ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ ಶೇಷರಾಯನ ಮುಕುಂದ ಶರಣರಾನಂದ ಪ ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ ಓಲಗ ಛತ್ರ ಚಾಮರ ದಿಮಿಗೆ ಅ.ಪ ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು ಮುತ್ತಿನಂಥಾ ತನುವು ಧೂಳಾಗಿರುವುದೋ ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ 1 ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ ಕೊರಳಿನೊಳುಹಾಕಿ ತುಳಸೀಮಾಲೆಯ ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ 2 ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ ಮಂಗಳದ ದೀಪವೂ ಮಂತ್ರಪುಷ್ಪ ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ ಸಂಗೀತ ನರ್ತನವು ಸ್ತುತಿಸೇವೆಯೂ 3 ವಸುಮತೀಪಾಲನೆಯ ಸತತ ನೀಗೈಯುತ್ತ ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ 4 ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ ಸಾದರದಿ ಕರ್ಪೂರ ತಾಂಬೂಲವನು ಸದಿಯೋ ಮೋದದಿಂದಾರತಿಯ ಬೆಳಗುವೆನೋ ರಂಗಾ 5 ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ ಜಯತು ಕರುಣಾಸಿಂಧು ಜಯಭಕ್ತ ಬಂಧು 6
--------------
ಶಾಮಶರ್ಮರು
ಹಬ್ಬವನು ಮಾಡಿದನು ಗುರುರಾಯ ಇಬ್ಬರೊಡಗೂಡಿಸುವದಿಂಗಿತದ ನೆಲೆಯರಿದು ಪ ಶ್ರವಣದಕ್ಷತೆ ಕೊಟ್ಟು ಪರಮಾರ್ಥ ದೌತಣದಿ | ಅವನಿಯೊಳು ಪರಮ ಕರುಣ ಸ್ನೇಹದಿ | ಸುವಿವೇಕ ವೈರಾಗ್ಯ ವೆಂಬ ಜಲ ಸಮಬೆರಸಿ | ತವಕದಲಿ ಮಜ್ಜನವ ಗೈಸಿದನು ಮುದದಿ 1 ಸ್ಥಿರ ಚಿತ್ತ ದಾಸನದಿ ಕುಳ್ಳಿರಿಸಿ ಸದ್ಭಾವ ಬೋಧ ಸುಧೆಯಾ ಪರಿ ಪರಿಯಲುಣಿಸಿ ಅಪರೋಕ್ಷದನುಭವ ಕಲಶ ನೆರೆವಿಡಿಸಿ ಕೈದೊಳಿಸಿ ಭವದೆಂಜಲ ಗೆಳಸೀ 2 ಸಹಜಾವಸ್ಥೆ ತಾಂಬೂಲವನು ಕರದಿತ್ತು | ವಿಹರಿಸುತ ನಿರ್ವಿಕಲ್ಪ ಸಮಾಧಿಯಾ | ವಿಹಿತದುಡುಗೊರೆ ಹೆಗಲಲಿಪೊದಿಸಿ ಪಾಲಿಸಿದ | ಮಹಿಪತಿ ಸ್ವಾಮಿ ನಂದನಗ ದಯ ಬೀರಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು