ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ. ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1 ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು. ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2 ರುಧಿರ ಪಾನವ ಮಾಡಿತು ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3 ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು ತರಳನೊಬ್ಬನ ಕೂಡೆ ತಾನೂ ಆಟವನಾಡಿತು ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4 ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5
--------------
ಅಂಬಾಬಾಯಿ
ನಿಗಮ ಆಗಮಗೋಚರ ಜಗನ್ಮೋಹ ಜಗದೀಶ ಪಾಲಿಸು ಎನ್ನ ಪ ಖಗವರಗಮನ ಜಗದ ಜೀವನ ಪೊಗಳುವೆ ನಗಧರ ಅನಘನೆ ನಿನ್ನ ನಗೆ ಮೊಗದೋರೆನಗಗಲದೆ ಅನುದಿನ ನಗಜನಮಿತ ಮಿಗಿಲಗಣಿತ ಮಹಿಮ ಅ.ಪ ಕದನಕಂಠೀರವ ಉದಧಿಸದನ ಮಹ ಅಧಮಕುಲದ ಮದಸಂಹರ ಹದಿನಾರುಸಾವಿರ ಸುದತಿಯರ ಮನ ವಿಧ ವಿಧ ಸುಲಿದ ಸುಂದರ ಸದಮಲರಾಧೇಯ ಮದನಕದನದಿಂ ಕದಲದ ಆನಂದ ಮಂದಿರ ಕುದುರೆ ತಿರುವಿ ಪಾದಪದುಮದಾಸನ ಘೋರ ಕದನಗೆಲಿಸಿದ ಗಂಭೀರ ಯುದುಕುಲಪಾವನ ಮದನನಯ್ಯ ರಮಾ ಪದುಮಾವತಿಯ ಪಂಚಜೀವನಸದನ ಪದುಮವದನ ಸದಸದುಗುಣಗಳ ಸದ್ಹøದಯ ಉದಯ ಮುದ ವುದಯಾಗೆನ್ನೊದನದಿ1 ನಲಿದು ನಲಿದು ಪೊಂಗೊಳಲುನೂದುವ ಬಲುಚೆಲುವ ಚಿದ್ರೂಪನಾಟಕ ಒಲದು ಭಜಕಜನರ್ಹೊಲಬು ತಿಳಿವ ಚಿ ತ್ಕಳಾಭರಿತ ವಿಶ್ವವ್ಯಾಪಕ ಜಲಜಮಿತ್ರ ಕೋಟಿಕಳೆಕಿರಣಗಳಿಂ ಖಳಕುಲಭೀತ ಸುಫಲಪ್ರದ ಪರತರ ಇಳೆಮಂಡಲತ್ರಯ ಪಾಲಕ ಕಲಿಮಲಹರ ನಿರ್ಮಲನಿಜಚರಿತ ಮಲಿನ ಕಳೆದು ನಿರ್ಮಲನೆನಿಸೆನ್ನ ಒಲಿದುಪಾಲಿಸು ಸ್ಥಿರ ಚಲಿಸಿದಚಲಮನ ಸುಲಭಭಕುತ ಬಲ ವಿಲಿಸಿತಕರುಣಿ 2 ಸಿಡಿಲುಕೋಟಿಸಮ ಫಡಫಡಸ್ತಂಭವ ಒಡೆದು ಮೂಡಿದ ತ್ರಿವಿಕ್ರಮ ಕಡುರೋಷದಿ ಕೆಂಗಿಡಿಗಳನುಗುಳುವ ಕಡುಗಲಿಗಳಗಲಿ ನಿಸ್ಸೀಮ ಘುಡುಘುಡಿಸುತ ಆರ್ಭಟಿಸುತ ದುರುಳನ ಒಡಲಬಗಿದ ಕಡುಪರಾಕ್ರಮ ಗಡಗಡ ನಡುಗುವ ದೃಢತರ ಬಾಲನ ಪಿಡಿದು ಪೊರೆದ ಭಕ್ತ ಸುಖಧಾಮ ಉಡುಮಂಡಲ ವರಗಡರಿದ ಶಾಪವ ತಡೆಯದೆ ಹಡೆಹಾಯ್ಸ್ಹಿಡಿದೆಲೋಕವರ ಜಡಜಭವ ತೊಡರನು ಗಡ ಕಡಿದೆನ್ನಯ ನುಡಿಯೊಳೊಡೆದು ಮೂಡು ಒಡೆಯ ಶ್ರೀರಾಮ ಪ್ರಭು 3
--------------
ರಾಮದಾಸರು
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
--------------
ಪುರಂದರದಾಸರು