ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ವೇದವ್ಯಾಸರ ದಿವ್ಯಪಾದ ಪದುಮಯುಗಲ ಆರಾಧಿಸುತಿರು ಮನುಜಾ ಪ ವೇದಗಳಿಗೆ ಸಮ್ಮತವಾದ ಪುರಾಣಗಳ ಸಾದರದಲಿ ರಚಿಸಿ ಮೋದವ ಬೀರಿದ ಅ.ಪ ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು ಸುರಮುನಿ ಪ್ರಾರ್ಥನದಿ ಭಾಗವತ ಗ್ರಂಥ ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ 1 ವಾಸಿಪ ಮುನಿಗುಣ ಭೂಷಿತ ಬದರಿಯೋಳ್ ತೋಷ ತೀರ್ಥರ ಕರೆದು ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ ಭಾಷ್ಯವರಚಿಸೆಂದಾದೇಶವ ನೀಡಿದ2 ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ ಕರಗಳಿಂದಲಿ ಶೋಭಿತ ಸುರತರು ವೆನಿಸಿ ಧರೆಯೊಳು ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ 3
--------------
ಕಾರ್ಪರ ನರಹರಿದಾಸರು