ವಿಠಲ ನಮೋ ವಿಠಲ
ಮುಟ್ಟಿಭಜಿಪ ದೀನನಿಷ್ಟಾರ್ಥ ಪಾಲಿಸು ಪ
ಹೇಸಿಪ್ರಪಂಚದಿ ನಿಂದು ಮಹ
ಕ್ಲೇಶಪಂಚಕದಲಿ ಬೆಂದು ಕೆಟ್ಟ
ವಾಸನತ್ರಯದಿಂದ ನೊಂದು ಬಲು
ಘಾಸಿಯಾದೆ ದಯಾಸಿಂಧು ಆಹ
ದೋಷದೂರನೆ ಎನ್ನ ದೋಷನಾಶನ ಗೈದು
ಪೋಷಿಸು ಅನುಮೇಶ ದಾಸನೊಳ್ದಯವಾಗಿ 1
ಮರವೆಯೆಂಬುವ ಕವಚ ತೊಟ್ಟು ಬಲು
ದುರುಳತನಕೆ ಮನಗೊಟ್ಟು ಮಹ
ದರಿವಿನ ಅರಮನೆ ಸುಟ್ಟು ಆಹ
ಪರಮದುರಿತದಿ ಬಿದ್ದು ಮರುಳನಾಗಿ ನಿಮ್ಮ
ಚರಣಸರೋಜಕ್ಕೆ ಮರೆಹೊಕ್ಕೆ ಕರುಣಿಸು 2
ಹೊಂದಿ ಭಜಿಪೆ ನಿನ್ನ ಬೇಡಿ ಎನ್ನ
ಮಂದಮತಿಯ ಕಡೆಮಾಡಿ ನಿಜಾ
ನಂದ ಸುಜ್ಞಾನಪದ ನೀಡಿ ಭವ
ಬಂಧ ಸಂಕೋಲೆ ಗಡ ಕಡಿ ಆಹ
ಸಿಂಧುನಿಲಯ ಬೇಗ ದಂದುಗ ಪರಿಹರಿಸಿ
ಕಂದನ್ನ ಉದ್ಧರಿಸು ತಂದೆ ಶ್ರೀರಾಮಯ್ಯ 3