ಒಟ್ಟು 290 ಕಡೆಗಳಲ್ಲಿ , 61 ದಾಸರು , 247 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವರಾಗಬಾರದೇನೆಲೇ ದೆವ್ವಿನಂಥ....... ದೇವರಾಗಬಾರದೇನೆಲೇ ಪ ದೇವರಾಗಬಾರದೇಕೋದೇವನ ಪಾದವನಂಬಿ ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು ಬಂಧಕ್ಕೀಡಾಗುವುದಿದೇನೆಲೆ 1 ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ ನಾಮ ಭಜಿಸಿ 2 ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು....... ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ 3
--------------
ರಾಮದಾಸರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಧೀರತನವ ಪಾಲಿಸೋ ಪ ಭವ ತೀರಕ್ಕೆನ್ನನು ಸೇರಿಸೋ ಅ.ಪ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠರಕುಲದಿಬಹು ಪುಣ್ಯದಿ ಇನ್ನು ಪುನರಪಿ ಜನ್ಮವಿಲ್ಲ ನಿನ್ನ ಕಿಂಕರನನ್ನು ಸೇರಿಸಿ ಪಾಲಿಸಿ ||ನಾರಾ|| 1 ಅಷ್ಟಯೋನಿಗಳಲ್ಲಿ ಹುಟ್ಟಿಸಾಯುತ ಬಲು ಮೊರೆಯಿಟ್ಟು ಬೇಡಲಿ ಎಳ್ಳಿನಷ್ಟು ಕಾರುಣ್ಯವು ಪುಟ್ಟದೇನೋ ಸೃಷ್ಟಿಗೈಯುವೇ ಪುಷ್ಠಿಗೈಯುವೆ ಕಟ್ಟಕಡೆಯೊಳು ನಷ್ಟಪಡಿಸುವೆ ಸೃಷ್ಟಿಯೊಳು ಜೊತೆಗಟ್ಟಿನೋಡುವ ದಿಟ್ಟರಾರೈ ವಿಷ್ಟಮೂರುತಿ2 ಧರೆಯ ರಾಜ್ಯವನೊಲ್ಲೆ ಸಿರಿಯಸಂಪದ ವೊಲ್ಲೆ ಸುರರು ಭೋಗಿಪ ಸುರಪುರವಾನೊಲ್ಲೆ ನಿನ್ನ ಹೊರತಾದಕೈವಲ್ಯ ಸ್ಥಿರವೊಲ್ಲೆನು ನಾನಾ ತೆರದಿ ಭಕ್ತಿಯೊಳಿರಲಿ ಯನ್ನಯ ಕರಣವೃತ್ತಿಯು ಪರಮ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ನನಗೆ ಹೊತ್ತು ಹೋಗದೆ ನಾನೆಯೆ ಆಡುವೆನನಗೆ ಹೊತ್ತು ಹೋಗದೆ ಪ ಈಶನ ಅವತಾರವಾಗಿ ಜೀವನ ಅವತಾರವಾಗಿಈಶನಾಗಿ ಜೀವ ಬೊಂಬೆಯನಾಡುವೆ1 ಜೀವರ ಹುಟ್ಟಿಸಿಯೆ ಜೀವರ ಬೆಳೆಸಿಯೇಜೀವರಲಿ ಲಯಿಸುವೆ ತ್ರೈಮೂರ್ತಿಯಾಗುವೆ 2 ಎಚ್ಚರವನೆ ಕೊಟ್ಟು ಎಚ್ಚರವನೆ ಕೊಟ್ಟುಎಚ್ಚರವನೆ ತಿಳುಹಿ ನಿಚ್ಚಳ ಚಿದಾನಂದನನು ಮಾಡುವೆ3
--------------
ಚಿದಾನಂದ ಅವಧೂತರು
ನಮ್ಮ ನಿಮ್ಮಗೊಂದಾದ ಮಾತು ಬ್ರಹ್ಮಾದಿಗಳು ಹೋದರು ಸೋತು ಒಮ್ಮನಾದರೆ ತಿಳಿವದಂತು 1 ಬಿಟ್ಟು ಕೊಡೊ ನಿನ್ನ ಬಾಜಿ ಗಂಟುಹಾಕಿಹೆ ಬಲು ಗಜಿಬಿಜಿ ಮುಟ್ಟಲಾರದು ಮೊನೆ ಸಣ್ಣ ಸೂಜಿ ಗುಟ್ಟು ಹೇಳೊ ಸದ್ಗುರು ದೇವಾಜಿ 2 ನಮ್ಮ ನಿಮ್ಮಳಗ್ಯಾಕೆ ತೊಡಕು ಇಮ್ಮನಾದರೆ ಹುಟ್ಟಿತು ಒಡಕು ಹಮ್ಮು ಎನ್ನೊಳಗಿಲ್ಲ ನೀ ಹುಡುಕು ಸುಮ್ಮನ್ಯಾಕಿದು ಶ್ರಮೆಯ ತಿಡುಕು 3 ಗುರು ಹೇಳಿದ ಮಾತಿಗೆ ಮುಟ್ಟಿ ತೋರಿ ಕೊಡಬೇಕು ನೀನೆ ಗಟ್ಟಿ ಅರಿತ ಮ್ಯಾಲೆ ಮಿಸುಕನು ತುಟ್ಟಿ ಖರೆ ಮಾಡಿಕೊ ಜಗಜಟ್ಟಿ 4 ಒಂದು ಮಾತು ಎಂಬುದು ಬಲ್ಲಿ ಸಂದ ಸಂದೇಹ್ಯಾರಿಸೊ ನೀ ಇಲ್ಲಿ ಕಂದ ಮಹಿಪತಿ ಮನದಲ್ಲಿ ಚಂದವಾಗಿರೊ ನೀನೆವೆ ಅಲ್ಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನರನಾಗ್ಹುಟ್ಟಿದ್ದೀ ಮರುಳೆ ಅರಿವು ಎಲ್ಲಿಟ್ಟಿದ್ದೀ ಪ ವರವೇದಸ್ಮøತಿಶಾಸ್ತ್ರರಿದುನೋಡದೆ ವರವರ ಒದರುವಿ ಮರೆವಿನೊಳಗೆ ಬಿದ್ದು ಅ.ಪ ಮನಗಳು ಸ್ಥಿರಮಾಡಿ ಬರಿದ್ವಾಕ್ಕೆಣೆಸುವಿ ಸಟ್ಟೆಮಾಡಿ ಮನಕೆ ಬಂದಂತಾಡಿ ನರಕದ ಕುಣಿಗೆ ಬೀಳುವಿ ಖೋಡಿ ಜನನಮರಣವೆಂಬ ಕುಣಿಕೆಯೊಳಗೆ ಸಿಕ್ಕು ಘನತರ ನೋಯ್ವುವ ನೆನೆಸಿಕೊಳ್ಳದೆ 1 ಕುಜನ ಸಂಗೀಡ್ಯಾಡೊ ಸುಮನದಿ ಸುಜನರೊಡಗೂಡೊ ನಿಜಮತಿಯೊಳು ಕೂಡೊ ನಿಶ್ಚಲದಿ ನಿಜವನ್ನು ಹುಡಿಕ್ಯಾಡೊ ಗಜಿಬಿಜಿಯೊಳು ಬಿದ್ದು ಗಿಜಿಗಿಜಿಯಾಗದೆ ತ್ಯಜಿಸೆಲೋ ಸಂಶಯ ನಿಜವು ತಿಳಿಯುತಿದೆ 2 ಪಕ್ಷಪಾತವನ್ನು ನೀಗಿ ಜ್ಞಾನಚಕ್ಷು ತೆರೆದು ಇನ್ನು ಸಾಕ್ಷಿಯಾಗಿ ನೀನು ಮಹದಪರೋಕ್ಷವನ್ನು ಕಾಣು ಶಿಕ್ಷೆ ಪಡೆಯದೆ ಮಹಮೋಕ್ಷ ಪಡೆಯೊ ಜಗ ದ್ರಕ್ಷ ಶ್ರೀರಾಮನ ಸೂಕ್ಷ್ಮದಿ ತಿಳಿದು 3
--------------
ರಾಮದಾಸರು
ನಾಗಶಯನನು ನಿನಗಾಗಿಯೆ ಬಂದಿಹೆÉ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ ಪ. ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋಅ.ಪ. ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ 1 ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ 2 ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ 3 ಬಾಲನ ತಾಪವ ಕೋಪದಿ ತರಿದ ನಾರಸಿಂಹನೆ ಭಾಮೆ ನಾ ನಾರÀಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ 4 ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿ[ಯೊ]ಬ್ಬಳು ಬೇಕೇ ರಂಗ ದಾಸಿ[ಯೊ]ಬ್ಬಳು ಬೇಕೇ 5 ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆಯನಳಿದ ಘಾತಕ ನಿನಗೆ ದೂತಿಯೊಬ್ಬಳು ಬೇಕೇ ರಂಗ ದೂತಿಯೊಬ್ಬಳು ಬೇಕೇ 6 ದಶರಥನಂದನ ದಶಮುಖಭಂಜನ ಪಶುಪತಿವಂದ್ಯನೆ ಭಾಮೆ ನಾ ಪಶುಪತಿ ವಂದ್ಯನೆ ಭಾಮೆ ಹಸನಾದ ಏಕಪತ್ನೀವ್ರತದವಗೆ ಸುದತಿಯೊಬ್ಬಳು ಬೇಕೇ ರಂಗ ಸುದತಿಯೊಬ್ಬಳು ಬೇಕೇ 7 ಹದಿನಾರು ಸಾಸಿರ ನೂರೆಂಟು ಸುದತೇರ ಬದಿಯಲಿಟ್ಟವನೆ ಭಾಮೆ ನಾ ಬದಿಯಲಿಟ್ಟವನೆ ಭಾಮೆ ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ ವದನ ಮುಚ್ಚಿಕೊಂಡು ಪೋಗೈ 8 ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ ಮುಗ್ಧರ ಮಾಡಿದೆ ಭಾಮೆ ನಾ ಮುಗ್ಧರ ಮಾಡಿದೆ ಭಾಮೆ ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ ವೃದ್ಧಳು ನಾನಲ್ಲ ಪೋಗೈ ರಂಗ ವೃದ್ಧಳು ನಾನಲ್ಲ ಪೋಗೈ 9 ವರ ತುರಗವನೇರಿ ಧರೆಯೆಲ್ಲ ಚರಿಸಿದ ದೊರೆವರ ನಾನೆ ಭಾಮೆ ಚರಿಸಿದ ದೊರೆವರ ನಾನೆ ತÀುರಗದ ಚಾಕರಿಯೊ[ಳಗಿರುವವನಿಗೆ] ತರುಣಿಯ ಭೋಗವು ಬೇಕೇ ರಂಗ ತರುಣಿಯ ಭೋಗವು ಬೇಕೇ 10 ಸರುವ ಪ್ರಾಣಿಗಳ ಉದರದೊಳಿಂಬಿಟ್ಟು ಶರಧಿಯೊಳ್ಮಲಗಿದವ ಭಾಮೆ ನಾ ಶರಧಿಯೊಳ್ಮಲಗಿದವ ಭಾಮೆ ದೊರೆ ಹಯವದನ ಚರಣಕ್ಕೆರಗುತ ತೆರೆದಳು ಬಾಗಿಲ ಭಾಮೆ ಆಗ ತೆರೆದಳು ಬಾಗಿಲ ಭಾಮೆ 11
--------------
ವಾದಿರಾಜ
ನಾಟಕ ರಂಗದಲಿ ನಟಶಿರೋಮಣಿಯೊಬ್ಬ ಪಟುತನದಿ ವಿಧವಿಧನ ನಟನೆಗಳ ತೋರುವನು ಪ ಅಘಟನಾಘಟನ ಶಕ್ತನ ಕಪಟನಾಟಕವು ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು ಮುಖ್ಯತಾರೆಯು ಲೋಕ ಜನನಿ ಲಕುಮಿ ಇಕ್ಕಿದನು ಗೋರೂಪ ಚತುರಾನನನು ಮುದದಿ ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ 1 ಸುಖಸಾರನನು ಪಡೆದು ಧನ್ಯಳಾದ ಯಶೋದೆ ಬಕುಳೆಯೆ ತಾನಾದಳೀ ನಾಟಕದಲಿ ಅಕಳಂಕ ಮಹಿಮನನು ಅಗಲದಿದ್ದ ಸತಿಯು ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು 2 ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ ಕಿರಿದ ತಾ ಹಲ್ಲುಗಳ ವರಹನಲ್ಲಿ ಹರನ ತಾತನು ತಾನು ಸ್ಮರನ ಬಾಣದಿ ನೊಂದ ಸುರಮೋಹಿನಿಯು ಇಂಥ ಕೊರವಂಜಿಯಾದಳು3 ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು 4 ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ನಾರಾಯಣ--------ಜಾಯನಮ: ಪ ಸರ್ವವಾರಿಜೋದ್ಭವ ಹರಿ ನೀ ಪೊತ್ತ ಶಿರಲೋಕ ಎರಡೇಳಾರೊಳಾನೇಕ ದ್ವಾದಶಾದಿ-- ಶಾಸನ ಆದಿದಿಕ್ಪಾಲರಾ ಬೇಕಾದ ಹಾಗೆ ಪತಿ ¨್ರಹ್ಮನೀನೆ 1 ಜಗದೊಳು ಹುಟ್ಟಿದ ಪ್ರಾಣಿಗಳಿಗೆ ಎಲ್ಲ ಬಗೆ ಬಗೆ ಸಂಹಾರ ಕರ್ತನಾಗಿ ಅಗಣಿತ ಮಹಿಮ ತಾಮಸಯುಕ್ತನಾದಂಥ ಮೃಗ ಚರ್ಮಾಂಬರಧರ ಮಹಾದೇವನೀನೆ 2 ಸಕಲ ಚರಾಚರ ಸಲಹುತಲಿರುವಂಥ ನಿಕರಾದಿ ಸಾತ್ವಿಕ ನಿಜಧರ್ಮಾದಿ ಅಕಲಂಕ ಮಹಿಮ ಶ್ರೀಹರಿ 'ಹೊನ್ನ ವಿಠ್ಠಲ’ ಸಕಲ ಸ್ವತಂತ್ರನಾದ ಸರ್ವೋತ್ತಮ ನೀನೆ 3
--------------
ಹೆನ್ನೆರಂಗದಾಸರು
ನಾರಾಯಣನಿನ್ನಪಾರಾಯಣಗೈವ ಧೀರತನವಪಾಲಿಸೋ ಪ ತೀರಕೆನ್ನನು ಸೇರಿಸೋ ಅ.ಪ ಜನ್ಮದಿ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠಕುಲದಿ ಬಹುಪುಣ್ಯದಿ ಘನ್ನ ಮಹಿಮನೆ ನಿನ್ನ ಸೇವೆಯೊ ಳುನ್ನತದ ರತಿಯನ್ನು ಪಾಲಿಸಿ 1 ಅಷ್ಟಯೋನಿಗಳಲ್ಲಿ ಹುಟ್ಟಿ ಸಾಯುತ ಬಲು ಕೆಟ್ಟಕರ್ಮವ ಮಾಡಿ ಕಷ್ಟಪಟ್ಟು ಎಷ್ಟು ನಿನಗೆ ಮೊರೆಯಿಟ್ಟು ಬೇಡಲು ಎಳ್ಳಿ ನಷ್ಟು ಕಾರುಣ್ಯವು ಪುಟ್ಟದೇನೋ ಕಟ್ಟಕಡೆಯೊಳು ನಷ್ಟಪಡಿಸುವೆ ದಿಟ್ಟರಾರೈ ಇಷ್ಟ ಮೂರುತಿ 2 ಪರಮೇಷ್ಟಿ ಪುರದೊಳಗಿರಲಾನೊಲ್ಲೆನು ನಿನ್ನ ನಿರುತ ನಿನ್ನಯ ಚರಿತೆಯಲಿ ಮನ ವಿರಲಿ ನಾನಾತೆರದ ಭಕ್ತಿಯೊಳು ಪರಮ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ನಿಜದ ನೆನಪು ನಿನಗಿರಲಿ ಮತ್ತೆ ಅಜನ ಲಿಖಿತದಿ ಬಂದುದೆಲ್ಲಾ ಬರಲಿ ಪ ಹುಟ್ಟಿಬಹಾಗ ತಂದಿಲ್ಲಾ ಶಿವ ಕೊಟ್ಟ ಸರ್ವಸ್ವ ಸಂಗಡ ಬಹಾದಲಾ ಬಟ್ಟೆ ಬೈಲಾಗುವುದೆಲ್ಲಾ ಮನ ಮುಟ್ಟಿ ಭಜಿಸೊ ಗುರುನಾಥನ ಸೊಲ್ಲಾ ನಿಜದ 1 ಸುಖದ ಸುದ್ದಿಯ ನಂಬಬೇಡಾ ಬಹು ದುಃಖ ತಂದೊಡ್ಡುವುದಕೆ ತಡಮಾಡಾ ಸುಖ ದುಃಖ ತನದೆಂದು ನೋಡಾ ನಿತ್ಯ ಮುಕುತಿ ಮಾರ್ಗದಲಿ ಚಿತ್ತವ ನೀಡೋ ಗಾಡಾ ನಿಜದ 2 ನಿನ್ನೊಳು ಶೋಧಿಸಿನೋಡು ಪ್ರ ಸನ್ನವಾಗಿಹ ಪ್ರಕಾಶದಲಿ ಲೋಲಾಡು ಭಿನ್ನಭಾವನೆಯನೀಡಾಡು ವ್ಯು ತ್ಪನ್ನ ಶ್ರೀ ಗುರುವಿಮಲಾನಂದನ ಪಾಡು ನಿಜದ 3
--------------
ಭಟಕಳ ಅಪ್ಪಯ್ಯ
ನಿದ್ರೆಮಾಡಿದ ರಂಗ ನಿದ್ರೆಮಾಡಿದ ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ಪ. ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು 1 ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು 2 ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು 3 ತÀಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು ಏಳುಮೂರು ಬಾರಿ ನೀನು ಭೂಮಿಯ ಪ್ರದಕ್ಷಣೆಮಾಡಿ 4 ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು 5 ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು 6 ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾÀಗಿ 7 ಧರೆಯೊಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ 8
--------------
ವಾದಿರಾಜ
ನಿನಗಿದು ಘನವೆ-ನಿತ್ಯಾತ್ಮಕವನಜಭವಾದಿಗಳನು ಪಾಲಿಪದೇವಪ ಸದಯನೀನಾದರೆ-ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದುವೊಂದು ತಪ್ಪುಯನ್ನದು ಎಂದು ಮುನ್ನಿಸು 2 ವಿಷದ ನೀರನು ಕುಡಿ-ದಸುವನ್ನು ಕಳಕೊಂಡ ಪಶು ಪಾಲಕರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟೆಯೊಳಗೆ ಸತ್ತು ಹುಟ್ಟಿದ ಶಿಶುವನ್ನು ಮುಟ್ಟಿ ಜೀವನವಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮ ಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ನಿನ್ನ ನೀ ತಿಳಿದು ನೋಡೊ ಪ್ರಾಣಿ ಧ್ರುವ ನಿನ್ನ ನೀ ತಿಳಿಯೊ ನೀ ಭಿನ್ನಬೇದವಳಿದು ಚೆನ್ನಾಗ್ಯನುಭವದಲಿ ಉನ್ಮನವಾಗಿ 1 ನಾನಾರು ಎಂದು ನೀ ಖೂನ ತಿಳಿದು ನೋಡೊ ಘನ ಗುರು ಕೃಪೆಯಿಂದಲಿ ತನುವಿನೊಳು 2 ಎಲ್ಲಿಂದ ಬಂದ್ಯೊ ನೀ ಎಲ್ಲಿಗ್ಹೋಗುವಿ ಮುಂದೆ ಇಲ್ಲೆವೇ ತಿಳಿದು ನೋಡೊ ಸುಲಭದಿಂದ 3 ಬಂದೆ ನಾ ತಂದೆ ನಾ ಬಂದು ಘಳಿಸಿದೆ ನಾ ಹೊಂದಿಕಿ ಹೊಲಬು ನೋಡೊ ಸಂಧಿಸಿ ಘನ 4 ನಡೆದೆ ನಾ ನುಡಿದೆ ನಾ ಹಿಡಿದೆ ನಾ ಪಡೆದೆ ನಾ ಒಡನೆ ನಿನ್ನೊಳು ನೀ ನೋಡೊ ಪಿಡಿದು ನಿಜ 5 ತಾನೇನು ತನುವೇನು ತನ್ನೊಳಗಿಹುದೇನು ಮನಮುಟ್ಟಿ ಘನವ ನೋಡೊ ಚಿನ್ನುಮಯನ 6 ಏನುಂಟು ಏನಿಲ್ಲ ಅನಿಮಿಷದಲಿ ನೋಡೊ ಘನಕ ಘನವ ಬೆರೆದು ಸನ್ಮತವಾಗಿ 7 ಮರ ಹುಟ್ಟಿ ಮರಬಿದ್ದ ತೆರನಾಗದಿರೊ ನೀನು ಎರಗೊ ಶ್ರೀಗುರುಪಾದಕ ಕರಿಗಿ ಮನ 8 ಎಡಬಲ ನೋಡದೆ ಪಿಡಿದು ಸದ್ಗುರು ಪಾದ ಬೋಧ ನೋಡಿ ನಿನ್ನೊಳು9
--------------
ಕಾಖಂಡಕಿ ಶ್ರೀ ಮಹಿಪತಿರಾಯರು