ಒಟ್ಟು 1737 ಕಡೆಗಳಲ್ಲಿ , 106 ದಾಸರು , 1369 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಸ್ಮರಣೆ ಪೂರಣ ಕರತನ್ನಿ ಧ್ರುವ ಕರತನ್ನಿರೊ ವರಗುರು ಕೃಪೆಯಿಂದ ಗುರುವರ ಮೂರುತಿ ಕರುಣಾನಂದ 1 ಕರುಣಿಸಿ ನೋಡಲು ಬಾಹುದು ಪುಣ್ಯ ಶರಣ ಜನರಿಗಿದು ತಾರ್ಕಣ್ಯ 2 ತಾರ್ಕಣ್ಯಂಬುದು ತರ್ಕರಹಿತ ಸರ್ಕನೆ ತಿಳಿವದು ತನ್ನೊಳು ಗುರುತ 3 ಗುರ್ತವಾಗಲು ನಿಜ ಹಿತಾರ್ಥ ಅರ್ತವಗಿದು ಸ್ವಸುಖ ಪರಮಾರ್ಥ 4 ಪರಮಾರ್ಥವು ಪರಗತಿ ಸಾಧನ ಪರಲೋಕಕೆ ಐದುವ ಸೊಪಾನ 5 ಸೋಪಾನವೆ ಸುಲ್ಲಭ ಸುಪಥ ಉಪಾಯದಲಿ ತಿಳಿಯಲು ಸ್ವಹಿತ 6 ಸ್ವಹಿತ ಮಾರಿಕೊಂಬುದೇ ಸುಖ ಸಾಹ್ಯ ಮಾಡುವ ಶ್ರೀ ಗುರುಕುಲತಿಲಕಾ 7 ಶ್ರೀಗುರು ಸೇವೆಯ ಮಾಡಿರೊ ಬ್ಯಾಗ ಜಗದೊಳಗಿದು ಮಹಾ ಪುಣ್ಯದ ಯೋಗ 8 ಯೋಗವೆ ಮಹಾ ನಿಜ ಭಕ್ತರ ಪ್ರಾಣ ಸುಗಮ ಸುಪಥ ಸದ್ಗತಿ ಸಾಧನ 9 ಸಾಧನ ಪಡೆವದು ಗುರುದಯ ಕರುಣ ಸದಮಲ ಸುಖ ಸುಜ್ಞಾನದ ಸ್ಪುರಣ10 ಸ್ಪುರಣ ಸುಫಲಿತ ಸುಜನರ ಹೃದಯ ಸುರ ಮುನಿ ಜನರಾನಂದದ ಉದಯ 11 ಉದಯವಾಯಿತು ಮಹಿಪತಿ ಮನದೊಳಗೆ ಸದೋದಿತವಾಯಿತು ಗುರುಕೃಪೆಲೆನಗೆ 12 ಎನ್ನೊಳು ದೋರಿತಾನಂದದಲಹರಿ ತನ್ನಿಂದಲಿ ತಾನೊಲಿದ ಶ್ರೀ ಹರಿ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಹರಿ ಕೊಡು ನಿನ್ನಯಚ್ಚರನು ಶರಣವಾ ಧೃಡದಲಿ ಬಂದೆನಾನು ಪ ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ 1 ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ 2 ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ | ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ 3 ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ | ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ 4 ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರುಷದಿಂದಲಿ ಮನವೇ | ಪ ಭವ ಜಲದಿಂದಲಿ ದಾಟಿಸುವನು ಕಣ್ಣವರಿಸುತಲಿದ್ದು|ಅಚ್ಯುತಾನಂತ ಹರಿ| ಯನ್ನದೆವೆ ಕಂಡ ಚಿಂತೆಯನು ಮಾಡಿ| ಬನ್ನ ಬಡುತಲಿ ಉದರ|ಧಾವತಿಯವಳಗಾಗಿ| ದಣ್ಣನೇ ದಣಿದು ಬಂದು ಬಯಿಗೋರಗುವೇ 1 ಬಳ್ಳಿನೊರಳಗ ತೊಡರಿದ|ಕಾಲಿನಂತೆ ಭವಾ ತಳ್ಳಿಯೊಳುಸಿಲ್ಕಿ ಬಳಲುತಾ ಗುಂದುತಾ| ನಿಲ್ಲದೆವೆ ತಿರುಗುತಿಹೆ ಸಾಧು ಸಂಗಕಬರಲು ಯಳ್ಳಿಸಿತು ಅವಕಾಶ ಕಾಣೆ ನಾನು 2 ಕೆರೆಯ ನೀರನು ಕೆರೆಗೆ ಚೆಲ್ಲಿ|ವರವಪಡಿಯಲಿಕ್ಕೆ ಭರದಿಂದ ಬಂದ ಅಲತ್ಯ ನೋಡ್ಯಾ| ಹರಿನಾಮ ಹರಿಗರ್ಪಿಸಿ ಗತಿ ಪಡಿಯಲೊಲ್ಲಿ ಹರ ಹರಾ ನಿನಗೆಂತು ಮತಿ ವದಗಿತೋ 3 ಹಾಡಿ ಕೊಂಡಾಡಿದರ ಹರಿನಾಮ ನಾಲಿಗ್ಗೆ ಬಾಡಿಗೆಯು ಬೀಳುವದೋ ನಾನರಿಯೆ ನೋ ಮೂಢ ಪಾಮರನೆಮರ ಹುಟ್ಟಿ ಮರಬಿದ್ದಂತೆ ನೋಡು ನರ ದೇಹದಲಿ ಬಂದಾಯಿತು 4 ಹಿಂದಿನಪರಾಧಗಳಯೇನಾದರಾಗಲಿ ಮುಂದೆ ಇನ್ನಾರ ಸ್ವಹಿತ ವಿಚಾರಿಸೋ ತಂದೆ ಮಹಿಪತಿಸ್ವಾಮಿ ದ್ವಂದ್ವ ಚರಣಕ ಹೊಂದಿ ಇಂದಿರೇಶನ ವಲಮೆ ಪಡೆದು ಸುಖಿಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ ದೊರೆ ಸರ್ವ ಸೌಖ್ಯದಾಯಕ ಪ. ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು ಸದಾ ನಿನ್ನ ಸ್ಮøತಿಯ ನೀಡಿಸು ಉದಾಸೀನಭಾವದೂಡಿಸು ಭೂಪ ನಿನ್ನ ಪದಾಬ್ಜವನು ಶಿರದೋಳಾಡಿಸು 1 ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ ಕರಗಿ ಕಲ್ಮಶವನು ತಾಳಿದೆ ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ- ದಿರುವೆ ನಿಂತು ಕಂಪುಗೊಳ್ಳದೆ 2 ಈಶ ನೀನೊಬ್ಬನಲ್ಲದೆ ದಾಸನನ್ನು ಪೋಷಿಸುವರ ಕಾಣೆ ಲೋಕದಲಿ ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ ಭೂಪ ಬೇಗ ಕಾಯೊ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ ಕುಲವೆ ಉದ್ಧಾರವಾಗುವ ಕಾಲವೊ ಪ ಕೊಲೆ ಅನೃತ ಕಳವು(ದಶಬಾರ ಪಟ್ಟಾರ) [?] ಸಲೆ ಬಯಸಿ ಸರ್ವರಲಿ ನೆನೆವುತಿದ್ದೆ ಒಲಿದು ವೈಕುಂಠಪತಿ ಒಮ್ಮೆ ನೆನೆದರೆ ಮನಕೆ ಬಲು ಹರುಷವಾಗುವ ಭಾಗ್ಯವೆಲ್ಯೊದಗಿತೊ 1 ಸತ್ಕರ್ಮಗಳ ಲೇಶ ಸ್ವಪ್ನದಲಿ ತಿಳಿಯದು ಮತ್ತತನದಲಿ ನಡೆದ ಮೂರ್ಖನಿಗೆ ಎತ್ತಲಿಂದೊದಗಿತೊ ಎನಗೆ ತಿಳಿಯದು ದೇವ ಉತ್ತಮನ ನೆನೆನೆನೆದು ಉಬ್ಬೇರುತಿಹದೊ 2 ಬಂದ ಕಾರ್ಯವ ಬಿಟ್ಟು ಮಂದಮತಿತನದಿಂದ ಬೆಂದ ದುರ್ವಿಷಯದಲಿ ಬಳಲುತಿದ್ದೆ ತಂದೆ ಕದರುಂಡಲುಗಿ ಹನುಮಯ್ಯನಾ ಪಾದ ಹೊಂದಿದಾ ನೆವದಿಂದ ಹೊಸ ಪರಿಯ ಕಂಡೆ 3
--------------
ಕದರುಂಡಲಗಿ ಹನುಮಯ್ಯ
ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು
ಹಸ್ತ ಪ್ರಕ್ಷಾಲ್ಯೆಂಬುದು ಇದೆ ನೋಡಿ ನಿತ್ಯಾನಿತ್ಯ ವಿಚಾರಮಾಡಿ ಧ್ರುವ ವಿವೇಕವೆಂಬುದೆ ಉದಕ ಪವಿತ್ರಮಾಡಿತು ಮೂರು ಲೋಕ ಭವದೆಂಜಲ ಹೋಯಿತು ನಿಸ್ತುಕ ಪಾವನಗೈಸಿತು ಸ್ವಸುಖ 1 ಹೋಯಿತು ಭ್ರಾಂತಿ ವಿಕಳ ಶ್ರಯದೋರಿತು ಸಾಯೋಜ್ಯ ಢಾಳ 2 ಭವ ಅಂಜಿಕ್ಯಾರಿಸಿತು ಗುರುಜ್ಞಾನ ಮಹಿಪತಿಗಿದೆ ಭೂಷಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಸ್ತವ ಕರುಣಿಸು ವಿಸ್ತಾರ ಮಹಿಮದ ಪ ಹಸ್ತವ ಕರುಣಿಸೋ ರಂಗಯ್ಯ ಹಸ್ತ ಕರುಣಿಸೆನ್ನ ಮಸ್ತಕದ ಮೇಲೆ ಹಸ್ತವ ಕರುಣಿಸೊ ಅ.ಪ ಸೋಮಕಾಸುರನ ವಧಿಸಿ ವೇದತಂದ ಹಸ್ತವ ಕರುಣಿಸೋ ರಂಗಯ್ಯ ತಾಮಸ ದೈತ್ಯನ ಉದರವ ಬಗಿದ ಹಸ್ತವ ಕರುಣಿಸೊ ರಂಗಯ್ಯ ಭೂಮಿಭಾರ ಶಿವಧನುವನು ಮುರಿದ ಹಸ್ತವ ಕರುಣಿಸೊ 1 ಎಸೆದು ಬಾಣ ವಾಲಿಗಭಯ ಪಾಲಿಸಿದ ಹಸ್ತವ ಕರುಣಿಸೋ ರಂಗಯ್ಯ ಅಸಮಮೂರುತಿಗೆ ಒಸೆದು ಉಂಗುರವಿತ್ತ ಹಸ್ತವ ಕರುಣಿಸೊ ಅಸುರನಿಗೊಲಿದು ಸ್ಥಿರ ಮುಕುಟವನಿಟ್ಟ ಹಸ್ತವ ಕರುಣಿಸೋ ರಂಗಯ್ಯ ವಸುಧೆ ಭಾರಿಳುಹಲು ನಿರುತದಿಂದೆತ್ತಿದ ಹಸ್ತವ ಕರುಣಿಸೊ 2 ಸುರಗಣಕಮೃತ ಹರುಷದಿ ನೀಡಿದ ಹಸ್ತವ ಕರುಣಿಸೋ ರಂಗಯ್ಯ ಪರಮಗೋವರ್ಧನ ಗಿರಿಯೆನೆತ್ತಿದ ಹಸ್ತವ ಕರುಣಿಸೊ ಸಾರಸ ಗಂಧಿಯರುಟ್ಟಿರ್ದ ಸೀರೆಯ ಕದ್ದ ಹಸ್ತವ ಕರುಣಿಸೋ ರಂಗಯ್ಯ ಮೆರೆವ ರುಗ್ಮನ ಮಹಗರುವವ ಮುರಿದ ಹಸ್ತವ ಕರುಣಿಸೊ 3 ಜನನಿ ಜನಕರ ಸೆರೆಯನು ಬಿಡಿಸಿದ ಹಸ್ತವ ಕರುಣಿಸೋ ರಂಗಯ್ಯ ಜನನಿಮುಂದಾಡುತ ಕಡಗೋಲು ಪಿಡಿದ ಹಸ್ತವ ಕರುಣಿಸೊ ವರರುಗ್ಮಿಣಿಕೈಯ ಸರಸದಿ ಪಿಡಿದ ಹಸ್ತವ ಕರುಣಿಸೋ ರಂಗಯ್ಯ ನರಗೆ ಸಾರಥಿಯಾಗಿ ಕುದುರೆ ತಿರುವಿದ ಹಸ್ತವ ಕರುಣಿಸೊ 4 ವಿದುರನ ಮನೆಯಲಿ ಹಾಲೆತ್ತಿ ಕುಡಿದ ಹಸ್ತವ ಕರುಣಿಸೋ ರಂಗಯ್ಯ ಸುದತಿಗೆ ಮೆಚ್ಚಿ ಅಕ್ಷಯಾಂಬರವಿತ್ತ ಹಸ್ತವ ಕರುಣಿಸೊ ಮುದದಿ ಧ್ರುವಗೆ ಮೆಚ್ಚಿ ಸದಮಲ ಪದವಿತ್ತ ಹಸ್ತವ ಕರುಣಿಸೋ ರಂಗಯ್ಯ ಸುದಯದಿಂದ ಅಂಬರೀಷನುದ್ಧರಿಸಿದ ಹಸ್ತವ ಕರುಣಿಸೊ 5 ದಿನವಿರೆ ದಿನಮಣಿಯನು ಮಾಯಮಾಡಿದ ಹಸ್ತವ ಕರುಣಿಸೋ ರಂಗಯ್ಯ ರಣದಿ ಭಕ್ತರ ಶಿರ ಕನಿಕರದೆತ್ತಿದ ಹಸ್ತವ ಕರುಣಿಸೊ ಸೆಣದಾಡಿ ಭಕ್ತನಿಂ ದಣಿದು ಕಟ್ಟಿಸಿಕೊಂಡ ಹಸ್ತವ ಕರುಣಿಸೋ ರಂಗಯ್ಯ ಸನಕಾದಿಗಳು ಘನ ಅನಂದದ್ಹೊಗಳಿಸುವ ಹಸ್ತವ ಕರುಣಿಸೊ 6 ಫಡ ಫಡ ಎನ್ನುತ ತೊಡೆಯ ಚಪ್ಪರಿಸಿದ ಹಸ್ತವ ಕರುಣಿಸೋ ರಂಗಯ್ಯ ಬಿಡದೆ ಸೋಳಸಹಸ್ರ ಮಡದಿಯರ್ಹಿಡಿದ ಹಸ್ತವ ಕರುಣಿಸೊ ಅಡಿಯ ದಾಸರ ಪಿಡಿದಪ್ಪಿ ರಕ್ಷಿಸುವ ಹಸ್ತವ ಕರುಣಿಸೋ ರಂಗಯ್ಯ ಒಡೆಯ ಶ್ರೀರಾಮ ನಿನ್ನಡಿ ನಂಬಿ ಬೇಡುವೆ ಹಸ್ತವ ಕರುಣಿಸೊ 7
--------------
ರಾಮದಾಸರು
ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ಪ. ನೀಲಕಂಠನೆಂದೆನಿಸುತ ಸುರರನು ಪಾಲಿಸಿದನು ಕಂಡ್ಯಾ ಅ.ಪ. ಸುರರು ಅಸುರರು ಕೂಡಿ ಶರಧಿಯ ಭರದಿ ಮಥನವ ಮಾಡಿ ಗರಳವು ಉದ್ಭವಿಸಲು ಕಂಗೆಡುತಲಿ ಹರನನು ಸ್ತುತಿಮಾಡಿ 1 ಮೃತ್ಯುಂಜಯ ಪಾಹಿ | ಸಲಹೊ ಕೃತ್ತಿ ವಾಸನೆ ಪಾಹಿ ಮೃತ್ಯುವಾದ ವಿಷ ಭಯವನೆ ಬಿಡಿಸೈ ಸತ್ಯವಿಕ್ರಮ ಪಾಹಿ 2 ಪರಿಪರಿ ಸ್ತುತಿಗೈಯೆ | ಹರಮನ ಕರಗುತ ಕೃಪೆ ಗೈಯೆ ಗಿರಿಜೆ ನೀಡು ಅಪ್ಪಣೆ ವಿಷ ಕುಡಿವೆನು ಪರಮ ಮಂಗಳ ಕಾಯೆ 3 ತನುಸುಖವ ತೊರೆದು | ಲೋಕವ ಘನಕೀರ್ತಿಯನು ಪಡೆಯಲು ಹರಿ ಮೆಚ್ಚುವ ಎನುತ ಗಿರಿಜೆಗೆ ಪೇಳ್ದು 4 ಕರದಿ ಸೆಳೆದು ಕುಡಿದ | ವಿಷವನು ವಿಧಿ ಕಂದ ಹರಿಯ ಕೃಪೆಯಿಂದ 5 ನಗಜೇಶನು ಕೇಳ ಬಿಗಿದು ಕಂಠದಿ ನಿಲ್ಲಿಸಿ ಲೋಕವ ಪೊರೆದನು ಉರಿಫಾಲ 6 ಪೋಯ್ತು ಕಾಳರಾತ್ರಿ | ಮಂಗಳ ಆಯಿತು ಶಿವರಾತ್ರಿ ಶ್ರೀಯರಸ ಗೋಪಾಲಕೃಷ್ಣ ವಿಠ್ಠಲನ ಪ್ರೀತಿ ಪಾತ್ರ 7
--------------
ಅಂಬಾಬಾಯಿ
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು
ಹಿಂಡು ಉದ್ದಂಡ ನರಸಿಂಹನ ಕಂಡೆನಯ್ಯ ಪ ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ1 ಅರಿ ಶೋಣಿತ ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ2 ಸುರರು ಹೂಮಳೆಗರೆಯೆತರತರದ ವಾದ್ಯ ಸಂಭ್ರಮಗಳಿಂದಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವಕರುಣಾಳು ಕಾಗಿನೆಲೆಯಾದಿಕೇಶವನ3
--------------
ಕನಕದಾಸ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೆಚ್ಚುಕಡಿಮೆಯೆಂದು ಹೆಣಗಾಡಬೇಡಿ ಸಚ್ಚಿದಾನಂದ ಬ್ರಹ್ಮನ ಗುಟ್ಟು ನೋಡಿ ಪ ಪರಮಾತ್ಮ ಕಾಯದೊಳಿರುತಿರ್ಪತನಕಾ ಪರಿಪರಿ ಹೆಸರಿಂದ ಕರಿವರು ಅನಕಾ ಶರೀರ ಭೋಗವ ತೀರಿಸಿಕೊಂಡು ಹೋಹಾಗೆ ಲ್ಲರಿಗೊಂದೆ ಪೆಸರಿಂದ ಕರೆಯುವರಾಗಾ 1 ಅರಸು ಮಂತ್ರಿ ಕರಣೀಕ ತಳವಾರಾ ಕವಿ ಶಾಸ್ತ್ರಿ ಉದಾರಾ ಪರಿಯ ನಾಮಗಳಿಂದ ಉಪಾಧಿಯೋಗಾ ಪರಮಾತ್ಮ ತೊಲಗಲು ಹೆಣವೆಂಬರಾಗಾ 2 ಪರಮಾತ್ಮನಾಟದ ಲೀಲೆ ಇದೆಲ್ಲಾ ಗುರುಪುತ್ರನಾದ ಮಹಾತ್ಮನೆ ಬಲ್ಲಾ ಗುರು ವಿಮಲಾನಂದ ಶರಧಿಯೊಳಾಡಿ ಹಿರಿದು ಕಿರಿದು ಯಾವಲ್ಯುಂಟೆಂದು ನೋಡಿ 3
--------------
ಭಟಕಳ ಅಪ್ಪಯ್ಯ
ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ಪ ಹೀನ ಯೋನಿಯ ಮುಖದಲಿ ಬಂದು ನಾನಾ ತಾಪತ್ರಯದಿ ಬಹುನೊಂದು ನೀನೆ ಗತಿಯನುತ ಬಂದೆ ನಿಂದು ನಾನು ಭವದಿಂದ ತರಿಸುವ ಉಪಾಯವ ವಂದು 1 ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ ಆದಿಯಲಿ ದುರ್ಜನ ಸಂಗವಳಿದು ಸಾಧುಜನಸಂಗವನೇ ಬೆರೆದು ಬೋಧೆಯಂದಲಿ ಮನನವ ಬಲಿದು ಸಾಧಕನ ಉದ್ಯೋಗಿಸ ಸಿದ್ಧಿಯಹುದು2 ಸ್ವಾಮಿ ಸಜ್ಜನ ಸಂಗವನೇ ಬಯಸಿ ಪ್ರೇಮದಿರಬೇಕು ಇದೇ ನಿತ್ಯವೆನಿಸಿ ತಾಮತ್ತರ ಘಳಿಗಿಯೊಳು ವಲಿಸಿ ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ3 ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು ವಿಕಲ್ಲುಳ್ಳದು ನೋಡುಮನವದು ನಾಕು ತೆರದೊಳಿಸಿ ಕೊಳ್ಳಲದು ಬೇಕಾದುದನು ವಸ್ತು ಇದಿರಿಡುತಲಿಹುದು4 ನಳಿನ ಜಪರಾಸುರಗಳಿಗೆ ಛಲಿಸಲಿಕೆ ಮನ ಅಂಗನಿಗೆ ಬಲಿ ವಿಡಿದು ಮೋಹಿಸಿದ ರಾಗ ಇಳಿಯೊಳಗ ವಶಯಂತಹುದು ಮನುಜಗ5 ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ ವಿಕಳಿಗೊಳ್ಳದೆ ಮನಕೂಡಾ ಸಕಲಗೆದ್ದರು ಅತಿಗಾಢಾ ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ6 ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ ಎನಗೆಂತಹದಿಂತಿದು ಧೋರಿಯೇ ನೀನೇ ತಾರಿಸುದಯದೆನ್ನ ಸಿರಿಯೇ ನಾನು ಎಂದೆಂದು ತವಪಾದಸ್ಮರಣಿ ಮರಿಯೆ7 ಎಂದು ಬಾಗುವ ಕಂದನನು ನೋಡಿ ಕರ ನೀಡಿ ಛಂದದಲಿ ತರಿಪಂತೆ ಮಾಡಿ ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ಪ ದೃಢಭಕ್ತ ಸಮೂಹವ ಸಿರಿ ಯೊಡೆಯನು ಕೈಬಿಡನೆಂದು ಅ.ಪ ವಿಧಿಸೃಷ್ಟಿಯೊಳಿಲ್ಲದರೂ- ಪದಿ ಬಂದು ನಖದಿ ಅಸುರನ ಉದರ ಬಗೆದು ಕರುಳ ತೆಗೆದು ಮುದದಿ ಗಳದಿ ಧರಿಸಿದನೆಂದು 1 ಪರರು ತನ್ನ ಹಿಂಸೆಗೈ ದರು ಸಹಿಸಿ ಸಮಾಧಾನದಿ ಸಿರಿಯರಸನ ನೆನೆವಗೆ ಭಯ ವಿರದಿರದಿರದಿರದೆಂದು 2 ದ್ವೇಷಿಗಳನುದಿನ ಯೋಚಿಪ ಮೋಸಗಳನು ತಿಳಿಯುತ ಲ- ಕ್ಷ್ಮೀಶನು ಪರಿಹರಿಸಿ ತನ್ನ ದಾಸರಿಗೊಶವಾಗುವನೆಂದು 3 ತಿಳಿಯಗೊಡನು ಸತ್ಯವಿದೆಂದು 4 ಕಾಮಾದಿಗಳನು ಗೆದ್ದು ಮ- ಹಾಮಹಿಮರೆನಿಸುವರ ಯೋಗ- ಕ್ಷೇಮವನ್ನು ವಹಿಸಿಹ ಗುರು- ರಾಮವಿಠಲ ನರಹರಿಯೆಂದು 5
--------------
ಗುರುರಾಮವಿಠಲ