ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಸಜ್ಜನರ ಸಂತಾಪ-ಕುಲಕೆ ಮೃತ್ಯುವುಕಂಡ್ಯ-ಮನವೇ ಪ ನಿರ್ಜರೇಶಗು ಹಾನಿ-ತಪ್ಪದೈ ಇದರಿಂದ ಅ.ಪ. ಅಂದು ದುರ್ಯೋಧನನು ಸಂದ ಸಭೆಯೊಳು ಪಾಂಡು ನಂದನರ ಸತಿಮಾನ ಕಂದಿಸಲೆತ್ನಗೈಯೆ ತಾಪ ಬಂದು ಬಡಿಯಲು ಖಳಗೆ ಬಂಧು ಬಳಗವುಸಹಿತ ಪೊಂದಿದನೆ ಯಮಸದನ 1 ತ್ರೇತೆಯಲಿ ರಾವಣನು ನೀತಿಮರೆತವನಾಗಿ ಖ್ಯಾತ ನಂದಿಯ ನೋಡಿ ಕೋತಿ ಚೇಷ್ಟೆಯನಡಿಸೆ ಸೀತೆ ದ್ರೋಹದಿ ಹಾಗೆ ವ್ರಾತ್ಯ ಕುಲಸಹಿತ ಖರೆ 2 ಇಂದ್ರ ನೆನಿಸಿದ ನಹುಷ ಪೊಂದಿದನು ಸರ್ಪತ್ವ ಕುಂದದಾ ಯಾದವರು ಪೊಂದಿದರು ಕುಲನಾಶ ಚಂದ್ರಮೌಳಿಯ ಅಂಶ ಚಂಡಮುನಿ ದೂರ್ವಾಸ ನೊಂದು ಧಾವಿಸಿ ಜಗದಿ ಬಂದು ನಿಂತುದನರಿಯ 3 ಶರಧಿ ಧುಮುಕಲಿಬಹುದು ಉರಿಯ ನುಂಗಲಿ ಬಹುದು ಉರಗವನು ಪಿಡಿಯಬಹುದು ಹರಿಯ ಶರಣರ ದ್ರೋಹ ತಿರುಗಿದರು ಮುರ್ಲೋಕ ಹರಿಸಲಾಗದು ಅವರೆ ಕರುಣಗೈಯದೆ ಮತ್ತೆ 4 ಭಕ್ತವತ್ಸಲ ಹರಿಯು ಭಕ್ತತಾಪವ ಸಹಿಸ ಶಕ್ತಿಸಾಹಸ ಜರಿದು ಉಕ್ತಿಲಾಲಿಸಿ ಬೇಗ ಕರ್ತೃ ಹರಿಯೆಂದರಿತು ಭಕ್ತರನು ಸೇವಿಸುತ ನಿತ್ಯದೊರೆ “ಶ್ರೀಕೃಷ್ಣವಿಠಲ” ಕರುಣವ ಘಳಿಸು 5
--------------
ಕೃಷ್ಣವಿಠಲದಾಸರು