ವಾರಿಜನ ಹೃದಯೇಶ್ವರಿ ಸರ್ವವಿದ್ಯಕಾಧಾರಿ ಪ
ವಾಣಿವಿರಂಚಿ ರಾಣಿ ಪಂಕಜ
ಪಾಣಿ ಕಾಳಾಹಿವೇಣಿ ನಿನ್ನಯ
ವೀಣೆಯಿಂದಲಿ ವೇಣುಗಾನವ
ಮಾಣದೆ ಪಾಡುತ ಕುಣಿಕುಣಿಯುತ ಬಾರೆ 1
ಮಂದಯಾನೆ ಪೂರ್ಣೆಂದುವದನೆ
ಕುಂದುರಹಿತೆ ಬಂದು ರಕ್ಷಿಸೆ
ಮಂದಮತಿಯನಿಂದು ಬೇಗನೆ
ಕಂದ ನಾನೆಂದ ನೀ ಛಂದದಿ ಅರಿಯುತ 2
ಸಾರಸಾಕ್ಷಿ ಮಯೂರವಾಹನೆ
ಶಾರದಾಂಬೆ ಕಲಕೀರವಾಣಿಯೆ
ಸಾರಿ ಬೇಡುವೆ ತೋರು ಕರುಣದಿ
ಧೀರನಾ ಗಂಭೀರನಾ ರಂಗೇಶವಿಠಲನ 3