕರು
ಉದಯಲೆದ್ದು ಶ್ರೀ ಗುರುವೆನ್ನಿರೊ ಉದಧಿನಿವಾಸ ಸದ್ಗುರುವೆನ್ನಿರೊ ಧ್ರುವ ಕರುಣಕರನೆನ್ನಿ ಗುರುಮುರಹರನ್ನೆನಿ ಕರಿವರ ಹರಿ ಸರ್ವೋತ್ತಮನೆನ್ನಿ 1 ಸುರಮುನಿವರನೆನ್ನಿ ಗುರುಗಿರಿಧರನೆನ್ನಿ ನರಕೀಟಕನ ಪಾಲಿಪನೆನ್ನಿರೊ 2 ಶರಣರಕ್ಷಕನೆನ್ನಿ ವರದಾಯಕನೆನ್ನಿ ತ್ರ್ಯೆಲೋಕ್ಯನಾಥ ತಾರಕನೆನ್ನಿರೊ 3 ವಿಹಂಗವಾಹನನೆನ್ನಿ ತ್ರಿ ಕಂಚಧರ(?)ನೆನ್ನಿ ಪಾಸಾಲ(?) ಸಾಹಿತ್ಯದೇವನೆನ್ನಿ 4 ಭಕ್ತವತ್ಸಲನೆನ್ನಿ ಮುಕ್ತಿದಾಯಕನೆನ್ನಿ ಮಹಿಪತಿ ಗುರು ಭವನಾಶನೆನ್ನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು