ಹಿತವಾವುದದೆ ಪಥದಿ ಸತತದೆನ್ನಿರಿಸೊ
ಮತಿಹೀನನ್ಹಿತದ ಪಥವರಿಯೆ ಹರಿಯೆ ಪ
ಅರಿವಿಗರಿವು ನೀನು ಮರೆಯಮಾನವ ನಾನು
ಹರಿದಾಸರರಸ ನೀ ಚರಣದಾಸನು ನಾನು
ದುರಿತ ಪರಿಹರ ನೀನು ದುರಿತಕಾರಿಯು ನಾನು
ದುರಿತ ಪರಿಹರಿಸೆನ್ನ ಪೊರೆಯೊ ಸಿರಿದೊರೆಯೆ 1
ಜೀವಜೀವೇಶ ನೀ ಜೀವನಾಧಾರ ನೀ
ಪಾವನೇಶ್ವರ ನೀ ಭಾವಿ ಭಕ್ತನು ನಾ
ಭವರೋಗದ್ವೈದ್ಯ ನೀ ಭವದ ರೋಗಿಯು ನಾನು
ಭವರೋಗ ಪರಿಹರಿಸಿ ಪಾವನನೆನಿಸಭವ 2
ನಾಶರಹಿತನು ನೀನು ನಾಶಕಾರಿಯು ನಾನು
ನಾಶನದಿಂದುಳಿಸೆನ್ನ ಪೋಷಿಸಲಿ ಬೇಕೊ
ಅನುದಿನ ಮೀಸಲಮನದಿಂದ
ಶ್ರೀಶ ಶ್ರೀರಾಮ ನಿಮ್ಮ ದಾಸನೈ ನಾನು 3