ಒಟ್ಟು 1848 ಕಡೆಗಳಲ್ಲಿ , 109 ದಾಸರು , 1575 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇ ಸುಳಿದವನಿಂದು|ನೀರೇ ತಂದುವನ ತೋರೇ ಪ ನೀಲಮೇಘದ ಕಾಂತಿಮೈಯ್ಯಾ|ನೋಡೇಮದನಯ್ಯಾ| ಕಾಲಲುಂದಿಗೆ ಹೆಜ್ಜೆಘಿಲು ಘಲುಕೆನುವಾ| ಮೇಲು ಪಿತಾಂಬರ ಝಳ ಝಳಿಸುವ ನವನಾರೇ 1 ಮೆರೆವ ವಡ್ಯಾಣ ಘಂಟೆಸಿರಿಯಾ|ಕವಿಹೊಗಳಲರಿಯಾ| ಬೆರಳುಂಗುರ ಕಡಗ ಕೇಯೂರಾ| ಕೌಸ್ತುಭ ಮಾಲೆಯ ಹೊರವನಾರೇ 2 ಕಡೆಗಣ್ಣನೋಟ ಪದುಮದೆಲಿಯೋ|ಮೋಹನದಾಬಲೆಯಾ| ಕುಂಡಲ ಹೊಳೆವ ಕಪೋಲಾ| ಇಡಿದನೇ ನಗೆಯ ಸುನಾಶಿಕ ಸರಳವನಾರೇ 3 ಮೃಗದ ಪಣಿಯಾಲುಂಗುರ ಗುರುಳೋ|ಕಾವನಸರಳೋ| ಝಗಝಗಿಸುವ ರನ್ನ ಮುಕುಟದ ಚೆಲುವಾ| ಬಗೆ ಬಗೆ ಸೊಬಗಿನ ನವರಸಗರೆವನಾರೇ 4 ತರುಣೀ ಮುನ್ನಿನಸುಕೃತಬಂದು|ವದಗಿ ತಾ ಇಂದು| ಗುರು ಮಹಿಪತಿ ಪ್ರಭು ಚರಣವದೋರಿ|ಮರುಳೆನ್ನಾ ಮಾಡಿದ ದೀನೋದ್ಧಾರಿವನಾರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಆರೋಗಣೆಯ ಮಾಡೋ ಮುಕುಂದಾ ಪ ಆರೋಗಣೆಯ ಮಾಡೋ ವಾರಿಜರಮಣಾ ಸಾರಿದವರಿಗೆ ಭಯನಿವಾಕರದಿ 1 ಪೊಂಬ್ಹರಿವಾಣದಿರನ್ನ ಬಟ್ಟಲುಗಳು ಅಂಬುಜಾನನಸಿರಿ ಲಕುಮಿಯವೇರಿಸಿ 2 ಶಾಲ್ಯೋದನಸೂಪಘೃತ ಪರಿಪರಿಯಾ ಶಾಲ್ಯಾಶಾಖಂಗಳಸವಿಯನೆ ಕೊಳುತಾ3 ಪಂಚಭಕ್ಷವು ಕೆನೆಹಾಲು ಸೀಖರಿಣಿಯಾ ಮುಂಚೆ ಪಾಯಸಪರಿಪರಿಶರ್ಕರದಲಿ4 ದದ್ಯೋದನದಲುಪಗಾಯಿಸ್ವಾದಿಸುತ ದಮನ ಕಲ್ಪಿತರುವೆಲ್ಲಾ5 ಪತ್ರಸುಮನತೋಯ ಭಕ್ತರು ಕೊಟ್ಟು ದರ್ಥಲಿ ಕೊಂಬ ದಯಾಳುತನದಲಿ6 ತಂದೆ ಮಹಿಪತಿ ನಂದನ ಸಾರಥಿ ಎಂದೆಂದು ಸ್ಮರಣೆ ಗೊದಗಿ ಮುದ್ದು ಮುಖದಿ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಆಲದೆಲೆಯ ಮ್ಯಾಲೆ ಮಲಗಿದ್ದಾದಿಕೇಶವ(ನ) ನೋಡ ಬನ್ನಿರಾಲದೆಲೆಯ ಮ್ಯಾಲೆ ಕೃಷ್ಣ ಬಾಲರೂಪ ಧರಿಸಿ ಅಂಧಕಾರ ಪ್ರಳಯ ಜಲದ ಒಳಗೊಂದಾಲದೆಲೆÉಯ ಮ್ಯಾಲೆ ಕೃಷ್ಣ ಪ ಪ್ರಳಯ ಕಾಲದಲ್ಲೆ ಹರಿಯು ಸರ್ವ ಜೀವರನೆಲ್ಲ ತನ್ನ ಉದರದೊಳಗಿಂಬಿಟ್ಟುಕೊಂಡು ಛಲವ ಮಾಡದಂತೆ ರಂಗ ಬೆರಳು ಬಾಯೊಳಗಿಟ್ಟು ಚೀಪುತ ಹರಳು ಮಾಣಿಕ್ಯದರಳೆಲೆ ಮಾಗಾಯಿ ಕೌಸ್ತುಭ ಕಟಿಸೂತ್ರ ಕರುಣ ಸಾಗರಗಿನ್ನು ವರ ವೈಕುಂಠವಾಸ ಒಂದಾಲದೆಲೆಯ ಮ್ಯಾಲೆ 1 ಅಷ್ಟು ಜೀವರನೆಲ್ಲ ತನ್ನ ಹೊಟ್ಟೆಯೊಳಗಿಂ ಬಿಟ್ಟು ಕೊಂಡು ಸೃಷ್ಟಿ ಲಯಕೆ ಕರ್ತನಾದ ಶ್ರೇಷ್ಠ ಸುಂದರಾಂಗ ತನ್ಹೆಬ್ಬೆಟ್ಟು ಬಾಯೊಳ ಗಿಟ್ಟು ಚೀಪುತ ವಕ್ಷಸ್ಥಳದಿ ಹೆಚ್ಚಿನ ಶ್ರೀವತ್ಸ ತೋರುತ ಉತ್ತಮ ವೈಜ(ಯಂ)ತಿ ವಜ್ರ ಕೆತ್ತಿದ ಕಿರೀಟ ಲಕ್ಷ್ಮೀಚಿತ್ತ ಚೋರನಾದ ಪರಮಾತ್ಮ ಪರಮ ಹರುಷದಿಂ ದ್ವೊಂದಾಲದೆಲೆಯ ಮ್ಯಾಲೆ 2 ಗಂಧ ಕಸ್ತೂರಿ ಪರಿಮಳ ಸುಗಂಧವಾದ ಕುಸುಮ ಕೆಲದಿ ಹೊಂದಿ ಕಟ್ಟಿದ ತುಳಸಿಮಾಲಿಕಿಂದೆ ಪರಮ ಶೋಭಿತವಾದ ಬಂದಿ ಕಂಕಣ ಬಾಹುಪ್ಪುರಿಗಳು ದುಂಡುಮುತ್ತಿನ ಕೂದಲ ಕಾಂತಿ ಕದಪಿಲೆಸೆಯಲು ಅಂದಿಗೆ ಪಾಗಡ ಗೆಜ್ಜೆ ಚೆಂದವಾದ ನಾದಗಳಿಂದ ಇಂದುಕೋಟಿ ರವಿಯ ತೇಜ ಮಂದಹಾಸ ಮುಖದ ಹರಿ ಒಂದಾಲದೆಲೆಯ ಮ್ಯಾಲೆ 3 ಥಳಥಳಿಸುವಂತ್ಹೊಳೆವೊ ಚಕ್ರ ಧವಳವರಣ ಶಂಖ ಕರದಿ ಹವಳದುಟಿಯು ಹರಿಯ ಪದ್ಮ ದಳಗಳಂತಕ್ಷಿಗಳ ಚೆಲುವ ಅರುಣನಂತೆ ಚರಣ ಕರದಲ್ಲಿ ಒತ್ತುವೊ ಸಿರಿಯ ಪರಮಪುರುಷ ನೋಡಿ ಸರಸದಿ ಜರ ಪೀತಾಂಬರ ನಾಭಿಕಮಲಕ್ಕೊಲೆವೊ ಒಡ್ಯಾಣವನೆ ಇಟ್ಟು ಹಲವು ಸೂರ್ಯರಂತೆ ಲಕ್ಷ್ಮೀರಮಣ ಶ್ಯಾಮವರಣ ಹರಿ ಒಂದಾಲದೆಲೆಯ ಮ್ಯಾಲೆ 4 ಅಳಕÀನಂದನ ಪಿತನು ತಾ ಘ- ನೋದಕÀದೊಳು ತಾ ರಂಗ ಚಾಮರ ಎಣಿಕಿಲ್ಲದೆ ಮಾ ಣಿಕ್ಯದಾಭರಣ ಫಣಿಪಮಂಚಶಯನ ನೀಲ ಕನಕರತ್ನ ಬಿಗಿದ್ಹಾಸಿಕೆಯಲಿ ಪಂಚಶರನ ಜನಕ ಜಗವ ನಿಟ್ಟು ತನ್ನಲ್ಲಿ ಅಳಕಗೂದಲು ಚೆಂಡಿಕೆಲ್ಲೆ ಅರಳುಮಲ್ಲಿಗೆ ಸುತ್ತಿಹರಿಗೆ ಝಳಕು ಮಿಂಚಿನಂತೆ ಜಗಕÉ ಬೆಳಕಿನÀಲಿ ಭೀಮೇಶ ಕೃ ಷ್ಣೊಂದಾಲದೆಲೆಯ ಮ್ಯಾಲೆ 5
--------------
ಹರಪನಹಳ್ಳಿಭೀಮವ್ವ
ಆವ ಜನುಮದ ಪಾಪ ವೊದಗಿತೋ ಎನಗಿಂದು | ದೇವ ಗಂಗೆಯ ನೋಡಿದೆ ಪ ದೇವಕೀಸುತ ಒಲಿದು ಕರೆತಂದು ಎನ್ನನು | ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ- ತ್ತರ ಪೇಳಿಸಾಗಿದ್ದನೊ | ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ | ಸರಿಯೆಂದು ಸ್ಥಾಪಿಸಿದೆನೊ | ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ | ಮರಳಿ ಪೂರ್ತಿಸಿ ಇದ್ದೆನೊ | ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ | ಪರಿಹರಿಸಿ ಬಂದಿದ್ದನೋ ಏನೋ 1 ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ ಕರ್ಮ ಮಾಡಿದ್ದೆನೊ | ಜನಪತಿಗಳ ಮಾತು ಕೇಳದೆ ಧರ್ಮಕ್ಕೆ | ಅನುಕೂಲನಾಗಿದ್ದೆನೊ | ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ | ಉಣಿಸಿ ಸುಖಪಡಿಸಿದ್ದೆನೊ | ವನಗಳನು ಕಡಿದು ದೇವಾಲಯವ ಕಟ್ಟಿಸಿ | ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ 2 ಉತ್ತಮನು ಮನೆಗೆ ಬಂದಾಗ ಮಾಡುವಂಥ | ಸತ್ಕರ್ಮ ತೊರೆದಿದ್ದೆನೋ | ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ | ಹತ್ತೆಂಟು ಕಟ್ಟಿಸಿದೆನೊ | ದತ್ತಾಪಹಾರವನು ಮಾಡಿ ಅದರಿಂದನಗ್ನಿ- ಹೋತ್ರವನು ಸಾಧಿಸೆದೆನೊ | ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ- ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ3
--------------
ವಿಜಯದಾಸ
ಆವ ಜನ್ಮದ ಪುಣ್ಯ ಫಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ಪ ಭವರಾಸಿಗಳು ಹಾರಿ ಬಯಲಾದವು| ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ | ಪರಿ ಶುದ್ಧನಾದೆ ಗುರು ಕರುಣದಲೀ1 ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ | ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು | ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ 2 ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ | ಸೋಜಿಗವು ಬಲು ತೀವ್ರದಲಿ 3 ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ | ಅಕ್ಷಯವಾಗುವದು ಇದ್ದ ಪುಣ್ಯ | ಮಾಳ್ಪ ಮನಸು ಪುಟ್ಟಿತು ನೋಡಾ4 ಓದನವು ಉದರದಲಿ ತುಂಬಲಾಕ್ಷಣದಲ್ಲಿ | ಜ್ಞಾನ ಬಂದೊದಗುವದು ಗುರು ಪೂರ್ಣ | ಬೋಧರಾ ಮತದಲ್ಲಿ ಲೋಲಾಡುವಾನಂದಾ 5 ದಧಿ ತಕ್ರ ಮೊದಲಾದ ವ್ಯಂಜನ ಉಣಲು | ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ | ರತಿಪತಿಪಿತನ ಪದಸೇವೆಯೊಳಗಿಪ್ಪವೊ 6 ಕೃಷ್ಣ ಸಂದರುಶನ ಮೃಷ್ಟಾನ ಭೋಜನ | ಇಷ್ಟ ಸುಖ ಸೌಖ್ಯಕರ ಮತ್ತಾವÀಲ್ಲಿ ಕಾಣೆ | ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ 7
--------------
ವಿಜಯದಾಸ
ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ಆವ ಬಗೆಯಲಾದರು ಕರುಣದಿ ದೇವ ಕೃಪೆದೋರೋ ಪ. ಭಾವ ಭಕುತಿಯಲಿ ತೋಯಜಾಕ್ಷನೆ ನಿನ್ನ ಕಾವ ಕರುಣಿಯೆಂದು ಭಾವಿಸಿ ಕರೆವೆನು ಅ.ಪ. ವಿಪ್ರರಾಗಮವಾದರೂ ಸರಿ ಕ್ಷಿಪ್ರದೊಳವನ ಸಂಗದಿ ಅಪ್ಪಾ ನೀ ನೆರೆಯುವ ಸಪ್ಪಳಾ ತೋರುತ ಬಪ್ಪೆ ಎಂದೆನೆವೆನು ಅಪ್ಪ ತಿಮ್ಮಪ್ಪನೇ 1 ಮಕ್ಕಳೊಳಗಾದರೊ ನಿನ್ನಯ ಆಟ ಪಕ್ಕನೆ ತೋರೋ ದೇವನೆ ಚಿಕ್ಕ ಕೃಷ್ಣನೆ ನಿನ್ನ ರೂಪವ ನೆನೆಯುತ ಪರಿ 2 ಮನೆಗೆಲಸದೊಳು ನಿನ್ನಯ ಧ್ಯಾನ ತನು ಮನ ನೆನೆಯುತಲಿ ದಿನದಿನದಲಿ ಸುಖ ದುಃಖದೊಳು ಮನಸಿಜಪಿತ ನಿನ್ನ ನೆನಸುವ ಪರಿಯಲಿ 3 ಹಿರಿಯರಾಗಮವಾಗಲು ನಾನವರೊಳು ಕಿರಿಯಳಂದದಿ ಇರುವ ಪರಿ ಮನವನಿತ್ತೂ ಪೊರೆ ಕರುಣಾಳು ಕರಣ ಶುದ್ಧಳಾ ಮಾಡಿ ಕರೆ ನಿನ್ನ ಬಳಿಗೆ 4 ಕನಸಲಾದರೂ ನಿನ್ನ ಮನಸಿಜಪಿತನೆ ಮನನ ಮಾಡುತ ನೆನೆಯುವ ಘನಕೃಪೆಯಿತ್ತು ಎನ್ನ ಜನುಮ ಸಾರ್ಥಕಗೊಳೆ ಈತನು ನಿನಗರ್ಪಿಸಿಹೆ ದಿನಮಣಿ ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕೀರಮಣ ಪೇಳು ರಘುಪತಿಯೆ ಪ ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ 1 ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆಮೃಢ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆದೃಢವಾಗಿ ಹೇಳೆನಗೆ ದೇವಕೀ ಸುತನೆ2 ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ 3 ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆಹನುಮ ನಿನ್ನ ಬಂಟನಾದನೆಂಬ ಸಿರಿಯೆಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆಅನುಮಾನ ಮಾಡದೆ ಪೇಳೊ ನರಹರಿಯೆ 4 ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿಪಂಥವೇ ನಿನಗಿಚಿದು ಆವ ನಡತೆಕಂತುಪಿತ ಕಾಗಿನೆಲೆಯಾದಿಕೇಶವ ರಂಗಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ5ಚಿ
--------------
ಕನಕದಾಸ
ಆವಪರಿಯಿಂದಲಾದರೂ ರಾಮನಾಮವನು ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು ಅತಿಶಯದಿ ಹರಿಯ ಧ್ಯಾನವ ಮರೆಯದೆ ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ 1 ದೋಷಹಿತನಾದ ದಶಶಿರನ ಒಡಹುಟ್ಟಿ ಕೇಶವನ ಧ್ಯಾನವನು ಮರೆಯದಿರಲು ಸಾಸಿರ ರಾಮಕಥೆಯುಳ್ಳನಕಾ ವಿ- ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ 2 ಗಂಡರೈವರು ಸುತ್ತ ಕೆಲದಲಿರಲಾ ಸತಿಯ ಲಂಡ ದುಶ್ಶಾಸನ ಹಿಡಿದೆಳೆಯುತಿರಲು ಪುಂಡರೀಕಾಂಬಕನೆ ಸಲಹೆನಲು ಕರೆಯಲು ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ 3 ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ ಕಾದ ಸತಿಯ ಆಜ್ಞೆಯ ನಡೆಸಲು ಪಿತನು ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ 4 ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ ಪೂರ್ವಸಂಚಿತ ಪಾಪಶೇಷವಿರಲು ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ 5
--------------
ಕವಿ ಲಕ್ಷ್ಮೀಶ
ಆವಭೂತ ಬಡಕೊಂಡಿತೆಲೊ ನಿನಗೆ ದೇವ ಕೇಶವನಂಘ್ರಿಧ್ಯಾಸವೆ ಮರೆದಿ ಪ ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ ಅತಿ ವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ ಅತಿ ಸಿರಿಯಭೂತ ನಿನ್ನ ಮತಿಗೆಡಿಸಿತೇನೆಲೊ ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ 1 ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ ಕೀಳು ಸಂಸಾರದ ಮಹ ಗೋಳು ಭೂತ್ಹಿಡೀತೇ ಸಾಲಿಗರ ಭಯಭೂತ ನಾಲಿಗೆಯ ಸೆಳೆಯಿತೇ ನೀಲಶಾಮನ ಭಜನಫಲವೆ ಮರೆತೆಲ್ಲೊ 2 ಪೋದವಯ ಪೋಯಿತು ಆದದ್ದಾಗ್ಹೋಯಿತು ಪಾದದಾಸರಕೂಡಿ ಶೋಧಮಾಡಿನ್ನು ಭೂಧವ ಶ್ರೀರಾಮನ ಪಾದವನು ನಂಬಿ ಭವ ಬಾಧೆ ಗೆಲಿದಿನ್ನು ಮುಕ್ತಿ ಹಾದಿಯ ಕಾಣೊ 3
--------------
ರಾಮದಾಸರು
ಆವರೀತಿಲಿ ಎನ್ನ ಕಾವದೇವರು ನೀನಿ ನ್ನಾವ ದೈವದ ಬಲವು ನಾನೊಲ್ಲೆ ಸ್ವಾಮಿ ಪ ಆವರೀತಿಲಿ ಬಿಡದೆ ನೀ ಎನ್ನ ಕಾಯೊ ಭಕ್ತರ ಜೀವದರಸನೆ ಭಾವಜಪಿತ ನಿನ್ನ ಬಿಟ್ಟ ನ್ನ್ಯಾವ ದೇವರು ಇಲ್ಲ ಎನಗೆ ಅ.ಪ ಕುಸುಮಾಕ್ಷ ತವಧ್ಯಾನ ನಿಶಿದಿವದೊಳು ಬಿಡದೆ ಹಸನಾಗಿ ಭಜಿಪಂಥ ಕುಶಲಮತಿ ನೀಡಿ ಪುಸಿಯ ಸಂಸಾರದ್ವೆಸನವಳುಕಿಸಿ ಅಸಮ ಸಂತಸಸುಖವ ಕರುಣಿಸಿ ಅಸುವುಪೋದರು ಪುಸಿಯನಾಡದ ಸುಶೀಲ ಮನವಿತ್ತು ಪೋಷಿಸಭವ 1 ಬಿಡದೆಕಾಡುವ ಎನ್ನ ಕಡು ಜಡಮತಿಯನ್ನು ಕಡಿದೊಡನೆ ನುಡಿಯಂತೆ ನಡೆಯನೆನ್ನೊಡಲಿಗೆ ಗಡನೆ ಸ್ಥಿರಮಾಡಿ ಎಡರು ತೊಡರಿನ ಜಡರಿನೊಳಗಿಂದ ಕಡೆಗೆ ನಿಲ್ಲಿಸಿ ಒಡೆಯ ನಿನ್ನ ಅಡಿದೃಢವನಿತ್ತು ಪಿಡಿದು ನೀ ಎನ್ನ ಬಿಡದೆ ಸಲಹೊ 2 ರತಿಪತಿಪಿತ ನೀನೆ ಗತಿಯೆಂಬ ಸಿದ್ಧಾಂತ ನುತಿಯ ಮಂತ್ರವನೆನಗೆ ಹಿತದಿಂ ಪಾಲಿಸು ಸತತ ನಿನ್ನನು ಸ್ತುತಿಪ ಭಕ್ತರ ಹಿತದ ದರುಶನ ಪ್ರಥಮವಿತ್ತೆನ್ನ ಗತಿಸದಂಥ ನಿಜಸ್ಥಿತಿಯ ಸಂಪದ ವಿತ್ತು ರಕ್ಷಿಸೋ ಶ್ರೀರಾಮ ಪ್ರಭುವೆ 3
--------------
ರಾಮದಾಸರು
ಆವಾಹನಆವಾಹನೋಪಚಾರವು ನಿನಗೆ ವಿಭುವೆಆವರಣರಹಿತ ಪರಿಪೂರ್ಣ ಚಿತ್ಸುಖವೆ ಪಹೃದಯಕಮಲದಿ ನೆನೆದು ಪೂಜಿಸುವೆನೆಂದು ಮತ್ತೊದಗಿ ಬಿಂಬದೊಳಿಳುಹಿಯರ್ಚಿಸುವೆನೆಂದುಇದಿರಾಗಿ ನಿಲ್ಲು ಸ್ಥಾಪಿತನಾಗು ಹತ್ತಿರಿರುಹದುಳುನಾಗೆಂದೆನೀ ತಪ್ಪನೆಣಿಸದೆ ಸಲಹು 1ಅಣುಮಹತ್ಪರಿಪೂರ್ಣ ವಾಸುದೇವನೆ ನಿನ್ನಗಣಿಸಿ ನೆಲೆಗಾಣವೀ ಶ್ರುತಿಗಳೆಂಬುದನುಮನದೊಳೆಣಿಸುತಲಿಹೆನು ಸರ್ವರೊಳು ಸಮಬುದ್ಧಿಯನು ಪಾಲಿಸೆಂದು ಬೇಡುವೆನು ಜಗದೀಶಾ 2ಪರಿಪೂರ್ಣನೆಂಬ ಭಾವದಿ ಮನವು ನಿಲದಾಗಿ ಗುರಿಗೈದು ನಿನ್ನ ಮಂಗಳ ಮೂರುತಿಯನುಪರಿಪರಿಯಲುಪಚರಿಸಿ ಸ್ಥಿರಗೈವೆನೀ ಮನವತಿರುಪತಿಯೆ ಸ್ಥಿರವಾಸ ಶ್ರೀ ವೆಂಕಟೇಶಾ 3ಓಂ ಯಮುನಾವೇಗಸಂಹಾರಿಣೇ ನಮಃ
--------------
ತಿಮ್ಮಪ್ಪದಾಸರು
ಆವುದೊಳ್ಳೆಯದೊ ನಿನ್ನಂಗ - ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ 1 ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ2 ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ 3 ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ 4 ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ 5
--------------
ಕನಕದಾಸ