ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನೋ ಕಂಡೆ ಗುರುಚಿದಂಬರನಾ ತನು ಗೊಂಡು ಭೂಮಂಡಲದೊಳು ಚರಿಸುವನಾ ಪ ಪರಮಾತ್ಮ ಪರತತ್ವವನು ತಿಳಿದವನ ಧರೆಯ ಜನರನÀು ಪಾವನವ ಮಾಡುವನಾ ಕರುಣ ಸಮುದ್ರ ದೀನರ ದಯಾಪರನಾ ನೆರೆನಂಬಿದವರಿಗೆ ವರವ ಕೊಡುವನಾ 1 ಮಳೆ ಛಳಿ ಬಿಸಿಲು ಹಸಿವಿಗಂಜದವನ ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ ನೆಲೆಗಾಣದಂತಹ ಅಪಾರ ಮಹಿಮನು ಕಲಿಮನದೊಡ್ಡದಾನಂದ ನಿರ್ಗುಣನ 2 ಸ್ಮರಹರನಂತೆ ಭಸಿತ ದಿಗಂಬರನಾ ಕೆರೆಬಾವಿ ದೇವಾಲಯವನು ಕಟ್ಟಿಸುವನ ಪುರಹರನಂತೆ ಢಿಕ್ಕನೆ ಧರಿಸಿಹನ ನರ ಗುರಿಗಳು ಬಲ್ಲರೇನೋ ಇಂಥವನಾ 3 ಯಮನಿಯಮ ಅಷ್ಟಾಂಗ ನಿರತನ ಕಮಲಾರಿ ಪಿತನಂತೆ ಗಂಭೀರದವನ ಹಿಮವಂತನಂತೆ ಧೈರ್ಯದೊಳಿರುತಿಹನ ಕಮಲ ಬಾಂಧವನಂತೆ ತೇಜದಿಂದಿರುತಿಹನ 4 ಅರಿಗಳನರುವರ ನುಗ್ಗೊತ್ತಿದವನ ಕರಣೇಂದ್ರಿಯಂಗಳ ನಿಗ್ರಹಿಸಿದವನ ಪರಮ ದಾಸಗೆ ಆಲಿಂಗನವನಿತ್ತನಾ ಸ್ಥಿರ ಚಿದಾನಂದ ಪುರದ ದಿಗಂಬರನ 5
--------------
ಕವಿ ಪರಮದೇವದಾಸರು
ನೀನೆ ರಕ್ಷಿಸೋ ಎನ್ನನು ಕೃಪೆಮಾಡಿ ಜ್ಞಾನ ಮೂರುತಿ ಗುರುವರನೆ ದಿಗಂಬರ ಪ ಕಾಲ ಹಿಡುದು ಬೇಡಿ ಕೊಂಡುಪದೇಶವ ಕೇಳಿಹೆ ನಾನು ದಿಗಂಬರ ಮೂರ್ತಿಯೆ 1 ವಿಲಾಸದಿ ಜಗವೆ ಚಿದಂಬರನೆಂದು ಮೂರ್ತಿ 2 ಈ ಧರೆಯ ಜನರನು ಪವಿತ್ರಿ ಕರಿಪ ಪುಣ್ಯಪುರುಷರೆಂಬುದನು ಬಲ್ಲವರೆ ಬಲ್ಲರು ಮೂಢ ಮೂರ್ತಿ 3 ಕಣ್ಣಾರೆ ಕಂಡೆ ನಿಂದಿನ ದಿನವೆನ್ನ ಪುಣ್ಯೋದಯದಲಿ ನಿಮ್ಮ ದರುಶನವೆನಗೆ ಸಂಪೂರ್ಣವಾಯಿತು ಕೃತಕೃತ್ಯನಾದೆನು ಮೂರ್ತಿ 4 ನಂಬಿದೆ ನಿಮ್ಮ ಪಾದಾಂಬುಜವನು ಕರುಣಾಂಬುಧಿ ಕಾಯೊ ಕಮಲ ಮಿತ್ರತೇಜ ಸುಖಾಂಬುಧಿ ರೂಪ ನಿರಂಜನಗುರುವೆ ಸೂನು ಮೂರ್ತಿ 5
--------------
ಕವಿ ಪರಮದೇವದಾಸರು
ಶಿವ ಶಿವ ನಿಮ್ಮ ನಾಮ ಅಡಿಗಡಿಗೆ ಬೇಕು ಪರಿಯಂತ ತಾನೊಂದೆ ಸಾಕು ಪ ಜಗವೆಲ್ಲ ಶಿವ ಮಯವು ಎಂದು ಕಾಣಲು ಬೇಕು ನಿಗಮ ದೂರನ ಹೃದಯ ದೊಳಗರಸಬೇಕು ಬಗೆಯರಿತು ಮಾನಸದಿ ಶಿವನ ಪೂಜಿಸಬೇಕು ನಿಗಮಾಗಮಸ್ತುತನ ಅಡಿಗೆರಗಬೇಕು 1 ಅನವರತ ಶಿವಮಂತ್ರವನು ಜಪಿಸುತಿರಬೇಕು ತನುಮನವ ವಸ್ತುವಿನೊಳಗಿರಿಸಬೇಕು ಘನ ಪರಂಜ್ಯೋತಿ ಸ್ವರೂಪವ ನರಿಯ ಬೇಕು ತನುಮಯ ಚಿದಂಬರನ ಕೂಡಬೇಕು 2 ನಾನು ನಾನೆಂದೆಂಬ ಹಮ್ಮ ಬಿಡಬೇಕು ಜ್ಞಾನಾಗ್ನಿಯಿಂದ ಜ್ಞಾನವನು ಸುಡುಲುಬೇಕು ಪವಮಾನ ಸುತ ಕೋಣೆ ಲಕ್ಷ್ಮೀಪತಿಯ ಕಡುಮಿತ್ರನಾದ ವನ ಪಾದವನು ಕೊಡಬೇಕು 3
--------------
ಕವಿ ಪರಮದೇವದಾಸರು
ಸಾಕು ಸಾಕು ಸವಿದಟ್ಟಿತು ನನಗೀಗ ಸಾಕಾಯ್ತೀ ಸಂಸಾರದ ಸುಖವು ಪ ಸಂಜೀವನದ ಅಮೃತವ ನಾಕಂಡಮೇಲೆ ಗಂಜಿಗಾಸೆ ಮಾಡುವೆನೆ ರಂಜಿತ ಚಿದಾನಂದವನು ಕಂಡಮೇಲೆ ಗುಂಜಿನ ಮೈಸುಖವೆ ಪೇಳೋ 1 ಹಾಲ ಸಮುದ್ರವ ಕಂಡಮೇಲೆ ಪಶು ಜಾಲವ ಬಯಸುವೆನೆ ಪೇಳೋ ಲಾಲಿಸಿ ಚಿದಾನಂದವ ಕಂಡಮೇಲೆ ಜಾಳು ವಿಷಯದ ಚಿಂತೆಯೇ ಪೇಳೋ 2 ಪರುಷದ ಪರ್ವತವ ನಾಕಂಡಮೇಲೆ ಸಿರಿ ಬೇಕೆಂಬಂಧ ಚಿಂತೆಯೇ ಪೇಳೋ ಪರಮಾತ್ಮ ಸಿದ್ಧಸಿದ್ಧವ ಕಂಡೆ ಗುರು ಚಿದಂಬರನ ನಿನ್ನೇತರ ಚಿಂತೆ ಪೇಳೋ 3
--------------
ಕವಿ ಪರಮದೇವದಾಸರು