ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ ದೊರಕುವುದ್ಹ್ಯಾಗಣ್ಣ ಪ ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ ಸತಿಸುತರ್ಹಿತರೆಂದು ಮತಿಗೆಟ್ಟ ಮಂದ ಮತಿಯಾಗಿ ಸಂಸಾರ ತಿಳಿದಿ ಗಟ್ಟಿ ಗತಿಸುವ ದೇಹದ ಸ್ಥಿತಿ ವಿಚಾರಿಸದೆ ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ 1 ಗಳಿಸಲು ತುಸು ಬೇಸರಲ್ಲದ್ಹೋಗಿ ಕೇಳಿದಳುಕಿ ಅಳುಕಿ ಜನರಿಗೆ ಬಾಗಿ ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು ಬಳಲಿಬಳಲಿ ದುಡಿದೆಲೆ ಗೂಗಿ ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು ಅಳುಮೋರೆ ಮಾಡಿದಿ ತಲೆಬಾಗಿ 2 ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ ಗಿಷ್ಟಮಿತ್ರರು ಬರಲತಿ ನೊಂದಿ ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ ಶಿಷ್ಟರ ಸಂಗಕೆ ದೂರಾದಿ ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ 3
--------------
ರಾಮದಾಸರು
ಯಾತರವ ನಾನೈಯ ಇಂದಿರೇಶ ಪ ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ ವಾಸಪಗೆ ಸಮರೆಂದು ದೋಶಿಗಳ ಪೊಗಳೀ ಕಾಸುಗಳಿಸಲು ದಾಸ ವೇಷ ಹಾಕಿದ ಶೂರ ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1 ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2 ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ ದೋಷವಾದವ ಮಾಡಿ ವ್ಯಾಸದಾಸರ ದ್ರೋಹ ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3 ಮಾನವರ ಬಹುಮಾನ ಸಾನುರಾಗದಿ ಬಯಸಿ ನಾನು ಮೋದಿಸುವೆ ಹೀನ ಮತಗಳ ಹುಳುಕು ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು4 ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ ನಿತ್ಯ ನೇಮವುಯನಗೆ ಈತರದ ಹರಿದಾಸ ಮಾತರಿಶ್ವಗೆ ದೂರ 5 ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ ಸೊಲ್ಲು ಏನು ಬಿಡೆದಿಹೆನಲ್ಲ ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6 ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ ಯೆಂತು ಪೇಳಲಿ ಜೀಯ ಸಂತ ಜಯಮುನಿ ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7
--------------
ಕೃಷ್ಣವಿಠಲದಾಸರು
ಹಗಲು ಸಮಯದಲಿ ಇರುಳು ನೋಡಿದ ಬಾವಿ ಗುರುಳಬಹುದೇ ನರರು ಈ ಜಗದೊಳು ಪ ಮರುಳು ಮಾಡುವ ಭವದುರುಳು ಬಂಧನದೊಳು ಸಿಗಲು ಬಯಸಬಹುದೇ ಅವಿವೇಕದಿ ಅ.ಪ ಅಡಿ ಐದು ಉದ್ದದ ಒಡಕು ಒಂಭತ್ತಿನ ಕಡು ದುಃಖ ದೇಹಕೆ ಸಿಡಿವುದು ತರವೆ ಪೊಡವೀಶನಾದರೂ ಮಡಿಯಲು ನಿನ್ನಯ ಸಡಗರವೆಲ್ಲವು ಹಿಡಿಯೊಳಗಲ್ಲವೇ 1 ಅನುದಿನದಲಿ ನೀನು ಹಣ ಹಣವೆನ್ನುತ ಕುಣಿಯುವುದನು ನೋಡಿ ಅಣಕಿಸುವರು ನಿನ್ನ ತನುಮನ ಕ್ಲೇಶವನನುಭವಿಸುತ ಸದಾ ಹಣವಗಳಿಸಲದನುಣುವರು ಬೇರಿಹರು 2 ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು ಬಹುವಿಧ ವೈಭವವೆನಗಿಹುದೆನ್ನುವ ಮಹದಾಗ್ರವನ್ನು ಸಹಿಸುವನೇ ಹರಿ 3 ಸಿರಿ ಸಂತತ ಗಳಿಸಲು ಅಂತಕ ತನುವನು ಸೆಳೆಯಲು ಗಳಿಸಿದ ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು ಚಿಂತಿಸಿ ಮನದೊಳು ಹರಿಯನು ನಿಲಿಸೊ 4 ಊಹಿಸುತೆಲ್ಲವ ಈ ಮಹಿಯೊಳಗಿನ ಮೋಹವ ಜರಿಯುತ ಪಾಹಿ ಎಂದು ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ 5
--------------
ವಿದ್ಯಾಪ್ರಸನ್ನತೀರ್ಥರು