ಒಟ್ಟು 588 ಕಡೆಗಳಲ್ಲಿ , 71 ದಾಸರು , 470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿ ಬಾರದೇಕೋ ನಿನ್ನ ಕಂದನ ಮ್ಯಾಲೆ ಪ ಶರಣು ನಿನ್ನ ಚರಣ ಸೇವೆಯೊಳಿರಿಸೊಯೆನ್ನನೂ ಅ.ಪ ಅರುಹುಯೆಂಬೋದೆನ್ನಾ ಮನದೊಳ್ ಇರಿಸಿ ಪಾಲಿಸೈ 1 ತರವೆ ನಿನ್ನ ಕರದೊಳಿಂದು ಬಿರುದು ಹೋಲಿಸೈ 2 ಪರಮಗುರುವು ತುಲಶಿರಾಮ ಧೊರೆಯೊಳಿರುವೆನೈ 3 ಇರಿಸಿ ಪಾಲಿಸೆಂದು ಬಂದು ಮೊರೆಯ ನಿಟ್ಟನೈ 4
--------------
ಚನ್ನಪಟ್ಟಣದ ಅಹೋಬಲದಾಸರು
ಕರೆದಳು ತನ್ನ ಮಗನ ಯಶೋದೆ ಕರೆದಳು ತನ್ನ ಮಗನ ಪ. ಪರಮಪುರುಷ ಹರಿ ಶರಣರ ಸುರತರು ತುರು ತುರುಯೆಂಬ ಕೊಳಲನೂದುತ ಬಾರೆಂದು ಅ.ಪ. ಅಂದುಗೆ ಕಿರುಗೆಜ್ಜೆ ಘಲುಘಲುಕೆನುತಲಿ ಚಂದದಿ ಕುಣಿವ ಮುಕುಂದನೆ ಬಾರೆಂದು 1 ಹೊನ್ನುಂಗುರುಡಿದಾರ ರನ್ನ ಕಾಂಚಿಯದಾಮ ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು 2 ಸಾಮಗಾನವಿಲೋಲ ಜಾಲವ ಮಾಡದೆ ಸ್ವಾಮಿ ಹೆಳವನಕಟ್ಟೆ ರಂಗ ನೀ ಬಾರೆಂದು 3
--------------
ಹೆಳವನಕಟ್ಟೆ ಗಿರಿಯಮ್ಮ
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ ಕಾಲ ವಿಪರೀತದಿ ಅ ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ - ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ 1 ನಿತ್ಯ ನೇಮವು ನಿಂತಿತು - ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು 2 ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ 3
--------------
ಕನಕದಾಸ
ಕಲಿಧರ್ಮಮಾಡುತಿದ್ದ ಜಂಗಮಲಿಂಗಾ ಶಿವಪೂಜೆ ಮಾಡುತಿದ್ದ ಪ ಅಲ್ಲಿಗಲ್ಲಿಗೆ ಜಾಣ ಬಲ್ಲೆನೈವರಕೂಟ ಎಲ್ಲೆಲ್ಲಿ ನೋಡಲಿ ಕುಳ್ಳಯೆಂಬೆರುಮಾನೇರು ನಿಲ್ಲಾರು ನಿಜದಿಂದ ಬಲ್ಲವರದು ಕೇಳಿ ಕಳ್ಳಾರು ಕದಿವರಲ್ಲ ಜಂಗಮಲಿಂಗ ಸುಳ್ಳು ಹೇಳುವದಿಲ್ಲವೂ 1 ಯೆದುಶೈಲದೊಳು ಹೋಗಿ ಯಾಚಿಸೆಲ್ಲರ ಕಂಡೂ ಹದಿನೇಳು ತತ್ವಂಗಳಂಗಮಾಯಿತು ಯೆಂದು ಸುದಿಗಿರಿಭ್ರುಕುಟಿಗೆ ಜೀವತನುವ ತಂದೂ ಮದನಜನಕನೇಳಿದಾ 2 ನಾದಬಿಂದುವಿದೆಂಬೊ ನಾಡಿಕೊನೆಯೊಳು ನಿಂದೂ ವಾದಿಭೀಕರ ಮಾದ ವಜ್ರದುಂಗುರವೆಂದು ಬೋಧಾಯನದೊಳಿಹುದಾದಿ ತತ್ವವಿದೆಂದೂ ಸಾಧನೆಯನು ಮಾಡಿದಾ ಜಂಗಮಲಿಂಗಾ ವೇದಾವದನಮಾದುದ3 ಅಂಡಪಿಂಡವಿದೆ ಬ್ರಹ್ಮಾಂಡವಾಗಿಹುದೆಂದೂ ಕಂಡ ಪುಸ್ತಕವೆಲ್ಲಾ ಕಾಣಿಕೆಯನು ಮಾಡಿ ಕುಂಡಲಪುರದೊಳಿದ್ದ ಜಂಗಮಲಿಂಗಾ ಶಿವಪೂಜೆ ಮಾಡುತಿದ್ದಾ 4 ಕನಕಾಪುರೀಶ ತನುಮನಕಗೋಚರವಾದಾ- ಗಣಿತಾವೇಶನುಯೆಂದು ಗುಣಿಸುತಿರಲು ವೇದ ಅಣಿದು ಬರಲು ಗುರುವು ತುಲಸಿರಾಮನೆಯಾದ ಘಣಿಶಾಯಿ ಪರತತ್ವವು ಜಂಗಮಲಿಂಗ5
--------------
ಚನ್ನಪಟ್ಟಣದ ಅಹೋಬಲದಾಸರು
ಕಲಿಪುರುಷನಿಗತಿಹರುಷ ಬಲುಸಜ್ಜನಗಳುಬಾಯ್ಬಾಯ್ಬಿಡುವುದು ಪ ಅಲಕ್ಷ್ಮೀರಮಣ ಅಖಿಲ ದುರ್ಗುಣಂ ಗಳಕೊಟ್ಟೆಲ್ಲರ ಗಾಳಿಗೆ ತೂರುವೆ ಅ.ಪ ರಾವಣಾಸುರಗೆ ಮಗನೆನಿಸಿ ದೇವತೆಗಳ ಸೆರೆಯಲ್ಲಿಡಿಸಿ ಭಾವಜ್ಞರನು ನಿರಾಕರಿಸಿ ಸಭಾಸ್ಥಾನಗಳ ಭಂಗಪಡಿಸಿ ಬಹುದುಃಖ ಪಡಿಸಿ ಪಾಂಡುಕುಮಾರರ ಪಾವನಿಯಿಂತೊಡೆಯೊಡೆದು ಬೀಳುತ ಬಗೆಯ ನೆನದುಯೀಗೆಮ್ಮ ಬಾಧಿಸುವೆ 1 ಆಗಮಗಳು ಸುಳ್ಳೆಂಬುವದು | ನಾ ಯೋಗಿಯೆಂದು ಹಿಗ್ಗುತಲಿಹುದು ಭಾಗವರತ ನಿಂದನೆಗೈದು | ನಿರ್ ಭಾಗ್ಯತನ್ನತಾನೆ ಪೊಗಳುವದು ಸಾಗರದಂತಿಹ ದುರಾಸೆಯೊಳಗಾ ವಾಗಲು ಜನ ಮುಳುಗುತ ತಿಳಿಯದೆ ಹಾಗರ್ವದಿ ನಿಷ್ಫಲವ ಪೊಂದುವರಿದು 2 ನೀತಿ ತಪ್ಪಿತಾವ್ನಡೆಯುವುದು | ದು ರ್ಜಾತಿಗಳುತ್ತಮರೆಂಬುವದು ಆತುರದಲಿಮನವಳುಕುವುದು | ಬಲು ಘಾತಕತನದಲಿತಿರುಗುವದು ಗಾತುರಸುಖವೇ ಮೊಕ್ಷವೆಂದು ವಿಷ ಯಾತಿಶಯದಿಯರಿಷಡ್ವರ್ಗಗಳೊಳು ರಾತಿರಿಪಗಲೆನ್ನದೆ ಬೀಳ್ವುದುನಿ ನ್ನಾತಗಳಿಂಗೆ ಸ್ವಭಾವಗುಣಂಗಳು 3 ಕ್ಷಾಮಡಾಂಬರಗಳ್ಹೆಚ್ಚುವದು | ನಿ- ಷ್ಕಾಮರ ಹಾಸ್ಯವಮಾಡುವದು ಕಾಮದಿಜನಗಳ ಬಾಧಿಪದು ನಿಷ್ಕಾರಣರೋಗದಿ ಸಾಯುವದು ಪಾಮರರೆಲ್ಲರು ಪಂಡಿತರಾವೆಂ- ದೀಮಹಿಯೊಳುಮನಬಂದಂತೆಸದಾ ತಾಮಸಗಳಬೋಧಿಸುತಲಿಜಗದೊಳು ದ್ರವ್ಯಾರ್ಜನೆಮುಖ್ಯಸಾಧನವೆಂಬುದು 4 ವಿಪರೀತ ಫಲಗಳಾಗುವುದು ಚಪಲಹೊಂದಿಚಿಂತಿಸುತಿಹುದು ಜಪಹೋಮಗಳನು ತ್ಯಜಿಸುವದು ಬಲುಜಾಡ್ಯಂಗಳನನುಭವಿಸುವದು ಉಪಕಾರಗಳನುಮಾಳ್ಪರಲ್ಲಿ ಪ್ರ ತ್ಯಪಕಾರಗಳೆಣಿಸುತಲಾವಾಗಲು ಕಾಲಕಳೆಯುತ ವೃಥಾನೋಯುವದು 5 ಶೂದ್ರರುವೇದವ ಪಠಿಸುವದು | ನಿರು ಪದ್ರವನುದಂಡಿಸುತಿಹುದು | ಹರಿ ರುದ್ರವಿಧಿಗಳದೂಷಿಪದು | ಅ- ಬದ್ಧವೆಬಲುರುಚಿಯೆಂಬುವದು ಕ್ಷುದ್ರಕುನಾಸ್ತಿಕಮತವನಂಬಿ ದೇ- ವದ್ರೋಹಗಳನುಮಾಡುತ ಬಾಯಲಿ ಇದ್ದದ್ದಾದರುಯಿಲ್ಲೆಂಬುವದು6 ಪರರೊಡವೆಗಳಪಹರಿಸುವದು | ನೆರೆ- ಹೊರೆಯಂತಿರಬೇಕೆಂಬುವದು ಗುರುವಿನಲ್ಲಿ ದ್ವೇಷವೆಣಿಸುವದು | ಸತಿ- ಯರುಪತಿಯಲಿದ್ವೇಷಿಸುತಿಹುದು ನಿರತವುಜೀವನಕಿಲ್ಲೆಂದುಬಳಲಿ ದುರ್ವಿದ್ಯಗಳಭ್ಯಾಸಿಸಿಕಡೆಯಲಿ ನರಕಂಗಳಿಗೆ ಪ್ರಯಾಣಮಾಡುವದು7
--------------
ಗುರುರಾಮವಿಠಲ
ಕಳದೇವಲ್ಲ ಕೈಗೆ ನಿಲುಕಿದ ನಿಧಾನ |ತಿಳಿದು ಬಿಟ್ಟೆವಲ್ಲ ಸ್ವರ್ಗದ ಸೋಪಾನ || ಅಳಿದೆವಲ್ಲ ಆತ್ಮಲೋಕದ ವಿಮಾನ |ಸಲೆಯೆಂಬ ಸಮಯ ತುಂಬಿತಲ್ಸಮಾನಾ ಪ ಮದ್ದು ಮೇಯಿದಂತೆ ಚಿಂತೆಗಳಿದ್ದು ಸೊರಗಿ |ಕದ್ದು ಕಳ್ಳನಂತೆ ಲೋಕದೊಳು ತಿರುಗಿಬಿದ್ದು ಬೈಸಿಕೊಂಡೆ ಧನಿಕರಲಿ ಮರುಗಿ |ಹದ್ದು ಕಾಗೆಯಂತೆ ಕೂಳ ತಿಂದು ಒರಗಿ1 ಜನದ ಮನದ ನಾಚಿಕೆಗಳೆಲ್ಲ ಬಿಟ್ಟು |ಕನಸಿನಂಥ ವಿಷಯ ಸವಿಗೆ ಸೋಂಕಿ ಕೆಟ್ಟು |ಜನಿಸಿದವರ ಕೂಡ ಮತ್ಸರವ ತೊಟ್ಟು |ಶುನಕನಂತೆ ಬೊಗಳಿ ಬೊಗಳಿ ಗೋಳಿಟ್ಟು 2 ಉಕ್ಕಿ ಸೊಕ್ಕಿ ಸಾಧು ಸಜ್ಜನರ ದೂರಿ |ನಕ್ಕು ನುಡಿದು ಅವರ ದೋಷಗಳ ಬೀರಿ |ಝಕ್ಕಿಸಲರಿಯಾದವರ ಮಾತುಗಳ ಮೀರಿ |ರುಕ್ಮದಾಶೆ ಹಿಡಿಯದೆ ಹೇಡಿತನವ ತೋರಿ 3
--------------
ರುಕ್ಮಾಂಗದರು
ಕಾಮಜನಕ ಭೃಗು ರಾಮ ದಯಾಂಬುಧಿ ಕಾಮಿತ ಫಲದಾಯಿ ಪ. ಮಂಗಳಾಯನ ಮಾತರಿಶ್ವನುತಾ ದಯವಾಗು ದ್ವಿಯುಗ ಶೃಂಗ ಹವ್ಯವಹಾಂತರಂಗಗತ ದು:ಕ್ಷತ್ರಹಂತಾ ತುಂಗ ಪರಶುಧರಾಂಸಬಾಹು ನಿಭಾಂಗ ಶಾರ್ಙಶರಾಸನಾರ್ಜುನ ದುರಿತ ತರಂಗ ಸಂಗರಮಾಂಗಸಂಗತ 1 ನೀನೆ ಗ್ರಹಪತಿಯೆಂಬುದನು ತಿಳಿದು ದುರ್ಮೋಹವಳಿದು ತಾನು ಯನ್ನುವಹಂಕೃತಿಯು ಕಳಿದು ನಿನ್ನಲ್ಲಿ ನಲಿದು ಸ್ನಾನ ಹೋಮ ಸುರಾರ್ಚನಾದಿಗ ಳೇನು ಮಾಡಿದರೆಲ್ಲ ನಿನ್ನ ಸಮಾನಕರಿಪ ಮಹಾನುಭಾವನೆ 2 ಒಪ್ಪಿಸಿದೆ ಸರ್ವಸ್ವವನು ನಿನಗೆ ಗತಿ ನೀನೆ ಎನಗೆ ಕಪ್ಪಕಾಣಿಕೆ ಎಲ್ಲವೂ ನಿನಗೆ ಇದು ಸತ್ಯ ಕೊನೆಗೆ ಅಪ್ಪಳಿಸು ರಿಪುಪುಂಜವನು ಬರುತಿಪ್ಪದುರಿತವ ಭಂಗಿಸುತ ನ- ಕಂದರ್ಪಭಂಜನ ಸರ್ಪಗಿರಿವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯ ಪ ದಾನವಾರಣ್ಯಪಾವಕ ವೀತಶೋಕ ಅ.ಪ. ಆನತೇಷ್ಟ ಪ್ರದಾಯಕ ನಮಿಸುವೆನು ಸದಾ ಮೈನಾಕಿಧರ ಬಿಂಬ ಸುರಮುನಿಕದಂಬ ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ 1 ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ ಸವನ ದ್ವಿತಿಯರೂಪ ವಿಗತಕೋಪ ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ 2 ಆದಿದೇವಾನಂತ ಮಹಿಮನೇ ನಿಶ್ಚಿಂತಾ ಕಾದುಕೋ ನಿನ್ನವರ ವಿಬುಧ ಪ್ರವರಾ ಮೋದಮಯ ಶ್ರೀ ಜಗನ್ನಾಥವಿಠಲರೇಯ ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು 3
--------------
ಜಗನ್ನಾಥದಾಸರು
ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ಕಾಯ ಸತ್ಯ ಸತ್ಯ ಸರ್ವ ಜೀವರನಿಟ್ಟುಕೊಂಡು ವಿಸ್ತಾರವಾದೊಂದಾಲದೆಲೆಯಲ್ಲಿ ಮಲಗಿದ್ದು ಅ.ಪ. ಹರಿ ಹ್ಯಾಗೆ ನಿತ್ಯನೊ ಹಾಗೆ ಜೀವನು ನಿತ್ಯ ಹರಿಯೆಂಬೋ ಧಣಿಗೆ ಈ ಜೀವನು ಭೃತ್ಯ ಹರಿ ಜೀವರೊಳಗೆ ಹೀಗೆ ತಿಳಿದವನು ಧರೆಯೊಳಗೆಂದೆಂದಿಗು ಕೃತಕೃತ್ಯನು 1 ಹರಿಯೆಂಬೊ ರಾಜಗೆ ಗುರುಮೂರುತಿ ಮಂತ್ರಿ ಪರಿವಾರ ಇವರಯ್ಯ ಜೀವಂಗಳು ಅರಿತು ಈ ವಿಧದಲ್ಲಿ ನಿರುತ ಪಾಡುವರಿಗೆ ಪರಲೋಕದಲಿ ದಿವ್ಯಭೋಗಂಗಳು 2 ಭಿನ್ನ ಭಿನ್ನ ಜೀವ ಭಿನ್ನ ಭಿನ್ನ ಕರ್ಮ- ವೆನ್ನುವುದೆ ಘನ್ನತತ್ವಂಗಳು ಅನ್ಯಥಾನುಡಿಯಲ್ಲ ಇನ್ನು ಸಂಶಯವಿಲ್ಲ ಎನ್ನೊಡೆಯ ಹಯವದನ ಬಲ್ಲ 3
--------------
ವಾದಿರಾಜ
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ
ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ1 ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ2 ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು 3 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು4 ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ5
--------------
ಶ್ರೀಪಾದರಾಜರು
ಕುಂಟೆ ಹೊಡೆಯೊ ಜಾಣ ಅದನೋಡಿ ಕುಂಟೆ ಹರಗೋ ಜಾಣ ಪ ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ ಅರಿವೆಮಡಿಕೆಹೊಡೆಯೊ ಮರವ್ಯೆಂಬ ಕರಿಕಿದಡ್ಡನಳಿಯೊ ಶರಣೆಂಬಗುದ್ದಲ್ಹಿಡಿಯೊ ಗರುವೆಂಬ ದುರಿತಕರುಣಗಳಗಿಯೊ ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು 1 ಧ್ಯಾನ ದಾಸರಸೇವೆಯೆಂದೆಂಬುವ ಖೂನ ಮಾಡೆಲೊ ಬದುವ ದಾನಧರ್ಮಯೆಂಬುವ ಸತತದಿ ಹನಿಸು ಗೊಬ್ಬರವ ಜ್ಞಾನಿಸಂಗವೆಂಬ ಜಾಣಬೆದೆಗಾಲದಿ ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು 2 ಮನನೆಂಬಬೆಳೆ ಕಾಯೋ ನಿಜವಾದ ನೆನೆವೆಂಬರ ಕವಣ್ಹಿಡಿಯೊ ಮನಚಂಚಲ್ಹಕ್ಕ್ಹೊಡೆಯೊ ಶಾಂತಿಸದ್ಗುಣವೆಂಬ ಫಲ ಪಡೆಯೊ ಘನತರ ದೃಢವೆಂಬ ಧಾನ್ಯರಾಸಿಮಾಡಿ ವನಜಾಕ್ಷ ಶ್ರೀರಾಮನೊನರುಹಕರ್ಪಿಸು 3
--------------
ರಾಮದಾಸರು
ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ ಸತ್ಸಭೆ ಕೇಳಲೀ ಕೃತಿಯ ಪ. ಈ ಯುಗದವರಿಗೆ ಕಲಹ ಮಂಡಿಸಿದಗೆ ಆ ಯುಗದವರುಕ್ತಿ ಬೇಕು ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ ಹೇಯವೆಂದಾರು ಪೇಳುವರು1 ನಿಮ್ಮವರಾಗಮ ನಮ್ಮವರಿಗೆ ಸಲ್ಲ ನಮ್ಮೋಕ್ತಿ ನಿಮಗೆ ಮೆಚ್ಚಲ್ಲ ಇಮ್ಮನದವರಿಗೆ ಇನ್ನೊಬ್ಬ ಹಿರಿಯರ ಸಮ್ಮತಿ ಬೇಕು ನಿರ್ಣಯಕೆ2 ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ ಯುಕ್ತಿ ಸರ್ವತ್ರ ಬಂದಿಹುದು ಕುತ್ಸಿತ ದೇಹಬಂಧವ ಬಿಡಿಸುವ ನರ- ರುತ್ತಮರೆಂದರೇನೆಂಬೆ 3 ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ ಏಸು ಕೂದಲ ಕೀಳುತಿರಲು ಏಸೋ ಜೀವಗೆ ನೋವು ಅದು ಹಿಂಸೆ ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4 ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ ಸೂಸುವ ನಯನಾಂಬುಧಾರೆ ಆ ಸಮಯದಿ ಪರಮಸುಖವೆಂಬ ಮಾತು ಸತ್ಯವ್ರತಕೆ ಎಂತೊಪ್ಪಿಹುದೊ 5 ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು- ಟ್ಟಿದ ದಿವಸ ಮೊದಲಾಗಿ ಪಾತಕಿ ತಮ್ಮೊ - ಳಾದನೆಂಬುದು ಬಲು ಚೋದ್ಯ6 ಪಾಪ ಸಲ್ಲದು ಗಡ ಪರನಿಂದೆಯಿಂದಾದ ಪಾಪವೆ ತಾವು ಶುದ್ಧರೆಂಬ ಪರಿ ಆತ್ಮಸ್ತುತಿಯಿಂದೊಂದಾ ಪಾಪ ಲೇಪಿಸದಿಹುದೆ ತಮ್ಮವರ 7 ಸ್ಥಾವರಜೀವರ ಸಾವಿರ ಕೋಟಿಯ ಆವಾಗ ಕೊಂದು ತತ್ತನುವ ಜೀವಿಪೆನೆಂದು ಬೇಯಿಸಿ ತಿಂಬ ಪಾಪವ ಆವ ನಿಮಗೆ ಅಹುದೆಂದ 8 ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ- ಗೆಂದ ಗುರುವ ನಾನೇನೆಂಬೆ ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ ನಿಂದ್ಯ ಹಿಂಸೆಯ ಸಲಿಸುವರೆ 9 ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ ಹಿಂಗೂಡಿದುದಕ ಸ್ವಾದನಾದಿ ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ- ರಂಗಳು ಜಂಗಮದಂತೆ 10 ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು ನಿರ್ಮಾಯನದೊಳಗೇಸೊ ಹಿಂಸೆ 11 ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ ಇಕ್ಕು ಬಾಯೊಳು ದಂತದೆಲುವೆ 12 ಕರದ ತುಂಬವಿದೇನು ಕೊರಳ ಹಾರವಿದೇನು ಚರಣದ ನಖಪಂಕ್ತಿಯಿದೇನು ಖರ ಭೂತಪಂಚಕ ಅನ್ನ ಮಾಂಸಗಳೊಳು ಬರಿದೆ ನಿಂದಿಸಲೇಕೆ ಪರರ 13 ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ- ರಲ್ಪ ದೋಷಗಳರಸುವರೆ ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು- ತಿಪ್ಪ ನೃಪಗೆ ಜಿನಮಾರ್ಗ 14 ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ ಸುತ್ತ ಯಾತ್ರೆಯ ಮಾಡಲೇಸೊ ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ ವಸ್ತ್ರ ಒಗೆಯಲೇಸೋ ಹಿಂಸೆ 15 ಸಲ್ಲದ ಹಿಂಸೆಯ ಸಲಿಸಿದರೆಂಬರ ಬಲ್ಲವಿಕೆಯ ನಾನೇನೆಂಬೆ ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ- ಕೈವಲ್ಯ ಸಾಧಕರು 16 **** ತೊಳೆಯದ ಬಲುಹಿರಿಯರ ನಾತಕ್ಕೆ ಸೋತು ಬೆಂಬಿಡದೆ ಆತುರದಿಂ ಬಪ್ಪನೊಣಗಳ ಗೀತವ- ನೋತು ಕೇಳುವ ಶಿಷ್ಯ ಧನ್ಯ 17 ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ ಗಾತ್ರ ನಾಸಿಕದ ಮಲ ಯಾತ್ರೆಯ ಮಾಡುವರಕ್ಷಿಗೆ ಕೌತುಕ ಪಾತ್ರವಾಯಿತು ಬಲು ಚಿತ್ರ 18 ******************* 19 ಏಕ ಭಾಗದೊಳು ಸ್ತ್ರೀ ವಾಸ ಏಕಾಂತದಿಪ್ಪುದು ಲೋಕಸಲ್ಲದೆಂಬರ ಈ ಕಾಮನೆಂತು ಬಿಟ್ಟಿಹನು 20 ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು ಮುಕ್ತರಿಗೀಭೋಗ ಸಲ್ಲ ಮುಕ್ತರÀಲ್ಲದ ಜೀವ ದೇವರೆಂತಹರೆಂದು ವ್ಯರ್ಥವಾಯಿತು ನಿನ್ನುತ್ಸಾಹ 21 ನೋಡುವ ನಯನಕ್ಕೆ ಮಾಡುವ ಪೂಜೆಗೆ ಕೂಡಿದ ಬಹುವಿತ್ತ ವ್ಯಯಕ್ಕೆ ಈಡಾಯಿತಂಶ ಕೇವಲ ಬೊಂಬೆ ಶಿವಶಿವ ಆಡುವ ಶಿಶುಗಳ್ಪೇಳಿದರೆ 22 ಹೆಂಡಿರೆ ಸಂಸಾರವಾದರೆ ಹಸಿತೃಷೆ ಉಂಡು ಮಲಗುವುದು ಮುಕ್ತರಿಗೆ ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ- ಕೊಂಡ ಮಾತ್ರದಿ ಮುಕ್ತರಹರೆ 23 ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ ಸತ್ತಮೇಲೇನಾದರೆಂತೊ ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ- ಕರ್ತೃ ಶ್ರೀಹರಿ ತಾನೆ ಬಲ್ಲ 24 ದುಃಖವೆ ಸಂಸಾರ ದುಃಖವಿಲ್ಲದ ಸುಖ ಮುಕ್ತಿಯೆಂಬುದು ಬುಧರ್ಗೆ ಮಾತ್ರ ಮಿಕ್ಕದೆ ದುಃಖವಿತ್ತರೆ ಭವವೆನಿಪುದು ದುಃಖವೆ ದೂರ ಮುಕ್ತರಿಗೆ 25 ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ ಜನನ ಮರಣವಿಲ್ಲದಖಿಳ ಜನರ ದುಃಖವನವತರಿಸಿ ಕಳೆವ ನಾರಾ- ಯಣನೆ ನಿರ್ದೋಷ ನಿತ್ಯಸುಖಿ 26 ಪಾತಕ ವ್ರತವ ಕೈಗೊಂಡ ಸ್ತ್ರೀ- ಜಾತಿಯ ಮುಟ್ಟಲ್ಲೆಂಬುವನು ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ ಮಾತನದೇಕೆ ಮನ್ನಿಸನು 27 ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ- ವೈರಿ ಸೂರ್ಯನೊಳು ತಮವೆ ವಿಷಹರ ಗರುಡಗೆ ವಿಷ ಲೇಪಿಸುವುದೆ ಕ- ಲುಷ ಮುಟ್ಟುವುದೆ ಪಾಪಾಂತಕನ 28 ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ ತಡೆಯಬಲ್ಲರೆ ತುಡುಕುವರೆ ಬಿಡು ಮನಭ್ರಾಂತಿಯ ಹಯವದನನೆ ಜಗ- ದೊಡೆಯ ಸರ್ವತ್ರ ನಿರ್ದೊಷ 29
--------------
ವಾದಿರಾಜ