ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು