ಒಟ್ಟು 5051 ಕಡೆಗಳಲ್ಲಿ , 129 ದಾಸರು , 3317 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀತಿಯೇನಿದು ಕಾಂತೆ ಮಾತಿನೊಳ್ ಬಿರುಸೆನಿತೆ ಘಾತಿಸುವುದಿದೊಳ್ಳಿತೇ ಪ್ರಾಣದಾತೆ ಈಕಾಲದಬಲೆಯರ ಕಾಕಲಾಪಕೆ ಸೋತು ಸಾಕಾರನೊಳಗಿಂತು ಕೇಣಮಾಂತು ನೀನೆರೆವೆÉ ವಸ್ತುಗಳ ನಾನಿತ್ತೆನಾದರೆ ಕಾನನದ ವಾಸವು ಎನಗೆ ನಿಜವು ಇದನರಿತು ನೀನೆನ್ನ ಪದುಳದಿಂ ಸುಖಿಯಪ್ಪ ಹದನನರಿಯದೆ ಬರಿದೆ ಜರಿದೆ ಮುಗುದೆ ಪ್ರೇಮ ಗೌರವ ಭಕ್ತಿ ಭಾವ ಶುದ್ಧಿ ನೇಮನಿರತಿಶಯ ಸುಸ್ನೇಹದಿಂದ ಕೋಮಲತೆಯಯಾಂತೆಸೆವ ಬಗೆಯ ತಾಳ್ದು ಭಾಮೆಯೆನ್ನಿಸು ಶೇಷಗಿರೀಶಗೊಲಿದು
--------------
ನಂಜನಗೂಡು ತಿರುಮಲಾಂಬಾ
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಕಾಮಿಸಿ ನಿರುತವು ಕೆಡುವೆ ಪ ಸ್ವರೂಪವರಿಯದೆ ನೀ ಕರೆಕರೆ ಪಡುವೆ 1 ಭ್ರಾಂತಿಯಪಡುತಲಿ ಬಾಯಿ ಬಾಯಿ ಬಿಡುವೆ 2 ನಾಯಂದದಿ ಪರಸ್ತ್ರೀಯರ ಬಯಸುತ ಹೇಯನೆನಿಸಿಕೊಂಡು ನೊಯ್ಯುವೆಯಲ್ಲದೆ 3 ಮಲಮೂತ್ರದಿ ನೀ ಮಲಗಿರಲಿಲ್ಲವೇ ಮರೆತು ಯೌವ್ವನ ಗರ್ವದಲಿ ತಲೆ ತೂಗುತ4 ಪರಿಪರಿವಿಧದಲಿ ಭಕ್ತರ ಪಾಲಿಪ ಗುರುರಾಮವಿಠಲನ ಚರಣವ ನಂಬದೆ 5
--------------
ಗುರುರಾಮವಿಠಲ
ನೀನೆ ಗತಿ ಎನಗಿನ್ನು ಕರುಣಿಸು ಮಾಧವ ದೀನನ ಮರೆಯದಿರು ಸಿರಿಯರ ಜೀವ ಪ ನೀನೆ ಕರುಣಾಳು ಭಕ್ತಜನರಭಿಮಾನಿ ನೀನೆನ್ನ ಬಿಟ್ಟ ಬಳಿಕ ಕಾಮಿತವ ಪೂರೈಸಿ ಕಾಯ್ವರಕಾಣೆನಾರನು ಕಮಲನಾಭ ಅ.ಪ ಎಡಬಿಡದೆನ್ನನು ಕಾಡುತಿರುವ ಅತಿ ಜಡಭವ ಕಡುದು:ಖ ತಡಿಲಾರೆನಭವ ಅಡರಿಕೊಂಡೆನ್ನ ಸುಡುತಲಿರುವ ಒಡಲತಾಪ ಗಡನೆ ಬಿಡಿಸಿ ಬಿಡದೆ ಎನ್ನನು ಪಿಡಿದು ರಕ್ಷಿಸು ಮಡದಿಗಕ್ಷಯದುಡುಪು ಇತ್ತನೆ 1 ಶರಧಿಸಂಸಾರದ ಉರುತರ ಪರಿಬಾಧೆ ಕಿರಿಕಿರಿ ಪರಿಹರಿಸಿ ಪೊರೆಯಯ್ಯ ಜವದಿ ಶರಣುಮಾಡುವೆ ಶರಣಜನರ ಕರುಣಮಂದಿರ ಮರೆಯದಿರೆಲೊ ತರಳ ನಿರುತದಿ ಚರಣಸ್ಮರಿಸಿ ಕರೆಯೆ ಕಂಬದಿ ಭರದಿ ಬಂದನೆ 2 ಮುಂದೆನಗೆ ಭವಬಂಧ ಎಂ ದೆಂದಿಗಿಲ್ಲದಂತೆ ತಂದೆ ಕರುಣಿಸು ದಯಾ ಸಿಂಧು ಶ್ರೀರಾಮ ವಂದಿ ಭಜಿಸುವೆ ಮಂದರಾದ್ರಿ ಮಂದಿರನೆ ತ್ವರ ಬಂದು ಕಾಯೊ ಬಂಧನದಿ ಜಗ ತಂದೆ ನಿಮ್ಮ ಪಾದಕೆಂದು ಪೂವಗೆ (?) ಬಂದು ಪೊರೆದನೆ 3
--------------
ರಾಮದಾಸರು
ನೀನೆ ದಯ ಸಂಪನ್ನನೆಲೋ ದೀನನಾಥ ಜಾಹ್ನವೀ ತಾತ ಪ ವಿಮಲಹೃದಯಭಕ್ತಿ ಜನಕೆ ನಮಿಪೆ ನಿನ್ನ ಪಾದಕಮಲ ವಿಮಲಸುಖದ ಪಥದೋರೋ 1 ಕೊಟ್ಟು ಎನಗೆ ಶಿಷ್ಟಸಂಗ ಇಟ್ಟು ನಿನ್ನ ಭಜನಾನಂದ ನಿಷ್ಠೆ ಭಕುತಿ ನಿನ್ನ ಪಾದ ದಿಟ್ಟ ದಾಸನೆನಿಸಿ ಕಾಯೋ 2 ರಾಕ್ಷಸಾರಿ ಎನ್ನ ಮನದ ಪೇಕ್ಷ ಪೂರ್ತಿಮಾಡಿ ಮೆರೆವ ಮೋಕ್ಷಪುರಿಗೆ ತಲ್ಪಿಸೆನ್ನ ಮೋಕ್ಷದಾಯಕ ಶ್ರೀರಾಮ ಪ್ರಭೋ 3
--------------
ರಾಮದಾಸರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು
ನೀನೆ ದಯಾಸಿಂಧು ದೀನಜನರ ಬಂಧು ಧ್ಯಾನಿಪ ಭಕುತರ ಪ್ರಾಣಪದಕನೆ ರಂಗ ಪ ತೊಳಲಿಬಳಲುವ ಮಾನರಕ್ಷಿಸು ಜಾನಕೀಶ ಅ.ಪ ಎಷ್ಟುಪರಿ ಅನೃತವನಾಡಿದೆ ಈ ಹೊಟ್ಟೆಗಾಗಿ ಕೆಟ್ಟ ಕೃತ್ಯಮಾಡಿ ನಾ ದಣಿದೆ ಇ ನ್ನೆಷ್ಟುದಿನ ಈ ದುಷ್ಟ ಬವಣೆ ಎನಗೆ ಸ್ಥಿರವಿದೇ ಭ್ರಷ್ಟನಾಗುಳಿದೆ ಕೊಟ್ಟ ಒಡೆಯರು ಬಿಡದೆ ಕಟ್ಟಿಕಾಡ್ವರು ನಿಲ್ಲಗೊಡದೆ ಇಷ್ಟ ಸತಿಸುತರ್ಹೊಟ್ಟೆಗಿಲ್ಲೆಂದಟ್ಟಿ ಬಡಿವರು ಬಿಟ್ಟುಬಿಡದೆ ಬಿಟ್ಟಿದುಡಿದೆಷ್ಟು ಬಳಲಲಿ ಸೃಷ್ಟಿಗೀಶ ದಯಾದೃಷ್ಟಿಯಿಂ ನೋಡೋ ಕೃಷ್ಣ 1 ಮೋಸಹೋದೆ ಬಲು ಭ್ರಮಿಸದ್ದನು ಭ್ರಮಿಸಿ ತುಸು ಕರುಣವಿಲ್ಲದೆ ಘಾಸಿಯಾದೆ ಮಾತೆಪಿತರ ಮನ ನೋಯ್ಸಿ ವ್ಯಸನಕೂಪದಿ ವಾಸಮಾಡಿದೆ ಕಾಸುಹಣಬಯಸಿ ಅಧಮಸುಖನೆನೆಸಿ ಆಸೆÀಯೆಂಬುವ ಪಾಶ ಎನ್ನನು ನಾಶಮಾಡಿತು ಮುಸುರೆಯನು ಕಟ್ಟಿ ಭಾಷೆ ಕೆಡಿಸಿ ದೋಷಕೆಳಸಿತು ದೋಷ ಗಣಿಸದೆ ಶ್ರೀನಿವಾಸ ಜಗದೀಶ ಕೇಶ 2 ಪಾಪಲೋಪನೆ ಶ್ರೀಶ ಶ್ರೀರಾಮ ಕೃಪೆಯಿಂದ ನೋಡೊ ಪಾಪಿಯಿವನೆಂದು ಮರೆಯದಿರು ಪ್ರೇಮ ಹೇ ಪರಮನೆನ್ನಯ ಪಾಪರಾಶಿಯ ಕಳೆದುಕೊಡಲಿ ಕ್ಷೇಮ ಹೇ ಪರಬ್ರಹ್ಮ ಸ್ಥಾಪಿಸೆನ್ನಯ ಉದರಕಮಲದಿ ಶ್ರೀಪತಿಯೆ ನಿಮ್ಮ ನಾಮ ಅಮೃತ ತಾಪಬಿಡಿಸದೆ ಗಜವ ಸಲಹಿದೆ ಶಾಪದಿಂ ಪೊರೆದಂಬರೀಷನ ದ್ರುಪದನುಜಳ ಮಾನಕಾಯ್ದಾಪತ್ತು ಬಾಂಧವ ಭಕ್ತವತ್ಸಲ ದೇವ 3
--------------
ರಾಮದಾಸರು
ನೀನೆ ರಕ್ಷಿಸೋ ಎನ್ನನು ಕೃಪೆಮಾಡಿ ಜ್ಞಾನ ಮೂರುತಿ ಗುರುವರನೆ ದಿಗಂಬರ ಪ ಕಾಲ ಹಿಡುದು ಬೇಡಿ ಕೊಂಡುಪದೇಶವ ಕೇಳಿಹೆ ನಾನು ದಿಗಂಬರ ಮೂರ್ತಿಯೆ 1 ವಿಲಾಸದಿ ಜಗವೆ ಚಿದಂಬರನೆಂದು ಮೂರ್ತಿ 2 ಈ ಧರೆಯ ಜನರನು ಪವಿತ್ರಿ ಕರಿಪ ಪುಣ್ಯಪುರುಷರೆಂಬುದನು ಬಲ್ಲವರೆ ಬಲ್ಲರು ಮೂಢ ಮೂರ್ತಿ 3 ಕಣ್ಣಾರೆ ಕಂಡೆ ನಿಂದಿನ ದಿನವೆನ್ನ ಪುಣ್ಯೋದಯದಲಿ ನಿಮ್ಮ ದರುಶನವೆನಗೆ ಸಂಪೂರ್ಣವಾಯಿತು ಕೃತಕೃತ್ಯನಾದೆನು ಮೂರ್ತಿ 4 ನಂಬಿದೆ ನಿಮ್ಮ ಪಾದಾಂಬುಜವನು ಕರುಣಾಂಬುಧಿ ಕಾಯೊ ಕಮಲ ಮಿತ್ರತೇಜ ಸುಖಾಂಬುಧಿ ರೂಪ ನಿರಂಜನಗುರುವೆ ಸೂನು ಮೂರ್ತಿ 5
--------------
ಕವಿ ಪರಮದೇವದಾಸರು
ನೀನೇ ಕಾಪಾಡಬೇಕು ನಿರುತವು ಬಿಡದೆಯ- ಜ್ಞಾನಾಬ್ಧಿಯ ದಾಟಿಸು ಸೀ- ಕಮಲ ಭೃಂಗ ಶುಭಾಂಗ 1 ಸುಗ್ರೀವನ ಮಂತ್ರಿವರ ದ- ಶಗ್ರೀವನ ಗುದ್ದಿದವನೆ ಶತ್ರುನಿಕರವಂ ಶೀಘ್ರದಿ ಗೆಲುವಂದದಲಿಯ- ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2 ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ ಪಿರಿಯರು ಪೇಳಿದ ಪರಿಯಲಿ ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3 ಹೊರಗಿನ ಶತ್ರುಗಳಂ ವಾ- ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ ದ್ಯರ ಗೆಲುವುದಕೆ ಶಾಂತಿಯೆ ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4 ಕತ್ತಿಯಲಿ ಕಡಿದೆರೆರಡಾ- ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ ನೆತ್ತಿಮೊದಲು ಪಾದವರಿಗು ಕತ್ತರಿಸಿದರೀತಿಯಹುದು ಕಾಯೈ ಹನುಮ 5 ಪರಧನ ಪರಾಕಾಮಿನಿಯರಿ ಕೊರಳೊಳರಿವೆಂಬ ರಜ್ಜುವಿಂದಲಿ ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6 ಸಂಗವು ನಿತ್ಯಾಹ್ನೀಕಕೆ ಭಂಗವು ಬರುತಿಹುದು ಸದ್ವಿಷಯವಾದರದೆ ಬಂಗಾರವು ರತ್ನವು ತಾ ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7 ನವವಿಧ ಭಕ್ತಿಯ ಕೊಡು ರಾ- ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ ತವಕದಲಿ ಪಾಲಿಸುತಲಿ ನಿ- ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8 ತಾನನುದಿನದಿ ಬರುವ ಕಷ್ಟಗಳನು ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9
--------------
ಗುರುರಾಮವಿಠಲ
ನೀನೇ ಗತಿಯೆನಗಿನ್ನು ದೀನನಾದೆನು ಬಹಳ ನೀನಲ್ಲದಾರು ಬಳಿಕಾ ದೇವಾಏನು ಸಾಧನವುಂಟು ಶ್ರುತ್ಯರ್ಥಗೋಚರವೆ ಧ್ಯಾನಧಾರಣೆ ದೂರವು ದೇವಾ ಪಕಾಣದೇ ನಿನ್ನಂಘ್ರಿಕಮಲವನು ಭವವೆಂಬಕಾನನಕೆ ಗುರಿಯಾದೆನು ದೇವಾಪ್ರಾಣರಕ್ಷಕರಿಲ್ಲದತಿ ಕಷ್ಟಕೊಳಗಾದಏಣ ಕುಣಕನೊಲಾದೆನು ದೇವಾಏನೆಂಬೆ ಮೂಢತ್ವವೇ ಮೌಲ್ಯವೆನಗಾಯ್ತುಜ್ಞಾನ ದೊರಕೊಂಬುದೆಂತು ದೇವಾಜ್ಞಾನವಿಲ್ಲದೆ ಬಂಧ ಪರಿಹರಿಸದೆಂದೀಗಮಾನಸದಿ ಮರಗುತಿಹೆನು ದೇವಾ 1ದುರಿತಕೋಟಿಗಳ ಜನ್ಮಂಗಳಲಿ ಮಾಡಿದರೆದೊರಕಿತದರಿಂದ ಜಡವು ದೇವಾಪರಿಪರಿಯ ಕರ್ಮಗಳು ಜನ್ಮಗಳ ಕೊಡುವದಕೆತರತರದಿ ಕರವಿಡಿದಿವೆ ದೇವಾಗುರಿಯಾದೆನೀ ಪರಿಯ ಕರ್ಮಶರಧಿಯ ತೆರೆಗೆಪರಿಹರವ ಕಾಣೆನಿದಕೆ ದೇವಾಪರಮ ಪಾವನವಾದ ದುರಿತಹರ ನಾಮಕ್ಕೆಕರಗದೋ ನನ್ನ ಕರ್ಮ ದೇವಾ 2ಲೋಕದೊಳಗಿಹ ಪಾತಕರು ತಾವು ಜೊತೆಯಾಗಿಬೇಕೆಂದು ಪಾತಕವನು ದೇವಾಜೋಕೆಯಲಿ ಛಲವಿಡಿದು ಪಾಪರಾಶಿಯ ಮಾಡೆಸಾಕೆ ನಾಮದ ಸೋಂಕಿಗೆ ದೇವಾನೂಕುವುದು ನಿಷ್ಕøತಿಗೆ ಮಲತ ಪಾಪವ ನಾಮಬೇಕೆ ನೆರವೆಂಬುದದಕೆ ದೇವಾಯಾಕೆ ನಾನೊಬ್ಬ ಮಾಡಿದ ಪಾಪರಾಶಿಯನುನೂಕದಿಹ ಬಗೆುದೇನು ದೇವಾ 3ದುರಿತವೆನಗಿಲ್ಲೆಂದು ಸ್ಥಿರಬುದ್ಧಿುಂದೊಮ್ಮೆುರುತಿಹೆನು ಧೈರ್ಯವಿಡಿದು ದೇವಾಅರಿವು ಸಿಕ್ಕದೆ ಮರವೆ ಮುಂದಾಗಿ ನಿಂದಿರಲುಮರುಗಿ ಮತ್ತೊಮ್ಮೆ ಮನದಿ ದೇವಾಅರಿವೆಂತು ಸಿಕ್ಕುವದು ದುರಿತಭರಿತನಿಗೆಂದುಸ್ಥಿರಬುದ್ಧಿ ನಿಲ್ಲದಿಹುದು ದೇವಾಉರುಳುವುದು ಮನವೆಲ್ಲಿ ಪರಿವುತಿಹೆ ನಾನಲ್ಲಿಸ್ಥಿರವೆಂದಿಗೆನಗಪ್ಪುದು ದೇವಾ 4ಏನಾದಡೇನಘವು ಬಹಳವಾಗಿಹುದಿದಕೆಹೀನಬುದ್ಧಿಯೆ ಸಾಕ್ಷಿಯು ದೇವಾನಾನಿನಿತು ದೋಯಾದಡದೇನು ದೋಗಳನೀನೈಸೆ ರಕ್ಷಿಸುವನು ದೇವಾಭಾನುವಿನ ಮುಂಭಾಗದಲಿ ತಿಮಿರ ತಾ ನಿಂದುಏನಾಗಬಲ್ಲುದೈ ದೇವಾದೀನತನವಳಿವಂತೆ ಜ್ಞಾನವನು ಬಳಿಕಿತ್ತುಆನತನ ನೀ ರಕ್ಷಿಸು ದೇವಾ 5ಕಾಲ ಬಂದರೆ ಮೋಕ್ಷ ತಾನೆ ದೊರಕುವದೆಂದುಮೇಲಾಗಿ ಶ್ರುತಿ ನುಡಿಯಲು ದೇವಾಕಾಲವೆಂಬೀ ನದಿಗೆ ಕಡೆುಲ್ಲ ಮೋಕ್ಷಕ್ಕೆಕಾಲ ತಾ ಬಹು ದೂರವು ದೇವಾಕಾಲಕರ್ಮಗಳೆಂಬ ನೇಮವನೆ ದೃಢವಿಡಿಯೆಕಾಲವೇ ಕಲ್ಪಿತವದು ದೇವಾಲೀಲೆುಂ ನಿರ್ಮಿಸಿದ ಸಂಸಾರ ಭಂಜನೆಗೆಕಾಲವದು ನಿನ್ನ ಕೃಪೆಯು ದೇವಾ 6ನನ್ನ ನಂಬಿದವರ್ಗೆ ಸಂಸಾರಗೋಷ್ಪದವುಚೆನ್ನಾಗಿ ನಂಬಿಯೆಂದು ದೇವಾನಿನ್ನ ನುಡಿುಂದ ಗೀತೆಯಲಂದು ಬೋಧಿಸಿದೆಧನ್ಯನಾದನು ಪಾರ್ಥನು ದೇವಾಉನ್ನತದ ಯೋಗಾದಿ ಸಾಧನದಿ ಪರಿಹರವೆನಿನ್ನ ಕೃಪೆಯೇ ಮುಖ್ಯವು ದೇವಾನಿನ್ನ ನಂಬಿದೆನು ತಿರುಪತಿಯ ವೆಂಕಟರಮಣಧನ್ಯ ಧನ್ಯನು ಧನ್ಯನೂ ದೇವಾ 7ಕಂ|| ಬುಧವಾರದರ್ಚನೆಯನಿದಮುದದಿಂ ಸ್ವೀಕರಿಸಿ ನನ್ನ ಮೊರೆಯಂ ಕೇಳ್ದಾಬುಧ ಸಂಗವನಿತ್ತು ನಿನ್ನಪದಸೇವಕನೆನಿಪುದೆಂದು ವೆಂಕಟರಮಣಾಓಂ ಕಾಳೀಯ ಫಣಾಮಾಣಿಕ್ಯರಂಜಿತ ಶ್ರೀಪದಾಂಬುಜಾಯ ನಮಃ
--------------
ತಿಮ್ಮಪ್ಪದಾಸರು
ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1 ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2 ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3 ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4 ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5 ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6 ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7 ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8 ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9 ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10 ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಜಾಕ್ಷ ರಾಮ ಲೋಕಾಭಿರಾಮ ಪ ನೀರದನಿಭಶ್ಯಾಮ ನಿತ್ಯಮಂಗಳ ನಾಮ ಅ.ಪ. ನಿನ್ನ ಬಿಟ್ಟು ನಾನು ಅನಾಥನು ಸನ್ನುತ ಗುಣರನ್ನ ಸತ್ಕೀರ್ತಿ ಸಂಪನ್ನ 1 ದೇಶಕೊಡೆಯ ನೀನು ದಾಸ ನಿನಗೆ ನಾನು ಕೌಸಲ್ಯವರಪುತ್ರ ಕೋಮಲ ಶುಭಗಾತ್ರÀ 2 ನಿನ್ನ ಸನ್ನಿಧಿವಾಸ ಪುಣ್ಯಫಲವಿಶೇಷ ಘನ್ನ ಕರಿಗಿರೀಶ ಗಂಭೀರ ಗುಣಭೂಷ 3
--------------
ವರಾವಾಣಿರಾಮರಾಯದಾಸರು
ನೀರಜಾಕ್ಷೇರೆಲ್ಲ ಬಂದು ಮಾರಜನಕಗೆ ಆರತಿ ಎತ್ತಿರೇ ನಾರಿಮಣಿ ಶ್ರೀ ರುಕ್ಮಿಣಿಮಣಿಗೆ ಪ ವೇದವನು ಕದ್ದ ಖಳನ ಬೇಧಿಸಿದವಗೆ ಆದರದಿಂದ ಮಂದರವೆಂಬೋ ಭೂಧರ ತಂದವಗೆ 1 ಕುಂಭಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆ ಕಂಭದಿ ಬಂದು ದನುಜ ಡಿಂಭನ ಕಾಯ್ದ ನೃಹರಿಗೆ 2 ಭೂಮಿ ಬೇಡಿದವನಿಗೆ ದುಷ್ಟ ಭೂಮಿಪ ಹರನಿಗೆ ಕಾಮಿನಿಚೋರನ ಶಿರವ ತರಿದ ಸ್ವಾಮಿ ರಾಮಗೆ 3 ಪಾಂಡುಸುತರ ಸಲಹಿ ಖಳರ ದಂಡಿಸಿದವಗೆ ಚಂಡತ್ರಿಪುರರ ಹೆಂಡರ ವ್ರತವ ಖಂಡನೆ ಮಾಳ್ಪಗೆ 4 ದುರುಳ ನೃಪರ ತರಿದ ಕಲ್ಕಿಗೆ ವರದ ನಾಮಗಿರಿ ಶ್ರೀಹರಿಯ ಚರಣಕಮಲಕೆ 5
--------------
ವಿದ್ಯಾರತ್ನಾಕರತೀರ್ಥರು
ನೀರಿನಿಂದಲೆ ಸರ್ವಫಲ ಬಾಹೋದು ನೀರಜಾಕ್ಷನ ಸೇವೆ ಮಾಳ್ಪ ಸುಜನರಿಗೆ ಪ ನೀರಿಲ್ಲದಲೆ ಯಾವ ಸಾಧನವು ನಡೆಯದು ನೀರಿಲ್ಲದಲÉ ಯಾಗ ತಪಸ್ಸು ನಿಲ್ಲುವದು ನೀರಿಲ್ಲದಲೆ ಸ್ನಾನ ಆಚಾರಹೀನವು ನೀರಿಲ್ಲದಲೆ ದೇವತಾರ್ಚನೆಯು ಇಲ್ಲವು 1 ನೀರೆಂದರೆ ಬರಿಯ ಜಡವಾದ ನೀರಲ್ಲ ನೀರಜಾಕ್ಷನು ಜಲದಿ ವಾಸವಾಗಿಹನು ವಾರಿಜಾಸನ ಮುಖ್ಯ ಸುರರೆಲ್ಲ ಹರುಷದಲಿ ನೀರಮಧ್ಯದೊಳಿರುವ ಹರಿಯಧ್ಯಾನಿಪರೆಲ್ಲ2 ಉದಯಕಾಲದಿ ಮುಖವ ತೊಳೆಯೆ ಜಲವಿರಬೇಕು ಮಧುಸೂದನನ ಮನೆಯ ಸಾರಿಸಲು ಜಲಬೇಕು ಹೃದಯ ಶುದ್ಧದಿ ಸ್ನಾನ ಮಾಡೆ ಜಲವಿರಬೇಕು ಮುದದಿ ಮಡಿಯುಡುವುದಕೆ ಉದಕವಿರಬೇಕು3 ಮೃತ್ತಿಕಾಶೌಚಕ್ಕೆ ಅಗತ್ಯಜಲವಿರಬೇಕು ನಿತ್ಯ ಗೋಸೇವೆಗೆ ಉದಕಬೇಕು ಮತ್ತೆ ಶ್ರೀ ತುಳಸಿಗೆರೆಯಲು ಉದಕವಿರಬೇಕು ಮತ್ತೆ ಹರಿಪೂಜೆಗಗ್ರೋದಕವು ಬೇಕು4 ಸಚ್ಚಿದಾನಂದನ ಅಭಿಷೇಕಕ್ಕೆ ಜಲಬೇಕು ಮತ್ತೆ ಪಾಕವು ಮಾಡೆ ಜಲವುಬೇಕು ನಿತ್ಯ ತೃಪ್ತನ ನೈವೇದ್ಯಕ್ಕೆ ಜಲವು ಬೇಕು ಅರ್ತಿಯಿಂದ ಅತಿಥಿ ಪೂಜೆಗೆ ಉದಕಬೇಕು 5 ಪಾದ ತೊಳಿಬೇಕು ಮತ್ತೆ ಅವರಿಗೆ ಸ್ನಾನಕಣಿ ಮಾಡಬೇಕು ಸುತ್ತ ಬೆಳೆÀಗಳಿಗೆಲ್ಲ ಮತ್ತೆ ನೀರಿರಬೇಕು ಸತ್ಯ ಮೂರುತಿ ಪಾದದಂಗುಷ್ಟದಲಿ ಜನಿಸಿದ6 ನಿತ್ಯ ಎರೆಯೆ ನೀರಿರಬೇಕು ಕುಸುಮ ಪುಷ್ಪದ ಗಿಡಕೆ ನೀರುಬೇಕು ವಸುದೇವಸುತನ ತೆಪ್ಪೋತ್ಸವಕೆ ಜಲಬೇಕು ಎಸೆವ ಕದಲಾರತಿಗೆ ಉದಕಬೇಕು 7 ನೀರಿನೊಳು ಹಾವಿನ ಮೇಲೆ ಮಲಗಿದ ಹರಿಯ ನಾಭಿನಾಳದ ತುದಿಯಲಿರುವ ಕಮಲದಲಿ ನೀರಜಾಸನನ ಪಡೆದಿರುವ ಮಹಿಮೆಯ ಕೇಳಿ ನೀರಿನಲಿ ಹರಿಯ ಅವತಾರ ರೂಪಗಳುಂಟು8 ನೀರಿನೊಳು ವಾರುಣಿಯಪತಿಯ ಶಯ್ಯದೊಳಿಹನು ನೀರಿನೊಳು ಮುಳುಗಿ ವೇದವ ತಂದನು ನೀರಿನೊಳು ಮುಳುಗಿ ಭಾರವ ಪೊತ್ತು ನಿಂತನು ನೀರಜಾಕ್ಷನು ನಾರಬೇರ ಮೆದ್ದಿಹನು 9 ನೀರಜೋದ್ಭವಪಿತನು ಕ್ರೂರರೂಪವ ತಾಳ್ದ ನೀರೆ ಅದಿತಿಯ ಪುತ್ರನಾಗಿ ನಿಂತ ನೀರಜಾಕ್ಷನು ಪರಶುವಿಡಿದು ಸಂಚರಿಸಿದನು ನೀರೆಗೋಸುಗ ಸಾಗರಕÉ ಸೇತುವೆಯ ಕಟ್ಟಿದನು10 ನೀರಿನೊಳು ಗಜದ ಶಾಪವ ಕಳೆದು ಪೊರೆದನು ನೀರೆ ದ್ರೌಪದಿಯ ಅಭಿಮಾನವನು ಕಾಯ್ದ ನೀರ ಮಧ್ಯದಿ ದ್ವಾರಕಾಪುರವ ರಚಿಸಿದನು ನೀರಜಾಕ್ಷಿಯರ ಕೂಡಿ ನೀರೊಳಗೆ ಆಡಿದನು 11 ಕಮಲ ಜಲದಲ್ಲಿಹುದು ಕಮಲನಾಭ ವಿಠ್ಠಲ ಜಲದೊಳೋಲ್ಯಾಡುವ ಶ್ರಮವ ಪರಿಹರಿಪ ಚಂದ್ರನು ಜಲದಿ ಪುಟ್ಟಿಹನು ಕಾಮಧೇನು ಐರಾವತವು ಪುಟ್ಟಿದ ಜಲವಯ್ಯ 12
--------------
ನಿಡಗುರುಕಿ ಜೀವೂಬಾಯಿ