ಭಾರತೀಶ ಮದ್ಭಾರ ನಿನ್ನದಯ್ಯ | ಕರುಣದಿ ಪಿಡಿ ಕೈಯ್ಯಾ ||
ಪೂರೈಸೆನ್ನ ಮನೋಭಿಲಾಷೆ ಗುರುವೆ | ಭಜಕರ ಸುರತರುವೆದ್ಭ ಪ
ಹರಿಭಕ್ತಾಗ್ರೇಸರನೆ ಹನುಮಂತಾ | ಹರನುತ ಬಲವಂತಾ |
ತರಣಿಕುಲಜ ಶ್ರೀರಾಮನ ಕೈಯಿಂದ | ಬಲುಸಂಭ್ರಮದಿಂದಾ |
ರಣದೊಳಗೋಲ್ಯಾಡಿ |
ದುರುಳ ರಕ್ಕಸರ ದುಷ್ಟ ದನುಜರ | ತರಿದೆ ಲೋಕೈಕ ಸಮರ್ಥಾ 1
ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ |
ಕಂತು ಜನತನಿಚ್ಛಾನುಸಾರವಾಗಿ | ರಣದೊಳಗೆ ಚೆನ್ನಾಗಿ |
ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು |
ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ 2
ನಡುಮನೆಯೆಂಬೊ ವಿಪ್ರನ ಮನೆಯಲ್ಲಿ | ಅವತರಿಸಿ ಚೆನ್ನಾಗಿ |
ಮೃಡ ಸರ್ವೋತ್ತಮ ಹರಿಯೆ ತಾನೆಂದು | ಮಿಥ್ಯಾಜಗವೆಂದು |
ನುಡಿವ ಜನರ ಮತಗಳನೆ ನಿರಾಕರಿಸಿ ಶಾಸ್ತ್ರವ ರಚಿಸಿ |ಒಡೆಯ ತಂದೆ ಶ್ರೀ ವಿಜಯವಿಠಲನ್ನ ಪೂಜಾಸಕ್ತನೇ 3