ಏಳಮ್ಮ ತಾಯೆ ಮುದದಿಂದೆಮ್ಮನು ಕಾಯೆ
ಕೋಳಿ ಕೂಗುತಲಿದೆ ಕೇಳಮ್ಮಯ್ಯಾ ಪ
ಕಾಲನಾಮಕ ಸೂರ್ಯದೇವನ ರಥದ ಕೆಂ-
ಧೂಳಿಯೇಳುವಂತೆ ಅರುಣೋದಯವಾಯ್ತು ಅ.ಪ.
ಮರುತಸುತನೆದ್ದು ಪರಾಕ್ಹೇಳುತಿಹನು
ಗರುಡನು ಹೊರಬಾಗಿಲೊಳು ಕಾದಿರುವನು
ಪರಿವಾರದವರೆಲ್ಲ ಕರಕಟ್ಟಿ ನಿಂದಿಹರು
ಹಿರಿಯ ಸೊಸೆ ವಾಣಿ ವಾರಿ ಕಲಶ ಪೊತ್ತಿಹಳು1
ಸಾರಭಕ್ತರು ಎಲ್ಲ ಸಾಲಾಗಿ ನಿಂದಿಹರು
ಭೂರಿ ಕುತೂಹಲದಿ ನಿನ್ನ ದರುಶನಕಾಗಿ
ವಾರಿಜಭವ ಮುಖ್ಯ ಸರುವ ದೇವತೆಗಳು
ಸಾರಿ ಬರುತಿರುವರು ನೀನೇಳಮ್ಮಯ್ಯಾ 2
ನೀ ಪೋಗಿ ಆತನ ಕರಪಿಡಿದೆಬ್ಬಿಸಾದೊಡೆ
ಶ್ರೀಪತಿಯು ಶೇಷತಲ್ಪದಿಂದೇಳನು
ಅಪಾರಮಹಿಮ ಶ್ರೀ ರಂಗೇಶವಿಠಲನ
ವ್ಯಾಪಾರಂಗಳನರಿತವರಿನ್ನ್ಯಾರಮ್ಮ 3