ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ಪ. ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ದಯವಾಗೊ ಅ.ಪ. ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ 1 ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ ಪ್ರೇಮದಿ ಸುರರಿಗಮೃತವ ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ 2 ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರÀೂಢಿಯ ನೆಗಹಿ ಜಗಕಿತ್ತೆ ರÀೂಢಿಯ ನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ 3 ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳ ಮಾಲೆಯ ಕುಶಲದಿಂ ಮಾಲೆ ಧರಿಸಿದ ಹಯವದನ ಬಿಸಜಾಕ್ಷ ಎನಗೆ ದಯವಾಗೊ 4 ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ 5 ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ ದಯವಾಗೊ 6 ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ ಭೂತ ರಾವಣನ ಮಡುಹಿದೆ ಹಯವದನ ಖ್ಯಾತ ನೀ ಎನಗೆ ದಯವಾಗೊ 7 ಗೊಲ್ಲರ ಒಡನಾಡಿ ಬಲ್ಲಿದಸುರÀನ ಕೊಂದು ಮಲ್ಲರೊಡನಾಡಿ ಮಡುಹಿದೆ ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ್ಷ ಎನಗೆ ದಯವಾಗೊ 8 ತ್ರಿಪುರರ ಸತಿಯರಿಗುಪದೇಶವನಿಕ್ಕಿ ತ್ರಿಪುರರನೆಲ್ಲ ಮಡುಹಿದೆ ತ್ರಿಪುರರನೆಲ್ಲ ಮಡುಹಿದ ಹಯವದನ ನಿಪುಣ ನೀ ಎನಗೆ ದಯವಾಗೊ 9 ತೇಜಿಯನೇರಿ ರಾಹುತನಾಗಿ ನೀ ಮೆರೆದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ ಭೋಜ ನೀ ಎನಗೆ ದಯವಾಗೊ 10 ವಾದಿರಾಜರಿಗೊಲಿದು ಸ್ವಾದೆಪುರದಲಿ ನಿಂದು ವೇದದ ಕಥೆಯನರುಹಿದೆ ವೇದದ ಕಥೆಯನರುಹಿದ ಹಯವದನ ಮಾಧವ ನೀ ಎನಗೆ ದಯವಾಗೊ 11
--------------
ವಾದಿರಾಜ
ಬಾರೊ ಬಾರೊ ಬಾರೊ ಶ್ರೀಹರಿ ಭಕ್ತರಾಧಾರಿ ಪ ನಿಗಮವನ್ನು ಅಜಗಿತ್ತೆ ನಗವ ಬೆನ್ನಲಿ ಪೊತ್ತೆ ನೆಗಹಿ ಧರಣಿಯನು ಇತ್ತೆ ಮಗುವ ಪೊರೆದೆ ಸುಗುಣ ಹರಿಯೆ 1 ಪದದಿ ಗಂಗೆಯನ್ನು ಪಡೆದೆ ಬುಧರಿಗೊಲಿದು ಕೊಡಲಿ ಪಿಡಿದೆ ಸುದತಿ ನೆವದಿ ಖಳರ ಬಡಿದೆ ಒದಗಿ ಅಕ್ಷಯವಿತ್ತೆ ಹರಿಯೆ 2 ದುರಳ ತ್ರಿಪುರರನ್ನು ಗೆಲಿದೆ ಭರದಿ ಯವನ ಬಲವ ಮುರಿದೆ ಗರುಡಾಚಲದಿ ನಿಂತು ಭಕ್ತರ ಪೊರೆವ ಲಕ್ಷ್ಮೀಕಾಂತ ಹರಿಯೆ 3
--------------
ಲಕ್ಷ್ಮೀನಾರಯಣರಾಯರು
ರಂಗನಾಥನ್ನ ಈ ಕಂಗಳಿಂದಲಿ ಕಂಡು ಹಿಂಡು ಪ. ಮಂಗಳಾತ್ಮಕ ದೇವ ಮಮ ಸ್ವಾಮಿ ಸಲಹೆಂದು ಅಂಘ್ರಿಗಳಿಗೆರಗಿ ನುತಿಪೇ ಸ್ತುತಿಪೇ ಅ. ಮಾಂಡವ್ಯರಿಗೆ ವಲಿದು ಶ್ರೀನಿಕೇತನ ದೇವ ಗಂಡಕೀಶಿಲೆ ರೂಪದಲ್ಲಿ ಅಂಡಜವಾಹನನು ಉದ್ಭವಿಸಿ ಸ್ವರ್ಣಾದ್ರಿ ಎಂಬ ಸುಕ್ಷೇತ್ರದಲ್ಲೀ ಹಿಂಡುಭಕ್ತರ ಸೇವೆ ಕೈಯಕೊಳುತ ಬದಿಯಲ್ಲಿ ನಿಂದು ವಿಗ್ರಹ ರೂಪದಲ್ಲೀ ಕಂಡು ಪುಳಕಾಂಕಿತದಿ ಕರುಣ ಮೂರ್ತಿಯ ನುತಿಸಿ ಕೊಂಡಾಡಿ ದಣಿದೆ ನಿಂದೂ ಇಂದೂ 1 ಶಂಖಚಕ್ರಾಂಕಿತದ ಚತುರ್ಭಜವು ಶ್ರೀವತ್ಸ ಪಂಕಜಾಕ್ಷಿಯರುಭಯದಿ ಶಂಕೆಯಿಲ್ಲದ ಭಕ್ತರಿಗೆ ವಲಿವ ಸೌಂದರ್ಯಾ ಲಂಕಾರ ಉಡಿಗೆ ಮುದದಿ ಪಂಕಜಾಸನ ಮುಖ್ಯದಿವಿಜಗಣ ಸೇವಿತನು ಕಿಂಕರರಿಗೊಲಿವ ದಯದೀ ವಂಖಿ ಬಾಪುರಿ ತೋಳು ಕಡಗ ಕಾಲ್ಗೆಜ್ಜೆಗಳು ಕಂಕಣ ಕಿರೀಟ ನಿಟ್ಟಾ ದಿಟ್ಟಾ 2 ಆಗಮವ ಅಜಗಿತ್ತು ಸುರರಿಗಮೃತವಿತ್ತು ಭೂದೇವಿ ಭಯ ಬಿಡಿಸಿದಾ ಬೇಗ ಕಂಬದಿ ಬಂದು ಮಗುವ ರಕ್ಷಿಸಿ ಬಲಿಯ ಯಾಗದಲ್ಲಿ ಭೂ ಬೇಡಿದಾ ನೀಗಿ ಕ್ಷತ್ರಿಯ ಕುಲ ದಶಶಿರಿನ ಸಂಹರಿಸಿ ಮಾಗಧನ ಬಲವ ಮುರಿದಾ ಅಂಬರ ಕಲ್ಕಿ ಗೋಪಾಲಕೃಷ್ಣವಿಠಲಾ ಮಾಗಡಿ ತಿರುಮಲೇಶಾ ಶ್ರೀಶಾ 3
--------------
ಅಂಬಾಬಾಯಿ
ಹೊನ್ನ ತಾ ಗುಬ್ಬಿ ಹೊನ್ನ ತಾ ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ. ಆಗಮವನು ತಂದು ಅಜಗಿತ್ತ ಕೈಗೆ ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ ನಾಗಶಯನ ನರಸಿಂಹನ ಕೈಗೆ 1 ಬಲಿಯ ದಾನವ ಬೇಡಿ ಬಂದಂಥ ಕೈಗೆ ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ ಕಲಿ ವಿಭೀಷಣಗಭಯವಿತ್ತಂಥ ಕೈಗೆ ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ 2 ಪತಿವ್ರತೆಯರ ವ್ರತವಳಿದಂಥ ಕೈಗೆ ಹಿತವಾಜಿಯನೇರಿ ದುರುಳಮರ್ದನ ಕೈಗೆ ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ ಚತುರ ಹೆಳವನಕಟ್ಟೆÉ ರಂಗನ ಕೈಗೆ 3
--------------
ಹೆಳವನಕಟ್ಟೆ ಗಿರಿಯಮ್ಮ