ಇದ್ದೀಯಯ್ಯ ಎನ್ನೊಳಗೆನೀ ಇನಕುಲರಾಯ ಪ
ಇದ್ದೀಯೈ ಸರ್ವರ ಹೃದ್ಗುಹೆಯೆಂತೆಂಬ
ಪದ್ಮದೊಳಗೆನೀನು ಪದುಮೆಯಿಂದೊಡಗೂಡಿ ಅ.ಪ
ಮರುತಾತ್ಮಜ ನಿನ್ನ ಚರಣವನೊತ್ತಲು
ಸರಸಿಜಭವ ಮುಖ್ಯ ಪರಿವಾರಸಹಿತನು 1
ಮೂರು ಲೋಕದ ವ್ಯಾಪಾರ ನಡೆಸುತ್ತ
ಯಾರಿಗು ತಿಳಿಸದೆಯೆಲ್ಲೆಲ್ಲಿಯು ನೀನೆ 2
ಪ್ರೇಮದಿಂದಲಿ ಭಕ್ತಸ್ತೋಮವೋಲೈಸುವದು
ಸ್ವಾಮಿಯಾಗಿ ಗುರು ರಾಮವಿಠಲ ತಂದೆ 3