ಒಟ್ಟು 448 ಕಡೆಗಳಲ್ಲಿ , 68 ದಾಸರು , 355 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ರುಕ್ಮಿಣೀ ಕಾಂತ ಜಯ ಪಯೋನಿಧಿ ಶಾಂತ ಪ ಜಯತು ಜಯ ಭಗವಂತ ಜಯತು ಧೀಮಂತ ಅ.ಪ ಜಯ ಭಕ್ತಮಂದಾರ ಜಯ ಮೌನಿಪರಿವಾರ ಜಯತು ಜಯ ಧುರಧೀರ ಜಯತು ಸಾಕಾರಾ 1 ವಿಜಯ ಮೌಕ್ತಿಕಾಭರಣ ಜಯತು ವಿಧಿನುತಚರಣ ಜಯತು ಜಯ ಭವತರಣ ಜಯ ಶರಣಕರುಣಾ 2 ಜಯನಾದ ಸುವಿಲಾಸ ಜಯತು ಭಾಸ್ಕರ ಭಾಸ ಜಯ ಮಾಂಗಿರೀವಾಸ ಜಯ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ಜಯತು ಸೀತಾರಾಮ ರಾಮ ಚರ- ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮ ಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ- ಣಾರಿ ನೀನಲ್ಲದೆ ಯಾರಿಲ್ಲ ಗತಿ ಜಯ ರಾಮ ರಾಮ 1 ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ- ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮ ಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ- ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2 ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ- ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮ ನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ- ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3 ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ- ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮ ಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ- ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4 ಸೀತಾರಾಮ ರಾಮ ದುಷ್ಟ- ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮ ಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ- ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5 ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ- ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಸಾಧು- ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6 ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ- ಜ್ಞಾನ ಭಕ್ತಿಭಾಗ್ಯ ನೀನಿತ್ತು ಪೊರೆ ಜಯ ರಾಮ ರಾಮ ಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ- ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7 ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವ ಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಪರ- ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8 ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವ ಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮ ಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ- ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9 ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷ ಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮ ದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ- ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10 ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ- ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮ ಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ- ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11 ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ- ಸನ್ನ ನಿನ್ನ ಸ್ಮರಣೆಯನಿತ್ತು ಪೊರೆ ಜಯ ರಾಮ ರಾಮ ಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣು ಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12 ನಿತ್ಯ ನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ- ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮ ಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ- ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13 ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು- ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮ ಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ- ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14 ಸೀತಾರಾಮ ರಾಮ ವಾಯು- ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮ ಸೀತಾರಾಮ ರಾಮ ಬ್ರಹ್ಮಾ- ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ತುಪಾಕಿ ವೆಂಕಟರಮಣಾಚಾರ್ಯ
ಜಯರಾಯ ಜಯರಾಯ ದಯವಾಗೆಮಗನುದಿನ ಸುಪ್ರೀಯಾ ಪ ಧರಣಿಯೊಳಗೆ ಅವತರಿಸಿ ದಯದಿ 1 ವಿದ್ವನ್ಮಂಡಲಿ ಸದ್ವಿನುತನೆ ಪಾ ದದ್ವಯಕೆರಗುವೆ ಉದ್ಧರಿಸೆನ್ನನು 2 ವಿದ್ಯಾರಣ್ಯನಾ ವಿದ್ಯಮತದ ಕು ಸಿದ್ಧಾಂತಗಳ ಅಪದ್ಧವೆನಿಸಿದೆ 3 ಅವಿದಿತನ ಸತ್ಕವಿಗಳ ಮಧ್ಯದಿ ಸುವಿವೇಕಿಯ ಮಾಡವನಿಯೊಳೆನ್ನನು 4 ಗರುಪೂರ್ಣಪ್ರಜ್ಞರ ಸನ್ಮತವನು ಉದ್ಧರಿಸಿ ಮೆರೆದೆ ಭುಸುರವರ ವರದಾ 5 ಸಭ್ಯರ ಮಧ್ಯದೊಳಭ್ಯಧಿಕ ವರಾ ಕ್ಷೋಭ್ಯ ಮುನಿಕರಾಬ್ಜಾಭ್ಯುದಿತ ಗುರು 6 ನಿನ್ನವರವ ನಾನನ್ಯಗನಲ್ಲ ಜ ಗನ್ನಾಥವಿಠಲನೆನ್ನೊಳಗಿರಿಸೋ 7
--------------
ಜಗನ್ನಾಥದಾಸರು
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜಿಜ್ಞಾಸುವಿನ ಲಕ್ಷಣಾ ಕೇಳು ನೀಕ್ಷಣಾ ಪರಮಸುಖಾಕಾಂಕ್ಷಕನಾ ಬಾಳಿನ ವಿಷಯದಿ ಬೇಸರಗೊಳು ತಾ ವಿರತಿಯಿಂದರುವಾ ಬೋಧ ಕೇಳ್ವನಿವಾ ಚಿತ್ತದಿ ಭಕ್ತಿಭಾವನಾ ತಾಳುತ ಸಾಧನಾ ಮಾಡುತಲಿಹನಿವ ಕಾಣಾ ಆತ್ಮಾನಾತ್ಮನಿವೇಕ ವಿಚಾರ ಕೇಳುತ ತನ್ನೊಳಗÉೀ ಮಿಥ್ಯಾರೊಪಿತ ಜೀವಭಾವನನಾ ಜರÉಯುತ ಮನದೊಳಗೇ ಮಾಡುವ ಸುವಿಚಾರಾ ಇವನೆ ಧೀರ ಪರಮಸುಖಕಾಂಕ್ಷಕನಾ ವಿಷಯದಿ ಹರಿಯುವ ಮನವÀನೆಳೆÀದು ಬೋಧದೊಳಗಿರುವಾ ಮೋದ ಹೊಂದುವ ತಾ ಶ್ರೀ ಗುರುಶಂಕರನಾ ಆನಂದರೂಪನಾಬೆರೆತು ನಾ ಸುಖಿಸುವನಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಜೋ ಜೋ ಜೋ ಮಲಗೋ | ಮುಕುಂದಾ ಪ ಹಸನಾಗದು ಗೋಪಾಲ ||ಕೃಷ್ಣ|| 1 ಸೊಲ್ಲ ಲಾಲಿಸುವಿಯ ಕಂದ ||ಕೃಷ್ಣ|| 2 ತೊಟ್ಟಿಲ ತೂಗುತ ನಿಂತರೆ ಶ್ರೀದ - ವಿಠಲಾ ನಿನಗಾನಂದಾ ||ಕೃಷ್ಣ|| 3
--------------
ಶ್ರೀದವಿಠಲರು
ಜ್ಞಾನಾಮೃತ ಭುಜಿಸು ಜೀವ ಮಾನವಜನುಮದ ಗುರಿಯಿದು ಪ ಶುದ್ಧಮನದ ಪಾತ್ರೆಯಲ್ಲಿ ಸದ್ಗುರುವಿನ ಬೋಧದನ್ನ ಶುದ್ಧ ಚೈತನ್ಯಾತ್ಮ ನೀನೆ ಬದ್ಧಜೀವನಲ್ಲವೆಂಬ 1 ಶಿವರೂಪನು ಸಚ್ಚಿದಾತ್ಮ ಭವಬಂಧನವೆನ್ನೊಳಿಲ್ಲ ಆವಿನಾಶಿಯೆ ನಾನು ಎಂಬ ಸುವಿಚಾರದ ಬಾಯಿಯಿಂದ 2 ಸದ್ ರೂಪದ ಆರೋಗ್ಯ ಚಿದ್ ರೂಪದ ಪರಮ ಭಾಗ್ಯ ಆನಂದದ ನಿಧಿಯಾಗುವಿ ಬೋಧ 3
--------------
ಶಂಕರಭಟ್ಟ ಅಗ್ನಿಹೋತ್ರಿ
ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಧ್ರುವ ನೀನೆ ದಯಾನಿಧಿ ನಾನೆ ಅಪರಾಧಿ ಖೂನ ದೋರು ಹಾದಿ ಸ್ಥಾನ ನಿಜಗಾದಿ 1 ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ 2 ಹೆಳಲಾರೆ ಬಹಳ ಕೇಳೋ ನೀ ದಯಾಳ ತಾಳಿ ಎನ್ನ ತೋಳ ಬಾಳ ವಿಶ್ವಪಾಲ 3 ಸೇವೆ ಇದೆ ನಮ್ಮ ಭಾವಿಸುದು ನಿಮ್ಮ ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ 4 ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ ಕಂದ ಮಹಿಪತಿ ಗುಣ ಚಂದಮಾಡೊ ಕರುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತವರು ಮನೆಯು ನನ್ನ ಸುವಿದ್ಯಪುರಲ್ಯದೆ ಸಾವಿರಕೊಬ್ಬಗೆ ದೋರುತದೆ ಧ್ರುವ ಸಾವಿರಕೊಬ್ಬನೆ ತಾ ಸುದೇವನೆ ಬಲ್ಲ ಭಾವಿಸದಲ್ಲದೆ ತಿಳಿಯುವದಲ್ಲ ಅವಿದ್ಯಪುರ ದಾಟ, ಮಂದಾಕ್ಕಾಗಲು ಎಲ್ಲ ಆವಾಗ ತಿಳಿವುದು ಹೇಳಿದ ಸೊಲ್ಲ 1 ಸಾವಿರ ತೆನೆಯಲೊಪ್ಪುತದೆ ಒಳಕೋಟ ಠವಿಠವಿಸುತದೆ ನೋಡಿ ಮನಮುಟ್ಟಿ ಅವ್ವ ಅಪ್ಪನೇ ನಮ್ಮ ಇಹಸ್ಥಾನವು ಘಟ್ಟಿ ದೇವಾಧಿ ದೇವನೊಬ್ಬನೆ ಜಗಜಟ್ಟಿ 2 ಬಲು ಅಭೇದ್ಯಸ್ಥಳ ತಿಳಿಯದಿನ್ನೊಬ್ಬರಿಗೆ ನೆಲೆವಂತರಿಗೆ ತಾನು ತಿಳಿವದು ಬ್ಯಾಗೆ ತುಂಬಿ ಥಳಗುಟ್ಟಿ ಹೊಳವ್ಹಾಂಗೆ ಬಲಗೊಂಡು ಕೇಳಿ ಶ್ರೀಸದ್ಗುರುವಿಗೆ 3 ಅಣ್ಣನೆಂಬಾತ್ಹಾನೆ ಅನಂದದಲ್ಹಾನೆ ನೆನೆಪಿಗೊಮ್ಮೆ ಬಂದು ಸುಳವುತ್ಹಾನೆ ಕಣ್ಣೆಲಿ ಕಟ್ಯಾನೆ ತಮ್ಮನೆಂಬತ್ಹಾನೆ ಕ್ಷಣಕೊಮ್ಮೆ ಹೊಳೆವುವಾನೆ4 ಅಕ್ಕನೆಂಬಾಕಿ ತಾ ಸಖರಿ ಅಗ್ಹಾಳೆ ಅಖರದಲೆವ್ವ ಈ ಮಾತು ಕೇಳೆ ಪ್ರಖ್ಯಾತದಲಿ ಪ್ರೀತಿಮಾಡುವ ತಂಗ್ಹ್ಯಾಳೆ ಸುಖ ಸುರುತ್ಹಾಳೆ ಇರುಳು ಹಗಲು 5 ಅತ್ತಿಗೆ ನಾದುನಿ ಭಾವ ಮೈದುನರೆಲ್ಲ ಅಂತ್ಯಕವಾಗ್ಹ್ಯಾರೆ ಮನಿಯೊಳಗೆಲ್ಲ ಸುತ್ತೇಳುವ ಬಳಗ ಉತ್ತುಮರೆನಗೆಲ್ಲ ಹಿತದೋರುತಾರವ್ವ ಸರ್ವಾಪ್ತರೆಲ್ಲ 6 ಸರ್ವಾಪ್ತವೆಂಬುದು ಸರ್ವೇಶನೆ ತಾನು ಸರ್ವದಾ ಎನ್ನೊಳು ತಾ ಕಾಮಧೇನು ಪರ್ವಕಾಲದ ಬಹಳ ಏನೆಂದ್ದೇಳಲಿ ನಾನು ಸರ್ವಾರ್ಥ ಕೊಡುತ್ಹಾನೆ ಸರ್ವಾತ್ಮ ತಾನು 7 ಅವ್ವ ನಮ್ಮಪ್ಪಗೆ ಸರಿ ಇಲ್ಲ ಜಗದೊಳು ಆವ ಕಾಲಕೆ ತಾ ಇವರ ಮೇಲು ಇವರೆಂಬುದು ಒಂದೆ ಮಾತಿನ ಸ್ವಕೀಲು ಸವಿಸುಖಬಲ್ಲರು ಅನುಭವಿಗಳು 8 ತೌರಮನೆಂಬುದು ಪ್ರತ್ಯೇಕಾ ತಾನಿಲ್ಲ ಭಾವಾರ್ಥದ ಮಾತು ಕೇಳಿರೆಲ್ಲ ಅವಗುಣನೆ ಬಿಟ್ಟು ಕೇಳಿ ಸವಿಯ ಸೊಲ್ಲ ಪೂರ್ವಿಕರಿಗಿದೆ ಸಾರವೆಲ್ಲ 9 ಸುದ್ದಿ ಹೇಳಿ ಕಳುಹುಲಿಕ್ಕೆ ಈ ಸಾಧನ ಇದುವೆ ಅಯಿತು ತವರ ಮನಿ ಬುದ್ಧಿವಂತನೆಬಲ್ಲ ಲಕ್ಷಕೊಬ್ಬ ಜ್ಞಾನಿ ಸಿದ್ಧಿದರಿಡುವದು ಸದ್ಗುರು ಪ್ರಾರ್ಥನಿ 10 ಬಳಗದೊಳು ಕೂಡಿ ಒಳಿಥಾಗ್ಯಾಯಿತು ಎನಗೆ ಒಳ ಹೊರಗೆ ಸುಖ ಎದುರಿಟ್ಟತೀಗ ಕುಲಕೋಟಿ ಬಳಗ ಸದ್ಗುರು ಪಾದವ್ಯನಗೆ ಸಲಹುತಾನೆ ಸ್ವಾಮಿ ಮಹಿಪತಿಗೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು
ತಿರುಪೆಗಾರರಯ್ಯಾ ನಾವು ತಿಳಿದುಕೊಳ್ಳಿರೀ ಜೀಯಾ ನೀವು ಪ ತಿರುಪೆಗಾರರನು ತಿರಸ್ಕರಿಸದಿರಿ ತಿರುಪಿಲ್ಲದಿದ್ದರೆ ತೀರಹುದು ಅ.ಪ ತಿರುಪಿಲ್ಲವೇ ಧಗಡಿ ತಿರುಪು ವಡವೆಗಳು | ತಿರುಪುಹೂಜಿಗಳು ತಿರುಪು ಭರಣಿಗಳು | ತಿರುಪು ರಕ್ಷಣಿಯು 1 ವಾಲೆ ಏನಾಯಿತು ಅರಿತು ನೋಡದೇ ಮೂರ್ಖರಾಗದಿರೀ 2 ಗೊಣಗಬೇಡಿರಿ ನೀವೂ ಹಣವು ನಿಮಗು ನಮಗುಂಟು ವಿಚಾರಿಸೆ ಹಣವಿಲ್ಲದ ನರ ಹೆಣಕಿಂತ ಕಡಿಮೆ 3 ರಾಶಿಯೊಳೊಂದು ಹಿಡಿ | ತೆಗೆಯಲು ಹ್ರಾಸವೇನೋ ನೋಡಿ ಮೋಸವೆ ಬರುವುದು ಓಸುಜನರೇ ಕೇಳಿ 4 ನಿಮ್ಮ ದೊರೆಗಾಳು ನಮ್ಮ ಗುರುವಲ್ಲವೇ ನಿಮಗೆ ನಾವಾಳಾದರೂ ದಯೆಯಿಲ್ಲವೇ 5 ಧೀರನು ಬಹುಬಲ್ಲ ಭೋಗದಿಂದಲೆ ರೋಗ ಬರುವುದು ತ್ಯಾಗದಿಂದಲೆ ಯೋಗ ಒದಗುವುದು6 ಸತಿಗೆ ಒಡವೆಯಿಟ್ಟು | ಕಳೆಯಲು ಹಿತವೇ ನಿಮಗಷ್ಟು ಅತಿಶಯ ಭೋಗಗಳಪೇಕ್ಷಿಸುವಿರೈ 7 ಮರವೆಯೆ ಅತಿ ಕಷ್ಟ ಮರವೆಯೆ ದುಃಖವು ಮರವೆಯೆ ನರಕವು ಹರಿ ಕೃಪೆಪಡೆದು ಅರಿವು ಸಂಪಾದಿಸಿ 8 ತಿರುಕನು ಈಶ್ವರನೂ | ಇಂದ್ರಗಾಗಿ ತಿರುಪುಹಾಕಿರುವ ತ್ರಿಲೋಕಗಳಿಗೂ9
--------------
ಗುರುರಾಮವಿಠಲ
ತಿರುಮಣಿ ಧರಿಸಿದ ತೀರ್ಥರ ಕಂಡರೆ ತಿರುವಡಿಗಳಿಗೇ ಮಣಿಯುವುದು ಪ ಗುರುತರ ಶ್ರೀಪಾದತೀರ್ಥಸೇವನ ದುರಿತ ಹರವು ತಾ ಪಾವನವು ಅ.ಪ ದೇವರ ಕಡೆಯವರಿವರೆಂದೆನ್ನುತ ಕಾವನ ಕತೆಗಳ ಕೇಳುವುದು ಭಾವಿಸಿ ಭಾಗವತರ ಸಹವಾಸವು ಶ್ರೀವರನೊಲಿಯುವ ಕಾರಣವು1 ಇವರ ದರ್ಶನವು ಪುಣ್ಯಪ್ರದವು ಪವಿತ್ರರಿರುವೆಡೆ ವೈಕುಂಠ ಭುವಿಸುರಪೂಜನ ಹರಿಗಾನಂದವು ಸುವಿಮಲ ಚರಿತರು ಶುಭಕರರು 2 ಶಂಖ ಚಕ್ರಗಳ ಭುಜದಲಿ ಧರಿಸಿ ಪಂಕಜ ತುಳಸೀಮಣಿ ಕೊರಳೊಳ್ ವೇಂಕಟ ಶ್ರೀರಂಗ ವರದ ನಾರಾಯಣ ಕಿಂಕರರೈ ಜಾಜೀಶನಿಗೆ 3
--------------
ಶಾಮಶರ್ಮರು
ತಿಳಿ ಸತ್ಯರೂಪವÀ ಪರಮಾನುಭವವ ಸುವಿಚಾರದಿಂದ ಯೋಚಿಸು ಜೀವಾ ಪ ನಾ ನೀನು ಎನುವಾ ಇದು ಅದು ಎನುವ ನಾನಾತ್ಮಭಾವಾ ಪುಸಿಯಿದು ಜೀವಾ ಏನೊಂದು ಮಿಲ್ಲದೆ ತಾನುಳಿದಿರುವ ಸ್ವಾನುಭವಾತ್ಮಾ ಸತ್ಯನಾಗಿರುವ 1 ಕರ್ತೃವೆನಿಸದ ಭೋಕ್ತøವೆನಿಸದ ಅನಿಸಿಕೆಯಳಿದಾ ನಿತ್ಯನಿರಂಜನ ಮಾಯಾವಿಲಾಸದಿ ತೋರುವನೀಪರಿ ಕನಸಿನೊಲಿದುವೇ ಪುಸಿ ಈ ಜಗವು 2 ಅವಿಚಾರಗಳಿಗೆ ಬೇರಾಗಿ ತೋರೇ ಸುವಿಚಾರದಿಂ ನೋಡೇ ತಿಳಿವುದು ಇದುವೇ ಅದೇ ಪರಮಾತ್ಮನೇ ನೀನಿರುವಿಯಿದೋ ಗುರು ಶಂಕರರಾರ್ಯನ ವರಬೋಧವಿದೋ 3
--------------
ಶಂಕರಭಟ್ಟ ಅಗ್ನಿಹೋತ್ರಿ