ಕೇಳಿದರೆನಗೇನು ಗೊತ್ತಿಲ್ಲ
ಹೇಳುವದ್ಹುಟ್ಟನಾ ಕಲಿತಿಲ್ಲ ಪ
ಹೇಳಿದ್ದೆ ಕೇಳಿ ನಾ ಮೂಲತಿಳಿದು ಭವ
ಮಾಲನ ಭಜಿಸುವೆನಲ್ಲ ಅ.ಪ
ವೇದಮೊದಲು ನಾನೋದಿಲ್ಲ
ವೇದಮಂತ್ರ ಗೊತ್ತೆನಗಿಲ್ಲ
ಮೇದಿನಿಯೊಳು ಹರಿಪಾದದಾಸರು ನಿ
ವೇದಿಸಿದ ತೆರ ಸಾಧಿಪೆನಲ್ಲ 1
ನಿತ್ಯತತ್ತ್ವಗೊತ್ತೆನಗಿಲ್ಲ
ಮತ್ತು ಆವಶಾಸ್ತ್ರ ಗತಿಯಿಲ್ಲ
ಸತ್ಯರು ಪೇಳಿದ ನಿತ್ಯವಾಕ್ಯಗಳ
ಚಿತ್ತವಿಟ್ಟರಿಯುತ್ತ ಸತ್ಯ ನಂಬಿಹೆನಲ್ಲ 2
ಛಂದಸ್ಸು ಲಕ್ಷಣ ನೋಡಿಲ್ಲ
ಒಂದು ಪುರಾಣದರ್ಥ ಮಾಡಿಲ್ಲ
ಬಂಧುಭಜಕರಾನಂದ ಶ್ರೀರಾಮನ
ಬಂಧುರಂಘ್ರಿ ಸ್ಮರಣೊಂದೆ ಬಲ್ಲೆನಲ್ಲ 3