ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ಭಗವಂತನ ಸಂಕೀರ್ತನೆ ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
--------------
ವಿದ್ಯಾಪ್ರಸನ್ನತೀರ್ಥರು
ಶಿಷ್ಟ ಜನರುಗಳಿಗೆ ಸತತ ಇಷ್ಟಾರ್ಥಗಳನೆ ಕೊಡುವ ಬೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂಪ ಸರ್ವಶಾಸ್ತ್ರಾರ್ಥಗಳನರಿತು ದುರ್ವಾದಿ ಮತವನಳಿದ ಸರ್ವಜ್ಞಾಚಾರ್ಯ ಪೂಜಿತ ಕೃಷ್ಣ ನಿನಗೆ ಮಂಗಳಂ 1 ಲೇಸಾಗಿ ಮಧ್ವಶಾಸ್ತ್ರವ ಭೂಸುರರಲಿ ಅರುಹಿದ ವ್ಯಾಸಾರ್ಯವರಕರಾರ್ಚಿತ ಕೃಷ್ಣ ನಿನಗೆ ಮಂಗಳಂ 2 ಘನ್ನ ಶ್ರೀ ವ್ಯಾಸಯತಿಗಳ ಉನ್ನತ ಪೀಠಪತಿಗಳಿಂ ಚೆನ್ನಾಗಿ ಪೂಜಿಗೊಂಬ ಪ್ರಸನ್ನÀ ಕೃಷ್ಣಗೆ ಮಂಗಳಂ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು