ಒಟ್ಟು 1244 ಕಡೆಗಳಲ್ಲಿ , 101 ದಾಸರು , 1055 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗ ಭಾರತೀಶನು ತನ್ನ ಪ್ರೀತಿಸುವರ | ಮನದ ಮಾತು ಸಲಿಸಿ ಮುಕುತಿ ಈವ ಪ ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ | ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ || ಮುರಿದು ಧರೆಗೆ ವರಿಸಿದಾತಾ ಅಪ ಧುರದೊಳಕ್ಷನ ಹರಣವಳಿದು | ಗುರುವರ್ಹತ್ತುಶಿರನ ಜರಿದು || ನಗರ ಉರುಪಿ ಮರಳಿ | ಹರಿಯ ಚರಣಕ್ಕೆರಗಿದಾತಾ 1 ಕುರುನಿಕರ ಕರುಬಿ ಬೊ-| ಬ್ಬಿರಿದು ನಿಂದುರವಣಿಸಿ ಎದುರಾ-|| ದರಿಗಳ ಶಿರ ತರಿದು ತಳೋ-| ದರಿಯ ಹರುಷಬಡಿಸಿದಾತಾ2 ಕರಿಯ ತೆರದಿ ದುಷ್ಟ ಸಂಕರನು | ತಿರುಗಲವನ ಮುರಿದು ಮತ್ತೆ || ಮರುತಮತದ ಬಿರುದನೆತ್ತಿ - |ಪರನೆ ವಿಜಯವಿಠ್ಠಲನೆಂದಾ 3
--------------
ವಿಜಯದಾಸ
ಈತನೆಂಥಮಹಿಮೆ ನೊಡಿರೆ ರಂಗಯ್ಯ ರಂಗ ಈತನೆಂಥ ಮಹಿಮ ನೋಡಿರೆ ಪ ಈತನೆಂಥ ಮಹಿಮ ಓರ್ವ ಮಾತೆಯುದರದಿ ಜನಿಸಿ ಮತ್ತೊಬ್ಬ ಮಾತೆಕೈಯಿಂದ ಬೆಳೆದು ಗೋಕುಲ ನಾಥ ನವನೀತಚೋರನೆನಿಸಿದ ಅ.ಪ ಕಾಳಕೂಟ ವಿಷವ ಕುಡಿಸಿದ ಆ ಮಾಯದೈತ್ಯಳ ಕಾಲನ ಆಲಯಕೆ ಕಳುಹಿದ ಮಡುವನ್ನು ಧುಮುಕಿ ಕಾಳಿ ಹೆಡೆಮೆಟ್ಟಿ ನಾಟ್ಯವಾಡಿದ ಗೋವುಗಳ ಕಾಯ್ದ ಬಾಲನೆಂದೆತ್ತೊಯ್ಯಲು ಬಂದ ಖೂಳ ಶಕಟನ ಸೀಳಿ ಒಗೆದು ಕಾಳಗದಿ ಧೇನುಕನ ತುಳಿದು ಬಾಲಲೀಲೆಯ ತೋರಿ ಮೆರೆದ 1 ಪರಿಪರಿಯ ಮಾಯದಿಂ ಕಾಡ್ವ ಭೂಭಾರಿಯಾಗಿ ಧರಣಿಜನರತಿಶಯದಿ ಬಳಲಿಸುವ ಪರಮಕಂಟಕ ದುರುಳ ಕಂಸನೆಂಬುವನ ಶಿರವ ತರಿದ ಮಾಧವ ಧರಣಿತಾಪವನ್ನೆ ಕಳೆದು ಸೆರೆಯ ಬಿಡಿಸಿದ ಜನನಿ ಜನಕರ ಮಹಿಮೆ ತೋರ್ದ 2 ಗೊಲ್ಲ ಬಾಲರ ಸಮೂಹವನು ನೆರೆಸಿ ಮನೆಯಲ್ಲಿ ಯಾರು ಇಲ್ಲದ ಸಮಯವನೆ ಸಾಧಿಸಿ ಮೆಲ್ಲಮೆಲ್ಲನೆ ಎಲ್ಲ ಬಾಲರ ಒಳಗೆ ತಾ ಹೊಗಿಸಿ ಪಾಲ್ಮೊಸರು ಸವಿಸಿ ಕಳ್ಳ ಕೃಷ್ಣೆಮ್ಮ ನಿಲ್ಲಗೊಡನೆಂದು ಗೊಲ್ಲಸ್ತ್ರೀಯರು ಗುಲ್ಲುಮಾಡಲು ನಿಲ್ಲದೋಡಿ ತಾ ಪುಲ್ಲನಾಭನು ಎಲ್ಲಿ ನೋಡಿದರಲ್ಲೆ ತೋರುವ 3 ಶಿಶುವು ಈತನೆಂದು ಮುದ್ದಿಸುವಾಗ ಕುಶಲದಿಂದಪ್ಪಿ ಅಧರ ಸವಿಯುವ ಎಂಥ ಶಿಶುವನೆ ಹಸುಮಗಾಗೆಳೆದೊಯ್ದು ರಮಿಸುವ ಮಿಸುಗಗೊಡನಿವ ಕಸಿದು ಭಾಂಡ ದೆಸೆದೆಸೆಗೆ ಎಳೆದು ವಸುಧೆಯೊಳು ತನ್ನ ಅಸಮ ಮಹಿಮೆಯ ಪಸರಿಸಿದ ಹರಿ4 ಮಣ್ಣು ತಿಂದು ತಾಯ ಬಳಿಗೈದಕಂದ ಏನಿದು ಮಣ್ಣು ತಿನ್ವರೆ ಉಗುಳೆಂದೆಶೋದೆ ಕಣ್ಣು ತಿರುವÀಲು ತನ್ನ ಬಾಯೊಳ್ಬ್ರಹಾಂಡ ತೋರಿದ ಭಿನ್ನವಿಲ್ಲದ ತನ್ನ ತಾನು ಅರಿಯದೆಶೋದಿನ್ನು ಈರೂಪವಡಗಿಸೆನ್ನಲು ಸಣ್ಣಮಗುವಾಗಿ ಚಿಣುಫಣುವಿಡಿದುನ್ನ - ತೋನ್ನತ ಆಟವಾಡಿದ 5 ಪರಿಪರಿಯಲಿ ಕಾಡ್ವ ಕೃಷ್ಣನ್ನ ವರದೇವಿ ತಡೆಯದೆ ಸರವೆನಡುವಿಗ್ಹಚ್ಚಿ ತರಳನ್ನ ಸರಸರನೆ ಬಿಗಿದು ಒರಳಿಗ್ಹಾಕಿ ಕಟ್ಟಿ ಮುರಹರನ ಮರೆಯಾಗಲಾಕ್ಷಣ ಊರುತಂಬೆಗಾಲು ಊರಬೀದಿಲಿ ಒರಳನೆಳೆಯುತ ಹೊರಗೆ ಹೋಗಿ ತರಗುಳಿರಕಿಲದೊರಳ ಸೇರಿಸಿ ಮುರಿದು ಶಾಪದಿಂ ಮುಕ್ತಮಾಡಿದ 6 ಪುಂಡತನದಿಂ ಸೊಕ್ಕಿಮರೆಯುವ ಆ ರುಗ್ಮನಿಡಿಕೈಯ ಬಂಡಿಗಾಲಿಗೆ ಕಟ್ಟಿ ಶ್ರೀಧರ ರುಗ್ಮಿಣಿಯನ್ನು ಕೊಂಡು ಗೋಕುಲ ಸೇರಿ ವೈಭವ ನಡೆಸಿ ಯಾದವ ರ್ಹಿಂಡಲಿಗೂಡಿಸಿ ಪುಂಡದೇವಿಯುದ್ದಂಡತನದಿ ಕೈ ಕೊಂಡ ಕಲ್ಯಾಣ ಗಂಡುಗಲಿಗಳ ಗಂಡನೆನಿಸಿದ ಹಿಂಡುದೇವರ ಸಾರ್ವಭೌಮ 7 ಚರಣದಾಸರ ಒಡೆಯ ತಾನಾದ ವರ್ಣಿಸಲಳವಲ್ಲ ಚರಣದಾಸರ ದಾಸನೆನಿಸಿದ ಪುಸಿಯಲ್ಲ ಕೇಳಿರಿ ನರನ ಕುದುರೆಯ ವಾಘೆಯನು ಪಿಡುದು ರಥವ ನಡೆಸಿದ ಕರೆಯಲೋಡಿದ ಸರಸಿಯಲ್ಲಿಗೆ ಭರದಿ ಒದಗಿದ ಕುರುಪಸಭೆಯಲ್ಲಿ ಪರಮ ನಿಗಮಗಳ್ಗಿರುವನಗೋಚರ ಸ್ಮರಿಸಿದವರಿಗೆ ಭರದಿ ನೆರವಾದ 8 ತಾಳಿಬಂದ ನಾರಾಯಣಾವತಾರ ಪಾಲಿಸಲು ಜಗವಂ ಬಾಲಗೋಪಾಲ ಭಕ್ತರಾಧಾರ ಗೊಲ್ಲನೆನಿಸಿ ಲೀಲೆನಡೆಸಿದ ಶಾಮಸುಂದರ ಭವಜಾಲಪರಿಹರ ಕಾಳರಕ್ಕಸರೊಳು ಕಾದಿ ನಿರ್ಮೂಲಮಾಡಿ ಜಗಪಾಲಿಸಿದ ತ್ರಿ ಜಾನಕಿಲೋಲ ಶ್ರೀರಾಮ 9
--------------
ರಾಮದಾಸರು
ಈಶನೀನೆ ದಯಾಸಿಂಧು ದಾಸಜನರ ಪ್ರೇಮಬಂಧು ಪ ಹೇವವಿಲ್ಲದೆ ಕಾಸಾರಕೈದಿ ಬೋವನಾಗಿ ಬಂಡಿ ಹೊಡಿದಿ ಕೇವಲ ಮಾನಕಾಯ್ದಿ ಸತಿಯ ಸೇವಕಜನರ ಬೆಂಬಲನೆ 1 ನಿನ್ನ ಭಜಿಸಿ ಬೇಡುವವರ ಭಿನ್ನವಿಲ್ಲದೆ ದಯದಿ ಒದಗಿ ಸಾವುಹುಟ್ಟು ಬಂಧಗೆಲ್ಲಿಸಿ ಧನ್ಯರೆನಿಸಿ ಸಲಹುವಿ 2 ಕಾಮಿತಾರ್ಥಪೂರ್ಣ ಭಕ್ತ ಕಾಮಧೇನು ಕಲ್ಪತರು ಸ್ವಾಮಿ ಶ್ರೀರಾಮ ನಿಮ್ಮ ವಿಮಲ ನಾಮ ಎನ್ನ ಜಿಹ್ವೆಗೆ ನೀಡೊ 3
--------------
ರಾಮದಾಸರು
ಉದದಿ ಮೇಖಳೆಯ ಭಾರವನಿಳುಹುವನೆಂದು ವಿಧಿಪೂರ್ವಸುರರು ಬಂದು ಕ್ಷೀರಾಬ್ಧಿಯ ಸಿಂಧು ಪ. ಶೌರಿ ಗೃಹದ ಗೋಪಿ ಜನಕೆ ನಾನಾ ವಿಧದ ಲೀಲಿಯ ತೋರಿ ದೈತ್ಯರ ಸದೆದು ಗೋವುಗಳ ಕಾಯ್ದ ಕೃಷ್ಣಗೆ ಪದುಮದಾರತಿಯ ಬೆಳಗಿರೆ ಶೋಭಾನೆ 1 ಮೆಲ್ಲನೆ ಮಧುರೆಗೆ ಹೋಗಿ ಮಾವನ ದೊಡ್ಡ ಬಿಲ್ಲ ಮಧ್ಯದಿ ನಿಂದು ರಂಗದಿ ಹಸ್ತ ಮಲ್ಲಾದಿಗಳ ತರಿದು ಕೈದೋರಿ ಮೆರೆದು ಖುಲ್ಲನನು ಮಡುಹಿ ಬಂಧುಗ- ಳೆಲ್ಲರನು ಸಂರಕ್ಷಿಸಿದ ಸಿರಿ ನಲ್ಲ ಗೋಪೀ ವಲ್ಲಭನ ಪದ ಪಲ್ಲವಗಳನು ಪಾಡಿ ಪೊಗಳುತ ಮಲ್ಲಿಗೆಯಾರತಿಯ ಬೆಳಗಿರಿ ಶೋಭಾನೆ 2 ಮಂದಿಮಾಗದ ಮೊದಲಾದ ರಾಯರ ಮದ ಕುಂದಿಸಿ ರಥದೊಳಂದು ಭೈಷ್ಮಿಯ ಕರ ತಂದು ದ್ವಾರಕೆಗೆ ಬಂದು ಭಾಮಾದಿ ಮಹಿಷೀ ವೃಂದ ಸಂಗ್ರಹಿಸಿದ ಪರಾಪರ ವಂದ್ಯ ಶೇಷಗಿರೀಂದ್ರನಾಥನ ಚಂದನಾತ್ಮಕ ಮೂರುತಿಯ ಹೃ- ನ್ಮಂದಿರದ ಮಧ್ಯದಲಿ ಮಂಡಿಸಿಕುಂದಣದಾರತಿಯ ಬೆಳಗಿರೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಉದಯಲೆದ್ದು ಶ್ರೀ ಗುರುವೆನ್ನಿರೊ ಉದಧಿನಿವಾಸ ಸದ್ಗುರುವೆನ್ನಿರೊ ಧ್ರುವ ಕರುಣಕರನೆನ್ನಿ ಗುರುಮುರಹರನ್ನೆನಿ ಕರಿವರ ಹರಿ ಸರ್ವೋತ್ತಮನೆನ್ನಿ 1 ಸುರಮುನಿವರನೆನ್ನಿ ಗುರುಗಿರಿಧರನೆನ್ನಿ ನರಕೀಟಕನ ಪಾಲಿಪನೆನ್ನಿರೊ 2 ಶರಣರಕ್ಷಕನೆನ್ನಿ ವರದಾಯಕನೆನ್ನಿ ತ್ರ್ಯೆಲೋಕ್ಯನಾಥ ತಾರಕನೆನ್ನಿರೊ 3 ವಿಹಂಗವಾಹನನೆನ್ನಿ ತ್ರಿ ಕಂಚಧರ(?)ನೆನ್ನಿ ಪಾಸಾಲ(?) ಸಾಹಿತ್ಯದೇವನೆನ್ನಿ 4 ಭಕ್ತವತ್ಸಲನೆನ್ನಿ ಮುಕ್ತಿದಾಯಕನೆನ್ನಿ ಮಹಿಪತಿ ಗುರು ಭವನಾಶನೆನ್ನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದ್ದರುಸುವದೆನ್ನ ಉದಧಿಶಯನ | ಪಾದ | ಪದ್ಮದ್ವಯಕೆಯಿಂದು ಪ ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ | ನಿಂದರದೆ ಸಂಚರಿಸಿ ಪುಣ್ಯವೆಲ್ಲಾ | ತಂದು ನಿನಗರ್ಪಿಸಿದೆ ಕೈ ಕೊಂಡು | ತೋರು ತಡಮಾಡದಲೆ ದೇವಾ 1 ಯಾತರವ ನಾನು ನರಮನೆ ಗಾಯಕರ ದೂತರೆಂಜಲನುಂಡು ಬೆಳದ ನರನೋ || ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ | ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ2 ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು | ಕೃಷ್ಣಾ ಸ್ನಾನ ಕೃಷ್ಣ ಸಂದರುಶನಾ | ಕೊಟ್ಟು ಕೇವಲವಾಗಿ ನಿನ್ನಂಘ್ರಿಯಲಿ ರತಿ | ಇಟ್ಟು ಭಜಿಸುವಂತೆ ಭಾಗ್ಯವನು ಕೊಡೊವೇಗಾ3 ಏನು ಕಡಿಮೆ ನೀನು ಒಲಿದರಾದಡೆ ರಾಮ | ಧೇನು ತರುಮಣಿ ಬಾರದೆ ನಿಲ್ಲವೇ || ಶ್ರೀನಿವಾಸನೆ ನಿನ್ನ | ಲೇಶ ಸುಖವು ತೋರದು ದೇವಾ 4 ವೆಂಕಟಗಿರವಾಸಾ ವೇದ ವಂದಿತ ಚರಣಾ | ಶಂಖ ಚಕ್ರಪಾಣಿ ಕರುಣಾಕರಾ | ಶಂಖಾಣ ನೃಪವರದ ವಿಜಯವಿಠ್ಠಲ ತಿಮ್ಮ ಅಂಕದ ಮೇಲಾಡುವ ಬಾಲನೆಂದು ಬಿಡದೆ 5
--------------
ವಿಜಯದಾಸ
ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ಉಪಟಳ ಬಿಡಿಸುವರೇ ಇಂಥಾ ಪರತಳ ಭೋಜನವೆಂದಿಗೂ ಮಾಡಬಾರ್ದು ಪ ಇಲಿಗಂಜಿ ನಿಜಗೃಹ ತ್ಯಜಿಸುವರೆ ತನ್ನ ಸಲಹೊ ದೇವನು ಬೆಂಬಲನಾಗಿಹನು 1 ಭವಕಂಜಿ ಭುವನವ ತೊಲಗುವರೆ ಲಕ್ಷ್ಮೀ ಧವನನ ಭಜಿಸುತ ಬಾಳ್ವೆಯ ಮಾಡುವದು 2 ಹರಿಗಂಜಿ ಶರಣರು ಓಡುವರೆ ಇಂಥಾ ನರಸಿಂಹವಿಠಲನೆಂದಿಗು ಬಿಡಬÁರದು 3
--------------
ನರಸಿಂಹವಿಠಲರು
ಉಪಾಯಗಾರತ್ತಿಗೆಯ ಮಹಾತ್ಮೆಯು ಶಿಪಾಯಿಗಳೆಲ್ಲಾ ತಿಳಿದಿಹರು ಪ ಅಪಾಯವು ಜನರೆ ಬಲ್ಲರು ಅ.ಪ ಮನೆಗೊಬ್ಬರಿಗೂಟಕೆ ಹೇಳಿ | ಭೋ- ಜನ ಸಹಾಯ ನಮಗಿಲ್ಲವೆಂದು ಉಪಚಿರಸುತ ಆಡುತಿಹಳು ಕಾಂತೆ 1 ನುಚ್ಚಕ್ಕಿ ಅನ್ನ ಗೊಡ್ಡುಸಾರೇಸಾಕು ನೂರಾರು ಜನರು ಬರಲಿ ಜೋಕೆ 2 ಅಳಿಯಗೆ ದೀಪಾವಳಿಗೆ ಕೊಡೋಣ ಮಗುಟ ಪಾತ್ರೆಗಳಿಹುದು ಕೆಲಸವಾದರೇಸಾಕು ಗುರುರಾಮ ವಿ ಠಲನೆ ಬಲ್ಲ ಬಿಡಿ ಎಂತೆಂದು 3
--------------
ಗುರುರಾಮವಿಠಲ
ಉಪೇಂದ್ರ ವಿಠ್ಠಲನೆ ಕೃಪೆಯಿಂದ ಕೈಯ್ಯ ಪಿಡಿಯೊ ಪ ಅಪವರ್ಗ ಪ್ರದಹರಿಯೆ | ನಿಪುಣವೆನಿಸುತ ಶಿಶುವವಿಪುಲ ಮತಿಯನೆ ಕೊಟ್ಟು | ಕಾಪಾಡೊ ಹರಿಯೇ ಅ.ಪ. ವರುಷ ಕಾರಣವಲ್ಲ ಹರಿಭಜನೆಗೆಂಬುದನಪರಿಕಿಸುತ ಇವನಲ್ಲಿ| ಪ್ರಾರ್ಥಿಸುವೆ ನಿನಗೇ |ನಿರುತ ನಿನ್ನಯ ಪದದಿ | ಮೆರೆವ ಭಕುತಿ ಜ್ಞಾನಕರುಣಿಸುವುದೆಂದೆನುತ | ಪರಿಪರಿಯಲಿಂದ 1 ಕಾಕು ಮತ ದಿಕ್ಕರಿಪವಾಕು ವೈಖರಿಯಿತ್ತು | ತೋಕನ್ನ ಸಲಹೋ |ಲೌಕಿಕದಿ ಸತ್ಕೀರ್ತಿ | ಬೇಕಾದವರವಿತ್ತುನೀ ಕರುಣಿಸುವೆನೆಂದು | ನಾ ಕೇಳ್ವೆ ಹರಿಯೇ2 ದೇವದೇವೇಶ ತವ| ಪಾವನ್ನಸ್ಮøತಿಯಿತ್ತು ಗೋವತ್ವದ ನಿಗಾವು | ಧಾವಿಸುವ ತೆರದೀಕೋವಿದೋದ್ಗೀತ ಗುರು ಗೋವಿಂದ ವಿಠ್ಠಲನೆಭಾವುಕನ ನೀಪೊರೆಯೊ | ಗೋವಿದಾಂಪತಿಯೇ 3
--------------
ಗುರುಗೋವಿಂದವಿಠಲರು
ಉಪೇಂದ್ರ ಹರಿ ವಿಠಲ ಕೃಪೆಯಲಿಂದಲಿ ಇವನಕಾಪಾಡ ಬೇಕೆಂದು ಪ್ರಾರ್ಥಿಸುವೆ ಹರಿಯೇ ಅ.ಪ. ಹರಿಗುರೂ ಭಕ್ತಿಯುತ | ತರಳ ನಿರುವನು ಹರಿಯೆಸುರರಾಜ ಭೋಗಗಳ | ಕರುಣಿಸುತ ಇವಗೇ |ಒರೆದು ತತ್ವ ಜ್ಞಾನ | ಮರಳಿ ಭಕ್ತ್ಯಭಿವೃದ್ಧಿಕರುಣಿಸುತ ಕಾಪಾಡೊ | ಕರಿವರದ ಹರಿಯೆ 1 ವಿಯದಧಿಪ ಸುತನಿಗೆ | ಭಯವ ಪರಿಹರಗೈದುದಯದಿಂದ ಪೊರೆದಂತೆ | ಕಾಯಬೇಕೋಹಯವೇರಿ ಇಂದ್ರಿಯದ | ಜಯಸೂಚಿ ಸ್ವಪ್ನದಲಿಭಯಕೃತೂ ಭಯನಾಶ | ಅಭಯನೀಯೋ2 ಪಿತೃ ಮಾತೃ ಸೇವೆಯಲಿ | ರತನನ್ನ ಮಾಡುತಲಿಹಿತ ಆಹಿತ ವೆರಡನ್ನು | ಸಮತೆಯಲಿ ಉಂಬಾಮತಿಯನ್ನೆ ಕರುಣಿಸುತ | ಕೃತಕಾರ್ಯನೆಂದೆನಿಸಿಸತತ ತವ ಸಂಸ್ಕøತಿಯ | ಇತ್ತು ಪೊರೆ ಇವನಾ 3 ಕಾಕು ಪಾದ | ಪಂಕಜವ ತೋರೋ 4 ಪಾವಮಾನಿಯ ಪ್ರೀಯ | ಶ್ರೀವರನೆ ಈಶಿಯವಕೋವಿದನ ಗೈಯ್ಯತ್ತ | ಭುವಿಯೊಳಗೆ ಮೆರೆಸೋಗೋವಿದಾಂಪತಿಯೆ ಗುರು | ಗೋವಿಂದ ವಿಠ್ಠಲನೆನೀ ವೊಲಿಯದಿನ್ನಾರು | ಕಾವರನು ಕಾಣೇ 5
--------------
ಗುರುಗೋವಿಂದವಿಠಲರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಎಚ್ಚರಿಕೆ ಎಚ್ಚರಿಕೆ ಎಲೋ ದೇವ | ಎಚ್ಚರಿಕೆ ಎಚ್ಚರಿಕೆ | ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಪ ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ | ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ | ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ | ಪಂಕಜ ಹೃದಯಾರ್ಕನೆಯಾ1 ಪರಮೇಷ್ಠಿ ವಂದನೆಯಾ | ಶರಧಿ ತಾರಾ ಕರುಗಳ ಕಾಯಿದನೇಯಾ | ಎರಡೇಳು ಲೋಕ ಪೊರೆವಾ ಭಾರಣ ಹರಿಯಾ | ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ 2 ಜಯ ಜಯಾ ಚಿತ್ತಾವಾಧಾರು ಪರಾಕ್ರಮಯಾ | ಭಯ ನಿವಾರಣ ನಿಜ ಭಂಟರಿಗೆ ಬಂಟಯಾ | ನಯ ಮೂರುತಿ ನಮ್ಮ ವಿಜಯವಿಠ್ಠಲರೇಯಾ ಯಾ | ತ್ರಿಯಗುಣ ವಿರಹಿತ ಶೇಷಗಿರಿವಾಸಯಾ 3
--------------
ವಿಜಯದಾಸ
ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1 ಉತ್ತಮ ಗುರು ಹಿರಿಯರುಗಳ ಬೈವರ | ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು | ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ | ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು | ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ | ಯುತ್ತುರುಳು ಹಾಕುವರೊ ಬೆನ್ನೊಳಗೇ | ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ | ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2 ಪರಧನ ಪರಸತಿ ಪರನಿಂದೆಗೆಳೆವರ | ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ | ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ | ಜಿಹ್ವೆ ಕೊರೆದು ತೈಲದೊಳಗೆ | ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ | ಉರವಣಿಸು ಕುಣಿಸುವರೊ-ಹೆರೆದಂಬಿಗೆ | ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ | ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ | ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3 ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ | ತುಂಬಿ | ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ | ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- | ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- | ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ | ಹಣ್ಣಣ್ಣು ಮಾಡುವರೊ-ಅಸೀಪತ್ರಾ- | ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ | ತುಂಬಿ ಕುಟ್ಟಿ ಮೆಲ್ಲಿಸುವರೊ4 ವಾಸುದೇವನ ವಾಸರದಲ್ಲಿ ಉಂಬರ | ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- | ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು | ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು | ತುಂಬಿ | ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ | ಹೇಸದೆ ಬಡಿಸುವರೊ ಹಂದಿಯಂತೆ | ಈ ಶರೀರ ಸುಡಿಸವರೊ-ತಮಸಿನೊಳು | ಏಸು ಜನ್ಮಕೆ ಗತಿಯಲ್ಲವೆನಿಸುವರೊ 5 ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ | ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ | ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ | ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು | ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- | ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- | ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು | ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ | ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6 ಒಂದು ನೋಡಿದರೊಂದು ಅಧಿಕ ಪಾಪಗಳಿವೇ- ನೆಂದು ಪೇಳಲಿ ಎನಗೊಂದಾದರಳವಲ್ಲ | ಹಿಂದಿನ ದುರ್ವಾರ್ತೆ ಮರೆದು ಮುಂದಾದರು | ನಂದತೀರ್ಥರ ಪಾದಾನಂದದಿ ಭಜಿಸಿ ಪು | ರಂದರನನು ಸರಿಸಿ-ವಿಜಯವಿಠ್ಠಲ | ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- | ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
--------------
ವಿಜಯದಾಸ