ಒಟ್ಟು 151 ಕಡೆಗಳಲ್ಲಿ , 53 ದಾಸರು , 150 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದುಸೊಲ್ಲು ಸೊಲ್ಲಿಗೆ ನೆನೆವ ಚಿಂತೆ ಎನಗೆ ಹತ್ತಿಹುದು ಪ ಮಡದಿ ಸುತರು ಮನೆಯ ಪಶುವು ಬಗಳೆಗೆ ಹತ್ತಿಹುದುಷಡು ಚಕ್ರಂಗಳ ಭೇದಿಪುದೆಲ್ಲಾ ಎನಗೆ ಹತ್ತಿಹುದುಕೊಡು ಕೊಳ್ಳುವುದು ಹಾಕುವುದೆಲ್ಲಾ ಬಗಳೆಗೆ ಹತ್ತಿಹುದುಎಡೆದೆರಪಿಲ್ಲದೆ ನಾದವ ಕೇಳುವುದೆನಗೆ ಹತ್ತಿಹುದು 1 ನಿತ್ಯ ನಿತ್ಯದ ಪರಾಮರಿಕೆಯು ಬಗಳೆಗೆ ಹತ್ತಿಹುದುಮತ್ತೆ ಭ್ರೂಮಧ್ಯದ ಅರಿವೆಯ ಹುಚ್ಚು ಎನಗೆ ಹತ್ತಿಹುದುಬಿತ್ತಿ ಬೆಳೆಯುವುದು ಮಳೆಯಿಲ್ಲೆಂಬುದು ಬಗಳೆಗೆ ಹತ್ತಿಹುದುಎತ್ತೆತ್ತಲು ತಾ ಬೆಳಕ ನೋಡುವುದು ಎನಗೆ ಹತ್ತಿಹುದು 2 ಭಕುತರ ಬದುಕನು ಹಸನು ಮಾಡುವುದು ಬಗಳೆಗೆ ಹತ್ತಿಹುದುಭಕುತಿಯ ಶರಧಿಲಿ ಮುಳುಗಾಡುವುದು ಎನಗೆ ಹತ್ತಿಹುದುಸದಾ ಕಾಲವು ಕಾದಿರುತಿಹುದು ಬಗಳೆಗೆ ಹತ್ತಿಹುದುಚಿದಾನಂದ ಶ್ರೀ ಬಗಳೆಯ ಭಜಿಪುದು ಎನಗೆ ಹತ್ತಿಹುದು 3
--------------
ಚಿದಾನಂದ ಅವಧೂತರು
--------------ಗುಡಿವಾಸಾ ಪ ------ತಾಪತ್ರಯಗಳಿಂದ ------ರದೆ ಬಂದೆ ಭೂಪಾ ನೀ ಕರುಣದಿ ಪೊರೆಯೆನ್ನ ಅ.ಪ ಸೂರ್ಯ ನೇತ್ರಾಗದಾಧರ----ಸುಂದರಗಾತ್ರಾ ಇಂದಿರಾ ಹೃದಯಾನಂದಾ ವಿಶ್ವೇಶ ಮು- ಮಾಧವ ಗೋವಿಂದಾ ಸಿಂಧು ಶಯನ ಆಶ್ರಿತ ಜನ ರಕ್ಷಕ ಮಂದರಧರ ಹರಿ ಮಂಗಳದಾಯಕ 1 ಸುರಮುನಿ ವಂದ್ಯ ದೇವ ದೇವಾದಿ ದೇವ ವರದಾ ಮಹಾನುಭಾವ ಕರುಣಸಾಗರನಿಲಯಾ ಕಮಲನಾಭ ಸ್ಥಿರಹರಿ ಪುರಿಗೀಯಾ ಪರಮಭಕ್ತನಾದ ಕರಿರಾಜನ ಕಾಯ್ದ ಇಂದು ಪಾದ 2 ಶಂಕರನುತ ಶಾಶ್ವತ ಜಗತ್ಕರ್ತ ಪಂಕಜೋದ್ಭವನ ಪಿತ ಶಂಕೆಯಿಲ್ಲದೆ ದೈತ್ಯರಾ ಭೇದಿಸಿ------ನೆನಿಸಿದ ಧೀರಾ ಕಿಂಕರನಾನು ನಿಮ್ಮ ಕೀರ್ತಿ ಕೊಂಡಾಡುವೆ ಪುಂಕಾಲದಿ (?) ಸಲಹೊ ಹೊನ್ನಪುರ 'ಹೊನ್ನವಿಠ್ಠಲಾ’ 3
--------------
ಹೆನ್ನೆರಂಗದಾಸರು
(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
(ಧರ್ಮಸ್ಥಳ ಮಂಜುನಾಥನನ್ನು ನೆನೆದು) ಯಾಕೆನ್ನ ಮೇಲೆ ನಿರ್ದಯ ಶ್ರೀಮಂಜುನಾಥ ಲೋಕೇಶ ಮಾಡು ನಿರ್ಭಯ ಪ. ಪಾಕಹಪ್ರಮುಖದಿವೌಕಸಮುನಿಜನಾ- ನೀಕವಂದಿತಪದಕೋಕನದ ಕೋವಿದ ಅ.ಪ. ಪಾಪಾತ್ಮಪಾಪಸಂಭವ ನಾನೆಂಬುವದಕಾ- ಕ್ಷೇಪವೇನಿಲ್ಲೋ ಮಾಧವ ಶ್ರೀಪರಮೇಶ್ವರ ಕೋಪಕಲುಷಹರ ತಾಪತ್ರಯಶಮನಾಪದ್ಭಾಂಧವ ಗೋಪತುರಂಗ ಮಹಾಪುರುಷ ಗಿರೀಶ 1 ಸೋಮಸುರ್ಯಾಗ್ನಿಲೋಚನ ಸದ್ಗುಣಪುಣ್ಯ- ನಾಮ ಪಾಪವಿಮೋಚನ ವ್ಯೋಮಕೇಶಾಚ್ಯುತಪ್ರೇಮ ಮಹಾಮಹಿಮ ಕಾಮಾರಿ ನಿನ್ನ ನಾ ಮರೆಹೊಕ್ಕೆನು ಹೇ ವiಹಾದೇವ ಸೋಮಚೂಡಾಮಣಿ 2 ಧರ್ಮಮಾರ್ಗನಿಯಾಮಕ ಸತ್ಯಾತ್ಮ ಪರ- ಬ್ರಹ್ಮ ಸುಜ್ಞಾನದಾಯಕ ನಿತ್ಯ ಸತ್ಕರ್ಮಪ್ರೇರಕ ಗಜ- ಚರ್ಮಾಂಬರಧರ ದುರ್ಮತಿಪ್ರಹರ ಭರ್ಮಗರ್ಭಜ ಭವಾರ್ಣವತಾರಕ 3 ಕಪ್ಪ ಕಾಣಿಕೆಗಳನು ತರಿಸುವರ- ಣ್ಣಪ್ಪದೈವವೆ ದೂತನು ತಪ್ಪದೆ ಚಂದಯ ಹೆಗ್ಗಡೆಯರ ಮನದೊ ಳಿಪ್ಪ ದಧಿಮಥನ ತುಪ್ಪದಂತೆಸೆವ ಕರ್ಪೂರಗೌರ ಸರ್ಪವಿಭೂಷಣ 4 ಪೊಡವಿಗಧಿಕವಾಗಿಹ ಕುಡುಮಪುರ- ಕ್ಕೊಡೆಯ ಭಕ್ತಭಯಾಪಹ ಕಡಲಶಯನ ಲಕ್ಷ್ಮೀನಾರಾಯಣಗತಿ- ಬಿಡೆಯದವನು ನಿನ್ನಡಿಗೆರಗುವೆ ವರ ಮೃಡಶಂಕರ ಕೊಡು ಕೊಡು ಮನದಷ್ಟವ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
4. ಧನ್ವಂತರಿ ಶ್ರೀಪತಿಯೆ ಧನ್ವಂತರಿಯ ರೂಪವಾಂತೆ ತಾಪತ್ರಯವ ಹರಿಸೆ ಭಕ್ತರ್ಗೆ ನೋಂತೆ ಪ ಸುರರು ದಾನವರೆಲ್ಲ ಕ್ಷೀರ ಸಾಗರವನ್ನು ವರಗಿರಿ ಮಂದರವ ಕಡೆಗೋಲ ಮಾಡಿ ಧರಣಿಧರ ವಾಸುಕಿಯ ಹಗ್ಗಗೈಯುತ ಮಥಿಸೆ ಸಿರಿರತ್ನ ಧೇನು ತರು ಲಕ್ಷ್ಮಿಯರು ಬರಲು 1 ಶ್ರೀರಮಣಿ ಕೌಸ್ತುಭಗಳನ್ನು ನೀಧರಿಸುತ್ತ ಕಾರುಣ್ಯದಿಂ ಕಾಮಧೇನುವಂ ಮುನಿಗಳಿಗೆ ಪಾರಿಜಾತಸ್ವರ್ಗ ಸಂಪಾದವಗೈಯುತ್ತ ಸಾರಸೌಖ್ಯದ ಸುಧಾರಕನಾಗಿ ತೋರ್ದೆ 2 ಅಮರರಿಗೆ ನೀನೊಲಿಯತಮೃತವನು ಕರೆದಿತ್ತು ಕಮಲ ಸರಸಲಿಹೆ ಆಯುರ್ವೇದವನ್ನೊರೆದೆ ಕಮಲಲೋಚನ ಕೃಪೆಯೊಳಾರೋಗ್ಯಗಳ ನಮಗೀಯುತಾಬಾಲವೃದ್ಧರಂ ಸಲಹೊ 3 ದೇವ ನೂತನಪುರಿಯ ದೇವ ಶ್ರೀಮೂರುತಿಯ ಭಾವದಿಂ ಸನ್ನಿಧಿಯೊಳಾನಿನ್ನನುತಿಸೀ ಕಾವುದೆನುತಲಿ ಸತತ ಶ್ರೀದ ನಮಿಸುವೆ ಮಹಿತ ಜೀವ ಜೀವರಿಗೆಲ್ಲ ಸಿರಿಯೀವನಲ್ಲ 4 ಜಯಮಕ್ಕೆ ವೈದ್ಯೇಶನಾಮಾಯಕೆ ಜಯವುತಾನಾಗಲೀ ಓಷಧೀಲತೆಗಳಿಗೆ ಜಯ ಜಯವು ಗೋಗಳಿಗೆ ವೈದ್ಯವೃಂದಕ್ಕೆ 5
--------------
ಶಾಮಶರ್ಮರು
ಅಂಗಜಪಿತ ಗೋವಿಂದನಿಗೆ ಪ ಗಂಗಾ ಜನಕಗೆ ರಂಗನಾಥನಿಗೆ ಶೃಂಗಾರಮೂರ್ತಿ ಕೇಶವಗೆ ಅ.ಪ ಭೂಮಿಯನುದ್ಧರಿಸಿದವಂಗೆ ಆ ಮಗು ಪ್ರಹ್ಲಾದನ ಕಾಯ್ದಂಥ ಸ ವಾಮನಮೂರ್ತಿ ಉಪೇಂದ್ರಗೆ 1 ಪರಶುರಾಮನಿಗೆ ಸೀತಾರಾಮಗೆ ವರವೇಣುಗಾನಲೋಲನಿಗೆ ಧರಣೀಭಾರ ನಿಳುಹುವಗೆ2 ಪಾಪನಿವಾರಿಸಿಶಿವನಂಕಾಯ್ದಾ ಶ್ರೀಪತಿಪಾವನಮೂರುತಿಗೆ ತಾಪತ್ರಯಹರ ತುಲಸೀಮಾಲಿಗೆ ತಾಪಸನುತ ಜಾಜೀಶನಿಗೆ3
--------------
ಶಾಮಶರ್ಮರು
ಅನಂತಶಯನ ವಿಠಲಾ | ಕಾಪಾಡೊ ಇವಳಾ ಪ ಸಾರ ಅ.ಪ. ತಾಪತ್ರಯಗಳು ಎಂಬ | ಕೂಪಾರದಲಿ ಬಿದ್ದು ಶಾಪಕೊಳಗಾಗಿ ಹಳ ಕಾಪಾಡಬೇಕೊದ್ರೌಪದಿಯವರದ ಕರು | ಣಾಪಯೋನಿಧಿಹರೆಯೆನೀ ಪೊರೆಯದಿರಲನ್ಯ | ಕಾಪಾಡ್ವರ್ಯಾರೊ 1 ತೈಜಸನೆ ನೀನಾಗಿ | ಸೂಚಿಸಿಹ ಅಂಕಿತವಯೋಜಿಸಿಹೆ ಇವಳೀಗೆ | ಅವ್ಯಾಜ ಕರುಣೀಪ್ರಾಜ್ಯ ಎನ ಸಂಸಾರ | ಗೌಜು ಕಳೆಯಲ್‍ವೆನ್‍ತ್ರ್ಯಜಗದ್ವಾಪನೆ | ವಾಜಿವದನಾಖ್ಯ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಪೇರ್ಮೆಯಲಿ ಪತಿಸೇವೆ | ಕರ್ಮಪ್ರಾಧಾನ್ಯಧರ್ಮವನೆ ತಿಳಿಸುತ್ತ | ಭರ್ಮಗರ್ಭನ ಪಿತನೆಕರ್ಮಬೀಜವ ಕಳೆಯೊ | ಬ್ರಹ್ಮಣ್ಯದೇವಾ3 ಮರುತಾಂತರಾತ್ಮನೆ | ಮೂರೆರಡು ಭೇದಗಳತರತಮಂಗಳನರುಹಿ | ಪೊರೆಯೊ ಇವಳಾಅರುಹುವೆನೊ ಸರ್ವಜ್ಞ | ತರುಳೆಬಹುಭಕ್ತಿಯಂತೆಕರುಣಿಸೆಲೊ ಕೃಪಾಸಾಂದ್ರ | ಕಂಜಜಾನಯ್ಯ 4 ಗಾವಲ್ಗಣೀ ವರದ | ಭಾವದಲಿ ಮೈದೋರಿನೀ ವೊಲಿಯೆ ಬಿನ್ನಪದೆ | ಗೈಯೆ ಶ್ರೀಹರಿಯೆಕೋವಿದೊತ್ತಂಸ ಗುರು | ಗೋವಿಂದ ವಿಠಲನೆಕಾವ ಕರುಣಿ ಎಂದು | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆತ್ಮನಿವೇದನೆ ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ಪ ಮಾತ ಹೇಳುವೆ ನಿನಗೊಂದ ಪರರಜ್ಯೋತಿ ಕಾಣುವತನಕೀ ಬಂಧ ಭೂತ ಭೇತಾಳಗಳಿಂದ ನಿನಗೆ ಭೀತಿ ಪುಟ್ಟಲಿಲ್ಲೋ ಮತಿಮಂದ 1 ಛೇದ ಭೇದಗಳು ನಿನಗೆಲ್ಲಿ ನೀ ಅ- ನಾದಿ ನಿತ್ಯವೆಂಬುದ ಬಲ್ಲಿ ವೇದ ಬಾಹ್ಯರಾಗದೆ ಇಲ್ಲಿ ಹರಿ ಪಾದ ಇನ್ಯಾಕೆ ಪೂಜಿಸಲೊಲ್ಲಿ 2 ನೀನು ನಿನ್ನದು ಅಲ್ಲವೋ ನೋಡಾ ದೇಹ ನಾನು ನನ್ನದೆಂಬರೋ ಮೂಢಾ ಮಾನಹಾನಿ ಮಾಡಿಕೊಳಬೇಡ ಬಿಡು ಸಾನುಬಂಧಿಗಳ ಸ್ನೇಹವ ಗಾಢ 3 ಅಹಿತಾದಿ ವಿಭೂತಿಯ ನೋಡೋ ಸೋಹಂ ಎಂಬರೆ ವಿಘಾತಿಯ ನೇಹವ ಪಡೆವರೆ ಗೀತೆಯ ಕೇಳಿ ಮೋಹವ ಕಳಕೋ ವಿಜಾತಿಯ 4 ಮಧ್ವವಲ್ಲಭ ಮಾಡಿದ ಗ್ರಂಥ ದೊಳಗದ್ವೈತತ್ರಯ ತಿಳಿದಂಥ ವಿದ್ವಾಂಸರು ಚರಿಸುವ ಪಂಥವನ್ನು ಸದ್ಭಕ್ತಿಲಿ ಸಾಧಿಸು ಭ್ರಾಂತ 5 ಜಾಗರ ಸ್ವಪ್ನ ಸುಷುಪ್ತಿಗಳೊಳು ವರ ಭೋಗಿಶಯನನ ರೂಪಗಳೇಳು ಭಾಗವತ ಬಲ್ಲವರ ಕೇಳು ಬೃಹ- ದ್ಯಾಗವ ಹರಿಗರ್ಪಿಸಿ ಬಾಳು 6 ಪಂಚಾತುಮ ಸಿಲುಕವ ಷಟ್ ಪಂಚ ಪಂಚಿಕೆಗಳ ಕರ್ಮವ ಮೀಟಿ ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ ಪಂಚನಾಗಿ ನೀ ಕಡೆದಾಟಿ7 ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ- ಹಾನುಭಾವದಿ ನಿನ್ನ ಬಿಂಬ ತಾನೇ ಸರ್ವತ್ರದಲಿ ಕಾಂಬ ಇದ- ಕೇನು ಸಂದೇಹವಿಲ್ಲವೋ ಶುಂಭ 8 ತಾಪತ್ರಯಂಗಳು ನಿನಗೆಲ್ಲಿ ಪುಣ್ಯ ಪಾಪಕ್ಕೆ ಲೇಪನಾಗೋಕೆ ಹೊಲ್ಲ ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ ದ್ವ್ಯಾಪಕನೆಂದರಿತರೆ ಕೊಲ್ಲ 9 ಡಿಂಭದೊಳಗೆ ಚೇತನವಿಟ್ಟು ಜಗ- ದಂಬಾರಮಣ ಮಾಡಿದ ಕಟ್ಟು ಉಂಬುಡುವ ಕ್ರಿಯೆಗಳನಷ್ಟು ನಿನ್ನ ಬಿಂಬನಾಧೀನನಾದರೆ ಇಷ್ಟ 10 ಲಕ್ಕುಮಿ ಅವನ ಪಟ್ಟದ ರಾಣಿ ದೇ- ವರ್ಕಳು ಪರಿಚಾರಕ ಶ್ರೇಣಿ ವಕ್ಕಲು ನಾವೆಲ್ಲರು ಪ್ರಾಣಿ ದಶ- ದಿಕ್ಕುನಾಳುವ ನಮ್ಮ ದೊರೆಯ ನೀ 11 ಮತ್ರ್ಯಲೋಕದ ಸಂಪದ ಪೊಳ್ಳು ಜಗ ಮಿಥ್ಯಮತವೆಂದಿಗು ಜೊಳ್ಳು ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ ಭೃತ್ಯನು ಕರ್ತನಾಗದಿರೆಲೋ ಕೇಳು12 ಮಾಧವನಲಿ ತನುಮನ ಮೆಚ್ಚು ಕ್ರೋಧರೂಪದ ಕಲಿಮಲ ಕೊಚ್ಚು ಮೋದತೀರ್ಥರ ವಚನವ ಮೆಚ್ಚು ವಾದಿ ಮತಕ್ಕೆ ಬೆಂಕಿಯ ಹಚ್ಚು 13 ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ ಪವನನಯ್ಯನ ಪ್ರೇರಣೆಯಿಲ್ಲ ಎವೆಯಿಕ್ಕಲರಿಯದೀ ಜಗವೆಲ್ಲ ಎಂದು ಶಿವ ತನ್ನ ಸತಿಗೆ ಹೇಳಿದನಲ್ಲ 14 ಧ್ರುವ ಬಲ್ಯಾದಿ ರಾಯರ ನೋಡು ನಿನ್ನ ಅವಗುಣಗಳನೆಲ್ಲಾ ಈಡ್ಯಾಡೋ ಅವಶ್ಯವಾಗಿ ಕರ್ಮವ ಮಾಡೋ ಮಾ- ಧವ ನಿನ್ನವನೆಂದು ನಲಿದಾಡೋ 15 ನಿಂದಾ ಸ್ತುತಿಗಳ ತಾಳಿಕೋ ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದವರಿಂದಲಿ ಬಾಳಿಕೋ ಗೋ- ವಿಂದ ನಿನ್ನವನೆಂದು ಹೇಳಿಕೋ 16 ತತ್ವವಿಚಾರವ ಮಾಡಿಕೋ ನಿನ್ನ ಭಕ್ತಿಯ ಆಳವ ಅಳಿದುಕೋ ಮಾಯಾ ಮೋಹ ಕಳೆದುಕೋ ನಿನ್ನ ಹತ್ತಿರ ಹರಿಯಿರುವ ನೋಡಿಕೋ 17 ಹಿಂಡು ದೈವಗಳಿಂದ್ಹಿರಿಯನೀತ ತನ್ನ ತೊಂಡನೆಂದದವರಿಗೆ ತಾ ಸೋತಾ ದಂಡಿಸಿ ದಯಮಾಡುವ ದಾತಾ ಭೂ- ಮಂಡಲದೊಳಗೆಲ್ಲ ಪ್ರಣ್ಯತಾ 18 ನಾಡ ಖೋಡಿ ದೈವಗಳಂತೆ ತನ್ನ ಬೇಡಲು ತಾ ಬೇಡಿಕೊಳನಂತೆ ನೀಡುವ ನಿಖಿಳಾರ್ಥವದಂತೆ ನಿಜ ನೋಡಿಕೋ ನಿನಗ್ಯಾತರ ಚಿಂತೆ 19 ಏನು ಕೊಟ್ಟರೆ ಕೈಚಾಚುವ ತನ್ನಾ- ಧೀನವೆಂದರೆ ನಸುನಾಚುವಾ ದಾನವ ಕೊಡಲೂರಿ ಗೀಚುವ ತನ್ನಲಿ ತಾನೇವೇ ಮನದೊಳು ಸೂಚುವ20 ಕರಕರದಲ್ಲಿ ತಾ ಬರುವಾನು ಮರತುಬಿಟ್ಟವರ ತಾ ಮರೆಯಾನು ನಿಜ ಶರಣರ ಕಾದುಕೊಂಡಿರುವಾನು ತನ್ನ ಸರಿಯಂದವರ ಹಲ್ಲು ಮುರಿದಾನು 21 ಆರು ಮುನಿದು ಮಾಡುವದೇನು ಪ್ರೇರ್ಯ ಪ್ರೇರಕರೊಳಗಿದ್ದು ಹರಿ ತಾನು ಓರಂತೆ ಕಾರ್ಯವ ನಡೆಸೋನು ಮುಖ್ಯ ಕಾರಣ ಶ್ರೀಹರಿ ಅಲ್ಲವೇನೋ 22 ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ ಕುಲಶೀಲಧನದಿಂದ ಹರಿ ಮೆಚ್ಚಾ ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ ಸುಲಭೋಪಾಯಾದಿಗಳ ನಿಚ್ಯಾ 23 ದುರ್ಜನರೊಳು ದೈನ್ಯ ಬಡದಿರು ಸಾಧು ಸಜ್ಜನರೊಳು ವೈರ ತೊಡದಿರು ಅರ್ಜುನಸಖನಂಘ್ರಿ ಬಿಡದಿರು ನಿ- ರ್ಲಜ್ಜನಾಗಿ ಬಾಯ್ಬಿಡದಿರು 24 ಭಯರೂಪದಿ ಒಳಹೊರಗಿದ್ದು ನಿ- ರ್ಭಯ ನಾಮಕನು ಧೈರ್ಯವನೆ ಗೆದ್ದು ಭಯದೋರುವನೆಂಬುದೆ ಮದ್ದು ಮಹಾ ಭಯಕೃದ್ಭಯಹಾರಿಯನೆ ಪೊಂದು 25 ಪರಸತಿಯರ ಸಂಗವ ಬಿಡು ಹರಿ ಸರ್ವೋತ್ತಮನೆಂದು ಕೊಂಡಾಡು ಪರಮಾತ್ಮನ ಧ್ಯಾನವ ಮಾಡು ನರ ಹರಿದಾಸರಂಗಳ ಒಡಗೂಡು 26 ಸೃಷ್ಟಿಗೊಡೆಯ ಶ್ರೀದವಿಠಲ ವಿಷ್ಟಾವಿಷ್ಟನಾಗಿದ್ದೆಲ್ಲ ಇಷ್ಟಾನಿಷ್ಟವ ಕೊಡಬಲ್ಲ ಮನ- ಮುಟ್ಟಿದವರ ಬೆಂಬಿಡನಲ್ಲಾ 27
--------------
ಶ್ರೀದವಿಠಲರು
ಇಂದಿರೇಶ ಭವಬಂಧನ ಬಿಡಿಸೊ ನಿನ್ನಾನಂದದೊಳಿರಿಸೊ ಪ ಸಿಂಧುಶಯನ ಗೋವಿಂದ ಮುರಾರೆ ಅಚಿಂತ್ಯಾದ್ಭುತ ಶೌರೆ ಅ.ಪ. ತಾಳಲಾರೆನೊ ಈ ತಾಪತ್ರಯ ಹರಿಸೊ ನಿನ್ನವನೆನಿಸೊ ಕಾಲಕರ್ಮ ಕೋಟಲೆ ತಪ್ಪದಲ್ಲ ನೀ ಕೇಳೆನ್ನ ಸೊಲ್ಲ ವಾಕು ಪಾಲಿಸಿ ಎನ್ನನು ಪಾರುಗಾಣಿಸೊ ಫಣಿರಾಜಶಯ್ಯ 1 ಪರಿಪರಿಯಿಂದಲಿ ಜನ್ಮ ಧರಿಸಿ ಕರೆದುತಂದೆ ಈ ಜನ್ಮದಿ ನಿಂದೆ ಅರಿಯದವರಂತಿರುವರೆ ಕಾಯುವ ಕರುಣಿ ನೀನು ದೀನಜನ ಸುರಧೇನು 2 ಅಂಬರ ಮಣಿಯಂತೆ ಬಿಂಬ ಮೊಳಗ್ಹೊಳೆದು ದುರಂತ ಕರ್ಮಂಗಳ ಕಳೆದು ಹಂಬಲಿಸುವ ಭಕುತರ ಬೆಂಬಲಿಗನೆನಿಸಿ ಸಂತತ ನಿನ್ನ ಸುಖಸಿರಿಯ ಸುರಿಸೊ 3 ಬಿಂಬವು ಒಲಿದರೆ ಪ್ರತಿಬಿಂಬ ಫಲಸುವದುಂಟು ಈ ಮಾತು ನಿಘಂಟು ಬಾಂಬೊಳೆ ಹರಿಸಿದ ಹರಿ ಮಾನಿಧಿವಿಠಲ ನೀನಲ್ಲದಿನ್ಯಾರೋ ದೇವರ ದೇವಾ 4
--------------
ಮಹಾನಿಥಿವಿಠಲ
ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ 1 ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ2 ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ 3 ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ 4 ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ5
--------------
ಚಿದಾನಂದ ಅವಧೂತರು
ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1 ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2 ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3 ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4 ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ
ಎಂಥ ಸುಂದರವಾದ ವೃಂದಾವನಾನಿಂತು ನೋಡಲು ಮನಕೆ ಸಂತೋಷವಾಗುವದು ಪಶ್ರೀ ರಾಘವೇಂದ್ರ ಗುರುಸಾರ್ವಭೌಮರ ದಿವ್ಯಧೀರ ಗಂಭೀರ ಸುಮನೋಹರ ಸುಮೂರ್ತಿರಾರಾಜಿಸುತಿಹುದು ಮುಗಳುನಗೆ ಮುಖದಿಂದಾಶರಣಾಗತರಿಗೆಲ್ಲ ಅಭಯ ಹಸ್ತವ ನೀಡಿ 1ಪ್ರೇರಕರು ತಾವಾಗಿ ಪ್ರೇರ್ಯರೊಬ್ಬನ ಮಾಡಿಕಾರಾಗಿರನ ಕನಸು ಮನಸಿನಲಿ ಪೋಗಿಇರಬೇಕು 'ೀಗೆಂಬ ವೃಂದಾವನದಿ ಚಿತ್ರತೋರಿಸುತ ಅಂತರಂಗದಿ ನಿಂದು ಮಾಡಿಸಿದ 2ಅಡಿಗಡಿಗೆ ಮ'ಮೆಯನು ತೋರಿಸುತ ಗಲಗಲಿಗೆನಡೆತಂದು ಶ್ರೀ ಮಠವ ಹ'್ಮುಕೊಂಡಿಹರುಸಡಗರದಿ ಭಕುತರಿಂ ಸೇವೆಕೊಳ್ಳುತಲಿಹರುಬಡವರಿಗೆ ಭಾಗ್ಯ ನಿಧಿಯು ಬಂದಂತೆ ಆಯ್ತು 3ಅಲ್ಲಿ ಮಂತ್ರಾಲಯವು ಇಲ್ಲಿ ಗಾಲವಕ್ಷೇತ್ರಅಲ್ಲಿ ತುಂಗಾ ಇಲ್ಲಿ ಕೃಷ್ಣವೇಣಿಅಲ್ಲಿ ಪ್ರಹ್ಲಾದರಾಜ ಯೋಗ ಮಾಡಿದನು ಇಲ್ಲಿತಪವ ಗೈದಿಹರು ಗಾಲವ ಮರ್ಹಗಳು 4ಅಲ್ಲಿ ರಾಯರಬಂಡಿ ಇಲ್ಲಿ ಋಗಳ ಬಂಡಿಅಲ್ಲಿ ಮಂಚಾಲೆಮ್ಮಾ ಇಲ್ಲಿ ಜಗದಂಬಾಅಲ್ಲಿ ಹೊಳೆದಾಟಿದರೆ ಪಂಚಮುಖಿಪ್ರಾಣೇಶಇಲ್ಲಿ ಹೊಳೆ ದಾಟಿದರೆ ಸಂಜೀವ ಪ್ರಾಣೇಶ 5ಕಲಿಯುಗದ ಸುರಧೇನು ಕಲ್ಪತರು ಗುರುರಾಯಗಲಗಲಿಯ ಭಾಗ್ಯ'ದು ಬಂದು ನಿಲಿಸಿಹನುಕಲುಷವರ್ಜಿತರಾಗಿ ದರುಶನವ ಮಾಡಿದರೆಕರೆದು ಈಪ್ಸಿತವ ಕೊಡುವ ಪರಮ ಕರುಣಾಳು 6ಪಾಪಿ ಕೋಪಿಷ್ಠರಿಗೆ ಸೇವೆ ದಕ್ಕುವದಿಲ್ಲಮಾಂ ಪಾ' ಪಾ' ಎಂಬುವ ಭಕುತರಾತಾಪತ್ರಯವ ಕಳೆದು ಸುಪ'ತ್ರರನು ಮಾಡಿಭೂಪತಿ'ಠ್ಠಲನ ಅಪರೋಕ್ಷ ಮಾಡಿಸುವ 7
--------------
ಭೂಪತಿ ವಿಠಲರು