ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ತತ್ವವಿವೇಚನೆ ಅಂತರಂಗದ ಕದವು ತೆರೆಯಿತಿಂದು ಪ ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ 1 ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ 2 ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ ಜ್ಞಾನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ ಶೃಂಗಾರಸದನ 3 ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಪರ ದಾರಿಗೆ ಪ್ರಾಣ ಜಯವಿಜಯರು || ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ | ಸರಸಿಜನಾಭನ ಅರಮನೆಯ ಸೊಬಗು 4 ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ | ರಮೆಧರೆಯರಿಂದಲಾಲಿಂಗಿತ್ವದಿ || ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- | ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ 5
--------------
ವಿಜಯದಾಸ