ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ ಗುರು ರಾಘವೇಂದ್ರಾರ್ಯನೇ ಪ. ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ ಭವ ಬಂಧ ಬಿಡಿಸೋ ಅ.ಪ. ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ ಸಂಚಿತನೆ ಎನೆ ನೆಲಸೋ ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ ಪಂಚ ಭೇದಾರ್ಥ ತಿಳಿಸೊ ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1 ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ ನೀ ನಿರ್ಮಲದಲಿ ನೆನೆವೆ ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ ಕಾಮಿಸಿದ ಭಕ್ತಗೀವೆ ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2 ತರಳತನದಲಿ ಶ್ರೀ ನರಹರಿಯ ಭಜಿಸುತ್ತ ಉರುತರದಿ ಭಾದೆ ಸಹಿಸಿ ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ ಉರ್ವಿಯೊಳಗೆಲ್ಲ ನೆಲಸಿ ಸಿರಿ ಕೃಷ್ಣನಾ ಭಜಿಸಿ ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3 ತುಂಗ ತೀರದಿ ನಿಂದು ಮಂಗಳರೂಪದಲಿ ಪಂಗು ಬಧಿರರ ಸಲಹುತ ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ ಮಂಗಳರೂಪ ಭಜಿಸಿ ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4 ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ ಪಾದ ಮೌಳಿ ನೋಳ್ಪೆ ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು ತಾಪಪಡಲಾರೆ ಭವದಿ ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5
--------------
ಅಂಬಾಬಾಯಿ
ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು ಪೂರ್ಣಗೊಳಿಸಭಿಲಾಷೆಯ ಪ. ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ. ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ- ಪೂರ್ಣ ಗುಣಗಣನಿಲಯನೆ ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ ಪೂರ್ಣಭೋಧರ ವರದನೆ ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ ಪಾದ ನೀಡೋ 1 ಚಕೋರ ಪೂರ್ಣಚಂದ್ರನೆ ಭಕ್ತಿ ಪೂರ್ಣ ಶರಧಿಗೆ ಚಂದ್ರನೆ ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ ಪೂರ್ಣಚಂದ್ರನೆ ತಾಪಕೆ ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2 ಪೂರ್ಣಚಂದ್ರನ ವಂಶ ಪಾವನವಗೈಯಲು ಪೂರ್ಣ ಯದುಕುಲದಿ ಜನಿಸಿ ಪೂರ್ಣ ಯುದ್ಧದಲಿ ಗೆಲಿಸಿ ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3 ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು ಪೂರ್ಣಗೊಳಿಸಿದೆ ಸೃಷ್ಟಿಯ ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ ಪೂರ್ಣ ಭಕ್ತರ ರಕ್ಷಕ ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ 4 ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು ಪೂರ್ಣಬೋಧರು ನುಡಿವರೊ ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ ಪೂರ್ಣ ಪದ ಪಡೆದಿರುವರೊ ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
--------------
ಅಂಬಾಬಾಯಿ