ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆನ್ನ ತಾಯಿ ಸದ್ಗುರುವೆನ್ನ ತಂದೆ ಗುರುಕೃಪೆ ಪಡೆದು ನಾ ಹೆಸರಿಗೆ ಬಂದೆ ಪ ಗುರುವೆನ್ನ ಪ್ರಾಣಲಿಂಗಾ ಗುರುವೆನ್ನ ಇಷ್ಟಲಿಂಗಾ ಗುರುಪ್ರಕಾಶವು ಬೆಳಗುತಿರೆ ಸರ್ವಾಂಗಾ ಗುರುಸ್ಮರಣೆ ಸುಖರಂಗಾ ಗುರುಕರುಣಾ ಕೃಪಾಂಗಾ ಗುರುವಿಂದಧಿಕ ಕಾಣೆ ಶಿವನಾಣೆ ಗುರುವೆನ್ನ 1 ಗುರುವೆ ಈ ಪೃಥವಿಯು ಗುರುವೆ ಆಕಾಶವು ಗುರುವೆ ಸ್ಥಾವರ ಜಂಗಮವೆಲ್ಲವು ಗುರುರೂಪವೆಂದು ಶ್ರೀ ಗುರು ಕರುಣದಂದರಿತು ಗುರು ಸರ್ವರಿಗೆ ಸರಿಯಲ್ಲಾ ಶಿವಬಲ್ಲ 2 ಗುರುವೆ ದೇವಾಂಗಾ ಶ್ರೀ ಗುರುವೆ ಬಸವಲಿಂಗಾ ಗುರು ಬ್ರಹ್ಮವಿಷ್ಣುರುದ್ರ ಸ್ವರೂಪ ಗುರು ಧರಣಿಪಾಲಾ ಗುರು ವಿಮಲಾನಂದ ಲೋಲಾ ಗುರು ಸಿದ್ಧೇಶ್ವರಸ್ವಾಮಿ ಭಕ್ತ ಪ್ರೇಮಿ 3
--------------
ಭಟಕಳ ಅಪ್ಪಯ್ಯ
ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ ಗೋಪಾಲ ಪಾಲಿಸೊ ಪ ನಾರಿಜನರುಟ್ಟ ಸೀರೆ ಸೆಳೆದು ತಾ ಭಾರಿ ಮರವನ್ನೇರಿ ವಿನೋದವ ತೋರಿದ ಸುರರಿಪು ವೈರಿಯೇ ಎನ್ನಯ ಕೋರಿಕೆ ನಡಸಲಿನ್ಯಾರಿಗೆ ಬೇಡಲೊ 1 ತುಂಗಫಣಿಫಣ ಶೃಂಗದೊಳು ಚರ ಣಂಗಳ ಕುಣಿಸು ಭುಜಂಗಮವರನಿಗೆ ಭಂಗಪಡಿಸಿ ಕೃಪಾಪಾಂಗದಿ ಸಲಹಿದ ಮಂಗಳಮಹಿಮ ರಥಾಂಗಧರ ಬಾಲ 2 ಬಂಧು ಬಳಗ ನೀನೆಂದು ತಿಳಿದು ಮ ತ್ತೊಂದನೆಣಿಸದೆ ಇಂದಿರಾರಮಣನೆ ಎಂದೆಂದಿಗೂ ಸಲಹೆಂದು ನಾ ಬೇಡುವೆ ಸಿರಿ 3 ಖಿನ್ನ ನಿಜ ಜನರನ್ನು ಸಲಹುವ ಪನ್ನಗಶಯನ ಪ್ರಸನ್ನ ಹೃದಯನಾಗಿ ಎನ್ನ ಮನೋರಥವ ಪೂರೈಸುವ ರನ್ಯರು ಯಾರಯ್ಯ ಚಿನ್ಮಯ ಮೂರುತಿ 4 ಕಾಮಜನಕನೆ ನಾಮಗಿರಿ ಸಿರಿ ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ ಕಾಮಧೇನು ಚಿಂತಾಮಣಿ ಎನ್ನಯೋಗ ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ 5
--------------
ವಿದ್ಯಾರತ್ನಾಕರತೀರ್ಥರು
ದೊರೆಯಾಗಿ ನಾನಿಹೆನಮ್ಮ ಅಜಹರಿಹರರ್ಗಿಲ್ಲದೆ ಪದ ಸೇರಿತಮ್ಮ ಪ ಪರಿ ಪರಮಾನ್ನವಮ್ಮ 1 ಸಂಗರಹಿತ ಸತಿಯಮ್ಮ ಆಮಂಗಳವೆಂಬ ಘನಸುತರಮ್ಮಜಂಗಮವೇ ಜನವಮ್ಮ ಭೇದಂಗಳ ಪರಿದಿಹುದೇ ಅರಮನೆಯಮ್ಮ 2 ನಾದವೆಂಬುದ ವಾದ್ಯವಮ್ಮ ಸುನಾದವೆಂಬುದೇ ಗೀತಗಾಯಕರಮ್ಮಆದಿ ಬಂಧುವೇ ಮದವಮ್ಮ ತೇಜವಾದ ಚಿತ್ತವೇ ದೀವಟಿಗೆಮ್ಮ 3 ಜ್ಞಾನವೆಂಬುದೇ ಬಲವಮ್ಮ ಮಹದಾನಂದ ರಾಜ್ಯಕ್ಕೆ ಅಧಿಪತಿಯಮ್ಮತಾನೆ ಎಂಬುದೇ ಮುದ್ರೆಯಮ್ಮ ಇಂತುನ್ಯೂನವಿಲ್ಲದೆ ಸ್ಥಿರ ಸೇರಿದುದಮ್ಮ4 ಸುರವರರ್ಗಿನಿತುಂಟೆ ಅಮ್ಮಹಿರಿಯಾರಾರಾದರೇನು ದೊರಕದಮ್ಮಗುರುವಿನ ದಯದಿಂದಲಮ್ಮ ನಿಜಗುರು ಚಿದಾನಂದನೇ ತಾನಾದುದಮ್ಮ5
--------------
ಚಿದಾನಂದ ಅವಧೂತರು
ಧೀರ ಭವದೂರಾ ಸುಕುಮಾರಾ ಮುಖತೋರೋ ಜೀಯಾ ಪ ನಾರಾಯಣ ಕೇಶವ ಹರೀ ರಂಗ ನರರೂಪನೆ ಕರುಣಾಕರ ಅ.ಪ ಶರಣಾಗತ ಪರಿಪಾಲಿತ ಶರಣೆಂದೆನೊ ಸುರಮುನಿಹಿತ ಉರಗಾಸನ ಓಂಕಾರನೆ ನರಸಿಂಹನೆ ಪರಬ್ರಹ್ಮನೆ 1 ಕಾಮಾದಿಗಳ ಸಮರ ಸಹಿ ಪ್ರೇಮಾತಿಶಯ ಕೃಪಾಳೊ ನಾಮಾಮೃತ ಮಾಲಪಾಲನೆ ಮಹರಾಯನೆ ಮದವಾರಣ2 ಅಂಗಜಹತನಾಶಿವನುತ ಮಂಗಳ ಜಯ ತುಲಶೀರಾಮಾ ತಿಂಗಳಥರ ವಿನತಾಗುರಿ ಮಂಗಳಪುರಿ ಜಂಗಮವರ 3
--------------
ಚನ್ನಪಟ್ಟಣದ ಅಹೋಬಲದಾಸರು
ನಾ ಕಂಡ ಕನಸು ಕನಸಲ್ಲ ಅದು ಹೇಳಲು ಬಾರದು ಕೇಳಲು ಬಾರದು ಪ ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು1 ಧ್ಯಾನವು ಗುರುಪಾದದಲ್ಲಿರೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು 2 ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು 3
--------------
ಚಿದಾನಂದ ಅವಧೂತರು
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ