ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ
ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ
ನೀಡಿದಾಭಯದೂಟ ಗೂಢಗುರುತವಾಯಿತು ನೀಟ 1
ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು
ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು 2
ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ
ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ 3