ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1 ಉತ್ತಮ ಗುರು ಹಿರಿಯರುಗಳ ಬೈವರ | ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು | ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ | ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು | ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ | ಯುತ್ತುರುಳು ಹಾಕುವರೊ ಬೆನ್ನೊಳಗೇ | ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ | ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2 ಪರಧನ ಪರಸತಿ ಪರನಿಂದೆಗೆಳೆವರ | ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ | ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ | ಜಿಹ್ವೆ ಕೊರೆದು ತೈಲದೊಳಗೆ | ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ | ಉರವಣಿಸು ಕುಣಿಸುವರೊ-ಹೆರೆದಂಬಿಗೆ | ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ | ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ | ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3 ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ | ತುಂಬಿ | ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ | ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- | ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- | ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ | ಹಣ್ಣಣ್ಣು ಮಾಡುವರೊ-ಅಸೀಪತ್ರಾ- | ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ | ತುಂಬಿ ಕುಟ್ಟಿ ಮೆಲ್ಲಿಸುವರೊ4 ವಾಸುದೇವನ ವಾಸರದಲ್ಲಿ ಉಂಬರ | ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- | ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು | ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು | ತುಂಬಿ | ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ | ಹೇಸದೆ ಬಡಿಸುವರೊ ಹಂದಿಯಂತೆ | ಈ ಶರೀರ ಸುಡಿಸವರೊ-ತಮಸಿನೊಳು | ಏಸು ಜನ್ಮಕೆ ಗತಿಯಲ್ಲವೆನಿಸುವರೊ 5 ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ | ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ | ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ | ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು | ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- | ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- | ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು | ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ | ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6 ಒಂದು ನೋಡಿದರೊಂದು ಅಧಿಕ ಪಾಪಗಳಿವೇ- ನೆಂದು ಪೇಳಲಿ ಎನಗೊಂದಾದರಳವಲ್ಲ | ಹಿಂದಿನ ದುರ್ವಾರ್ತೆ ಮರೆದು ಮುಂದಾದರು | ನಂದತೀರ್ಥರ ಪಾದಾನಂದದಿ ಭಜಿಸಿ ಪು | ರಂದರನನು ಸರಿಸಿ-ವಿಜಯವಿಠ್ಠಲ | ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- | ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
--------------
ವಿಜಯದಾಸ
ನಿನ್ನ ನಂಬಿದವರಿಗೆ ಇನ್ನು ಕೊರತೆಗಳುಂಟೆ ಪನ್ನಗಾದ್ರಿನಿವಾಸ ಶ್ರೀ ವೆಂಕಟೇಶ ಪ. ಬನ್ನ ಬಡಿಸದೆ ಎನ್ನ ಧ್ಯಾನವನ್ನು ಮರೆವರು ಭಕ್ತರಂದು ಬನ್ನ ಬಿಡಿಸಿ ಪೊರೆವೆ ಕರುಣದಿ ಅ.ಪ. ಅಧಿಕ ಸಂಸಾರದಿ ಪದೆಪದೆಗೆ ತೊಡರುಗಳ ಬದಿಗನಾಗಿದ್ದವರಿಗೆ ಕೊಟ್ಟು ಸದಮಲಾನಂದ ಪರೀಕ್ಷಿಸುವೆ ತವಕದಿ ಚದುರಿಸುತ ಮನವನ್ನು ಅದುಭುತನೆ ನಸುನಗುತ ನೀನೋಡುತ್ತ ಹೆದರಿ ಬೆದರಿ ನಿನ್ನ ಧ್ಯಾನಕ್ಕೊದಗಲಿ ಮನವೆಂಬೆಯಲ್ಲದೆ ಮಧುರವಾಣಿಯ ತೋರಿ ಸಲಹಲು ವದಗಿ ಕಾಯುವೆ ಭಕ್ತರನ್ನು (ಚದುರ ನಿನಗೆಣೆಗಾಣೆ ಜಗದೊಳು) 1 ಜಾಣರೊಳತಿ ಜಾಣತನ ತೋರುತ್ತ ಕಾಣಿಸಿ ಕಾಣದಂತಿರುತ ಭಕ್ತರೊಳು ಗಾಣಕೆ ಸಿಲ್ಕಿದ ಎಳ್ಳು ಸಚ್ಛದೆಣ್ಣೆ ಮಾಣದೆ ಬರುವ ತೆರ ತೋರುವೆ ಜನಕೆ ಕಾಣದಿಹ ಕಾಮಕ್ರೋಧದ್ಹಿಂಡಿಯ ಮಾಣದೆ ಬೇರ್ಪಡಿಪೆಯಲ್ಲದೆ ಇದು ಕಾಣ್ವರು ನಿನ್ನ ಚರಣದಂಘ್ರಿಯ ಕಾಣುತಲೆ ಸ್ತುತಿಮಾಡಿ ಹಿಗ್ಗುತಲಿಹರು 2 ದಿಟ್ಟಮೂರುತಿ ಕೇಳೊ ಕೊಟ್ಟರೊಳ್ಳಿತು ಕಷ್ಟ ಉತ್ಕøಷ್ಟವಾಗಲಿ ಹರಿಯೆ ಎನ್ನ ದೊರೆಯೆ ಕಟ್ಟಕಡೆ ನಿನ ಧ್ಯಾನ ಕೊಟ್ಟು ಕಾಯುವ ಭಾರ ಘಟ್ಟಿ ಕಂಕಣ ಕಟ್ಟಿ ನಿಂತಿಹೆ ಶ್ರೀ ಶ್ರೀನಿವಾಸ ಎನ್ನ ದುಷ್ಟತನವೆಲ್ಲ ಕುಟ್ಟಿ ಕೆಡಹುವೆ ಕಟ್ಟಕಡೆಗೆ ನಿನ್ನ ಪಾದಾಂಗುಷ್ಠ ಸೇರಲಿಯೆಂದಾ ಭಕ್ತರ ಬೆಟ್ಟದೊಡೆಯನೆ ಸಲಹುತಿರುವೆ ಉತ್ಕøಷ್ಟ ಮೂರುತಿ ಭಕ್ತರಿಷ್ಟದಾಯಕ 3
--------------
ಸರಸ್ವತಿ ಬಾಯಿ
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ಪ ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಅ.ಪ ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು ಜ್ಞಾನಿಗಳ ಸಹವಾಸ ಮಾಡದಲೆ ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ ಮೀನು ಗಾಣಕೆ ಬಿದ್ದು ಮಿಡುಕುವಂದದಲಿ 1 ಸರಸರನೆ ಕಂಠವನು ಗರಗಸದಿ ಕೊಯ್ದರೂ ತರಹರಿಸದೇ ಪರರ ಮನೆಯನ್ನವನ್ನು ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ2 ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ- ವಿರ ಜನುಮದಲಿ ಅರ್ಜಿಸಿದ ಪಾಪ ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ ಹರುಷದಿಂ ಕುಳಿತು ವಿಷವುಂಬ ಪಾತಕಿಗೆ 3 ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ ಮತ್ತೆ ಕುಲಹೀನದಲಿ ಅನ್ನ ತಿಂದು ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ 4 ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ಕಾಯ ವಿಜಯವಿಠ್ಠಲರೇಯ ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು 5
--------------
ವಿಜಯದಾಸ
ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ ಉರಿಯನಪ್ಪಲು ಬಹುದು ಗರಳವನು ಕುಡಿ ಬಹುದು ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1 ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು ಅಗಜೆಯರಸನ ಉರಿಯ ನಯನ ಕಾನಲು ಬಹುದು ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2 ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3 ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು ವಿಷದ ಉರುಗನ ಕೂಡೆ ಸರಸವಾಡಲು ಬಹುದು 4 ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ ದುರಿತ ನಾಶನವಹುದು ಮರಳಿ ಜನ್ಮಕೆ ಬಾರದಂಥ ಪದವಿಯಹುದು5
--------------
ಕವಿ ಪರಮದೇವದಾಸರು