ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು
ಸ್ವಾತಂತ್ರ್ಯವೆನಗುಂಟೆ ಸರ್ವಾಂತರ್ಯಾಮಿ ಪ ನಿಂತು ನೀ ನಡೆಸುವಿಯೊ ಜೀವಾಂತರ್ಯಾಮಿ ಅ.ಪ ಜೀವ ಸ್ವರೂಪದಲಿ ಜೀವನಾಕಾರದೊಳಿದ್ದು ಅನಾದಿಕರ್ಮ ಜೀವರಿಗೆ ಪ್ರೇರಿಸಿ ಜೀವಕೆ ಚೇತನ ಕೊಟ್ಟು ಜೀವಕ್ರಿಯೆಗಳನ- ಭಿವ್ಯಕ್ತಿ ಮಾಡಿ ಸತತ ಪೊರೆಯುವ ಕರುಣಿ 1 ದತ್ತಸ್ವಾತಂತ್ಯ ತನಗಿತ್ತಿಹನು ದೇವನೆಂದು- ನ್ಮತ್ತತನದಿ ತಾ ಕರ್ತನೆಂದೆನಿಸಿ ಸುತ್ತಲಹ ನಿತ್ಯ ಅವಸ್ಥೆಗಳ ಪರಿಹರಕೆ ಶಕ್ತನಾಗನು ಏಕೆ ಆಪತ್ತುಗಳು ಬರಲು 2 ಪೂರ್ಣವಾಗಿ ತಾ ಜಡನಂತಿಹಾ ಕರಣದಲಿ ಶ್ರೀರಮಣ ಸೇರಿ ಚೇತನ ಕೊಟ್ಟು ಕ್ರೀಡೆಗೋಸುಗ ಬಿಡುವ ಸರ್ವ ಜೀವರನಾ 3 ಅನಾದಿಕರ್ಮ ಎನ್ನದೆಂದಿಗು ಸರಿಯೆ ಮುನ್ನ ಪ್ರಳಯದಿ ನಿನ್ನ ಘನ್ನೊಡಲೊಳಿಂಬಿಟ್ಟೆ ಎನ್ನ ಕರ್ಮಗ್ರಂಥಿ ಎನ್ನಿಂದ ಬಿಡಿಸೊ 4 ಅನಿರುದ್ಧ ಲಿಂಗಾ ಅಂಗೋಪಾಂಗದಲಿ ನೀನ್ಹಾಂಗೇ ಮೆರೆವೆ 5 ಹೃಷೀಕಪನೆ ನಿನಗೆ ಇದು ಸಂತೋಷವೇನೊ ಈಷಣತ್ರಯ ಹರಿಸಿ ಪೋಷಿಸೋ ದೇವಾ 6 ತರಣಿ ತರಣಿಕಿರಣನನುಸರಿಸಿ ವೃತ್ತಿಯಹುದೊ ತ್ವರಿತದಲಿ ಸ್ಥೂಲದಲಿ ಕಾರ್ಯಾಭಿವ್ಯಕ್ತಿಯೊ 7 ನಾನತ್ತು ಫಲವೇನೊ ಸ್ಥಿತಿಕಾಲದಿ ನೀನಿಲ್ಲದಿನ್ನಿಲ್ಲ ಪ್ರತಿಬಿಂಬ ಕಾರ್ಯವಹುದೋ 8 ಹೆಚ್ಚು ಮಾತೇನು ಜೀವನಿಚ್ಛೆಯನನುಸರಿಸಿ ಅಚ್ಯುತ ತಾನೆ ಸ್ವೇಚ್ಛಚರಿಸಿ ಎಚ್ಚರಿಸಿ ಸ್ಥೂಲದಿಂದೆಚ್ಚರದಿ ನಡೆವುದೊ 9 ನಿನ್ನ ಸಂಕಲ್ಪವಲ್ಲದಿನ್ನಿಲ್ಲ ಅನ್ಯಥಾಗುವುದುಂಟೆ ಇನ್ನು ಹರಿಸೋದೇವಾ 10 ಶ್ರೀದನಿಂ ದತ್ತಸ್ವಾತಂತ್ರ್ಯ ಸಮ್ಮತವೇನು ಆದರಿಸಿ ಸಲಹಯ್ಯ ಮೋದತೀರ್ಥಾ- ರಾಧ್ಯ ಶ್ರೀ ವೇಂಕಟೇಶಾ11
--------------
ಉರಗಾದ್ರಿವಾಸವಿಠಲದಾಸರು