ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ಸೀಸಪದ್ಯ ಮಕರ ಭಾದೆಗೆ ಸಿಲುಕಿ ಕರಿರಾಜ ತಾ ಕರೆಯೆ ಭರದಿ ನೀ ಬಂದೆ ತಂದೆ ಭಾಧಿಸುತಿರಲು ಕಂದ ಪ್ರಹ್ಲಾದನನು ಸಂದೇಹವಿಲ್ಲದೆಲೆ ಬಂದು ಕಾಯ್ದೆ ವಿಪಿನದಲಿ ಧ್ರುವರಾಯ ತಪವಗೈಯುತಲಿರಲು ಕೃಪೆಯಿಂದ ಮೈದೊರ್ದೆ ಕೃಪಣವತ್ಸಲನೇ ಮರಣ ಕಾಲದಿ ಮಗನ ಕರೆದಜಾಮಿಳನಂದು ಕರುಣದಿಂದಲಿ ಪೊರೆದೆ ಕರುಣ ಶರಧೆ ದುರುಳ ಸೆರಗ ಸೆಳೆಯುತಿರೆ ನೊಂದು ಚೀರಿಡಲಕ್ಷಯಾಂಬರವನಿತ್ತೆ ಇಂದು ನೀನಲ್ಲದೆಲೆ ಕಾಯ್ವರಿನ್ನಾರಿಹರು ತಂದೆ ನೀ ಮೈದೋರು ಶ್ರೀ ಕರಿಗಿರೀಶ
--------------
ವರಾವಾಣಿರಾಮರಾಯದಾಸರು