ಒಟ್ಟು 8 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಘಟಿತ ಘಟನಾ ಅದ್ಭುತ ಕಥನಾ ಮಗುವಿನ ನುಡಿ ಕೇಳು ಮದಮುರಮಥನಾ ಪ. ಸಾಲದೆರಡು ಮೂರು ಮೂಲಸಹಿತ ತೋರು ಮೇಲಿನ ಫಲವನ್ನು ಮರೆಯದೆ ಮುಚ್ಚಿಟ್ಟಿರು 1 ಗುಮ್ಮನ ಕಡೆಯಿಂದ ಗೂಬೆಗಳ್ಬರದಂದ ಅಮ್ಮನ ತೊಡೆಯ ಮೇಲಿರಿಸೆನ್ನ ಪೂರ್ಣಾನಂದ 2 ಅಷ್ಟ ನೀನೆನಗಿರೆ ವಪ್ಪದನ್ಯರ ಮೊರೆ ತಪ್ಪಿಸು ಕರಕರೆ ಸರ್ಪಗಿರಿಯ ದೊರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಘಟಿತ ಘಟನಾತ್ಮ ಶಕ್ತಿಯ ನಂಬಿದ ರಘುಕುಲವೇನಿರದು ಮಗುವನು ಮಾತೆ ಮಮತೆಯಿಂದ ಪೊರೆವಂತೆ ನಗುತ ರಕ್ಷಿಪ ಬಿರಿದು ಪ. ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು 1 ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ 2 ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆಲಿಸು ಮನುಜಾ ಮಾಯಾಕಾರ್ಯಕೆ ಮೋಸಹೋಗಲು ಬೇಡಾ ವಿಚಾರಿಸು ತೋರಿಕೆಯು ಪುಸಿಯಹುದು ಈ ಪ ಜಗದೊಳು ತೋರುವ ಅಘಟಿತಘಟನೆ ಮಿಗಿಲೆನಿಸುತಲಿಹುದೋ ಗಡಾ ಅಘಟಿತಘಟನೆಯೆ ಜ್ಞಾನವದೆಂದು ಬಗೆಯುತ ನೀ ಕೆಡಬೇಡ 1 ಸಿದ್ಧಿಯ ಫಲವದು ಅಘಟಿತಘಟನೆ ಬುದ್ಧಿವಂತನೆ ತಿಳಿ ನೀ ಶುದ್ಧ ಚೈತನ್ಯದಿ ಮಾಯೆಯದಿಲ್ಲೈ ಸಿಧ್ದಿ ಮಾಯೆಯ ಮಗಳು 2 ಜ್ಞಾನಸಿದ್ಧಿಗಳ ಭೇದವನರಿಯುತ ಜ್ಞಾನಿಯಾಗೆಲೊ ಮನುಜಾ ನಾನಾಪರಿಯಿಂ ಪೇಳಿದನಿದನಾ ಜ್ಞಾನಿ ಶಂಕರಗುರುರಾಯಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ತಡವ ಮಾಡುವಿಯಾಕೊ ಒಡೆಯ ಗೋವಿಂದ ಬಡವನ ಮೇಲಿನ್ನು ಮುನಿಸೆ ಮುಕುಂದ ಪ. ಕೆಟ್ಟ ಕೃತ್ಯಗಳತ್ಯುತ್ಕøಷ್ಟವಾದುದರಿಂದ ಮಂಡೆ ಕುಟ್ಟುವ ತೆರದಿ ಸಿಟ್ಟಿನಿಂದಲಿ ಬಹು ಕಷ್ಟಗೊಳಿಸಿದಿ ಕಟ್ಟ ಕಡೆಯಲಿ ನೀ ಕಟ್ಟ ಬಿಡಿಸಿದಿ 1 ದುಷ್ಟ ಬಾಧೆಯ ಮುರಿದಟ್ಟಿದಿ ದಯದಿ ಘಟ್ಟ ಬೆಟ್ಟಗಳನ್ನು ಮೆಟ್ಟಿ ನಾ ಭರದಿ ನಿಟ್ಟುಸುರಲಿ ಬಾರೆ ಕೃಷ್ಣ ನೀ ಕರುಣದಿ ತೊಟ್ಟಿಲ ಶಿಶುವಿನಂದದಲಿ ಪಾಲಿಸಿದಿ 2 ಜನರ ಸಹಾಯವ ಕನಸಿಲಿ ಕಾಣೆ ಧನಬಲವೆಂದೆಂದಿಗಿಲ್ಲ ನಿನ್ನಾಣೆ ವನರುಹೇಕ್ಷಣ ನಿನ್ನ ನಾಮ ಒಂದೆ ಹೊಣೆ ಯೆನುತ ನಂಬಿದುದರ ಫಲವಿನ್ನು ಕಾಣೆ 3 ಜಗದ ಸಜ್ಜನರಿದು ಮಿಗೆ ಮೀರಿತೆನಲು ಹಗೆಗಳೆಲ್ಲರು ಬಹು ಸೊಗಸಾಯಿತೆನಲು ನಗಲು ಎನ್ನನು ನೋಡಿ ನಗಧರ ನೀ ಬಂದು ಅಘಟಿತ ಘಟನ ಮಾಡಿದಿ ದೀನಬಂಧು 4 ಈ ಪರಿಯಲಿ ನಿರುಪಾಧಿಯೊಳೆನ್ನ ಕಾಪಾಡಿ ಕಡೆಯೊಳೀ ಕಷ್ಟಗಳನ್ನ ನೀ ಪರಿಹರಿಸಲೇಬೇಕು ಪ್ರಸನ್ನ ಶ್ರೀಪತಿ ಶೇಷಾದ್ರಿವಾಸ ಮೋಹನ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಂದೆ ನೀನಹುದೆಂಬುದೆಂದಿಗು ದಿಟವಯ್ಯ ಇಂದಿರೆಯರಸ ಜೀಯಾ ಕುಂದುಕೊರತೆಗಳನೊಂದು ನೋಡದೆ ಕೃಪೆ ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ. ತನಗನುವಾಗಿರೆ ತೋಷಬಡುವ ತಾತ ಕೊನರಿಕೊಂಬುವ ಕಷ್ಟಕಾಲದಲಿ ವನರುಹದಳನೇತ್ರ ವಾರ್ಧಿಬಂಧನ ನೀನು ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ 1 ಅಘಟಿತಾಘಟಕನೆ ಆದಿ ಪರುಷಮಹ- ದಘನಿವಾರಣ ಶಕ್ತ ಗುಣವಾರಿಧೆ ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ ರಘುಕುಲತಿಲಕ ರಾವಣವೈರಿ ಸುಖಕಾರಿ 2 ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ ಅಪ್ಪ ನೀನಹುದೆಂಬ ನಿರ್ಣಯವ ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಶ ಕರುಣಾಭೂಷ ಶ್ರೀನಿವಾಸ ರಕ್ಷಿಸು ವೀಶಗಮನ ಪ. ತಂದೆ ತಾಯಿ ಸಹಜ ಮುಖ್ಯ ಬಂಧ ಬಳಗವೆಲ್ಲವು ನೀ- ಇಂದು ನಂಬಿದೆ ಇಂದಿರೇಶ ತನ್ನ ಮನಕೆ ಬಂದ ತೆರವ ಮಾಳ್ಪ ಭವ- ಸಿಂಧು ಪೊತ್ತ ನಿನ್ನ ದಾಸನೆಂದು ತಿಳಿದಾನಂದಗೊಳಿಸು 1 ನಿಗಮವೇದ್ಯ ನಿನ್ನೊಳಿರುವ ಅಘಟಿತಘಟನ ಶಕ್ತಿ ಬಗೆಯ ತೋರಿ ಪೊರೆವಿ ಎನ್ನ ಮಗುವಿನಂದದಿ ಅಗಣಿತಾನಂದ ಚಿದಾತ್ಮ ಜಗದಿ ನಿನ್ನ ಪೋಲ್ವ ಕರುಣಾ ಳುಗಳನೆಲ್ಯೂ ಕಾಣೆ ಶಕ್ರಾದಿಗಳು ಸೇರುವರು ನಿನ್ನನೆ 2 ಸರಸಿಜಾಕ್ಷ ಪಾದಪದ್ಮ ಸ್ಮರಣೆ ಮಾತ್ರದಿಂದ ಸರ್ವ ಪುರುಷಾರ್ಥಂಗಳೆಲ್ಲ ಸೇರಿ ಬರುವುದೆಂಬುದಾ ಅರಿಯದಂಥ ಮೂಢರೆಲ್ಲ ಬರಿದೆ ಬಯಲು ಭ್ರಾಂತಿಗೊಳಿಸುವ ಉರಗ ಶಿಖರವಾಸ ನೀನೆ ದೊರೆಯೆಂದು ನಾನೊರೆವೆ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ